ಕೃಷಿ ಕೌಶಲ್ಯ: ಜಾಯಿಕಾಯಿಯಿಂದ ಜಾಪತ್ರೆಯನ್ನು ಇಡಿಯಾಗಿ ಬೇರ್ಪಡಿಸುವುದು ಹೇಗೆ?

Upayuktha
0

ಜಾಪತ್ರೆ ಇಡಿಯಾಗಿ ಇದ್ದರೆ ಅದಕ್ಕೆ ಒಳ್ಳೆಯ ರೇಟು ಅಂತ ಕಳೆದ ವರ್ಷ ಜಾಯಿಕಾಯಿ ಕೊಳ್ಳಲು ಬಂದ ಕೇರಳದ ಒಬ್ಬರು ಪ್ರತಿನಿಧಿ ತಿಳಿಸಿದ್ದರು. ಆದರೆ ನಾನು ಎಷ್ಟೇ ನಾಜೂಕಾಗಿ ಜಾಪತ್ರೆಯನ್ನು ಬೇರ್ಪಡಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿರಲಿಲ್ಲ.


ಮೊನ್ನೆ ಒಂದು ದಿನ ತೋಟದಿಂದ ಹೆಕ್ಕಿ ತಂದ ಜಾಯಿಕಾಯಿಯನ್ನು ಶುಚಿಗೊಳಿಸಲು ಉಗುರು ಬಿಸಿ ಇದ್ದ ನೀರನ್ನು ಬಳಸಿದೆ. ಏನಾಶ್ಚರ್ಯ, ಜಾಪತ್ರೆ, ಜಾಯಿಕಾಯಿಯಿಂದ ಸಲೀಸಾಗಿ ಬೇರ್ಪಟ್ಟಿತು! 2-3 ದಿನ ಈ ಹಾದಿಯಲ್ಲೇ ಪ್ರಯೋಗ ಮಾಡಿದೆ. ಈಗ ಹದ ಸಿಕ್ಕಿದೆ. ನೀರು ಹೆಚ್ಚು ಬಿಸಿ ಇದ್ದರೆ ಜಾಪತ್ರೆ ತುಂಡಾಗುತ್ತದೆ. ಜಾಯಿಕಾಯಿಯನ್ನು ಉಗುರು ಬಿಸಿ ನೀರಿನಲ್ಲಿ ಒಂದೆರಡು ನಿಮಿಷ ಇಟ್ಟರೆ ಸಾಕು.


ಬಹುಶಃ ಜಾಯಿಕಾಯಿಯ ಮೇಲ್ಮೈಯಲ್ಲಿರುವ ಎಣ್ಣೆಯಂತಹ ಲೇಪ ಜಾಪತ್ರೆಯನ್ನು ಅಂಟಿನಂತೆ ಹಿಡಿದಿಟ್ಟುಕೊಂಡಿರುತ್ತದೆ. ಬಿಸಿ ತಾಗಿದಾಕ್ಷಣ ಎಣ್ಣೆಯ ಅಂಶ ಕರಗಿ ಜಾಪತ್ರೆ ಬೇರ್ಪಡುತ್ತದೆ.


ಲೆಕ್ಕಹಾಕಿದರೆ 200 ಜಾಯಿಕಾಯಿಗಳಿಂದ ಇಡಿಯಾದ 50 ಜಾಪತ್ರೆ ಸಿಕ್ಕಿತು. ಅವನ್ನು ಡ್ರೈಯರ್ ನಲ್ಲಿಟ್ಟರೆ ಒಂದು ದಿನದಲ್ಲಿ ಗರಿಗರಿಯಾಗಿ ಒಣಗಿತು. ಇಡಿಯ ಜಾಪತ್ರೆಗಳು ಸರಿಯಾಗಿ ಒಣಗಬಹುದೇ ಎಂಬ ಆತಂಕವಿತ್ತು. ಆದರೆ ಏನೂ ಸಮಸ್ಯೆಯಾಗಲಿಲ್ಲ.


ಈ ಪೋಸ್ಟ್ ಬರೆಯುವ ಮುನ್ನ ಯೂಟ್ಯೂಬಿನಲ್ಲಿ ಹುಡುಕಿದಾಗ ಸಿಕ್ಕ ಮಾಹಿತಿಯಂತೆ, ಜಾಯಿಕಾಯಿಯನ್ನು ತಣ್ಣೀರಿನಲ್ಲಿ ಅರ್ಧ ಗಂಟೆ ಇಟ್ಟರೆ ಜಾಪತ್ರೆ ಇಡಿಯಾಗಿ ಬೇರ್ಪಡುತ್ತದೆ. ಇದು ಕೂಡ ಸುಲಭ ವಿಧಾನವೆ.


ನಮ್ಮಲ್ಲಿರುವ ಡ್ರೈಯರ್ ತುಂಬ ಸಣ್ಣದು. ಅದರಲ್ಲಿ ಇಡಿಯ ಜಾಪತ್ರೆಯನ್ನು ಪ್ರತ್ಯೇಕ ಇಟ್ಟು ಒಣಗಿಸಿ ಸಂಗ್ರಹಿಸಿಡುವುದು ಸ್ವಲ್ಪ ಪ್ರಯಾಸಕರ. ಮುಂಬರುವ ದಿನಗಳಲ್ಲಿ ತುಸು ದೊಡ್ಡ ಡ್ರೈಯರ್ ಕೊಂಡರೆ ಆಗ ಇಡಿಯ ಜಾಪತ್ರೆ ಒಣಗಿಸುವುದು ಸುಲಭವೆನಿಸೀತು.


ಅಷ್ಟಕ್ಕೂ ಇಡಿಯ ಜಾಪತ್ರೆಗೆ ನಿಜಕ್ಕೂ ಹೆಚ್ಚಿನ ಧಾರಣೆ ಸಿಗುತ್ತದೆಯೇ ಎಂಬುದು ತಿಳಿಯದು. ಮಳೆಗಾಲದಲ್ಲಿ ಜಾಯಿಕಾಯಿ-ಜಾಪತ್ರೆ ಒಣಗಿಸುವುದು ದೊಡ್ಡ ಸವಾಲು. ಸೋಲಾರ್ ಗೂಡಿನೊಳಗಿಟ್ಟರೂ ಜಾಪತ್ರೆಗೆ ಬೇಗನೆ ಬೂಸ್ಟ್ ಬಂದು ಹಾಳಾಗುತ್ತದೆ. ಜಾಯಿಕಾಯಿ ಕೂಡ ಸರಿಯಾಗಿ ಒಣಗುವುದಿಲ್ಲ. ಡ್ರೈಯರ್ ಬಳಕೆ ಅನಿವಾರ್ಯ. 


(ಪೂರಕ ಮಾಹಿತಿ: ಅಡಿಕೆ ತೋಟದೊಳಗೆ 50 ಜಾಯಿಕಾಯಿ ಮರಗಳಿವೆ. ಸುಮಾರು 25 ವರ್ಷ ಪ್ರಾಯದವು. ಆ ಪೈಕಿ ನಾಲ್ಕು ಮಾತ್ರ ಕಸಿ ಗಿಡಗಳು. ಡ್ರೈಯರ್ ಒಳಗೆ 100 ವಾಟ್ ನ 3 ಬಲ್ಬ್ ಗಳಿವೆ. ತಂತಿ ಜಾಲರಿಯ ಮೂರು ಟ್ರೇಗಳು. ಒಂದೇ ದಿನದಲ್ಲಿ ಜಾಪತ್ರೆ ಒಣಗುತ್ತದೆ.)

-ಶಿವರಾಂ ಪೈಲೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top