ಮಂಗಳೂರು: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸ್ವಾಮೀ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ನಮಗೆ ಮಾದರಿಯಾಗಬೇಕು. ಶಿಕ್ಷಣದಲ್ಲಿ ನಿಮ್ಮ ಸಾಧನೆ ಜತೆಗೆ ಜೀವನ ವೌಲ್ಯಗಳನ್ನು ಬೆಳೆಸಿಕೊಂಡು ನಿರೀಕ್ಷಿತ ಗುರಿ ಸಾಧನೆಯೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ವಿಜಯ ಕರ್ನಾಟಕ ಮಂಗಳೂರು ಬ್ಯೂರೋ ಸ್ಥಾನೀಯ ಸಂಪಾದಕ ಯು.ಕೆ. ಕುಮಾರ್‌ನಾಥ್ ಹೇಳಿದರು.
ನಗರದ ಕೆನರಾ ಪದವಿ ಪೂರ್ವ ಕಾಲೇಜಿನಿಂದ ನಗರದ ಟಿ.ವಿ. ರಮಣ ಪೈ ಕನ್ವೆಂನ್ಶನ್ ಸೆಂಟರ್‌ನಲ್ಲಿ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಕ್ಷಣ ಎನ್ನುವಂತಹುದು ನಮ್ಮ ಜೀವನ ರೂಪಿಸುವ ಮೊದಲ ಹೆಜ್ಜೆ. ಅದರ ಜತೆ ಸಾಧಕರ ಜೀವನ ಚರಿತ್ರೆಯನ್ನು ಮಾದರಿಯನ್ನಾಗಿಟ್ಟುಕೊಂಡು ಜೀವನ ವೌಲ್ಯಗಳನ್ನು ರೂಢಿಸಿಕೊಳ್ಳಿರಿ. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದಂತೆ ಕನಸನ್ನು ಕಾಣಿರಿ, ಕನಸು ಯೋಚನೆಯಾಗಿ ರೂಪಾಂತರಗೊಳ್ಳುತ್ತದೆ, ಯೋಚನೆ ಕ್ರಿಯೆಯಾಗಿ ಮಾರ್ಪಡುತ್ತದೆ. ಶಿಕ್ಷಣದ ಜತೆ ಪರಿಸರ, ಲೋಕ ಜ್ಞಾನದ ಅರಿವು ಹೆಚ್ಚಿಸಿಕೊಂಡಲ್ಲಿ ನಿಮ್ಮ ಸಾಧನೆಗೆ ಪೂರಕವಾಗಲಿದೆ. ಹಳ್ಳಿ ಬದುಕು, ಪರಿಸರದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಿ. ಪಿಯುಸಿ ಆದ ಬಳಿಕ ಮೆಡಿಕಲ್, ಎಂಜಿನಿಯರಿಂಗ್ ಮಾತ್ರವಲ್ಲದೆ ಐಎಎಸ್, ಐಪಿಎಸ್ ಸೇರಿದಂತೆ ಆಡಳಿತ ವ್ಯವಸ್ಥೆ ಕಡೆಗೂ ಗಮನಹರಿಸಿ ಎಂದರು.
ಕೆನರಾ ಪಿ.ಯು. ಕಾಲೇಜಿನ ಸಂಚಾಲಕ ಟಿ. ಗೋಪಾಲಕೃಷ್ಣ ಶೆಣೈ ಮಾತನಾಡಿ, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆನರಾ ಕಾಲೇಜಿನ 11ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಟಾಪರ್, 48 ವಿದ್ಯಾರ್ಥಿಗಳು ಶೇ.95ಕ್ಕೂ ಅಧಿಕ ತೆಗೆದಿದ್ದಾರೆ. ಈ ಸಾಧನೆಗೆ ವಿದ್ಯಾರ್ಥಿಗಳ ಜತೆ ಪೋಷಕರು, ಶಿಕ್ಷಕರ ಸಹಕಾರ ದೊಡ್ಡದಿದೆ. ಕೆನರಾ ಸಂಸ್ಥೆ ಆಯೋಜಿಸಿದ ಈ ಅಭಿನಂದನಾ ಕಾರ್ಯಕ್ರಮ ಮುಂದಿನ ಸಾಧಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಯ ಗುರಿಯನ್ನು ಕೆನರಾ ಸಂಸ್ಥೆ ಹೊಂದಿದ್ದು, ಶಿಕ್ಷಣ ಗುಣಮಟ್ಟದಲ್ಲಿ ಯಾವತ್ತೂ ರಾಜಿಮಾಡಿಕೊಳ್ಳಲ್ಲ ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ರಂಗನಾಥ್ ಕಿಣಿ ಮಾತನಾಡಿ, ಕೆನರಾ ಸಂಸ್ಥೆ ವಿದ್ಯಾರ್ಥಿಗಳಿಗೆ ಸಂಸ್ಕಾರದ ಜತೆ ಉತ್ತಮ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಫಲಿತಾಂಶ ಬರಲು ಕಾರಣವಾಗಿದೆ. ಮಧ್ಯಮ ವರ್ಗಕ್ಕೆ ಕೈಗೆಟಕುವ ರೀತಿಯಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಆ ಕುಟುಂಬಗಳನ್ನು ಮೇಲೆತ್ತುವ ಕೆಲಸ ಕೆನರಾ ಸಂಸ್ಥೆ ಮಾಡುತ್ತಿದೆ ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಸಹಕಾರ್ಯದರ್ಶಿ ಸುರೇಶ್ ಕಾಮತ್, ಆಡಳಿತ ಮಂಡಳಿ ಸದಸ್ಯ ನರೇಶ್ ಶೆಣೈ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ್ ಮಲ್ಯ ಉಪಸ್ಥಿತರಿದ್ದರು.
ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಲತಾ ಮಹೇಶ್ವರಿ ಕೆ.ಬಿ. ವಂದಿಸಿದರು. ಶಿಕ್ಷಕಿ ಪ್ರಿಯಾಂಕ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಗೌರವ
ರಾಜ್ಯಮಟ್ಟದ ಟಾಪರ್‌ಗಳಾದ ಕೆನರಾ ಪಿಯು ಕಾಲೇಜಿನ ಅಚಲ್ ಪ್ರವೀಣ್ ಉಳ್ಳಾಲ್, ಜನನಿ ಪಿ., ನಿಖಿತಾ ಟಿ. ಕುಲಾಲ್, ಸಾಕ್ಷಿ, ಆರ್ಯಮನ್ ಪ್ರಭು, ಜ್ಞಾನಶ್ರೀ ಜೋಷಿ, ಸೃಷ್ಟಿ ಭಟ್, ಸಂಜನಾ, ಲವಿಜ್ಞ, ಜಾನವಿ ಆರ್. ಕುಡಾಲ್, ಅಮೃತಾ ಪೈ ಹಾಗೂ ಶೇ. 95ಕ್ಕೂ ಅಧಿಕ ಅಂಕ ತೆಗೆದ 48 ಮಂದಿ, 100ಅಂಕ ತೆಗೆದು ಸಾಧನೆ ಮೆರೆದ 91ವಿದ್ಯಾರ್ಥಿಗಳನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ಈ ಅಪೂರ್ವ ಕ್ಷಣಕ್ಕೆ ವಿದ್ಯಾರ್ಥಿಗಳ ಪೋಷಕರು ಜತೆಗಿದ್ದು ಸಾಥ್ ನೀಡಿದರು. ರಾಜ್ಯಮಟ್ಟದ ಸಾಧನೆ ಮೆರೆದ ವಿದ್ಯಾರ್ಥಿಗಳು ತಮ್ಮ ಅನುಭವಗಳು, ಕನಸನ್ನು ತೆರೆದಿಟ್ಟರು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮ ವಿದ್ಯಾರ್ಥಿಗಳ ಸಾಧನೆ ಜತೆಗೆ ಸಾಧನೆಯ ಹಾದಿಯಲ್ಲಿ ಸಾಗುವ ವಿದ್ಯಾರ್ಥಿಗಳಿಗೆ ಹೊಸ ದಿಕ್ಸೂಚಿಯನ್ನು ನೀಡುವಲ್ಲಿ ಸಾರ್ಥಕವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ