ಕಲೆ-ಕಲಾವಿದ: ಯಕ್ಷಕಲೋತ್ತಮ ಕೃಷ್ಣಮೂರ್ತಿ ಉರಾಳ

Upayuktha
0

6/11/1960 ರಂದು ಕಾರ್ತಟ್ಟು ವಾಸುದೇವ ಉರಾಳ ಹಾಗೂ ಕಮಲಾಕ್ಷಿ ಮಗನಾಗಿ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಜನನ. ಕೋಟ ವಿವೇಕ ಹೈಸ್ಕೂಲ್ ನಲ್ಲಿ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ.


ಹೈಸ್ಕೂಲ್ ವಿದ್ಯಾಭ್ಯಾಸದ ಸಮಯದಲ್ಲಿ ಅಂದಿನ ಪ್ರಾಂಶುಪಾಲರಾಗಿದ್ದ ಶ್ರೀ ಕೆ. ರಾಮಚಂದ್ರ ಉಡುಪರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಶಾಲಾ ವಾರ್ಷಿಕೋತ್ಸವಗಳಲ್ಲಿ ನಾಟಕಗಳಲ್ಲಿ ನಟನೆ, ಗಣೇಶೋತ್ಸವ, ಶಾರದೋತ್ಸವಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹವ್ಯಾಸಿ ರಂಗ ಸಂಸ್ಥೆಗಳಲ್ಲಿ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ನಾಟಕಗಳಲ್ಲಿ ಸ್ತ್ರೀ ಪಾತ್ರ ನಿರ್ವಹಣೆ ಹಾಗೂ ಸ್ಪರ್ಧಾ ನಾಟಕಗಳಲ್ಲಿ ಪ್ರಶಸ್ತಿ. ಸಾಲಿಗ್ರಾಮ ಮೇಳದ ಶ್ರೀ ಹೆಚ್ ಶ್ರೀಧರ ಹಂದೆಯವರಿದ ಯಕ್ಷಗಾನ ಬೀಜಾಂಕುರ.


1979ರಲ್ಲಿ ಪಿಯುಸಿ ವಿದ್ಯಾಭ್ಯಾಸದ ನಂತರ ಜೀವನೋಪಾಯಕ್ಕಾಗಿ ಉದ್ಯೋಗದ ಬೇಟೆ. ಪರ ಊರುಗಳಲ್ಲಿ ಹೋಟೆಲ್ ಕಾರ್ಮಿಕನಾಗಿ ದುಡಿಮೆ. ೧೯೮೨ರಲ್ಲಿ ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆ. ಮಿತ್ರ ಕೋಟ ಚಂದ್ರಶೇಖರ ಆಚಾರ್ಯರ ಪ್ರೋತ್ಸಾಹದಿಂದಾಗಿ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾಭ್ಯಾಸ. ಗುರು ಮಹಾಬಲ ಕಾರಂತರು, ಗುರು ನೀಲಾವರ ರಾಮಕೃಷ್ಣಯ್ಯ, ಹೇರಂಜಾಲು ಗೋಪಾಲ ಗಾಣಿಗ ಹಾಗೂ ಗುರು ಹೇರಂಜಾಲು ವೆಂಕಟರಮಣ ಗಾಣಿಗರಿಂದ ಯಕ್ಷಗಾನ ಶಿಕ್ಷಣ.


ಒಂದು ವರುಷ ಯಕ್ಷಗಾನ ಶಿಕ್ಷಣದ ನಂತರ 1983ರಲ್ಲಿ ಡಾ. ಕೋಟ ಶಿವರಾಮ ಕಾರಂತರು ಸ್ಥಾಪಿಸಿ ನಿರ್ದೇಶಿಸುತ್ತಿದ್ದ “ಯಕ್ಷರಂಗ ಬ್ಯಾಲೆ” ತಂಡಕ್ಕೆ ಸ್ತ್ರೀ ಪಾತ್ರಧಾರಿಯಾಗಿ ಸೇರ್ಪಡೆ.


ರಂಗಕ್ಕೆ ಹೋಗುವ ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ರಂಗ ಪ್ರವೇಶಕ್ಕೆ ಮೊದಲು ಅನುಭವಿ ಕಲಾವಿದರಿಂದ ಮಾಹಿತಿಯನ್ನು ಪಡೆಯುತ್ತೇನೆ. ಪ್ರಸಂಗ ಓದುವಿಕೆ, ಪುಸ್ತಕ ಓದುವಿಕೆ ಹಾಗೂ ಇದುವರೆಗಿನ ರಂಗಾನುಭವದ ಮೇಲೆ ಪಾತ್ರಚಿತ್ರಣ, ಭಾವನೆ ಸನ್ನಿವೇಶಗಳ ಮೇಲೆ ಪಾತ್ರಚಿತ್ರಣ.


ಕಾರಂತರ ನಿರ್ದೇಶನದ ನಳದಮಯಂತಿ, ಅಭಿಮನ್ಯು ಕಾಳಗ, ಗಯ ಚರಿತ್ರೆ, ಪಂಚವಟಿ, ಚಿತ್ರಾಂಗದ, ಭೀಷ್ಮವಿಜಯ, ಕನಕಾಂಗಿ ಕಲ್ಯಾಣ ಎಂಬ ಏಳು ಪ್ರಸಂಗಗಳಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಣೆ ಮತ್ತು ಡಾ.ಕಾರಂತರಿಂದ ಪ್ರಶಂಸೆಯ ಮಾತುಗಳು. ಡಾ. ಶಿವರಾಮ ಕಾರಂತರಿಂದ ಸತತವಾಗಿ 13ವರ್ಷಗಳ ನಿರ್ದೇಶನದಲ್ಲಿ ದೇಶ-ವಿದೇಶಗಳಲ್ಲಿ ನಟನೆ.


ನಿರ್ವಹಿಸಿದ ಪಾತ್ರಗಳು:-

ದಮಯಂತಿ, ಸುಭದ್ರೆ, ಸೀತೆ, ಅಂಬೆ, ಚಿತ್ರಾಂಗದೆ, ದ್ರೌಪದಿ, ರುಚಿಮತಿ, ದೇವಿ ಮಹಾತ್ಮೆಯ ದೇವಿ, ಪ್ರಭಾವತಿ, ಮೀನಾಕ್ಷಿ, ಶಶಿಪ್ರಭೆ, ಮದನಾಕ್ಷಿಯಂತಹ ಕಸೆ ಸ್ತ್ರೀ ವೇಷಗಳು; ಚಂದ್ರಹಾಸ, ಸುಧನ್ವ, ಕೃಷ್ಣ, ರಾಮ, ಮಾರ್ತಾಂಡತೇಜ ಮುಂತಾದ ನಾಯಕ ಪಾತ್ರಗಳು; ಭೀಷ್ಮ, ಕೌರವ, ಜಾಂಬವ, ದ್ರೋಣ, ನಳ, ಸುಗ್ರೀವ, ಈಶ್ವರನಂತಹ ಎರಡನೇ ವೇಷಗಳು; ದುರ್ಜಯ, ಕಂಸ, ಜರಾಸಂಧ, ಮಹಿಷಾಸುರ, ಶಂಭಾಸುರನಂತಹ ಖಳಪಾತ್ರಗಳು; ಹಿಡುಂಬಾಸುರ, ರಾವಣ, ಮಾಯಾಕೋವಿದ, ಕಾಲಜಂಘ, ಸಿಂಹನಂತಹ ಗಂಡು ಬಣ್ಣದ ವೇಷಗಳು; ಶೂರ್ಪನಖಿ, ಹಿಡಿಂಬೆ, ವೃತಜ್ವಾಲೆ, ಲಂಕಿಣಿ, ರಕ್ತಕೇಶಿ ಮುಂತಾದ ಹೆಣ್ಣು ಬಣ್ಣದ ವೇಷಗಳು; ಯಕ್ಷಗಾನ ಚರಿತ್ರೆಯ ಅಪರೂಪದ ಜೋಡುಕೊರೆಯ ಕಿರಾತ ಹಾಗೂ ಎಲ್ಲಾ ಪ್ರಕಾರಗಳ ವೇಷಗಳ ನಿರ್ವಹಣೆ.


ಬಡಗುತಿಟ್ಟಿನಲ್ಲಿ ನಶಿಸುತ್ತಿರುವ ಬಣ್ಣದ ವೇಷಗಳು, ಮುಖವರ್ಣಿಕೆಯಲ್ಲಿ ಬಳಸುವ ಸಾಂಪ್ರದಾಯಿಕ ವಿವಿಧ ಸುಳಿಗಳು ಹಾಗೂ ಅಕ್ಕಿಹಿಟ್ಟಿನ ಚಿಟ್ಟಿ ಇಡುವ ಕ್ರಮ ತಿಳಿದಿರುವ ಬೆರಳೆಣಿಕೆಯ ಕಲಾವಿದರಲ್ಲಿ ಒಬ್ಬರು. ಹುಲ್ಲಿನಲ್ಲಿ ಕೇದಗೆ ಮುಂದಲೆ, ಮುಂಡಾಸುಗಳ ಅಟ್ಟೆಯನ್ನು ತಯಾರಿಸಿ ಅದನ್ನು ಕಟ್ಟಿಕೊಂಡು ರಂಗದಲ್ಲಿ ಪಾತ್ರನಿರ್ವಹಣೆ.


2008ರಲ್ಲಿ ಅಂಬಲಪಾಡಿಯಲ್ಲಿ ಜರಗಿದ ಬಣ್ಣದ ವೇಷ ಕಮ್ಮಟದಲ್ಲಿ ಭಾಗವಹಿಸಿ ವೃತ್ತಿ ಕಲಾವಿದರಿಗೆ ಬಣ್ಣದ ವೇಷದ ಮುಖವರ್ಣಿಕೆ ಮತ್ತು ಅಕ್ಕಿಹಿಟ್ಟಿನ ಚಿಟ್ಟೆ ಇಡುವ ಕ್ರಮದ ಕಲಿಸುವಿಕೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಒಂದು ವಾರ ಬಡಗುತಿಟ್ಟಿನ ಬಣ್ಣದ ವೇಷಗಳ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆ.


ಸನ್ಮಾನಗಳು :

ಯುವಕ ಮಂಡಲ ಕೋಟ, ರೋಟರಿ ಕ್ಲಬ್ ಸಾಲಿಗ್ರಾಮ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟ, ಸಿದ್ಧೇಶ್ವರ ಯಕ್ಷರಂಗ ಬನ್ನಾಡಿ, ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು, ಬೋರ್ಡ್ ಹೈಸ್ಕೂಲ್ ಉಡುಪಿ, ಸರಕಾರಿ ಹೈಸ್ಕೂಲ್ ಇಂದಿರಾನಗರ, ಪರ್ಕಳ ಪ್ರೌಢಶಾಲೆಯಲ್ಲಿ ಸುವರ್ಣ ಸನ್ಮಾನ, ಅಶ್ವಿನಿ ಮಧ್ಯಸ್ಥ ಸ್ಮಾರಕ ಸನ್ಮಾನ, ಬೈಂದೂರು ಲಾವಣ್ಯ ಕಲಾವೃಂದದ ಸನ್ಮಾನ, ‘ಯಕ್ಷ ಸೌರಭ’ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ.


1998ರಲ್ಲಿ ಡಾ. ಕಾರಂತರಿಂದ ಪ್ರೇರಣೆಯಾಗಿ ಹವ್ಯಾಸಿ ಹಾಗೂ ಬಾಲ ಕಲಾವಿದರ ಅನುಕೂಲತೆಗಾಗಿ ಯಕ್ಷಗಾನ ಇತಿಹಾಸದಲ್ಲೇ ಪ್ರಥಮವಾಗಿ ಥರ್ಮಕೋಲಿನ ಹಗುರವಾದ ಕಿರೀಟ, ಕೇದಗೆ ಮುಂದಲೆಗಳ ಆವಿಷ್ಕಾರ,ವಿವೇಕ ವಿದ್ಯಾ ಸಂಸ್ಥೆಯಲ್ಲಿ ನಡೆದ ‘ಕಾರಂತ 90’ ಸಮಾರಂಭದಲ್ಲಿ ಕಾರಂತರಿಗೆ ಅರ್ಪಿಸಿದ ಆಕರ್ಷಕ ಸ್ಮರಣಿಕೆಯ ಯಕ್ಷಗಾನ ಗೊಂಬೆ ( ಭೀಷ್ಮ ಮತ್ತು ಪರಶುರಾಮ )ಗಳ ರಚನೆ, ಯಕ್ಷಗಾನದ ವಿಧವಿಧದ ಸ್ಮರಣಿಕೆಗಳ ತಯಾರಿ.


ಉಡುಪಿಯ ಯಕ್ಷಗಾನ ಕೇಂದ್ರದ ವ್ಯವಸಾಯೀ ಮೇಳ “ಯಕ್ಷರಂಗ”ದಲ್ಲಿ ಸತತ 33ವರ್ಷ ಕಲಾವಿದನಾಗಿ ದುಡಿದು ಆ ಸಂಸ್ಥೆಯ ಹಿರಿಯ ಕಲಾವಿದನಾಗಿ ಮನ್ನಣೆ. ಯಕ್ಷಗಾನದ ಎಲ್ಲಾ ವಿಧದ ವೇಷಗಳನ್ನು ಮಾಡಬಲ್ಲ ಸವ್ಯಸಾಚಿ ಕಲಾವಿದನಾಗಿ ಸಾಧನೆ.


2015ರಲ್ಲಿ ಡಾ. ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ “ಯಕ್ಷಾಂತರಂಗ” ಎಂಬ ವ್ಯವಸಾಯೀ ತಂಡದ ನೇತೃತ್ವವನ್ನು ವಹಿಸಿ ಕೋಟದ ಆಸುಪಾಸಿನ ಸುಮಾರು 70 ಯಕ್ಷಾಸಕ್ತ ವಿದ್ಯಾರ್ಥಿಗಳಿಗೆ ಗುರುವಾಗಿ ಯಕ್ಷ ತರಬೇತಿ.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಬಿರಗಳು:-

♦ ೨೯/೦೭/೨೦೦೮ ಅಂಬಲ್ಪಾಡಿ ಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾಮಂಡಳಿಯಲ್ಲಿ ನಡೆದ ಬಣ್ಣದ ವೇಷಗಳ ಕಮ್ಮಟ.

♦ ೨೪, ೨೫/೦೯/೨೦೧೧ ಕಾಜಾರಗುತ್ತು ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಡೆಸಲ್ಪಟ್ಟ ಯಕ್ಷಗಾನ ಆಹಾರ್ಯ ಕಮ್ಮಟ.

♦೧೩/೦೮/೨೦೧೧ ಕುಂಭಾಶಿಯಲ್ಲಿ ಪೂರ್ಣಚಂದ್ರ ಯಕ್ಷ ಪ್ರತಿಷ್ಠಾನ ಸಂಸ್ಥೆಯಲ್ಲಿ ಯಕ್ಷಗಾನ ಮುಖವರ್ಣಿಕೆ ವೇಷ ಭೂಷಣ ಕಮ್ಮಟ.

♦ 6 ರಿಂದ 12/5/2911 ಕಲಾ ಪೀಠ ಕೋಟ (ರಿ.) ಸಂಸ್ಥೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾದ ಯಕ್ಷಗಾನ ಮುಖವರ್ಣಿಕೆ ವೇಷ ಭೂಷಣ ಕಮ್ಮಟ.

♦ ೫,೬,೭/೧೦/೨೦೧೨ ಉಡುಪಿ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ (ರಿ.) ಉಡುಪಿ ಸಂಸ್ಥೆ ಏರ್ಪಡಿಸಿದ ಯಕ್ಷಾನೃತ್ಯಾಭಿನಯ ಶಿಬಿರ.

♦ ೧೦/೧೦/೨೦೧೨ ಉಜಿರೆಯಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಏರ್ಪಡಿಸಿದ ಕುರಿಯ ವಿಠಲ ಶಾಸ್ತ್ರಿ ಶತಮಾನೋತ್ಸವದಲ್ಲಿ ಬಡಗುತಿಟ್ಟು ಯಕ್ಷಗಾನ ಪ್ರಾತ್ಯಕ್ಷಿಕೆ.

♦ ೧೪/೧೦/೨೦೧೨ ಯಕ್ಷಗಾನ ಕೇಂದ್ರದಲ್ಲಿ ಹವ್ಯಾಸಿ ಯಕ್ಷರಂಗಭೂಮಿ ಶಿಬಿರ.

♦ ೨೭/೧೨/೨೦೧೨ ಅಜಪುರ ಯಕ್ಷಗಾನ ಸಂಘ (ರಿ.) ಬ್ರಹ್ಮಾವರ ಇವರು ಏರ್ಪಡಿಸಿದ ಮುಖವರ್ಣಿಕೆ ಶಿಬಿರ.

♦ ೧೫/೪/೨೦೧೩ ರಿಂದ ೨೫/೪/೨೦೧೩ರ ವರೆಗೆ ಯಕ್ಷಗಾನ ಕಲಾಕೇಂದ್ರ (ರಿ.) ಹಂಗಾರಕಟ್ಟೆ ಐರೋಡಿ ಇವರು ಏರ್ಪಡಿಸಿದ ಬೇಸಿಗೆ ಯಕ್ಷಗಾನ ನೃತ್ಯ ಶಿಬಿರ “ನಲಿಕುಣಿ” ಶಿಬಿರದಲ್ಲಿ ಸಹನಿರ್ದೇಶಕರಾಗಿ ಭಾಗವಹಿಸುವಿಕೆ. 2014-2015 ಸತತ ಮೂರು ವರ್ಷಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಚರಣೆ.

♦ 24/11/2014 ಕಡೆಕಾರಿನಲ್ಲಿ ಬ್ರಹ್ಮಬೈದರ್ಕಳ ಯಕ್ಷಗಾನ ಸಂಘ (ರಿ.) ವೇಷಭೂಷಣ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ.

♦ 4/5/2015 ರಿಂದ ಯಕ್ಷಾಂಗಣ ಟ್ರಸ್ಟ್ (ರಿ.), ಯಕ್ಷ ದೇಗುಲ (ರಿ.) ಬೆಂಗಳೂರು ಇವರು ನಡೆಸುವ ಬಣ್ಣದ ವೇಷ ಹಾಗೂ ಮುಖವರ್ಣಿಕೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ.

♦ 2016ರಿಂದ ಕರ್ನಾಟಕ ಕಲಾದರ್ಶನಿ (ರಿ.) ಬೆಂಗಳೂರು ತಂಡದೊಂದಿಗೆ ಡಾ. ಕೋಟ ಶಿವರಾಮ ಕಾರಂತ ನಿರ್ದೇಶಿತ ಯಕ್ಷಗಾನ ಬ್ಯಾಲೆಯ ಮರು ನಿರ್ಮಾಣದಲ್ಲಿ ಕಲಾವಿದನಾಗಿ ಭಾಗವಹಿಸುವಿಕೆ.


ಹಿಂದಿನ ಅನುಭವೀ ಕಲಾವಿದರ ಪಾತ್ರ ನಿರ್ವಹಣೆಯ ಅಧ್ಯಯನ, ಪುರಾಣ ಗ್ರಂಥಗಳ ಓದುವಿಕೆ, ಪಾರಂಪರಿಕ ವೇಷಗಳ ಆಹಾರ್ಯ, ಮುಖವರ್ಣಿಕೆಗಳ ಬಗ್ಗೆ ಅಧ್ಯಯನ ಹಾಗೂ ಪ್ರದರ್ಶನ ಇವರ ಹವ್ಯಾಸಗಳು.


ಹವ್ಯಾಸಿ ಸಂಘ-ಸಂಸ್ಥೆಗಳಿಗೆ ಯಕ್ಷಗಾನದ ತರಬೇತಿ ತರಗತಿ:-

ಸಿದ್ಧೇಶ್ವರ ಯಕ್ಷರಂಗ ಬನ್ನಾಡಿ, ಯಕ್ಷತರಂಗ ಹಾಗೂ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಮಕ್ಕಳ ಮಕ್ಕಳ ತರಬೇತಿಯಲ್ಲಿ ಕಲಿಸುವಿಕೆ. ಶಾಂಭವೀ ಶಾಲಾ ಯಕ್ಷಗಾನ ಕೇಂದ್ರ ಗಿಳಿಯಾರು, ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ಬೋಧನೆ. ನೂರಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಉತ್ಸವಗಳಲ್ಲಿ ಭಾಗವಹಿಸುವಿಕೆ.


ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ :-

ಆರಾಧನೆ ಆದರ್ಶ ತತ್ವಗಳನ್ನು ಹೊಂದಿದ್ದ ಕಲೆ ಕೀಳು ಅಭಿರುಚಿಯ ಮನೋರಂಜನೆ, ಹಾಸ್ಯ ಮುಂತಾದ ಕಳಪೆ ಪ್ರದರ್ಶನಗಳು ಆಗುತ್ತಿವೆ. ಯಕ್ಷಗಾನದ ಮೂಲ ತತ್ವಗಳು ಮರೆಯಾಗಿವೆ.


ಯಕ್ಷಗಾನದ ಇಂದಿನ ಪ್ರೇಕ್ಷಕರು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ :-

ಕಲಾಭಿಮಾನಿಗಳಾಗದೇ ಕಲಾವಿದಾಭಿಮಾನಿಗಳಾಗುತ್ತಿದ್ದಾರೆ. ಯಕ್ಷಗಾನ ರಂಗಕ್ಕೆ ಮಾರಕ.


ಯಕ್ಷಗಾನ ರಂಗದ ಮುಂದಿನ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಈಗಾಗಲೇ ಕೈಗೊಂಡಿರುವ ಕಾರ್ಯ ಯಕ್ಷಗಾನ ಶಿಕ್ಷಣವನ್ನು ಸರಿಯಾದ ತಿಳುವಳಿಕೆಯೊಂದಿಗೆ ಯುವಜನತೆಗೆ ತಿಳಿಸುವುದಕ್ಕಾಗಿ ಯಕ್ಷಗಾನ ತರಬೇತಿ, ಪ್ರಸಂಗ ಮಾಹಿತಿ, ಪಾರಂಪರಿಕ ಯಕ್ಷಗಾನ ಪ್ರದರ್ಶನಗಳು, ಪರಂಪರೆಯ ಯಕ್ಷ ವೇಷಗಳ ಮುಖವರ್ಣಿಕೆ, ವೇಷಭೂಷಣಗಳ ಮಾಹಿತಿಗಾಗಿ ತರಬೇತಿಗೊಳಿಸುವುದು.


ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವ, ಗುಜರಾತ್, ದೆಹಲಿ, ಹರಿಯಾಣ, ರಾಜಸ್ಥಾನ, ಪಂಜಾಬ್, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ತ್ರಿಪುರ ರಾಜ್ಯಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.


★ 1978ರಲ್ಲಿ ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ ಮೊದಲ ಬಾರಿಗೆ ವಿದೇಶ ಪ್ರಯಾಣ. ಸೋವಿಯತ್ ರಷ್ಯಾದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಉಪಸ್ಥಿತಿಯಲ್ಲಿ ಭಾರತ ಉತ್ಸವದಲ್ಲಿ ಭಾಗವಹಿಸುವಿಕೆ. ಮೂರು ತಿಂಗಳ ಯಕ್ಷ ಅಭಿಯಾನ. ರಷ್ಯಾದ ಮಾಸ್ಕೋ, ಲೆನಿನ್ ಗ್ರಾಡ್, ಕೀವ್ ಸಿಟಿ, ಲೋವೋಪ್, ಡೋನೋಸ್ಕಿಯಾ, ಉಜ್ಬೇಕಿಸ್ಥಾನ್, ಕಝಕಿಸ್ಥಾನ್, ತಾಷ್ಕೆಂಟ್, ವಿಟೆಬ್ಸೆಕ್ ದೇಶಗಳಲ್ಲಿ ಪ್ರದರ್ಶನ.


★ ೧೯೮೮ರಲ್ಲಿ ಡಾ. ಕಾರಂತರೊಂದಿಗೆ ಡಾ. ಬಿ.ಆರ್. ಶೆಟ್ಟಿ ಇವರ ಆಮಂತ್ರಣದಿಂದ ಅಬುಧಾಬಿ, ದುಬೈಗಳಲ್ಲಿ ಪ್ರದರ್ಶನ.

★ 1990ರಲ್ಲಿ ಡಾ. ಕಾರಂತರೊಂದಿಗೆ ಇಂಗ್ಲೆಂಡಿನ ಭಾರತೀಯ ವಿದ್ಯಾಭವನದ ಆಮಂತ್ರಣದಿಂದ ಇಂಗ್ಲೆಂಡ್ ಪ್ರವಾಸ, ಮ್ಯಾಂಚೆಸ್ಟರ್ ಬಿ.ಬಿ.ಸಿ ಟೆಲಿವಿಷನ್ ನಲ್ಲಿ ಅಭಿಮನ್ಯು ಕಾಳಗ ಪ್ರದರ್ಶನದಲ್ಲಿ ಪಾತ್ರ ನಿರ್ವಹಣೆ.

◆ 1990ರಲ್ಲಿ ದಕ್ಷಿಣ ಅಮೇರಿಕಾದ ಪೆರು, ಬ್ರೆಜಿಲ್ ದೇಶಗಳಲ್ಲಿ ಪ್ರದರ್ಶನ.

● 1998ರಲ್ಲಿ ಜರ್ಮನಿ, ಸ್ವೀಡನ್ ಹಾಗೂ ಸ್ಕಾಟ್ ಲ್ಯಾಂಡ್ ಪ್ರವಾಸ ಹಾಗೂ ಯಕ್ಷಗಾನ ಪ್ರದರ್ಶನ.

★ 2003ರಲ್ಲಿ ಸ್ವಿಜರ್ಲ್ಯಾಂಡ್ ಪ್ರವಾಸ.

★ 2008ರಲ್ಲಿ ಚೀನಾ ಪ್ರವಾಸ (ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ತಂಡದೊಂದಿಗೆ).

★ 2010ರಲ್ಲಿ ಸಿಂಗಾಪುರ್ ಪ್ರವಾಸ.

★ 2010ರಲ್ಲಿ ಐರ್ಲೆಂಡ್ ಪ್ರವಾಸ.

★ 2013ರಲ್ಲಿ ಆಸ್ಟ್ರೇಲಿಯಾ ಪ್ರವಾಸ.

(ಯಕ್ಷಗಾನದಿಂದ ಯಕ್ಷಗಾನಕ್ಕಾಗಿ ಹತ್ತು ಬಾರಿ ವಿದೇಶ ಪ್ರಯಾಣ).

1983ರಲ್ಲಿ ಯಕ್ಷಗಾನ ಹಾಗೂ ನಾಟಕ ಪ್ರಸಾದನ ಸಂಸ್ಥೆ “ಉರಾಳ ಬಳಗ” ಪಾಲುದಾರಿಕೆಯಲ್ಲಿ ಪ್ರಾರಂಭ. 1985ರಿಂದ ಯಕ್ಷಗಾನ, ನಾಟಕಗಳ ಪ್ರಸಾದನ ಕಾರ್ಯ, ವೇಷಭೂಷಣಗಳ ತಯಾರಿ, ಶ್ರೇಷ್ಠ ಪರಂಪರೆಯ ಪ್ರಸಾಧನ ತಜ್ಞನಾಗಿ ಹೆಸರು ಗಳಿಸುವಿಕೆ.


15.05.1985 ರಂದು ಭವಾನಿ ಅವರನ್ನು ವಿವಾಹವಾಗಿ ಪುತ್ರಿ ಶ್ರೀಲತಾ, ಪುತ್ರರಾದ ಶ್ರೀಕಾಂತ, ಶ್ರೀನಾಥ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಪದವಿ ಶಿಕ್ಷಣವನ್ನು ಪಡೆದಿರುವ ಪುತ್ರಿ ಹಾಗೂ ಪುತ್ರರೀರ್ವರೂ ತಂದೆಯಿಂದಲೇ ಯಕ್ಷಗಾನ ಕಲಿತ ಹವ್ಯಾಸಿ ಕಲಾವಿದರು ಹಾಗೂ ಅನೇಕ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top