ಯಕ್ಷಗಾನದಲ್ಲಿ ಮಾತಿನಶೈಲಿಯೂ ಬಹುಮುಖ್ಯ: ಡಾ. ಜಿ.ಎಲ್ ಹೆಗಡೆ

Upayuktha
0
ಶ್ರೀ ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ "ಯಕ್ಷಸಂಸ್ಕಾರ" ಕಾರ್ಯಕ್ರಮ ಉದ್ಘಾಟನೆ


ಬೆಂಗಳೂರು: ಕುಣಿತ ಒಂದೇ ಯಕ್ಷಗಾನವಲ್ಲ, ಕುಣಿತ ಯಕ್ಷಗಾನದ ಭಾಗವಷ್ಟೇ. ಯಕ್ಷಗಾನದಲ್ಲಿ ಮಾತಿನಶೈಲಿಯೂ ಬಹುಮುಖ್ಯವಾಗಿದ್ದು, ನಮ್ಮ ಮಾತು ಯಕ್ಷಗಾನದ ಚೌಕಟ್ಟು ಮೀರದಂತೆ ಇರಬೇಕು ಎಂದು ಡಾ| ಜಿ.ಎಲ್ ಹೆಗಡೆ ಹೇಳಿದರು.


ಶ್ರೀ ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ ನಡೆದ "ಯಕ್ಷಸಂಸ್ಕಾರ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ| ಜಿ.ಎಲ್ ಹೆಗಡೆ, ಯಕ್ಷಗಾನಕ್ಕೆ ಅಧ್ಯಯನ ಹಾಗೂ ಸಂಶೋಧನೆ  ಬೇಕಾಗಿದ್ದು, ನಿತ್ಯನಿರಂತರವಾದ ಅಧ್ಯಯನದಿಂದ ಮಾತ್ರ ನಿಜವಾದ ಯಕ್ಷಗಾನವನ್ನು ಉಳಿಸಿಬೆಳೆಸಲು ಸಾಧ್ಯ. ಹಾಗಾಗಿ ಇಲ್ಲಿ ನಡೆಯುವ ಯಕ್ಷಗಾನ ತರಬೇತಿಯಲ್ಲಿ ಕುಣಿತದಷ್ಟೇ ಪ್ರಾಮುಖ್ಯತೆ, ಮಾತಿನಶೈಲಿ ಹಾಗೂ ಅಧ್ಯನಾಸಕ್ತಿ ಹೆಚ್ಚಿಸುವುದಕ್ಕೂ ಸಿಗುವಂತಾಗಲಿ ಎಂದು ಕಿವಿಮಾತು ಹೇಳಿದರು.


ಯಕ್ಷಗಾನದಲ್ಲಿ ಇಂದಿಗೂ ಆಂಗ್ಲಭಾಷೆಯಲ್ಲಿ ಬೆರೆಸದೇ ಶುದ್ಧ ಕನ್ನಡದಲ್ಲೇ ಮಾತನಾಡುವ ಚೌಕಟ್ಟಿದ್ದು, ಶುದ್ಧವಾದ ಕನ್ನಡ ಉಳಿದುಕೊಂಡಿರುವುದಕ್ಕೆ ಯಕ್ಷಗಾನವೂ ಬಹುಮುಖ್ಯ ಕಾರಣವಾಗಿದೆ ಎಂದ ಅವರು, ಹವ್ಯಕ ಮಹಾಸಭೆಯ ಈ ಪ್ರಯತ್ನಕ್ಕೆ ಅಭಿನಂದನೆ ತಿಳಿಸಿ; ಯಕ್ಷನಿಧಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ತಿಳಿಸಿದರು.


ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಮಾತನಾಡಿ, ಯಕ್ಷಗಾನ ಹವ್ಯಕರ ಕಲೆಯಾಗಿದ್ದು, ಯಕ್ಷಗಾನವನ್ನು ಉಳಿಸಿ-ಬೆಳೆಸುವ ಕರ್ತವ್ಯ ಹವ್ಯಕರ ಮೇಲಿದೆ. ಎಲ್ಲಾ ಸಮುದಾಯದವರೂ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರೂ, ಹವ್ಯಕ ಸಮಾಜದ ಜೊತೆಗೆ ಯಕ್ಷಗಾನ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದರು.


ಹವ್ಯಕ ಮಹಾಸಭೆಯ ಒಂದು ಜಾತಿಯ ಸಂಘಟನೆಯಾದರೂ, ಯಕ್ಷಸಂಸ್ಕಾರ ಸೇರಿದಂತೆ, ಎಲ್ಲಾ ಸಂಸ್ಕಾರ ತರಬೇತಿಗಳನ್ನು ಜಾತಿಬೇಧವಿಲ್ಲದೇ, ಎಲ್ಲರಿಗೂ ಮುಕ್ತ ಹಾಗೂ ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು.


ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ್ ಭಟ್ಟ ಮಲವಳ್ಳಿ ಮಾತನಾಡಿ, ಮಹಾಸಭೆಯು 'ಯಕ್ಷನಿಧಿ' ಯನ್ನು ಸ್ಥಾಪಿಸುತ್ತಿದ್ದು, ಯಕ್ಷಗಾನದ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ನಿಧಿಯ ಮುಖಾಂತರ ಯಕ್ಷಗಾನ ಕಲಾವಿದರ ಕಷ್ಟಗಳಿಗೂ ಸ್ಪಂದಿಸುವ ಯೋಜನೆ ಇದೆ ಎಂದು ತಿಳಿಸಿದರು. "ಯಕ್ಷನಿಧಿ" ಗೆ ಈಗಾಗಲೇ ಹಲವಾರು ಧಾನಿಗಳು ದೇಣಿಗೆ ನೀಡಿದ್ದು, ಯಕ್ಷಪ್ರೇಮಿಗಳು ಕೈಜೋಡಿಸಬಹುದು ಎಂದು ಮನವಿ ಮಾಡಿದರು.


ಹಿರಿಯ ಯಕ್ಷಗಾನ ಕಲಾವಿಧ ತೋಟಿಮನೆ ಗಣಪತಿ ಹೆಗಡೆ ಮಾತನಾಡಿ, ಯಕ್ಷಸಂಸ್ಕಾರದ ಮೂಲಕ ನಡೆಯುವ ತರಬೇತಿಯಲ್ಲಿ ಸಮಗ್ರ ಯಕ್ಷಗಾನ ಕಲಿಕೆಗೆ ಪ್ರಯತ್ನಿಸಲಾಗುವುದು ಎಂದ ಅವರು, ತರಬೇತಿ ಕುರಿತಾದ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.


ಇದಕ್ಕೂ ಮೊದಲು ಯಕ್ಷಗಾನದ ಪದ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಯಕ್ಷಸಂಸ್ಕಾರ ಸಂಚಾಲಕ ಎಂ.ಎನ್ ಹೆಗಡೆ ಕಡತೋಕ ಸ್ವಾಗತಿಸಿದರೆ, ಹವ್ಯಕ ಯಕ್ಷಗಾನ ವೇದಿಕೆಯ ಸಂಚಾಲಕಿ ಮಮತಾ ಜೋಷಿ ವಂದನಾರ್ಪಣೆ ನಡೆಸಿಕೊಟ್ಟರು. ಹರ್ಷ ಹೆಗಡೆ ಕೊಂಡದಕುಳಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಂದ ವಿದ್ಯಾರ್ಥಿಗಳಿಗೆ ಪ್ರಥಮವಾದ ತರಗತಿ ತೆಗೆದುಕೊಳ್ಳಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top