ಕಾಸರಗೋಡು: ಕರ್ನಾಟಕದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಖ್ಯಾತ ಪರಿಸರತಜ್ಞ, ಹಿರಿಯ ಸಾಹಿತಿ, ವಿಶ್ರಾಂತ ಆಂಗ್ಲಭಾಷಾ ಪ್ರಾಧ್ಯಾಪಕರಾದ ಪ್ರೊ.ಡಾ. ಸಿದ್ಧಗಂಗಯ್ಯ ಹೊಲತಾಳು ಅವರು ಪರಿಸರ ಅಧ್ಯಯನದ ನಿಮಿತ್ತ ಇಪ್ಪತ್ತು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಗಡಿನಾಡು ಕಾಸರಗೋಡಿಗೂ ಆಗಮಿಸಿ ಮಿತ್ರರಾದ ವಿ.ಬಿ. ಕುಳಮರ್ವ ಅವರ ಮನೆಯಲ್ಲಿ ಉಳಿದುಕೊಂಡು ವಿಶೇಷವಾಗಿ ವಿಚಾರ ವಿನಿಮಯಗಳನ್ನು ನಡೆಸಿದರು. ಸುತ್ತಲಿನ ಹಲವು ಪ್ರದೇಶಗಳನ್ನು ಸಂದರ್ಶಿಸಿ ಮಾಹಿತಿಗಳನ್ನು ಸಂಗ್ರಹಿಸಿದರು.
ಇಂಗ್ಲಿಷ್ ಹಾಗೂ ಕನ್ನಡದ ಖ್ಯಾತ ಸಂಶೋಧಕರಾದ ಡಾ.ಹೊಲತಾಳು ಅವರು ಉಭಯ ಭಾಷೆಗಳಲ್ಲೂ ಹಲವು ಉಪಯುಕ್ತ ಉದ್ಗ್ರಂಥಗಳನ್ನು ಬರೆದು ಪ್ರಕಟಿಸಿದ ಹಿರಿಯ ಸಂನ್ಮೂಲ ವ್ಯಕ್ತಿ. ಕೃಷಿಕಾಯಕದ ಮಹತ್ವವನ್ನು ಚೆನ್ನಾಗಿ ಅರಿತಿರುವ ಡಾ.ಹೊಲತಾಳು ಆದರ್ಶ ಪರಿಸರ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಅದರ ಆಶ್ರಯದಲ್ಲಿ ಕೃಷಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ರಚಿಸಿದ "ಸುವರ್ಣಮುಖಿ" ಎಂಬ ಗ್ರಂಥವನ್ನು "ಸಂಕೀರ್ಣ" ವಿಭಾಗದಲ್ಲಿ ಅತ್ಯುತ್ತಮ ಕೃತಿಯೆಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2020 ನೆಯ ವರ್ಷದ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತ್ತು. ಆ ಗ್ರಂಥದ ಮುಂದುವರಿದ ಭಾಗದ ಅಧ್ಯಯನದ ನಿಮಿತ್ತ ಶಿಕ್ಷಣತಜ್ಞ ವಿ.ಬಿ. ಕುಳಮರ್ವರ ಮನೆಗೆ ಅವರು ಆಗಮಿಸಿದ್ದರು. ಸುತ್ತುಮುತ್ತಲಲ್ಲಿರುವ ಸಾಹಿತ್ಯ, ಕೃಷಿ ಹಾಗೂ ಸಮಾಜಸೇವಾ ನಿರತ ವಿದಗ್ಧರ ಸಂದರ್ಶವನ್ನು ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಅವರಿಗೆ ಕಾಸರಗೋಡಿನ ನುಳ್ಳಿಪ್ಪಾಡಿಯ "ಸೀತಮ್ಮ ಪುರುಷ ನಾಯಕ ಕನ್ನಡಭವನ ಮತ್ತು ಗ್ರಂಥಾಲಯ"ದ ಸಂಸ್ಥಾಪಕರಾದ ವಾಮನ ರಾವ್ ಬೇಕಲ್ ಅವರು ತಮ್ಮ ಗ್ರಂಥಾಲಯದ ದರ್ಶನವನ್ನು ಮಾಡಿಸಿದರು.
ಖ್ಯಾತ ಸಾಹಿತಿಗಳಾದ ಡಾ|ಹರಿಕೃಷ್ಣ ಭರಣ್ಯರೊಡನೆ ವಿಚಾರವಿನಿಮಯ ನಡೆಸಿದ ಡಾ. ಹೊಲತಾಳರು ಅನಂತರ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹಯರ್ ಸೆಕೆಂಡರಿ ಶಾಲೆಗೆ ಭೇಟಿಯಿತ್ತರು. ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಗಳ ಮನೆಯನ್ನು ಸಂದರ್ಶಿಸಿ ಬಳಿಕ ಎಡನೀರು ಕ್ಷೇತ್ರ ದರ್ಶನಗೈದರು.
ಕಾಸರಗೋಡಿನ ಸರಕಾರೀ ಕಾಲೇಜಿಗೂ ಭೇಟಿಯಿತ್ತು ವಿಚಾರವಿನಿಮಯ ನಡೆಸಿದರು. ಕವಿ ರಾಧಾಕೃಷ್ಣ ಉಳಯತ್ತಡ್ಕರನ್ನೂ ಅವರ ನಿವಾಸದಲ್ಲಿ ಭೇಟಿಯಾದರು.
"ಸುವರ್ಣಮುಖಿ" (ಸಿದ್ಧರಬೆಟ್ಟದ ಆಸುಪಾಸಿನ ಅಧ್ಯಯನ) ಎಂಬ ಸಂಶೋಧನಾತ್ಮಕ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಎಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಪ್ರಕಾಂಡ ಪಂಡಿತರೂ ಸಾಹಿತಿಗಳೂ ಆಗಿರುವ ಡಾ. ಸಿದ್ದಗಂಗಯ್ಯ ಇವರನ್ನು ಕನ್ನಡ ಭವನದ ವಿಂಶತಿ ವರ್ಷಚಾರಣೆಯ ಅಂಗವಾಗಿ ಗುರುನಮನ ನೀಡಿ ಗೌರವಿಸಲಾಯಿತು.
ಕಾಸರಗೋಡಿನ ಹಿರಿಯ ಸಮಾಜಸೇವಕ, ಮುಖ್ಯೋಪಾಧ್ಯಾಯ ಅಣಂಗೂರ್ ಬಾಲಕೃಷ್ಣ ಮಾಸ್ಟರ್, ಭವನ ಸಂಸ್ಥಾಪಕ ವಾಮನ್ ರಾವ್ ಬೇಕಲ್ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ವಂದಿಸಿದರು. ಸಂಧ್ಯಾರಾಣಿ ಟೀಚರ್ ಪುಸ್ತಕಹಾರ ನೀಡಿದರು. ಪದಾಧಿಕಾರಿ ಸತೀಶಚಂದ್ರ ಬೆಂಗಳೂರು ಸ್ಮರಣಿಕೆ ನೀಡಿದರು. ಶಿಕ್ಷಕಿ ಉಶಾಕಿರಣ್ ಅಣಂಗೂರು, ನವೀನಚಂದ್ರ ಅಣಂಗೂರು, ರಮಾಬಾಯಿ, ಬಿ.ಇ.ಎಂ ಪ್ರೌಢ ಶಾಲಾ ಪ್ರಿನ್ಸಿಪಾಲ ರಾಜೇಶ್ ಚಂದ್ರ ಮಾಸ್ಟರ್ ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು. ಭವನ ಅಧ್ಯಕ್ಷ ಪತ್ರಕರ್ತ, ಕವಿ ರಾಧಾಕೃಷ್ಣ ಕೆ ಉಳಯತ್ತಡ್ಕ ಧನ್ಯವಾದವಿತ್ತರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ