ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಮೂವರು ಸಾಧಕರನ್ನು ಜು.24ರಂದು ಗೌರವಿಸಲಾಗುತ್ತಿದೆ. ಪತ್ರಕರ್ತ ಕಿರಣ್ ಮಂಜನಬೈಲು, ಲೆಕ್ಕಪರಿಶೋಧಕ ಅಜಿತ್ ಕುಮಾರ್ ಮತ್ತು ಹೆಸರಾಂತ ವೈದ್ಯರಾದ ಡಾ. ಶ್ರೀಪತಿ ಅವರು ಸನ್ಮಾನಕ್ಕೆ ಪಾತ್ರರಾಗಲಿರುವ ಗಣ್ಯರು.
ಕಿರಣ್ ಮಂಜನಬೈಲು ಪರಿಚಯ:
ಅರ್ಹರಿಗೆ ಸರಕಾರಿ ಸವಲತ್ತಿನ ಮಾಹಿತಿ. ಹೀಗೆ ಪತ್ರಿಕೆ, ಸಮಾಜ ಸೇವೆ ಕಲಾಸೇವೆ ಮಾಡುತ್ತಾ ಜೀವನದ ಹಲವು ಮಜಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮುದಾಯದ ಗೌರವ ಹೆಚ್ಚಿಸುತ್ತಿರುವ ಕಾರ್ಯನಿರತ ಪತ್ರಕರ್ತ- ವರದಿಗಾರ ಕಿರಣ್ ಮಂಜನಬೈಲು ರವರಿಗೆ ಪತ್ರಿಕಾ ಮಾಧ್ಯಮ ಸೇವೆಗಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ರಿ. ಉಡುಪಿ ಆದರ ಪೂರ್ವಕವಾಗಿ ದಿನಾಂಕ 27 ಜುಲೈ 2022 ರಂದು ಗೌರವಿಸುತ್ತಿದೆ.
ಪತ್ರಿಕಾ ಮಾಧ್ಯಮದ ಮೂಲಕ ಸಂವಹನ ಪ್ರಕ್ರಿಯೆಯಲ್ಲಿ ತೊಡಗಿ ವೃತ್ತಿರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಎಲ್ಲರ ಗಮನ ಸೆಳೆಯುತ್ತಿರುವ ಒಬ್ಬ ಧೀಮಂತ ನಿಷ್ಟಾವಂತ ಪತ್ರಿಕಾ ಪ್ರತಿನಿಧಿ ಕಿರಣ ಮಂಜನಬೈಲು. ಕಿರಣ್ ರವರ ಹುಟ್ಟೂರು ಮಾಡುಬಿದರೆಯ ಸಮೀಪದ ಮಂಜನಬೈಲು. ಕನ್ನಡದಲ್ಲಿ ಎಂ.ಎ. ಮಾಡಿದ ಕಿರಣ್ ಪತ್ರಿಕಾ ಮಾಧ್ಯಮವನ್ನು ತನ್ನ ಜೀವನದ ಉಸಿರಾಗಿಸಿಕೊಂಡು ಅದರಲ್ಲೇ ಹಸಿರನ್ನು ಅರಸುತ್ತ ಬೆಳೆದವರು. ತನ್ನ ವೃತ್ತಿ ಓಟವನ್ನು ಮಂಗಳೂರಿನಿಂದ ಪ್ರಾರಂಭಿಸಿ ಈಗ ಉಡುಪಿ ತಲುಪಿದ್ದಾರೆ.
ಜನಾಂತರಂಗ ಬಳಗ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ವೃತ್ತಿ ರಂಗಕ್ಕೆ ಧುಮುಕಿದ ಇವರು ಕರಾವಳಿ ಅಲೆಯನ್ನು ದಾಟಿ ಹೊಸದಿಗಂತವನ್ನು ಏರಿ ಇದೀಗ ಸಂಯುಕ್ತ ಕರ್ನಾಟಕವನ್ನು ತಲುಪಿದ್ದಾರೆ. ಅಲ್ಲಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸುದ್ದಿ ಕಿರಣ ಎಂಬ ಡಿಜಿಟಲ್ ಮಾಧ್ಯಮವನ್ನು ಹುಟ್ಟುಹಾಕಿ ಅದರ ಮೂಲಕ ತಾಜಾ ಸುದ್ದಿಗಳ ಮಹಾಪೂರವನ್ನು ಮನೆಮನಗಳಿಗೆ ಮನೋವೇಗದಲ್ಲಿ ತಲುಪುವಂತೆ ಕಾರ್ಯನಿರ್ವಹಿಸುವ ಪ್ರಜ್ಞಾವಂತ ಪತ್ರಿಕಾ ವರದಿಗಾರ ಮಂಜನಬೈಲು. ಸಮ್ಮೇಳನ ಗಳ ವಿಶೇಷ ವರದಿ, ಪರ್ಯಾಯ ಮಹೋತ್ಸವ ಸಂದರ್ಶನ, ಪರಿಚಯ ಲೇಖನಗಳಿಗೆ ಎತ್ತಿದ ಕೈ.
ಹಲವು ಪ್ರಶಸ್ತಿಗಳ ಸರದಾರ... ಕೀರ್ತನಾ ಚತುರ, ಸೌರಭ ಪ್ರಶಸ್ತಿ, ಕೊಕರಾಭ ಪ್ರಶಸ್ತಿ, ಶ್ರೀ ಕೃಷ್ಣ ವಿಠಲಾ ನುಗ್ರಹ ಪ್ರಶಸ್ತಿ ಅನಂತ ಚೈತನ್ಯ, ಡಿ ವಿ ಜಿ ಪ್ರಶಸ್ತಿ, ವಿಪ್ರಸಾಧಕ ಪ್ರಶಸ್ತಿ ಮಾಧ್ಯಮ ಮಾಣಿಕ್ಯ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ವರ್ಷಕ್ಕೊಂದೆರಡಾದರೂ ಪ್ರಶಸ್ತಿ ಗಿಟ್ಟಿಸಿ ಕೊಂಡು ಬೆಳೆಯುತ್ತಿರುವ ಕಾರ್ಯನಿರತ ಪತ್ರಕರ್ತ.
ಪತ್ರಿಕೋದ್ಯಮ ಒಂದೇ ಇವರ ಕಾರ್ಯ ಕ್ಷೇತ್ರವಾಗಿರದೆ ಓರ್ವ ನುರಿತ ಸಂಘಟಕನೂ ಹೌದು. ಸಾಹಿತ್ಯ ಸಮ್ಮೇಳನಗಳು, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದಲ್ಲಿ, ಮಾತೃಭೂಮಿ ಸಂರಕ್ಷಣ ಸಮಿತಿ ಇತ್ಯಾದಿಗಳಲ್ಲಿ ಸದಸ್ಯ, ಕಾರ್ಯದರ್ಶಿ, ಕೋಶಾಧಿಕಾರಿ, ಅಧ್ಯಕ್ಷ ಹೀಗೆ ಹಲವು ಹುದ್ದೆಗಳನ್ನು ಅಲಂಕರಿಸಿ ಅದಕ್ಕೆ ಗೌರವ ಒದಗಿಸಿಕೊಟ್ಟವರು ಮಂಜನಬೈಲು.
ಜೀವನ ಸವಿಯುವ ಇವರ ಹವ್ಯಾಸಗಳು ಹಲವು. ಸಂಗೀತ, ಯಕ್ಷಗಾನ, ತಾಳಮದ್ದಲೆ, ಛಾಯಾಚಿತ್ರ, ಜೇನು ಸಾಕಣೆ ಹೀಗೆ ಇವೆಲ್ಲ ಕಿರಣರ ಜೀವನ ರಾಗದ ಚರಣ.
ಓರ್ವ ಸಮಾಜ ಸುಧಾರಕನಾಗಿ ತನ್ನೂರು ಗ್ರಾಮೀಣ ಪ್ರದೇಶವಾದ ಮಂಜನ ಬೈಲಿಗೆ ದೂರವಾಣಿ, ರಸ್ತೆ, ವಿದ್ಯುತ್ ಸಂಪರ್ಕ, ಕಿರು ಸೇತುವೆ ಹೀಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮುತುವರ್ಜಿ ವಹಿಸಿ ಹುಟ್ಟೂರ ಋಣ ಸಂದಾಯ ಗೈದ ಆತ್ಮ ತೃಪ್ತಿ ಇವರಿಗಿದೆ.
ಡಾ. ಶ್ರೀಪತಿ ಪರಿಚಯ:
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸೊಂದಿದ್ದರೆ ಮಾರ್ಗವು ಉಂಟು ... ಕೆಚ್ಚೆದೆ ಇರಬೇಕೆಂದೆಂದು .....ಎಂಬ ಹಾಡಿನ ಸಾಲುಗಳು ಈ ವ್ಯಕ್ತಿಗೆ ಹೋಲಿಸಿದರೆ ಅದು ಅಕ್ಷರಶಃ ನಿಜ. ಡಾ| ಆರ್. ಶ್ರೀಪತಿ... ನಮ್ಮೂರ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರು. ಪ್ರಥಮ ಪ್ರಯತ್ನದಲ್ಲೇ ನಾಲ್ಕು ವೈದ್ಯಕೀಯ ಪದವಿಗಳನ್ನು ಬಾಚಿಕೊಂಡ ಪ್ರತಿಭಾವಂತ, ಪ್ರಜ್ಞಾವಂತ ವೈದ್ಯ ವಿಪ್ರಸಿರಿ ಡಾ. ಶ್ರೀಪತಿ. ವೈದ್ಯ ಚಿಕಿತ್ಸಾ ಪದ್ಧತಿಗಳಾದ ಅಲೋಪತಿ ಮತ್ತು ಆಯುರ್ವೇದ ಗಳಲ್ಲಿ ಸ್ನಾತಕೋತ್ತರ ಎಂ. ಡಿ. ಪದವಿಗಳನ್ನು ಪ್ರತ್ಯೇಕ ಮತ್ತು ಅಧಿಕೃತವಾಗಿ ಪಡೆದಿರುವ ಕರ್ನಾಟಕದ ಏಕೈಕ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಇವರು. ಹೀಗೆ ಇವರಂತೆ ಸಾಧನೆಯ ಹಾದಿಯಲ್ಲಿ ನಡೆದ ಮಹಾಶಯರು ಭಾರತದಲ್ಲೇ ಅತಿ ವಿರಳ... ಇದ್ದರೂ ಕೇವಲ ಬೆರಳೆಣಿಕೆಯಷ್ಟು ಎನ್ನಬಹುದು.
ಉಡುಪಿ ಜಿಲ್ಲೆಯ ಖ್ಯಾತ ವೈದ್ಯ ದಿವಂಗತ ಡಾ| ಆರ್. ಆರ್.ಭಟ್ ಹಾಗೂ ದಿವಂಗತ ಶ್ರೀಮತಿ ಪದ್ಮಾಕ್ಷಿ ದಂಪತಿಗಳ ಸುಪುತ್ರ ಶ್ರೀಪತಿಯವರು ಹುಟ್ಟಿದ್ದು ದಿನಾಂಕ 24 ಜುಲೈ 1960 ರಂದು ಚೊಕ್ಕಾಡಿಯ ಸುಸಂಸ್ಕೃತ ಮನೆತನವೊಂದರಲ್ಲಿ...
ತಾಯಿನಾಡು ಉಡುಪಿಯಲ್ಲೇ ವಿದ್ಯಾಭ್ಯಾಸ ಮುಂದುವರಿಸಿದ ಇವರು ತಾನು ಹೆಣೆದ ತನ್ನ ಜೀವನದ ಸುಂದರ ಕನಸುಗಳ ಬೆನ್ನೇರಿ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡುತ್ತ 1984ರಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ನಲ್ಲಿ ಉನ್ನತ ಶ್ರೇಣಿಯೊಂದಿಗೆ ಎಂ.ಬಿ. ಬಿ. ಎಸ್ ಪದವಿಯನ್ನು ತನ್ನದಾಗಿಸಿಕೊಂಡರು. ಬದುಕಲ್ಲಿ ಏನಾದರೂ ವಿಶೇಷವಾದದ್ದನ್ನು ಸಾಧಿಸಬೇಕೆಂದು ನಿರ್ಧರಿಸಿ 1988 ರಲ್ಲಿ ಕಾಶಿಯ ಬನಾರಸ್ ನ ಹಿಂದೂ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿಂದ ನಮ್ಮ ಮಣ್ಣಿನ ಹೆಮ್ಮೆ ಎನಿಸಿರುವ ಆಯುರ್ವೇದದಲ್ಲಿ ಸ್ನಾತಕೋತ್ತರ ಎಂ.ಡಿ. ಪದವಿಯನ್ನು ಗಿಟ್ಟಿಸಿಕೊಂಡರು. ಇಂಗದ ಕಲಿಕೆಯ ದಾಹ ಮುಂದೆ 1991ರಲ್ಲಿ ಎದೆರೋಗ ಶಾಸ್ತ್ರದಲ್ಲಿ ಡಿ.ಟಿ.ಸಿ.ಡಿ. ಮತ್ತು 1992ರಲ್ಲಿ ಇದೇ ವಿಷಯದಲ್ಲಿ ಸ್ನಾತಕೋತ್ತರ ಎಂ.ಡಿ. ಪದವಿಯನ್ನೂ ಪಡೆಯುವಂತೆ ಮಾಡಿತು.
ಪದವಿಗಳು ಹಲವಾರು ಇದ್ದರೂ ವೃತ್ತಿಯಲ್ಲಿ ಉನ್ನತ ಹುದ್ದೆಗಳ ಬೆನ್ ಹತ್ತಿ ಹೋಗದೆ ತನ್ನ ತಾಯಿ ನೆಲದಲ್ಲೇ ಒಂದು ಸಲಹಾ ಕೇಂದ್ರವನ್ನು ಸ್ಥಾಪಿಸಿ, ಕಳೆದ ಮೂವತ್ತು ವರ್ಷಗಳಿಂದ ಸೇವೆಗೈಯ್ಯುತ್ತ ಅದೆಷ್ಟೋ ಜನರ, ರೋಗಿಗಳ ಮನೆ ಮನಗಳಲ್ಲಿ ನಂದಾದೀಪ ಬೆಳಗುವಂತೆ ಮಾಡಿದ್ದಾರೆ.
ಕ್ಲಿಷ್ಟ ಹಾಗೂ ಮಾರಣಾಂತಿಕ ಹಂತ ತಲುಪಿದ ರೋಗಗಳಿಗೂ ಪರಿಣಾಮಕಾರಿ ಚಿಕಿತ್ಸೆ ನೀಡಿ ಜೀವದಾನ ಮಾಡುತ್ತಿರುವ ಯಶಸ್ಸನ್ನು ಗಳಿಸುತ್ತಿರುವ ವೈದ್ಯಶ್ರೇಷ್ಟ. ರೋಗಿಯ ಸ್ಥಿತಿಗತಿಗಳಿಗನುಗುಣವಾಗಿ ತನ್ನ ಸಕಲ ವಿದ್ಯಾ ಪರಿಣತಿಯನ್ನು ಉಪಯೋಗಿಸಿಕೊಂಡು ಚಿಕಿತ್ಸೆ ನೀಡುವ ಹೃದಯವಂತ. ರೋಗಿಗಳನ್ನು ಅತೀ ಆತ್ಮೀಯತೆಯಿಂದ ಕಾಣುವ ಹೃದಯ ಶ್ರೀಮಂತ ಡಾ ಶ್ರೀಪತಿ. ಅವರನ್ನು ನಂಬಿಕೊಂಡು ಬರುವ ಸಲಹಾ ಕೇಂದ್ರದ ಹೊರಗೆ ಪ್ರತೀ ದಿನ ಕಾಯುವ ರೋಗಿಗಳ ಸಾಲೇ ಅವರ ಔಷಧಿ ಹಾಗೂ ಕೈಗುಣಕ್ಕೆ ಸಾಕ್ಷಿ.
ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸಂದರ್ಶಕ, ತಜ್ಞರಾಗಿ ಅದೇ ರೀತಿ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜ್ ನಲ್ಲಿ ಸಂದರ್ಶಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸುತ್ತಿರುವ ಇವರ ವೈದ್ಯಕೀಯ ಲೇಖನ ಗಳು ಅನೇಕ ನಿಯತಕಾಲಿಕೆ ಹಾಗೂ ದಿನಪತ್ರಿಕೆಯಲ್ಲಿ, ಆಕಾಶವಾಣಿ, ದೂರದರ್ಶನದಲ್ಲಿ ಸಂದರ್ಶನಗಳು ಪ್ರಕಟಗೊಂಡಿವೆ.
ಪತ್ನಿ ರಾಧಿಕಾ ಜೊತೆಗಿನ ಸುಮಧುರ ಬಾಂಧವ್ಯದಲ್ಲಿ ಪಡೆದದ್ದು ಮೂರು ಮುತ್ತುಗಳನ್ನು. ಅದರಲ್ಲಿ ಒಂದು ಮುತ್ತು ಡಾ| ಸ್ವಾತಿ ಇನ್ನೊಂದು ಡಾ| ಸೌಮ್ಯ .. ವೈದ್ಯ ವೃತ್ತಿಯಲ್ಲಿ ಎಂ ಡಿ. ಪೂರೈಸಿದ್ದು ಕಿರಿಯ ಮಗ ಸುಮಂತ್ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ಧು ಜೀವ ಉಳಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಸಂಸಾರದ ಸಮಗ್ರ ಕುಟುಂಬದ ಪರವಾಗಿ ಡಾ| ಆರ್ ಶ್ರೀಪತಿಯವರಿಗೆ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ರಿ. ಮನಃ ಪೂರ್ವಕವಾಗಿ ವಂದಿಸಿ ಜುಲೈ 27 ರಂದು ಸನ್ಮಾನಿಸಿ ಅಭಿನಂದಿಸುತ್ತಿದೆ.
ಅಜಿತ್ ಕುಮಾರ್ ಪರಿಚಯ:
ಬದುಕನ್ನು ರೂಪಿಸಿಕೊಳ್ಳುವ ಬಗೆ ಒಬ್ಬೊಬ್ಬರದ್ದು ಒಂದೊಂದು ಬಗೆ. ಕನಸು ಕಟ್ಟಿಕೊಂಡರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ - ಪರಿಶ್ರಮವಿದ್ದರೆ ಮಾತ್ರ ಫಲಶ್ರುತಿ ದೊರೆಯಲು ಸಾಧ್ಯ ಎಂದರಿತು ಲೆಕ್ಕಶಾಸ್ತ್ರವನ್ನು ತನ್ನ ಬಾಳಿನ ಗುರಿಯನ್ನಾಗಿಸಿ ಮುನ್ನಡೆದವರು ಶ್ರೀ ಅಜಿತ್ ಕುಮಾರ್. ಬಾಲ್ಯವನ್ನು ಕಳೆದು ಯವ್ವನದಲ್ಲಿ ಕೂಡಿಸಿದ ಲೆಕ್ಕಾಚಾರಗಳು ಇವರನ್ನು ಒಬ್ಬ ಖ್ಯಾತ ಲೆಕ್ಕ ಪರಿಶೋಧಕನನ್ನಾಗಿ ಬೆಳೆಸಲು ನೆರವಾಯ್ತು.
ಪಟೇಲರಾಗಿದ್ದ ಯು. ಬಿ. ಪ್ರಭಾಕರ ರಾವ್ ಹಾಗೂ ವತ್ಸಲಾ ರಾವ್ ದಂಪತಿಗಳ ಸುಪುತ್ರ ಅಜಿತ್ ರವರು ಹುಟ್ಟಿದ್ದು, ಬೆಳೆದದ್ದು, ವಿದ್ಯೆ ಕಲಿತದ್ದು ಕೊನೆಗೆ ವೃತ್ತಿ ಜೀವನಕ್ಕೆ ಕಾಲಿಟ್ಟದ್ದೂ ಎಲ್ಲವೂ ಶ್ರೀ ಕೃಷ್ಣನ ನಗರಿ ಉಡುಪಿಯಲ್ಲೇ... ಉಡುಪಿಯೇ ಅವರ ಎಲ್ಲಾ ಕಾಯಕಗಳ ಕಾರ್ಯ ಕ್ಷೇತ್ರವಾಯ್ತು.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದು ಉಡುಪಿಯ ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಂಸ್ಥೆ ರಾವ್ & ಸ್ವಾಮಿಯಲ್ಲಿ ಆರ್ಟಿಕಲ್ ಶಿಪ್ ಮಾಡಿ ತರಬೇತಿ ಪಡೆದು ಮುಂದೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯಿಂದ ಸಿ.ಎ. ಪದವಿಯನ್ನು ಪಡೆದರು. ಈ ಮಧ್ಯೆ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯ ಲೆಕ್ಕ ಪತ್ತ ವಿಭಾಗದಲ್ಲಿ ಆಂತರಿಕ ಲೆಕ್ಕ ಪರಿಶೋಧಕರಾಗಿ ಹೆಚ್ಚು ಕಮ್ಮಿ ಒಂದುವರೆ ವರ್ಷಗಳ ಕಾಲ ದುಡಿದರು. ತದ ನಂತರ 1980ರಲ್ಲಿ ಸಿ.ಎ. ಶ್ರೀ ಪ್ರಭಾಕರ್ ನಾಯಕ್ ರ ಜೊತೆಗೂಡಿ ಜಂಟಿಯಾಗಿ ಪ್ರಭಾಜಿತ್ & ಕೊ. ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ವೃತ್ತಿ ಜೀವನ ಪ್ರಾರಂಭಿಸಿದರು. ಮುಂದೆ ತಾನೇ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಮಗನನ್ನೂ ತನ್ನ ಕಾರ್ಯ ಕ್ಷೇತ್ರಕ್ಕೊಳ ಪಡಿಸಿಕೊಂಡು ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ಯಶಸ್ವಿಯಾಗಿ 42 ವರ್ಷಗಳ ಸುದೀರ್ಘ ಅನುಭವದೊಂದಿಗೆ ಜನಮಾನಸದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಸಂಸ್ಥೆಯನ್ನು ಮುನ್ನಡೆಸಲು ಪ್ರಾರಂಭಿಸಿದರು.
ಯುವ ಬ್ರಾಹ್ಮಣ ಪರಿಷತ್ ನಂತೆ ಹಲವಾರು ಉಡುಪಿಯ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತ ಪ್ರೋತ್ಸಾಹಿಸುತ್ತಾ ಲೆಕ್ಕಪತ್ರದ ಪರಿಶೋಧನೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮುಕ್ತವಾಗಿ ಮಾಡಿಕೊಡುವುದಲ್ಲದೆ ಅಗತ್ಯವಿರುವ ಮಾಹಿತಿ ಮಾರ್ಗದರ್ಶನವನ್ನು ನೀಡುತ್ತ ಎಲ್ಲರನ್ನೂ ಹುರಿದುಂಬಿಸುವುದು ಅವರ ವಿಶೇಷ ಗುಣ.
ತನ್ನ ಬಿಡುವಿನ ವೇಳೆ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಳ್ಳುತ್ತ ಧಾರ್ಮಿಕ ಹಾಗೂ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ಅಜಿತ್ ಕುಮಾರ್. ಮುಖ್ಯವಾಗಿ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್, ಉಡುಪಿ ಸಮೀಪದ ಗುಂಡಿಬೈಲಿನ ಪಂಚ ಧೂಮಾವತಿ ಟ್ರಸ್ಟ್ ಮತ್ತು ಬಬ್ಬುಸ್ವಾಮಿ ಟ್ರಸ್ಟ್ ಗಳ, ಹಾಗೂ ನಿಟ್ಟೂರು ಎಡ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದಾರೆ.
ಪತ್ನಿ ಹೇಮಲತಾ ರೊಂದಿಗಿನ ಸುಖೀ ಸಂಸಾರಕ್ಕೆ ಸಾಕ್ಷಿಯಾಗಿರುವ ಇಬ್ಬರು ಮಕ್ಕಳು ವೃತ್ತಿ ಜೀವನದಲ್ಲಿ ನಿರತರಾಗಿದ್ದುಕೊಂಡು ತಂದೆಯ ಯಶಸ್ಸಿನ ದಾರಿಯಲ್ಲಿ ಜೊತೆಯಾಗಿ ಹೆಜ್ಜೆ ಇಡುತ್ತ ಸಾಗುತ್ತಿದ್ದಾರೆ.
ಒಟ್ಟಾರೆ ... ಸದಾ ಸಮುದಾಯದ ಏಳಿಗೆಯನ್ನು ಬಯಸುತ್ತಿರುವ ಲೆಕ್ಕಪತ್ರ ಪರಿಶೋಧನಾ ವಿಭಾಗದಲ್ಲಿ ತಾನೂ ಬೆಳೆಯುತ್ತ ಬೇರೆಯವರನ್ನೂ ಬೆಳೆಸುತ್ತ ಸಾಗುತ್ತಿರುವ ಉಡುಪಿಯ ಖ್ಯಾತ ಅನುಭವೀ ಲೆಕ್ಕ ಪರಿಶೋಧಕ ಹಾಗೂ ವಿಪ್ರ ಸಾಧಕ ಶ್ರೀ ಅಜಿತ್ ಕುಮಾರ್ ರವರನ್ನು ಉಡುಪಿ ಯುವ ಬ್ರಾಹ್ಮಣ ಪರಿಷತ್ ಪ್ರೀತಿಪೂರ್ವಕವಾಗಿ ಜುಲೈ 27 ರಂದು ಉಡುಪಿಯ ಬ್ರಾಹ್ಮೀ ಸಭಾಭವನದಲ್ಲಿ ಅಭಿನಂದಿಸುತ್ತಿದೆ.
-ರಾಜೇಶ್ ಪಣಿಯಾಡಿ, ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ