ಭಜನೆ ಸಾಹಿತ್ಯದ ಅಧ್ಯಯನ ನಡೆಯಲಿ: ಕನಕ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ. ಎ.ವಿ ನಾವಡ

Upayuktha
0


ಮಂಗಳಗಂಗೋತ್ರಿ: ಕನಕರ ಕೀರ್ತನೆಗಳನ್ನೂ ಒಳಗೊಂಡಂತೆ ಇಡೀ ದಾಸ ಸಾಹಿತ್ಯವನ್ನು ಊರೂರುಗಳಲ್ಲಿ ಪ್ರಸರಣ ಮಾಡಿದ ಭಜನೆ ಸಾಹಿತ್ಯದ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಂಶಗಳ ಕುರಿತು ಅಧ್ಯಯನಗಳು ನಡೆಯಬೇಕು ಎಂದು ವಿದ್ವಾಂಸ ಪ್ರೊ.ಎ ವಿ ನಾವಡ ಹೇಳಿದರು.


ಅವರು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಮತ್ತು ಕನಕದಾಸ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಎರಡು ದಿನಗಳ ಕನಕ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ  ಸಮಾರೋಪ ಭಾಷಣ ಮಾಡಿದರು.


ದಾರ್ಶನಿಕತೆ ಮತ್ತು ವೈಚಾರಿಕತೆಯ ಮೂರ್ತಿರೂಪವಾಗಿದ್ದ ಕನಕದಾಸರು ಎಲ್ಲಾ ಕಾಲಕ್ಕೂ ಪ್ರಸ್ತುತರು. ಎರಡು ದಿವಸದ ಈ ಸಮ್ಮೇಳನವು ಕನಕದಾಸರ ಸಾಹಿತ್ಯದ ಕುರಿತಾದ ಹೊಸ ಚಿಂತನೆಗಳನ್ನು ಹೊಸ ಹೊಳಹುಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ ಕನಕದಾಸರ ಕುರಿತಾದ ಅಧ್ಯಯನದ ವೈಧಾನಿಕತೆಯಲ್ಲಿ ಇನ್ನಷ್ಟು ಬದಲಾವಣೆಗಳಾಗಬೇಕು. ಕನಕದಾಸರನ್ನು ಮಾತ್ರವಲ್ಲದೆ ಪುರಂದರ, ವಾದಿರಾಜರಂತಹ ಎಲ್ಲಾ ದಾಸರನ್ನೂ ಒಳಗೊಳ್ಳುವಂತೆ ಸಮಗ್ರ ದಾಸ ಸಾಹಿತ್ಯದ ಅಧ್ಯಯನವಾಗಬೇಕು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಕನಕದಾಸರು ಸಮಾಜದಲ್ಲಿ ಸಮಾನತೆಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ರಾಹ್ಮಣರು ಬದಲಾಗಬೇಕು, ಪಂಕ್ತಿಭೇದ ಬೇಡ. ಮತಬ್ಯಾಂಕ್ ಕಾರಣಕ್ಕೆ ಕನಕ ಚಿಂತನೆಗಳು ದಾರಿತಪ್ಪದಿರಲಿ ಎಂದರು.  ದಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಯಂತಿಯ ದಿನ ಮಾತ್ರ ಕನಕನ ನೆನಪು ಮಾಡುವುದಲ್ಲ. ಮತ್ತೆ ಮತ್ತೆ ಕನಕ ಚಿಂತನೆಗಳು ನಡೆಯಬೇಕು ಎಂದರು.


ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿಗಳಾದ ಎಂ. ಆರ್. ಸತ್ಯನಾರಾಯಣ ವಂದಿಸಿದರು. ನವ್ಯಶ್ರೀ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top