ಮಿಸ್ರಿ (ಮುಜಂಟಿ) ಜೇನು ಕುಟುಂಬಗಳು ಹೆಚ್ಚಾಗಿ ಸಾರಣೆ ಇಲ್ಲದ ಮನೆಯ ಗೋಡೆಯ ಸಂಧಿಗಳು, ಮೀಟರ್ ಬೋರ್ಡ್.... ಇನ್ನಿತರ ಜಾಗಗಳಲ್ಲಿ ಕಂಡುಬರುತ್ತವೆ. ಇದನ್ನು ಒಡೆದು ತೆಗೆಯುವುದು ಒಂದು ವಿಧಾನವಾದರೆ, ಮೂಲ ಸ್ಥಳವನ್ನು ಹಾಳುಗೆಡವದೇ ತೆಗೆಯುವುದು ಇನ್ನೂಂದು ವಿಧಾನವಾಗಿದೆ. ಇದಕ್ಕೆ ಒಂದುವರೆ ಫೀಟ್ ಉದ್ದದ (ಕಲ್ಲು ಕಟ್ಟುವ ಮೇಸ್ತ್ರಿಯವರು ವಾಟರ್ ಲೆವೆಲ್ ನೋಡಲು ಉಪಯೋಗಿಸುವ) ಪೈಪನ್ನು ತೆಗೆದುಕೊಂಡು ಅವುಗಳು ಬರುವ ಪ್ರವೇಶ ದ್ವಾರಕ್ಕೆ ಸಿಮೆಂಟ್ ಅಥವಾ ಯಾವುದಾದರೂ ಗಮ್ ನಿಂದ ಫಿಕ್ಸ್ ಮಾಡಬೇಕು, ಆಮೇಲೆ ಪೈಪಿನ ಒಂದು ತುದಿಯನ್ನು ಪೆಟ್ಟಿಗೆಯ ಒಳಗಡೆ ತೂರಿಸಿ ಪೆಟ್ಟಿಗೆಯನ್ನು ಅಲ್ಲೇ ನೇತಾಡಿಸಬೇಕು ಹಾಗೂ ಆ ಪೆಟ್ಟಿಗೆಗೆ ಬೇರೊಂದು ತೂತು ಮಾಡಬೇಕು. ಈವಾಗ ಜೇನುನೊಣಗಳು ಗೋಡೆಯಿಂದ ಅಳವಡಿಸಿದ ಪೈಪಿನ ಮುಖಾಂತರ ಪೆಟ್ಟಿಗೆಯ ಒಳಗಡೆ ಬಂದು ಇನ್ನೊಂದು ತೂತಿನ ಮುಖಾಂತರ ಹೊರಗಡೆ ಬರುತ್ತವೆ. ಈ ರೀತಿಯಾಗಿ ಸಂಚರಿಸುವ ನೊಣಗಳು ಕಾಲಕ್ರಮೇಣ ಪೆಟ್ಟಿಗೆಯಲ್ಲೇ ಬಂದು ನೆಲೆಸುತ್ತವೆ.
(ಪೆಟ್ಟಿಗೆಯ ಒಳಗಡೆಗೆ ಒಂದು ಇಂಚಿನಷ್ಟು ಹೆಚ್ಚೇ ಪೈಪನ್ನು ತೂರಿಸಿ ಇಡಬೇಕು, ಇಲ್ಲದಿದ್ದರೆ ನೊಣಗಳು ಪೆಟ್ಟಿಗೆಯ ಒಳಗಡೆ ಮೇಣದಿಂದಲೇ ಕೊಳವೆಯಾಕಾರದ ರಚನೆ ಮಾಡಿ ಅದರ ಮೂಲಕ ಹೊರಗೆ ಬರುತ್ತವೆ). ಹೀಗೆ ನಾಲ್ಕೈದು ತಿಂಗಳಲ್ಲಿ ಪೆಟ್ಟಿಗೆಗೆ ಬಂದು ನೆಲೆಸುತ್ತವೆ. ಬೇರೊಂದು ಮುಜಂಟಿ ಗೂಡಿನಿಂದ ಸ್ವಲ್ಪ ಪರಾಗ ಹಾಗೂ ಮೊಟ್ಟೆಯನ್ನು ಕೊಟ್ಟರೆ ಬಹು ಬೇಗನೆ ಗೂಡಿಗೆ ಬರುತ್ತವೆ. ಪೆಟ್ಟಿಗೆಯ ಒಳಗಡೆ ಹೊಸ ಮೊಟ್ಟೆ ಹಾಗೂ ಪರಾಗದ ಗೋಳಗಳು ಕಂಡುಬಂದರೆ ಕುಟುಂಬ ಪೆಟ್ಟಿಗೆಗೆ ಬಂದಿದೆ ಎಂದು ಅರ್ಥ. ಗೂಡಿನಲ್ಲಿ ಹೊಸ ಮೊಟ್ಟೆ ಹಾಗೂ ರಾಣಿಯನ್ನು ಕಂಡರೆ ಆ ಪೆಟ್ಟಿಗೆಯನ್ನು ಸ್ಥಳಾಂತರಿಸಿ ಅಲ್ಲಿ ಬೇರೊಂದು ಪೆಟ್ಟಿಗೆಯನ್ನು ಸ್ಥಾಪಿಸಬೇಕು. ಪುನಃ ಐದಾರು ತಿಂಗಳಲ್ಲಿ ಮಗದೊಂದು ಕುಟುಂಬ ಲಭಿಸುತ್ತದೆ. ಹೀಗೆ ಒಂದು ನೆಲೆಯಿಂದ ಮೂರು-ನಾಲ್ಕು ಕುಟುಂಬಗಳು ಲಭಿಸಬಹುದು. ಈ ರೀತಿಯಾಗಿ ಲಭಿಸಿದ ಕುಟುಂಬಗಳು ಒಂದು ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತವೆ, ನಂತರ ಅವುಗಳನ್ನು ಪಾಲು ಮಾಡಿ ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
-ರಾಮಚಂದ್ರ ಪುದ್ಯೋಡು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ