ಮಂಗಳೂರು: "ಒಂದು ಸಂಘವನ್ನು ಮುನ್ನಡೆಸುವುದು ಬಹಳ ಕಷ್ಟದ ಕೆಲಸ. ಹಾಗಿದ್ದೂ ಈ ಸಂಘ ಶತಮಾನೋತ್ಸವ ಆಚರಿಸುತ್ತಿರುವುದು ಬಹಳ ಸಂತೋಷದ ವಿಚಾರ. ಯಕ್ಷಗಾನ ಕಲೆ ಉಳಿಯುವಲ್ಲಿ ಇಂತಹ ಸಂಘಗಳ ಕೊಡುಗೆ ಬಹಳ ದೊಡ್ಡದು. ಪ್ರೇಕ್ಷಕರ ಸಹಭಾಗಿತ್ವ ಕೂಡ ಅತ್ಯಂತ ಅಗತ್ಯ" ಎಂದು ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ 19 ನೆಯ ಸನ್ಮಾನವನ್ನು ಸ್ವೀಕರಿಸಿ ಸತೀಶ್ ಮಡಿವಾಳ ಕಾರ್ಕಳ ಇವರು ನುಡಿದರು.
ಕಾರ್ಕಳ ಯಕ್ಷ ನಾಟ್ಯಾಂಜಲಿ ಸಂಸ್ಥೆಯ ಮುಖ್ಯಸ್ಥ, ಪ್ರಸಂಗ ಕರ್ತೃ, ಯಕ್ಷಗಾನ ವೇಷಧಾರಿ, ಯಕ್ಷ ಗುರು ಸತೀಶ್ ಮಡಿವಾಳ ಕಾರ್ಕಳ ಇವರ ಅಭಿನಂದನಾ ಭಾಷಣವನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಸಂಜಯ ಕುಮಾರ್ ರಾವ್ ಮಾಡಿದರು.
"ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗೋವಿಂದ ಭಟ್ ಇವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ನಾಟ್ಯಾಭ್ಯಾಸ ಕಲಿತ ಸತೀಶ್ ಮಡಿವಾಳರು ಕಾರ್ಕಳದ ಸುತ್ತಮುತ್ತ ಹಲವು ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡಿ ಅಪಾರ ಶಿಷ್ಯರನ್ನು ಪಡೆದಿದ್ದಾರೆ. ಸಂಪಾದಿಸಿದ ಧನವನ್ನು ಯಕ್ಷಗಾನ ಕಲಿವ ಅರ್ಹ ವಿದ್ಯಾರ್ಥಿಗಳಿಗೆ ದಾನ ಮಾಡುವ ಉದಾರ ಬುದ್ಧಿಯ ಸತೀಶ್ ಮಡಿವಾಳರು ಯಕ್ಷಗಾನದ ದೊಡ್ಡ ಆಸ್ತಿ ಎಂದು ಸಂಜಯ ಕುಮಾರ್ ರಾವ್, ಅಭಿನಂದನಾ ಭಾಷಣದಲ್ಲಿ ಉಲ್ಲೇಖಿಸಿದರು. ಅಭಿನಂದನಾ ಪತ್ರವನ್ನು ಬಿ.ಟಿ. ಕುಲಾಲ್ ವಾಚಿಸಿದರು.
ಜಲಂಧರ ರೈ ಸಂಸ್ಮರಣೆ:
ಕೀರ್ತಿಶೇಷ ಜಲಂಧರ ರೈ ಇವರ ಸಂಸ್ಮರಣೆಯನ್ನು ಅವರ ಶಿಷ್ಯ, ಮುಖ್ಯ ಅತಿಥಿಯಾಗಿ ಕುಸುಮಾಕರ್ ಮಾಡಿದರು. ಯಕ್ಷಗಾನ, ನಾಟಕ ಕಲೆಗಳ ಬಗ್ಗೆ, ಕಬಡ್ಡಿ, ಕೊಕ್ಕೋ ಹೈಜಂಪ್ ಕ್ರೀಡೆಗಳ ಬಗ್ಗೆಯೂ, ಶಿಕ್ಷಕರಾಗಿದ್ದ ಜಲಂಧರ ರೈ ಮಕ್ಕಳಿಗೆ ಕಲಿಸಿಕೊಡುತ್ತಿದ್ದರು. ಬಡ ಮಕ್ಕಳಿಗೆ ವಿದ್ಯೆ ಕಲಿಯಲು ಧನ ಸಹಾಯವನ್ನು ಮಾಡುತ್ತಿದ್ದರು.
ಆನಂದಾಶ್ರಮ ಶಾಲೆ, ಉಳ್ಳಾಲ ಕೋಟೆಕಾರ್ ಇಲ್ಲಿ ಶಿಕ್ಷಕರಾಗಿದ್ದ ಜಲಂಧರ ರೈ ಅವರ ಸಂಘಟನಾ ಚತುರತೆಯನ್ನು ಸ್ಮರಿಸಿದರು. ಯಕ್ಷಗಾನ ಹಿಮ್ಮೇಳ ವಾದಕರಾದ ರಾಮಕೃಷ್ಣ ಕಾಮತ್, ಕಾರ್ಕಳ ಇವರು ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದರು. ಶಿವಂ ಎಲೆಕ್ಟ್ರಾನಿಕ್ಸ್, ಕಾರ್ಕಳ ಇದರ ಮಾಲಕರಾದ ಗುರುಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಿವಪ್ರಸಾದ್ ಪ್ರಭು, ಶ್ರೀಮತಿ ಪ್ರಫುಲ್ಲಾ ನಾಯಕ್, ಅಶೋಕ್ ಬೋಳೂರು, ರಮೇಶ ಇರ್ವತ್ತೂರು, ಪ್ರಭಾಕರ ಸುವರ್ಣ, ಕಾರ್ಕಳ ಇವರು ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ "ಸೇತು ಬಂಧನ" ತಾಳಮದ್ದಳೆ ಸಂಘದ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ