ಬೆಂಗಳೂರು: ಹಿರಿಯ ಪತ್ರಕರ್ತ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಇನ್ನೆರಡು ಪುಸ್ತಕಗಳು ನಾಳೆ (ಭಾನುವಾರ, ಜುಲೈ 24) ಬಿಡುಗಡೆಯಾಗಲಿವೆ.
'ಓದುಗೊಳವೆ' ಮತ್ತು 'ಎಲ್ಲರ ಕಾಲನ್ನೂ ಎಳೆಯುತ್ತೆ ಕಾಲಂ!'- ನಾಳೆ ಬಿಡುಗಡೆಯಾಗಲಿರುವ ಎರಡು ಪುಸ್ತಕಗಳು.
ಬಸವನಗುಡಿಯ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ಬೆಳಗ್ಗೆ 10:30 ಗಂಟೆಗೆ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಾವಣ್ಣ ಪ್ರಕಾಶನ ಈ ಪುಸ್ತಕಗಳನ್ನು ಹೊರತಂದಿದೆ.
******
ನಿನ್ನೆ, ಶುಕ್ರವಾರದಂದು ಶ್ರೀಯುತ ವಿಶ್ವೇಶ್ವರ ಭಟ್ಟರ ಮೂರು ಪುಸ್ತಕಗಳು- ಸುದ್ದಿ ಮನೆ ಕತೆ, ಇದೇ ಅಂತರಂಗ ಸುದ್ದಿ ಮತ್ತು ನೂರೆಂಟು ವಿಶ್ವ- ಬೆಂಗಳೂರಿನ ಜಯನಗರದ ಯುವಪಥ, ವಿವೇಕ ಸಭಾಂಗಣದಲ್ಲಿ ಬಿಡುಗಡೆಯಾಗಿದ್ದವು. ಇದೇ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ಟರ ಕುರಿತಾಗಿ ಅಂಕಣಕಾರ, ಶಿರಸಿ ಮೂಲದ ಬಹ್ರೈನ್ ನಿವಾಸಿ ಕಿರಣ್ ಉಪಾಧ್ಯಾಯ ಅವರು ಬರೆದ ವಿಶ್ವತೋಮುಖ ಕೃತಿಯೂ ಬಿಡುಗಡೆಯಾಗಿತ್ತು.
ಈ ನಾಲ್ಕೂ ಕೃತಿಗಳನ್ನು ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಎಲ್.ಎಲ್ ಭೈರಪ್ಪ ಅವರು ಬಿಡುಗಡೆ ಮಾಡಿದ್ದರು. ಸಮಾರಂಭದಲ್ಲಿ ಸುತ್ತೂರು ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯವಿತ್ತು. ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಮಾರು ಮೂರು ಗಂಟೆಗೂ ಹೆಚ್ಚು ಅವಧಿಯ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಸಭಾಂಗಣದಲ್ಲಿ ಎಲ್ಲ ಆಸನಗಳೂ ಭರ್ತಿಯಾಗಿ, ನೂರಕ್ಕೂ ಹೆಚ್ಚು ಮಂದಿ ನಿಂತುಕೊಂಡು ಕಾರ್ಯಕ್ರಮ ವೀಕ್ಷಿಸಿದ್ದು ವಿಶ್ವೇಶ್ವರ ಭಟ್ ಅವರು ಗಳಿಸಿದ ಓದುಗರ ಪ್ರೀತಿಗೆ ಸಾಕ್ಷಿಯಾಗಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ