ಹಿರಿಯರ ಮನೆಗೆ ಭೇಟಿ ನೀಡುವಂತಹ ಸುಸಂದರ್ಭ ವಿದ್ಯಾಸಂಸ್ಥೆಯ ವತಿಯಿಂದ ಒದಗಿ ಬಂದಾಗ ತುದಿಗಾಲಿನಲ್ಲಿ ನಿಂತುಬಿಟ್ಟಿದ್ದೆ. ಉಪನ್ಯಾಸಕ ಹಾಗೂ ಸ್ನೇಹಿ ಬಳಗದೊಂದಿಗೆ ಪೋರ್ಕೊಡಿಯಲ್ಲಿರುವ ಹಿರಿಯರ ಮನೆಗೆ ಪಯಣ ಆರಂಭವಾಯಿತು. ಪೋರ್ಕೊಡಿ ಎಂಬ ಸ್ಥಳ ಮುಖ್ಯ ರಸ್ತೆಗೆ ಬಹು ದೂರವಿದ್ದರಿಂದ ಗಂಟೆಗೊಂದು ಬಸ್ಗಳಷ್ಟೇ ಓಡಾಡುತ್ತಿದ್ದವು. ಮಧ್ಯಾಹ್ನದ ಸಮಯಕ್ಕೆ ಮತ್ತೆ ಕಾಲೇಜಿನ ದಾರಿ ಹಿಡಿಯಬೇಕಾದ್ದರಿಂದ ಪೋರ್ಕೊಡಿ ದ್ವಾರದಿಂದ ಹಿರಿಯರ ಮನೆಯವರಿಗೂ ಕಾಲ್ನಡಿಗೆಯಲ್ಲೇ ಸಾಗಿದೆವು.
ಸ್ನೇಹಿತ ಬಳಗವೆನ್ನುವ ಶಕ್ತಿ ಮದ್ದು ಜೊತೆಗಿದ್ದರಿಂದ ಸಾಗಿದ, ಸಾಗಬೇಕಾದ ದಾರಿಯ ದಾರಿಯ ದೂರದ ಅರಿವಾಗಲೇ ಇಲ್ಲ. ಹಿರಿಯರ ಮನೆ ತಲುಪಿದೊಡನೆ ಆ ಮನೆಯ ಪ್ರವೇಶ ದ್ವಾರದಲ್ಲಿದ್ದ ಅಪ್ಪ ಅಮ್ಮ ಎನ್ನುವ ಫಲಕ, ಅದರ ಬಳಿಯೇ ಕುರ್ಚಿಯಲ್ಲಿ ಯಾವುದೋ ಆಲೋಚನೆಯಲ್ಲಿ ಮಗ್ನನಾಗಿದ್ದ ಹಿರಿಯರೊಬ್ಬರನ್ನು ನೋಡಿ ಕೂಡಲೇ ಮನಸ್ಸು ಭಾರವಾಗತೊಡಗಿತು. ವಿದ್ಯಾರ್ಥಿಗಳು ಬರುವರೆನ್ನುವ ನಿರೀಕ್ಷೆಯಿದ್ದರಿಂದ ಹಿರಿಯರೆಲ್ಲರೂ ವಿದ್ಯಾರ್ಥಿಗಳನ್ನು ನೋಡುವ ಕಾತುರತೆಯಲ್ಲಿದ್ದರು. ತಮ್ಮ ನಿಷ್ಕಲ್ಮಶ ನಗುವಿನೊಂದಿಗೆ ಅಪ್ಪಿಕೊಂಡು, ಆದರಿಸಿದ ರೀತಿ ನನ್ನ ಬದುಕಿನ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಯಿತು.
ಹಿರಿ ಮನಸುಗಳ ಕುಶಲೋಪರಿ ವಿಚಾರಿಸಿ ಅವರ ಬದುಕಿನ ಕಹಿ ಘಟನೆಗಳನ್ನು ತಿಳಿದುಕೊಂಡಾಗ ಪ್ರತಿಕ್ರಿಯಿಸಲು ಮಾತುಗಳೇ ಇರಲಿಲ್ಲ. ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಸಮಸ್ಯೆ ಒಂದೆಡೆಯಾದರೆ ಮನೆಯಲ್ಲಿ ಹಣಕಾಸಿನ ತೊಂದರೆಯಿದೆಯೆಂದು, ಮಕ್ಕಳು ಒಳ್ಳೆಯ ನೌಕರಿ ಗಿಟ್ಟಿಸಿಕೊಂಡ ಕೂಡಲೇ ಆಶ್ರಮದತ್ತ ಹೆಜ್ಜೆ ಹಾಕಿಸಿದ ನೋವಿನ ಮಾತುಗಳು ಹೊರ ಬಂದಾಗ ಕರುಳು ಹಿಂಡಿದಂತಾಗಿತ್ತು. ಜೀವನದಲ್ಲಿ ಅವರುಗಳು ಕಂಡ ಅನುಭವದ ಪಾಠಗಳನ್ನು ತನ್ನ ಮಗುವಿಗೆ ತಿಳಿಹೇಳುವಂತೆ ಪ್ರೀತಿಯಿಂದ ನಮಗೆ ತಿಳಿಸಿದರು.
"ಉನ್ನತ ಗುರಿ ಸಾಧಿಸಲು ತಮ್ಮ ರಕ್ತವನ್ನು ನಿಮಗೆ ಅರ್ಪಿಸುವ ನಿಮ್ಮ ಹೆತ್ತವರಿಗೆ ಆಶ್ರಮದ ಹಾದಿ ತೋರಿಸಬೇಡಿ. ನಿಮ್ಮ ಬದುಕಿನ ಪ್ರತಿ ನಿರ್ಧಾರಗಳು ನಿಮ್ಮ ತಂದೆ ತಾಯಿಯ ಸಂತಸವಾಗಿರಲಿ ಬದಲಾಗಿ ಕಣ್ಣೀರಾಗದಿರಲಿ" ಎನ್ನುವ ಭಾವೋದ್ವೇಗದ ಮಾತುಗಳಿಗೆ ಕಣ್ಣೀರ ಹನಿಗಳೇ ಸಾಕ್ಷಿಯಾಗಿತ್ತು. ಹಿರಿಯರ ಮನಸ್ಸಿಗೆ ಒಂದಿಷ್ಟು ಉಲ್ಲಾಸ ತುಂಬಲು ನಮ್ಮ ವಿದ್ಯಾರ್ಥಿ ಬಳಗವು ಹಾಡು, ಕಥೆ, ಕವನವೆಂಬಂತೆ ಚಟುವಟಿಕೆಗಳನ್ನು ಆರಂಭಿಸಿದಾಗ ನಾ ಮುಂದೆ ತಾ ಮುಂದೆ ಎಂಬಂತೆ ಒಬ್ಬೊಬ್ಬರಾಗಿ ಅತೀ ಹರುಷದಿಂದ ಯಾವುದೇ ಅಂಜಿಕೆಯಿಲ್ಲದೆ ಅಭಿನಯ ಗೀತೆ, ಹಾಡುಗಾರಿಕೆಯೊಂದಿಗೆ ನಮ್ಮೊಂದಿಗೆ ಮಕ್ಕಳಾಗಿ ಬಿಟ್ಟರು.
ಅಪರಿಚಿತಳೆಂಬ ಭಾವನೆಯಲ್ಲಿ ಒಳಹೊಕ್ಕಿದ್ದ ನನಗೆ ಕೆಲವೇ ನಿಮಿಷಗಳಲ್ಲಿ ಆತ್ಮೀಯ ಗೆಳೆಯ ಗೆಳತಿಯರೊಂದಿಗೆ ಸಮಯ ಕಳೆದ ಅನುಭವವಾಗಿತ್ತು. ಹೇಳಿದ ಜೀವನ ಪಾಠ, ಹಿರಿಯ ಜೀವಗಳು ಒಬ್ಬರಿಗೊಬ್ಬರು ನೀಡುತ್ತಿದ್ದ ಸಾಥ್, ಅವರ ನಡುವಿನ ಅನ್ಯೋನ್ಯತೆ, ಸ್ನೇಹ ಭಾರತಿ ಸಂಸ್ಥೆಯ ನಿರ್ವಾಹಕರು ತಮ್ಮ ಹೆತ್ತೊಡಲಿನಂತೆಯೇ ಎಲ್ಲರಿಗೂ ತೋರಿಸುತ್ತಿದ್ದ ಆದರ ಇವೆಲ್ಲವೂ ನನಗೆ ಆದರ್ಶವಾಗಿ ಕಂಡಿತು. ಮಧ್ಯಾಹ್ನದ ಹೊತ್ತಿಗೆ ಮತ್ತೆ ಕಾಲೇಜಿನ ಕಡೆ ಹೊರಟು ನಿಂತಾಗ ಹಿರಿಯರು ಅತಿಯಾಗಿ ಮುದ್ದಾಡಿ ಆಶೀರ್ವದಿಸಿದ ರೀತಿಗೆ ಮಾತುಗಳೇ ಮೌನಕ್ಕೆ ಶರಣಾಗಿದ್ದವು.
ಸ್ನೇಹ ಭಾರತಿ ಹಿರಿಯರ ಮನೆಗೆ ಭೇಟಿ ನೀಡಿದ ದಿನ ನನ್ನ ಬದುಕಿನ ಅಮೂಲ್ಯ ಕ್ಷಣವೆಂದರೆ ತಪ್ಪಾಗಲಾರದು. ಪ್ರೀತಿಗಾಗಿ ಹಂಬಲಿಸುತ್ತಿದ್ದ ಜೀವಗಳಿಗೆ ತುಸು ಪ್ರೀತಿ, ಹರುಷ ಹಂಚಿದೆನೆಂಬ ಖುಷಿ ಒಂದೆಡೆಯಾದರೆ, ಮತ್ತೆ ಸ್ನೇಹ ಭಾರತಿಗೆ ಬಂದಾಗ ಸಣ್ಣ ಅಳಿಲು ಸೇವೆ ನನ್ನಿಂದಾಗಬೇಕೆಂಬ ತುಡಿತ ನನ್ನಲ್ಲಿ ಬಲವಾಗಿತ್ತು.
-ಅಖಿಲಾ ಶೆಟ್ಟಿ
ಮನೆಲ್ ಶ್ರೀನಿವಾಸ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್, ಮಂಗಳೂರು