|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 "ಕರುಳ ಬಳ್ಳಿಯ ಆಕ್ರಂದನ"

"ಕರುಳ ಬಳ್ಳಿಯ ಆಕ್ರಂದನ"



ಸಣ್ಣ ವಯಸ್ಸಿನಲ್ಲಿರುವಾಗ ಅಜ್ಜಿ ಮನೆಗೆ, ದೊಡ್ಡಮ್ಮ- ಚಿಕ್ಕಮ್ಮನ ಮನೆಗೆ ರಜೆ ಸಿಕ್ಕಾಗ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನೆಂಟ್ರ ಮನೆಗೆ ಹೋಗುವಾಗ ಅವರಿಗೆ ಮೊದಲೇ ಕರೆ ಮಾಡಿ ತಿಳಿಸುವುದು, ಅಲ್ಲಿಗೆ ಹೋಗುವಾಗ ನಾವು ಯಾವ ರೀತಿಯ ಬಟ್ಟೆಯನ್ನು ಹಾಕುವುದು, ಅವರಿಗೆ ಯಾವ ರೀತಿಯ ತಿಂಡಿ ತಿನಿಸುಗಳು ಇಷ್ಟ, ನಾವು ಅಲ್ಲಿ ತುಂಬಾ ದಿನಗಳ ಕಾಲ ನಿಲ್ಲಬೇಕು, ಆಟ ಆಡಬೇಕು ಎಂಬಿತ್ಯಾದಿ ಗಾಢ ಆಲೋಚನೆಯನ್ನು ಹೋಗುವ ಮುಂಚೆಯೆ ಮಾಡುತ್ತೇವೆ.


ಹೀಗೆ ಒಮ್ಮೆ ಶಾಲಾ ಬೇಸಿಗೆ ರಜೆಯ ಸಮಯದಲ್ಲಿ ದೊಡ್ಡಮ್ಮನ ಮಗಳು ನಮ್ಮ ಮನೆಗೆ ಬಂದಿದ್ದಳು. ಆಕೆ ಒಂದು ವಾರ ಮನೆಯಲ್ಲಿ ನಿಂತು ನಂತರ ಆಕೆ ಮನೆಗೆ ಹೋಗುವಾಗ ನಾನು, ಅಮ್ಮ, ಅಕ್ಕ, ತಮ್ಮ ಕೂಡ ದೊಡ್ಡಮ್ಮನ ಮನೆಗೆ ಹೋಗಲು ಹೊರಟೆವು. ನನ್ನ ಅಕ್ಕ ಆಗ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಳು. ನಾನು ಅಂಗನವಾಡಿಗೆ ಹೋಗುತ್ತಿದ್ದೆ. ಹಾಗೆ ತಮ್ಮ ಸಣ್ಣ ಪ್ರಾಯದ ಮಗುವಾಗಿದ್ದ. ನಾವು ಅಲ್ಲಿ ಎಷ್ಟು ದಿನ ನಿಲ್ಲುತ್ತೇವೆ ಅಷ್ಟು ದಿನಕ್ಕೆ ಬೇಕಾಗುವಷ್ಟು ಬಟ್ಟೆ ಬರೆಗಳನ್ನೆಲ್ಲ ಕಟ್ಟಿಕೊಂಡು ಮನೆಯಿಂದ ಬಸ್ಸು ಹತ್ತಿ ಹೊರಟೆವು. ದೊಡ್ಡಮ್ಮನ ಮನೆ ದೂರದ ಮರ್ಕಂಜದಲ್ಲಿ. ನಾವು ಸುಳ್ಯದಲ್ಲಿ ಇಳಿದು ಅಲ್ಲಿಂದ ದೊಡ್ಡಮ್ಮನ ಮನೆಯ ಪಕ್ಕದ ಭಟ್ರು ಸುಳ್ಯದಿಂದ ಮರ್ಕಂಚಕ್ಕೆ ಜೀಪು ಬಾಡಿಗೆ ಮಾಡುತ್ತಿದ್ದರು.


ಹಾಗಾಗಿ ಅಲ್ಲಿ ನಮಗೆ ಬೇಕಾದ ತಿಂಡಿಗಳನ್ನು ತೆಗೆದುಕೊಳ್ಳಲು ಒಂದು ಅಂಗಡಿಗೆ ಹೋದೆವು. ಅಮ್ಮ ಬೇಕಾದ ತಿಂಡಿಗಳನ್ನೆಲ್ಲ ತೆಗೆದುಕೊಳ್ಳುತ್ತಿದ್ದರು. ಅಕ್ಕಂದಿರು ಅಮ್ಮನ ಜೊತೆ ನಿಂತಿದ್ದರು. ಅಲ್ಲೇ ಪಕ್ಕದ ಫ್ಯಾನ್ಸಿ ಅಂಗಡಿಯಲ್ಲಿ ಬಣ್ಣ ಬಣ್ಣದ ಗೊಂಬೆಗಳನ್ನು ನೇತಾಡಿಸಿದ್ದರು. ಮೊದಲಿಂದಲೇ ನಂಗೆ ಗೊಂಬೆಗಳೆಂದರೆ ಹುಚ್ಚು ಪ್ರೀತಿ. ಹಾಗಾಗಿ ಆ ಗೊಂಬೆಗಳನ್ನೆಲ್ಲಾ ನೋಡಿ ಬೆರಗಾಗಿ ಅಲ್ಲೇ ನಿಂತು ಬಿಟ್ಟೆ. ಇತ್ತ ಅಮ್ಮ ಅಕ್ಕಂದಿರು ತಿಂಡಿ ತಿನಿಸುಗಳನೆಲ್ಲ ಕಟ್ಟಿಕೊಂಡು ಹೊರಟಿದ್ದರು. ಅಮ್ಮನಲ್ಲಿ ಗೊಂಬೆ ಬೇಕು ಎಂದು ಹಠ ಮಾಡೋಣ ಅಂದುಕೊಳ್ಳುತ್ತ ತಿರುಗಿ ಅಮ್ಮ ಎಂದಾಗ ಅಲ್ಲಿ ಯಾರು ಇರಲಿಲ್ಲ. ಅವರು ನನ್ನ ಬಿಟ್ಟು ಹೊರಟಿದ್ದರು. ಅತ್ತಿತ್ತಾ ಒಮ್ಮೆ ಕಣ್ಣು ಹಾಯಿಸಿದೆ. ಎಲ್ಲೂ ಅವರು ಕಾಣಿಸಲೇ ಇಲ್ಲ ಗಾಬರಿಯಾಯಿತು.


ಗೊತ್ತು ಗುರಿ ಇಲ್ಲದ ಸ್ಥಳ  ಯಾರೊಂದಿಗಾದರೂ ಕೇಳೋಣವೆಂದರೆ ಅಲ್ಲಿ ಯಾರ ಪರಿಚಯವು ನನಗಿರಲಿಲ್ಲ. ಜೋರಾಗಿ ಅಮ್ಮ.. ಅಮ್ಮ,.. ಎಲ್ಲಿದ್ದೀರಾ.. ಎಂದು ಅಳತೊಡಗಿದೆ. ಅಳುತ್ತಾ ಸುಳ್ಯ ಪೇಟೆಯಲ್ಲಿ ಅತ್ತಿತ್ತ ಅಮ್ಮನ ಹುಡುಕಾಡುತ್ತಾ ಹೋದೆ ಎಲ್ಲೂ ಕಾಣಿಸಲೇ ಇಲ್ಲ. ಅದಾಗಲೇ ದೂರದ ಜೀಪಿ ನಲ್ಲಿ ಕುಳಿತ ಅಜ್ಜಿ ಒಬ್ಬರು ನನ್ನ ಅಳಲು ನೋಡಿ ಜೀಪಿಳಿದು ಬಂದು ಯಾಕಮ್ಮ ಅಳುತ್ತೀಯ. ಅಂದಾಗ "ಅಮ್ಮನನ್ನನ್ನು ಬಿಟ್ಟು ಹೋಗಿದ್ದಾರೆ" ಎಂದು ಜೋರಾಗಿ ಅತ್ತೆ. ಆಗ ಅಜ್ಜಿ ಅಳಬೇಡ ಕಂದ ನಿನ್ನ ಅಮ್ಮ ಎಲ್ಲೂ ಹೋಗಿಲ್ಲ. ಇಲ್ಲೇ ಪಕ್ಕದಲ್ಲಿ ಇದ್ದಾರೆ ಎಂದು ಸಮಾಧಾನಪಡಿಸಿ ನನ್ನ ಕೈ ಹಿಡಿದು ಅವರು ಕೂಡ ಅಮ್ಮನನ್ನು ಹುಡುಕ ತೊಡಗಿದರು.


"ಈ ಹೆಂಗಸಿಗೆ ಮಗುವಿನ ಬಗ್ಗೆ ಒಂದು ಚೂರು ಕಾಳಜಿ ಇಲ್ಲ ಎಲ್ಲೆಲ್ಲೋ ಬಿಟ್ಟು ಹೊರಟು ಹೋಗಿದ್ದಾಳೆ" ಎಂದು ನನಗೆ ಕೇಳಬಾರದೆಂಬ ಉದ್ದೇಶದಿಂದ ಮೆಲ್ಲಮೆಲ್ಲನೆ ನನ್ನ ಅಮ್ಮನಿಗೆ ಗೊಣಗುತ್ತಿದ್ದರು. ಅಜ್ಜಿ ಪೇಟೆಯಲ್ಲಿರುವ ಎಲ್ಲಾ ಹೆಂಗಸರಿನತ್ತ ಕೈ ತೋರಿಸಿ ಅವರ ನಿನ್ನ ಅಮ್ಮ ಇವರ ಎಂದು ಕೇಳತೊಡಗಿದರು. ನಾನು ಅವರು ಯಾರು ಅಲ್ಲ ಎನ್ನುತ್ತಾ ಅಳಲನ್ನು ಮಾತ್ರ ನಿಲ್ಲಿಸಲೇ ಇಲ್ಲ. ಅಷ್ಟರಲ್ಲಿ ದೂರದಲ್ಲಿ ಅಮ್ಮನ ಸೆರಗು ಹಾದಂತೆ ಕಾಣಿಸಿತು. ಅಜ್ಜಿಯ ಕೈ ತಪ್ಪಿಸಿ ಅತ್ತ ಓಡಿ ಹೋದೆ. ಅದಾಗಲೇ ಅಲ್ಲಿ ಅಮ್ಮ ಯಾರೊಡನೆಯೂ ನನ್ನ ಬಗ್ಗೆ ವಿಚಾರಿಸುಲು ಶುರುಮಾಡಿದ್ದರು. ನಾನು ಅಳುತ್ತಾ ಓಡಿ ಹೋಗಿ ಅಮ್ಮನ ಕಾಲನ್ನು ಗಟ್ಟಿಯಾಗಿ ತಬ್ಬಿಕೊಂಡೆ. ಮನದಲ್ಲಿರೋ ಭಯವೆಲ್ಲವೂ ಒಮ್ಮೆ ದೂರವಾಯಿತು. ಅಮ್ಮನಿಗೆ ಒಮ್ಮೆ ಹೋದೆ ಜೀವ ಬಂದಂತಾಯಿತು. ನಿಟ್ಟುಸಿರು ಬಿಟ್ಟರು.


ಅತ್ತಿಂದ ಆ ಅಜ್ಜಿ ಕಣ್ಣುಗಳನ್ನು ಅರಳಿಸಿ, ಹುಬ್ಬುಗಳನ್ನು ಗಂಟಿಕ್ಕಿ ಇತ್ತ ನಮ್ಮ ಬಳಿಗೆ  ಬಂದು "ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳದ ವರಿಗೆ ಮಕ್ಕಳೆತಕ್ಕೆ? ಅಂತೆಲ್ಲ ಬಾಯಿಗೆ ಬಂದ ಹಾಗೆ ಬೈದು ಬಿಟ್ರು. ಅಮ್ಮ ಸತ್ಯ ಹೇಳಲು ಪ್ರಯತ್ನಿಸುತ್ತಿದ್ದರು ಆ ಅಜ್ಜಿ ಒಂದು ಚೂರು ಬಿಡುವಿಲ್ಲದೆ ಗೊಣಗುತ್ತಿದ್ದರು. ಅಮ್ಮ ಸುಮ್ಮನಾಗಿ ಬಿಟ್ಟರು. ಅಜ್ಜಿ ಅಮ್ಮನಿಗೆ ಬೈದು ಬುದ್ಧಿ ಹೇಳಿದರು. ಕೊನೆಗೆ ಅಜ್ಜಿ ಒಂದು ಮಾತು ಹೇಳಿದರು ನನಗೆ ಕೂಡ ಒಂದು ಮೊಮ್ಮಗಳು ಇದ್ದಾಳೆ. ನನ್ನ ಮಗ ಮತ್ತು ಸೊಸೆ ದೂರದ ಊರಿನಲ್ಲಿ ಕೆಲಸದಲ್ಲಿರುವ ಕಾರಣ ಮೊಮ್ಮಗಳು ಕೂಡ ಅವರೊಂದಿಗೆ ಅಲ್ಲೇ ಇದ್ದಾಳೆ. ಎಲ್ಲಾ ಹೆಣ್ಣು ಮಕ್ಕಳನ್ನು ನೋಡುವಾಗ ನನಗೆ ಸದಾ ನನ್ನ ಮೊಮ್ಮಗಳದ್ದೆ ನೆನಪಾಗುತ್ತದೆ. ಹಾಗಾಗಿ ಈ ಮಗು ಅಳುತ್ತಾ ಅಮ್ಮ.. ಅಮ್ಮ.. ಎಂದು ಅತ್ತಾಗ ನನಗೆ ನನ್ನ ಮೊಮ್ಮಗುವಿನ ನೆನಪಾಯಿತು. ಆ ಕಾರಣಕ್ಕೆ ಮಗುವಿನ ಮೇಲಿನ ಪ್ರೀತಿ ಕಾಳಜಿಯಿಂದ ಒಂದೆರಡು ಮಾತನಾಡಿದೆ ಹೊರತು ನಿಮ್ಮ ಮೇಲೆ ಕೋಪದಿಂದಲ್ಲ, ಎಂದು ಹೇಳಿ ಹೊರಟು ಹೋದರು.


ಅಜ್ಜಿ ತಿರುಗಿ ಹೋದದ್ದೇ ತಡ ಇತ್ತ ಅಮ್ಮ ಅಕ್ಕಂದಿರನ್ನು ಗೊಣಗಲು ಶುರು ಮಾಡಿದರು. "ನನ್ನ ಕೈಯಲ್ಲಿ ಪಾಪು ಇರುವುದರಿಂದ ನಿಮ್ಮಲ್ಲಿ ತಂಗಿಯನ್ನು ನೋಡಿಕೊಳ್ಳಲು ಹೇಳಿದ್ದಲ್ಲವೇ" ಎಂದು ಸಿಟ್ಟಿಗೇರಿಬಿಟ್ಟರು. "ಇನ್ನು ಮುಂದೆ ನಿಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗಲಾರೆ, ಈಗ ಯಾವ ತಿಂಡಿ ತಿನಿಸುಗಳನ್ನು ತಿನ್ನಲು ತೆಗೆದುಕೊಡುವುದಿಲ್ಲ, ಎಂದು ಹೇಳಿ ಅಲ್ಲಿಂದ ನಮ್ಮನ್ನು ಕರೆದುಕೊಂಡು ಬಟ್ರ ಜೀಪ್ ಇರುವ ಕಡೆ ಹೋಗಿ ಜೀಪ್ ಹತ್ತಿ ಕುಳಿತರು.


ಮುಂದುವರಿಯುವುದು......



-ದೀಪ್ತಿ ಅಡ್ಡಂತ್ತಡ್ಕ

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಮಹಾವಿದ್ಯಾಲಯ ನೆಹರು ನಗರ ಪುತ್ತೂರು

web counter

0 تعليقات

إرسال تعليق

Post a Comment (0)

أحدث أقدم