40 ವರ್ಷಗಳ ಸಾರ್ಥಕ ಸೇವೆಯ ಸಂಭ್ರಮದಲ್ಲಿ ಉಜಿರೆ ‘ರುಡ್‍ಸೆಟ್’ ಸಂಸ್ಥೆ

Upayuktha
0


“ಕಾನನದಿ ಮಲ್ಲಿಗೆಯ ಮೌನದಿಂ ಬಿರಿದು

ನಿಜಸೌರಭವ ಸೂಸಿ

ತಾನ್ ಎಲೆಯ ಪಿನಿಂತಿರ್ದು,

ದೀನತೆಯ ತೋರಿ

ಕೃತಕೃತ್ಯತೆಯ ಪಡೆವಂತೆ”

-ಡಿ.ವಿ.ಜಿ.


ಕಾಡಿನಲ್ಲಿ ಒಂದು ಮಲ್ಲಿಗೆ, ಎಲೆಯ ಮರೆಯಲ್ಲಿ ನಿಂತು, ಮೌನವಾಗಿ ಬಿರಿದು, ನಿಜವಾದ ಸುಗಂಧವನ್ನು ಕಾಡಿಗೆಲ್ಲಾ ಪಸರಿಸಿ, ಯಾರ ಕಣ್ಣಿಗೂ ಬೀಳದೇ ಕಾಡಿಗೆಲ್ಲಾ ಪಸರಿಸಿ, ಕೇವಲ ಸುಗಂಧವನ್ನು ನೀಡುವುದೇ ತನ್ನ ಕರ್ತವ್ಯವೆಂಬಂತೆ ತನ್ನ ಬದುಕಿನ ಕೃತಾರ್ಥತೆಯನ್ನು ಕಂಡುಕೊಂಡಂತೆ.... ನಾವೂ ಸಹ ಜಗತ್ತಿನಿಂದ ಪಡೆದ ಒಂದು ಸುಂದರ ಬದುಕನ್ನು ಮೌನವಾಗಿ ಬದುಕಿ, ಸಾಧ್ಯವಾದರೆ ಈ ಜಗತ್ತನ್ನು ಇನ್ನಷ್ಟು ಸುಂದರವಾಗಿಸಲು ಏನನ್ನಾದರೂ ನೀಡಲು ಸಾಧ್ಯವಾದರೆ ನೀಡಬೇಕು. ಅದು ಬದುಕಿನ ಸಾರ್ಥಕತೆ. ಡಾ. ಡಿ.ವಿ. ಗುಂಡಪ್ಪನವರ ಈ ಮಾತುಗಳು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ; ಅವರ ಸಾರ್ಥಕ ಜೀವನಕ್ಕೆ ಸಂಪೂರ್ಣವಾಗಿ ಅನ್ವಯವಾಗುತ್ತವೆ. 


ಶ್ರೀಮಂಜುನಾಥ ಸ್ವಾಮಿಯು ನ್ಯಾಯ, ನೀತಿ, ಧರ್ಮ ಮತ್ತು ಸತ್ಯಗಳನ್ನು ಕರುಣಿಸುತ್ತ ನೆಲೆನಿಂತಿರುವ ಪವಿತ್ರ ಸ್ಥಳ ಧರ್ಮಸ್ಥಳ. ಧರ್ಮಸ್ಥಳದ ವಿಶೇಷತೆಯೆಂದರೆ ಚತುರ್ವಿಧ ದಾನಗಳು. ಅನ್ನದಾನ, ಅಭಯದಾನ, ಔಷಧದಾನ ಹಾಗೂ ವಿದ್ಯಾದಾನ. ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ, ಸಮಾಜದ ಸ್ವಾಸ್ಥ್ಯ ಸುಧಾರಣೆಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರದು ಬಲು ಅಪರೂಪದ ವಿಶಿಷ್ಟ ವ್ಯಕ್ತಿತ್ವ. ಸಮಾಜದ ಒಳಿತಿಗಾಗಿ ಅವರು ಹುಟ್ಟು ಹಾಕಿದ ಹಲವು ಸಂಘ, ಸಂಸ್ಥೆಗಳು, ಅವರ ಸಮರ್ಥ ಮಾರ್ಗದರ್ಶನದೊಂದಿಗೆ ಯಶಸ್ವಿಯಾಗಿ ಮುನ್ನಡೆದಿವೆ. ಅಂಥ ಸಂಸ್ಥೆಗಳಲ್ಲಿ ರುಡ್‍ಸೆಟ್ ಸಂಸ್ಥೆ ಮುಂಚೂಣಿಯಲ್ಲಿದೆ.  


ಎಂಬತ್ತರ ದಶಕದಲ್ಲಿ ಇದ್ದ ಒಂದು ದೊಡ್ಡ ಕೊರತೆಯೆಂದರೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳಲು ಯುವಜನತೆಗೆ ಬೇಕಾದ ಸಮರ್ಥ ವ್ಯವಸ್ಥೆ. ಆಗಿನ ನಮ್ಮ ಶಿಕ್ಷಣದ ಮೂಲಕ ಪಡೆದ ಜ್ಞಾನ, ಈ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಯುವಜನತೆಗೆ ಬೇಕಾದ ಸಾಧನಗಳನ್ನು ಕೊಡಲು ವಿಫಲವಾದದ್ದು. ಶಿಕ್ಷಣವನ್ನು ಪಡೆಯುವುದರ ಉದ್ದೇಶ ಜ್ಞಾನ ಪ್ರಾಪ್ತಿಗಾಗಿ ಆಗದೇ, ಸರಕಾರಿ ಉದ್ಯೋಗವನ್ನು ಪಡೆಯುವುದೇ ಮುಖ್ಯ ಗುರಿ ಆಯಿತು. ಆದರೆ ವಿದ್ಯಾವಂತ ಯುವಜನತೆಗೆ, ಸರಕಾರಿ/ಖಾಸಗಿ ಉದ್ಯೋಗಗಳೂ ಹುಳಿ ದ್ರಾಕ್ಷಿಗಳಾಗಿ ಪರಿಣಮಿಸಿದವು. ಶಿಕ್ಷಣ ಯುವ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಶಕ್ತಿಶಾಲಿ ದುಡಿಯುವ ಪಡೆಯನ್ನು ನಿರ್ಮಾಣ ಮಾಡುವ ಬದಲು, ಕೀಳರಿಮೆಯನ್ನು ಬೆಳೆಸಿಕೊಂಡು, ತಮ್ಮ ಶಕ್ತಿಯನ್ನು ತಾವೇ ಅರಿಯದ ಅಶಕ್ತ ಯುವಜನತೆಯ ಪಡೆ ನಿರ್ಮಾಣವಾಗಲು ಶುರುವಾಯಿತು. ದೇಶದ ಆರ್ಥಿಕ ವ್ಯವಸ್ಥೆ ಬಲಪಡಿಸಲು ಯುವ ಜನರ ಕೊಡುಗೆಯಲ್ಲಿ ಹಿಂದೇಟು ಹಾಕಿದಂತಾಗಿ ನಮ್ಮ ನಾಡಿನ ಅಮೂಲ್ಯವಾದ ಮಾನವ ಸಂಪತ್ತನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯುವ ಜನರು ನೌಕರಿಯ ಬದಲಾಗಿ ತಮ್ಮ ಜೀವನ ನಿರ್ವಹಣೆಯನ್ನು ಮಾಡುವಂಥ ವಿದ್ಯೆಯ ಅಗತ್ಯವಿತ್ತು. ಶಿಕ್ಷಣದ ಗುರಿಯನ್ನು ಬದಲಿಸಿ ತಮ್ಮ ಪ್ರದೇಶಗಳಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು, ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವ ಪರ್ಯಾಯ ವ್ಯವಸ್ಥೆಯ ಅಗತ್ಯತೆಯ ಪ್ರತಿಪಾದನೆಯಾಯಿತು. ನಿರಂತರವಾದ ಈ ಹುಡುಕಾಟ ‘ರುಡ್‍ಸೆಟ್’ ಎಂಬ ಶಕ್ತಿಶಾಲಿ, ಪ್ರಬಲವಾದ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡು ನಿರುದ್ಯೋಗ ಎಂಬ ಪೆಡಂಭೂತವನ್ನು ಸಮರ್ಥವಾಗಿ ಎದುರಿಸಿ, ಯುವಜನರು ಯುವಶಕ್ತಿಯನ್ನು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಬಳಸಿಕೊಂಡು ತನ್ಮೂಲಕ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂಥ ಪರ್ಯಾಯ ಶಕ್ತಿಯಾಗಿ ಸ್ಥಾಪನೆಯಾಗಲು ನಾಂದಿ ಹಾಡಿತು.


‘ನೌಕರಿಗಾಗಿ ವಿದ್ಯೆ’ ಎಂಬ ಧ್ಯೇಯದಿಂದ ನಿರುದ್ಯೋಗಿಗಳ ಪಡೆಯನ್ನೇ ವರ್ಷ ವರ್ಷವೂ ಹೊರತರುವ ಶಾಲೆ, ಕಾಲೇಜಿನ ಶಿಕ್ಷಣದ ಬಗೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಳವಾಗಿ ಚಿಂತಿಸಿದರು. ಕಾರಕೂನರನ್ನು ಸೃಷ್ಟಿಸುವ ಈ ಶಿಕ್ಷಣದಿಂದ ಸದೃಢ ಸಮಾಜವನ್ನು ಕಟ್ಟಲು ಸಾಧ್ಯವೇ ಎಂದು ಡಾ. ಹೆಗ್ಗಡೆಯವರು ಯೋಚಿಸಿದರು. ಬಿಳಿ ಕೊರಳು ಪಟ್ಟಿಯ  ನೌಕರಿಯ ಬೆನ್ನು ಬಿದ್ದಿದ್ದ ಯುವಜನತೆ ತಮ್ಮ ಜೀವನವನ್ನು ತಮ್ಮ ಸಾಮಥ್ರ್ಯದ ಮೇಲೆಯೇ ರೂಪಿಸಿಕೊಳ್ಳುವ ಪರ್ಯಾಯ ವ್ಯವಸ್ಥೆಯ ಬಗೆಗೆ ಡಾ. ಹೆಗ್ಗಡೆಯವರು ಆಸಕ್ತಿಯನ್ನು ತೋರಿಸಿದರು. ಈ  ಕಾರ್ಯದಲ್ಲಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಕೈಗೂಡಿಸಿದವು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ (S.D.M.E. Trust) ಈ ಪರಿಧಿಯೊಳಗೆ ಸೇರ್ಪಡೆಯಾಯಿತು. ದೇಶದ ಮೊಟ್ಟ ಮೊದಲ “ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಕೇಂದ್ರ” (ರುಡ್‍ಸೆಟ್) ವನ್ನು  ಧರ್ಮಾಧಿಕಾರಿಗಳು ಹಾಗೂ ಎರಡೂ ಬ್ಯಾಂಕಿನ ಅಧ್ಯಕ್ಷರುಗಳ ಸಮ್ಮತಿಯೊಡನೆ ಪ್ರಾಯೋಗಿಕ ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಸಿದ್ಧವನ ಗುರುಕುಲದಲ್ಲಿ ದಿನಾಂಕ 15-07-1982ರಂದು ಆರಂಭಗೊಂಡಿತು ಹಾಗೂ ಅದನ್ನು ದಿ. 31-01-1983 ರಂದು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.


ಸಂಸ್ಥೆಯ ಮೊಟ್ಟಮೊದಲ ನಿರ್ದೇಶಕರಾಗಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಜವಾಬ್ದಾರಿಯನ್ನು ಡಾ. ಕೃಷ್ಣ ಕೊತಾಯ ಹೊತ್ತರು. ಆರಂಭಿಕ ಹಂತದಲ್ಲಿ ಡಾ. ಹೆಗ್ಗಡೆಯವರು ತಮ್ಮ ಅಮೂಲ್ಯವಾದ ಶಕ್ತಿ ಮತ್ತು ಸಮಯವನ್ನು ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಸ್ಪಷ್ಟ ರೂಪ ನೀಡುವುದಕ್ಕೆ ಮೀಸಲಾಗಿಸಿದರು. 

ಧರ್ಮಸ್ಥಳದ ಹೆಬ್ಬಾಗಿಲಿನಂತಿರುವ, ಪ್ರಶಾಂತ ಪರಿಸರವನ್ನು ಹೊಂದಿರುವ ತರಬೇತಿಗೆ ಪೂರಕವಾದ ವಾತಾವರಣವನ್ನು ನೀಡುವ ಉಜಿರೆಯ, ಪುರಾತನ ಗುರುಕುಲದ ಎಲ್ಲ ಅಂಶಗಳನ್ನು ಹೊಂದಿರುವ ‘ದಿ. ಮಂಜಯ್ಯ ಹೆಗ್ಗಡೆಯವರು ಸ್ಥಾಪಿಸಿದ’ ಸಿದ್ಧವನ ಗುರುಕುಲದಲ್ಲಿ ನೂತನ ‘ರುಡ್‍ಸೆಟ್’ಕಾರ್ಯಾರಂಭ ಮಾಡಿತು. ಡಾ. ಹೆಗ್ಗಡೆಯವರು ಸಂಸ್ಥೆಗೆ ಬೇಕಾದ ಕಟ್ಟಡ ಹಾಗೂ ಪೀಠೋಪಕರಣಗಳನ್ನು ಒದಗಿಸಿದರು. ತರಬೇತಿಗೆ ಬರುವ ಯುವಕರ ಊಟದ ವ್ಯವಸ್ಥೆಯನ್ನು ಗುರುಕುಲದಲ್ಲೇ ಮಾಡಲಾಯಿತು. ಗುರುಕುಲದ ಶಿಸ್ತು, ಸಂಯಮದ ಲಾಭ ತರಬೇತಿಗೆ ಬರುವ ಎಲ್ಲಾ ನಿರುದ್ಯೋಗಿ ಯುವಜನತೆಗೆ ದೊರಕಬೇಕೆಂಬುದು ಡಾ. ಹೆಗ್ಗಡೆಯವರ ದೂರಾಲೋಚನೆಯಾಗಿತ್ತು. ಸಿದ್ಧವನ ಗುರುಕುಲದ ಶಿಸ್ತು-ಸಂಯಮದ ಚೌಕಟ್ಟು ತರಬೇತಿಗೆ ವಿಶೇಷ ಮೆರುಗನ್ನು ತಂದುಕೊಟ್ಟಿತು. ಅಲ್ಲದೇ ತಮ್ಮ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳುವಲ್ಲಿ ಸರಳ ಜೀವನ ಸಾಧನೆ ದೃಢ ಸಂಕಲ್ಪಗಳು ಒಳ್ಳೆಯ ಮಾನವರಾಗಿ ರೂಪಾಂತರಗೊಳ್ಳಲು ಅವಶ್ಯಕವಾದ ಬದುಕಿನ ಸೂತ್ರಗಳನ್ನು ಅರಿವು ತರಬೇತಿಗೆ ಬರುವ ಯುವಜನತೆಗೆ ಆಗತೊಡಗಿತು. ಕಾಲಾಂತರದಲ್ಲಿ ಈ ವಿಷಯಗಳು ಯುವಜನತೆಯಲ್ಲಿ ತಮ್ಮ ಕೀಳರಿಮೆಯನ್ನು ನೀಗಿಸಿಕೊಂಡು ಆತ್ಮ ವಿಶ್ವಾಸದ ಚಿಲುಮೆಯಾಗಿ ತರಬೇತಿಯಲ್ಲಿನ ಜ್ಞಾನ ಮತ್ತು ಕೌಶಲಗಳನ್ನು ಸರಿಯಾಗಿ ಪ್ರಾಪ್ತ ಮಾಡಿಕೊಂಡು ಯಶಸ್ವೀ ಉದ್ದಿಮೆದಾರರಾಗಿ ರೂಪುಗೊಳ್ಳಲು ಸಹಕಾರಿಯಾಯಿತು. ಈ ಸಂಗತಿ ‘ರುಡ್‍ಸೆಟ್’ನ ತರಬೇತಿ ಕಾರ್ಯಕ್ರಮಕ್ಕೆ ಭದ್ರ ಬುನಾದಿಯನ್ನು ಒದಗಿಸಿತು.


“ರುಡ್‍ಸೆಟ್”ನ ಧ್ಯೇಯೋದ್ದೇಶ

1. ಸ್ವ-ಉದ್ಯೋಗಕ್ಕೆ ಸಂಬಂಧ ಪಟ್ಟ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ನಿರುದ್ಯೋಗಿಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ, ಸಲಹೆ, ಸಹಾಯ ನೀಡಿ ಅವರು ಸ್ವ-ಉದ್ಯೋಗದಲ್ಲಿ ನೆಲೆ ನಿಲ್ಲುವಂತೆ ಮಾಡುವುದು. 2. ಗ್ರಾಮಾಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರನ್ನು ಸಂಬಂಧಿತ ತರಬೇತಿಯಿಂದ ಸಜ್ಜು ಗೊಳಿಸುವುದು. 3. ಗ್ರಾಮಾಭಿವೃದ್ಧಿಗೆ ಪೂರಕವೆನಿಸುವ ಯಾವುದೇ ತರಬೇತಿಯನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಕೊಡುವುದು. 4. ಜೀವನೋಪಾಯಕ್ಕಾಗಿ ಸ್ವ-ಉದ್ಯೋಗ ಕೈಗೊಳ್ಳಲು ನಿರುದ್ಯೋಗಿ ಯುವಜನರಿಗೆ ಕೌಶಲ ಒದಗಿಸುವುದು. 5. ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುವುದು. 6. ಸರಕಾರ ಅನುಷ್ಠಾನ ಮಾಡುತ್ತಿರುವ ಜೀವನೋಪಾಯವನ್ನು ವೃದ್ಧಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದು. 7. ಆರ್ಥಿಕ ಸಹಾಯ ಕಲ್ಪಿಸುವಿಕೆ ಹಾಗೂ ಕೌಶಲ ಅಭಿವೃದ್ಧಿ ತರಬೇತಿಗಳ ಮೂಲಕ ರುಡ್‍ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಆರಂಭಿಸಿದ ಕಿರು ಉದ್ಯಮಗಳು ಸುಸ್ಥಿರತೆ ಮತ್ತು ಬೆಳವಣಿಗೆ ಹೊಂದುವಂತೆ ಮಾಡುವುದು. 8. ಸಮಾಲೋಚನೆ ಹಾಗೂ ಯೋಜನೆ ಅನುಷ್ಠಾನದಲ್ಲಿ ಸಲಹೆ ನೀಡುವ ಸೇವೆ ಒದಗಿಸುವುದು. 9. ಉದ್ಯಮಶೀಲತೆ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹಾಗೂ ಸಂಶೋಧನೆಯನ್ನು ಕೈಗೊಳ್ಳುವುದು. 10. ಸಮುದಾಯ ಅಭಿವೃದ್ಧಿ ಹಾಗೂ ಆರ್ಥಿಕ ಸೇರ್ಪಡೆಯ ಕಾರ್ಯಕ್ರಮಗಳಲ್ಲಿ ಒಳಗೊಂಡಿರುವ ಸಿಬ್ಬಂದಿ ಮತ್ತು ಎಲ್ಲ ಜನರಿಗೆ ತರಬೇತಿ ನೀಡುವುದು.


‘ರುಡ್‍ಸೆಟ್’ ಸಂಸ್ಥೆಯಿಂದ ನಡೆಸಲ್ಪಡುವ ವಿವಿಧ ತರಬೇತಿ ಕಾರ್ಯಕ್ರಮಗಳು

ಕರ್ನಾಟಕ ರಾಜ್ಯವನ್ನು ಹಿಡಿದು ದೇಶದ ವಿವಿಧ ರಾಜ್ಯಗಳಲ್ಲಿ ತರಬೇತಿ ಕೇಂದ್ರಗಳನ್ನು ಹೊಂದಿರುವ ‘ರುಡ್‍ಸೆಟ್’ ಸಂಸ್ಥೆ ಆಯಾ ಸ್ಥಳದಲ್ಲಿ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳು, ಬೇಡಿಕೆ ಇರುವ ಉದ್ಯೋಗದ ಅವಕಾಶಗಳು ಮತ್ತು ಮಾನವ ಸಂಪನ್ಮೂಲದ ಲಭ್ಯತೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಆಯಾ ಪ್ರದೇಶದಲ್ಲಿ ಸೂಕ್ತವಾಗಿರುವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಕೆಲವು ಪ್ರದೇಶಗಳಲ್ಲಿ ವಿಶಿಷ್ಟವಾದ ಕೌಶಲ ಆಧಾರಿತ ಸ್ವ-ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದನ್ನು ಗಮನದಲ್ಲಿರಿಸಿ ಸಂಸ್ಥೆ ತನ್ನ ತರಬೇತಿ ಕಾರ್ಯಕ್ರಮಗಳನ್ನು ಅವುಗಳಿಗೆ ಪೂರಕವಾಗಿ ರೂಪಿಸುತ್ತದೆ. ಸಾಮಾನ್ಯವಾಗಿ ರುಡ್‍ಸೆಟ್ ಸಂಸ್ಥೆ ಆಯೋಜಿಸುವ ತರಬೇತಿ ಕಾರ್ಯಕ್ರಮಗಳ ವಿವರಗಳು ಕೆಳಗಿನಂತಿವೆ:


I.  ಕೃಷಿ ಮತ್ತು ಕೃಷಿಪೂರಕ ತರಬೇತಿಗಳು:

1.ವಾಣಿಜ್ಯ ತೋಟಗಾರಿಕೆ 2. ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ 3. ಜೇನು ಸಾಕಣೆ 4. ಔಷಧೀಯ ಸಸ್ಯಗಳ ಬೇಸಾಯ 5. ಕೃಷಿ ಉದ್ಯಮಿ 6. ಹಸಿರುಮನೆ ಮತ್ತು ಅಂಗಾಂಶ ಕೃಷಿ 7. ನರ್ಸರಿ - ಹಣ್ಣು ಮತ್ತು ಕಾಯಿಪಲ್ಲೆ ಹಾಗೂ ಹೂವಿನ ಗಿಡಗಳ ಸಸಿಗಳ ತಯಾರಿಕೆ 8. ಪಾಲಿಹೌಸ್ ಮತ್ತು ಶೇಡ್ ನೆಟ್ ಫಾರ್ಮಿಂಗ್ ಇತ್ಯಾದಿ.


II. ವಸ್ತು/ಉತ್ಪಾದನೆ ಆಧಾರಿತ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳು: 

1.ಮಹಿಳೆಯರಿಗೆ ವಸ್ತ್ರ ವಿನ್ಯಾಸ 2. ವಿವಿಧ ಪೇಪರ್ ಉತ್ಪನ್ನಗಳ ತರಬೇತಿ 3. ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲೆ ಪೌಡರ್ ತಯಾರಿಕೆ 4. ಅಗರಬತ್ತಿ ತಯಾರಿಕೆ  5. ಮೇಣದ ಬತ್ತಿ ತಯಾರಿಕೆ 7. ವಸ್ತ್ರ ವಿನ್ಯಾಸ 8. ಫಿನಾಯಿಲ್, ಸಾಬೂನು, ಶ್ಯಾಂಪುಗಳ ಉತ್ಪಾದನೆ ಇತ್ಯಾದಿ.


III. ಕೌಶಲ್ಯಾಧಾರಿತ ಒದಗಿಸುವ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳು:

1. ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ 2. ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ 3. ಇಲೆಕ್ಟ್ರಿಕ್ ಮೋಟರ್ ರಿವೈಂಡಿಂಗ್ ಮತ್ತು ರಿಪೇರಿ 4. ಬ್ಯೂಟಿ ಪಾರ್ಲರ್ / ಮೆನ್ಸ್ ಪಾರ್ಲರ್ 5. ಎ.ಸಿ., ರೆಫ್ರಿಜರೇಟರ್ ರಿಪೇರಿ ಮತ್ತು ಸರ್ವಿಸಿಂಗ್ 6. ಮೊಬೈಲ್, ಸ್ಮಾರ್ಟ್‍ಫೋನ್ ರಿಪೇರಿ ಮತ್ತು ಸರ್ವಿಸಿಂಗ್ 7. ಕಂಪ್ಯೂಟರ್ ಅಕೌಂಟಿಂಗ್ 8. ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ ತರಬೇತಿ 9. ಟಿ.ವಿ. ರಿಪೇರಿ ಮತ್ತು ಸರ್ವಿಸಿಂಗ್ 10. ಡಿ.ಟಿ.ಪಿ. (ಡೆಸ್ಕ್‍ಟಾಪ್ ಪಬ್ಲಿಷಿಂಗ್) ತರಬೇತಿ 11. ಸಿ.ಸಿ. ಕ್ಯಾಮರಾ ಅಳವಡಿಕೆ ಮತ್ತು ನಿರ್ವಹಣೆ.


IV. ಸಾಮಾನ್ಯ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳು:

ಎರಡನೇ ಹಂತದ ಉದ್ಯಮಶೀಲತಾ ತರಬೇತಿಯಲ್ಲಿ;

1. ಕೌಶಲ ಅಭಿವೃದ್ಧಿ ತರಬೇತಿಗಳು. 

2. ಉದ್ಯಮಶೀಲತೆ ಬೆಳವಣಿಗೆ ತರಬೇತಿ

3. ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ

4. ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ

5. ಉದ್ಯಮಶೀಲತಾ ಸಂವೇದನಾ ಕಾರ್ಯಕ್ರಮ 

6. ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮ


ತರಬೇತಿಗೆ ಸೇರುವ ವಿಧಾನ 

ರುಡ್‍ಸೆಟ್‍ನ ಯಾವುದೇ ತರಬೇತಿ ಕೇಂದ್ರದಲ್ಲಿ ವರ್ಷವಿಡೀ ವಿವಿಧ ತರಬೇತಿಗಳು ನಡೆಯುತ್ತಿರುತ್ತವೆ. ತರಬೇತಿ ಪಡೆಯಲು ಇಚ್ಛಿಸುವ ನಿರುದ್ಯೋಗಿಗಳು ವರ್ಷದ ಯಾವುದೇ ಸಮಯದಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಒಂದು ಬಿಳಿ ಹಾಳೆಯ ಮೇಲೆ ತಮ್ಮ ವಿವರಗಳನ್ನು, ಮುಖ್ಯವಾಗಿ ಪೂರ್ಣ ಹೆಸರು ವಿಳಾಸ, ಹುಟ್ಟಿದ ದಿನಾಂಕ, ವಯಸ್ಸು ಪಡೆಯಲು ಇಚ್ಛಿಸಿದ ತರಬೇತಿಯ ಹೆಸರು, ಆ ವಿಷಯದಲ್ಲಿರುವ ಪ್ರಾಥಮಿಕ ಜ್ಞಾನ ಇತ್ಯಾದಿ ವಿಷಯಗಳನ್ನು ನಮೂದಿಸಿ ಅರ್ಜಿಯನ್ನು ಸಂಸ್ಥೆಗೆ ಸಲ್ಲಿಸಬಹುದು. ಇದಕ್ಕಾಗಿ ಸಂಸ್ಥೆ ಸಿದ್ಧಪಡಿಸಿದ ಫಾರಂನಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಪೂರಕವಾಗಿ ತಮ್ಮ ಇ-ಮೇಲ್ ವಿಳಾಸ, ವಾಟ್ಸಾಪ್ ನಂಬರ್, ಮೊಬೈಲ್‍ನ ನಂಬರ್ ಇತ್ಯಾದಿಗಳನ್ನು ಸೇರಿಸಬೇಕು. ಅಲ್ಲದೇ ಈ ಸಂಸ್ಥೆಯ ಪರಿಚಯ / ತರಬೇತಿ ಕುರಿತು ಮಾಹಿತಿ ಯಾರಿಂದ ಸಿಕ್ಕಿತು ಎಂಬ ಸಂಗತಿಯನ್ನು ನಮೂದಿಸಬೇಕು. ಅರ್ಜಿಯನ್ನು ಈ ಕೆಳಕಂಡ ಮಾದರಿಯಲ್ಲಿ ಸಲ್ಲಿಸಬಹುದು.  1. ಸ್ವ-ಉದ್ಯೋಗ ಪ್ರೇರಣಾ ಶಿಬಿರದಲ್ಲಿ ಭಾಗವಹಿಸಿ, ಆ ಶಿಬಿರದಲ್ಲಿಯೇ ಅರ್ಜಿ ಸಲ್ಲಿಸಬಹುದು. 2. ಸಂಸ್ಥೆಗೆ ಭೇಟಿ ನೀಡಿ ಅಗತ್ಯವಾದ ವಿವರಗಳು ಮತ್ತು ಮಾರ್ಗದರ್ಶನವನ್ನು ಪಡೆದು ಅರ್ಜಿಯನ್ನು ಖುದ್ದಾಗಿ ಸಲ್ಲಿಸಬಹುದು. 3. ರುಡ್‍ಸೆಟ್ ಸಂಸ್ಥೆಯ ವೆಬ್‍ಸೈಟ್‍ಗೆ ಭೇಟಿ ನೀಡಿ ಆನ್‍ಲೈನ್‍ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 4. ತಮ್ಮ ಕ್ಷೇತ್ರದಲ್ಲಿ ಇರುವ ಪ್ರವರ್ತಕ ಅಥವಾ ಇತರ ಯಾವುದೇ ಬ್ಯಾಂಕ್ ಶಾಖೆಯ ಮೂಲಕ ತರಬೇತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

 

‘ರುಡ್‍ಸೆಟ್’ ಉಜಿರೆ: ಪ್ರಗತಿಯ ಪಕ್ಷಿನೋಟ

‘ರುಡ್‍ಸೆಟ್’ ಉಜಿರೆ ನಿರುದ್ಯೋಗಿ ಯುವಜನರನ್ನು ಸ್ವ-ಉದ್ಯೋಗದ ಕ್ಷೇತ್ರದತ್ತ ಆಕರ್ಷಿಸಿ ಸ್ವಾವಲಂಬಿ ಜೀವನವನ್ನು ನಡೆಸುವಂತೆ ಪ್ರೇರಣಾದಾಯಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ತನ್ನ ಅನುಭವದ ನೆಲೆಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತ, ಯಶಸ್ವೀ ಪಥದಲ್ಲಿ ಮುನ್ನಡೆದಿದೆ. ತನ್ನ ಕಾರ್ಯವನ್ನು ಬರೀ ತರಬೇತಿ ನೀಡುವುದಕ್ಕಷ್ಟೇ ಸೀಮಿತಗೊಳಿಸದೇ, ತರಬೇತಿ ನಂತರ ಬೆಂಬಲ, ಮಾರ್ಗದರ್ಶನ ಮತ್ತು ಬ್ಯಾಂಕಿನ ಮುಖೇನ ಹಣಕಾಸಿನ ಸೌಕರ್ಯಗಳನ್ನು ಒದಗಿಸಿ, ತರಬೇತಿ ಪಡೆದವರಲ್ಲಿ ಅತಿ ಹೆಚ್ಚು ಜನ ತಮ್ಮ ಸ್ವ-ಉದ್ಯೋಗವನ್ನು  ಪ್ರಾರಂಭಿಸುವಂತೆ ಮಾಡಿ ತನ್ನ ಜವಾಬ್ದಾರಿಯನ್ನು ಮೆರೆಯುತ್ತಿದೆ. ರುಡ್‍ಸೆಟ್ ತನ್ನ 40 ವರ್ಷಗಳ ಸಾರ್ಥಕ ದಾರಿಯಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದೆ.


ಪ್ರಗತಿಯ ನೋಟ:

ರುಡ್‍ಸೆಟ್  ಉಜಿರೆ ಸಂಸ್ಥೆ ಇಲ್ಲಿಯವರೆಗೆ 873 ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮಗಳ ಮೂಲಕ 25,793 ಯುವಜನರಿಗೆ ವಿವಿಧ ರೀತಿಯ ಸ್ವ-ಉದ್ಯೋಗ ಮತ್ತು ಉದ್ಯಮಶೀಲತೆಯ ತರಬೇತಿ ನೀಡಿದೆ. * ತರಬೇತಿ ಪಡೆದ 25,793 ನಿರುದ್ಯೋಗಿ ಯುವಜನರಲ್ಲಿ ಶೇಕಡಾ 70 ರಷ್ಟು (18067) ಜನರು ತಮ್ಮ ಸ್ವಉದ್ಯೋಗಗಳನ್ನು ಪ್ರಾರಂಭಿಸಿ ಯಶಸ್ವೀ ಉದ್ಯಮಿಗಳಾಗಿ, ತಮ್ಮ ಸ್ವಾವಲಂಬನೆಯ ಜೀವನವನ್ನು ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಉದ್ಯಮದಲ್ಲಿ ಉದ್ಯೋಗ ಸೃಷ್ಠಿಗೊಳಿಸಿ ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ತಮ್ಮದೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


* ಮಹಿಳೆಯರಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಬೆಳೆಸಿ, ಸಬಲತೆಯನ್ನು ನೀಡಬೇಕು ಎನ್ನುವ ಡಾ. ಹೆಗ್ಗಡೆಯವರ ಆಶಯದಂತೆ ತರಬೇತಿ ಪಡೆದ 25,793 ಯುವಜನರಲ್ಲಿ ಶೇ. 29 ಪ್ರಮಾಣದಷ್ಟು ಅಂದರೆ ಸುಮಾರು 7,489 ಮಹಿಳೆಯರು ವಿವಿಧ ರೀತಿಯ ಸ್ವ-ಉದ್ಯೋಗ ತರಬೇತಿಗಳಲ್ಲಿ ಭಾಗವಹಿಸಿದ್ದಾರೆ. ಇದೊಂದು ಅಪೂರ್ವ ದಾಖಲೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಅದು ಇಡೀ ಕುಟುಂಬಕ್ಕೆ ನೀಡಿದ ಶಿಕ್ಷಣ ಎಂದು ಭಾವಿಸಿರುವ ಡಾ. ಹೆಗ್ಗಡೆಯವರು ಮಹಿಳೆಯರ ಸ್ಥಿತಿಗತಿಗಳ ಚಿಂತನೆ ನಡೆಸಿ, ಅವರು ಕೈಗೊಳ್ಳಲು ಅವಕಾಶವಿರುವ ಮತ್ತು ಸಾಧ್ಯವಿರುವ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಮಾರ್ಗದರ್ಶನ ನೀಡಿದರು. ಇದರ ಫಲವೇ ಈ ತರಬೇತಿ ಪಡೆದ 7,489 ಮಹಿಳೆಯರಲ್ಲಿ ಶೇಕಡಾ 66 ರಷ್ಟು ಅಂದರೆ 4,912 ಮಹಿಳೆಯರು ತಮ್ಮ ಕಿರು ಮತ್ತು ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ತಮ್ಮ ಕುಟುಂಬದ ಆದಾಯದ ಆಧಾರಸ್ತಂಭಗಳಾಗಿದ್ದಾರೆ. 


* ಒಟ್ಟು ತರಬೇತಿ ಪಡೆದವರಲ್ಲಿ ಶೇಕಡಾ 16 ರಷ್ಟು (4211) ಯುವಜನರು ಹರಿಜನ, ಗಿರಿಜನ ವರ್ಗಕ್ಕೆ ಸೇರಿದ್ದು, ಇದರಲ್ಲಿ ಶೇಕಡಾ 78 ರಷ್ಟು ಜನರು (3270) ತಮ್ಮ ಕಿರು ಹಾಗೂ ಸಣ್ಣ ಉದ್ಯಮಗಳನ್ನು ಸ್ಥಾಪಿಸುವುದರ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿದ್ದಾರೆ.  

* ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೆಂದರೆ, ತರಬೇತಿ ಪಡೆದು ಸ್ವ-ಉದ್ಯೋಗವನ್ನು ಪ್ರಾರಂಭಿಸಿದ 18067 ಜನರಲ್ಲಿ ಶೇಕಡಾ 37 ರಷ್ಟು (6,616) ಜನರು ವಿವಿಧ ಬ್ಯಾಂಕುಗಳಿಂದ ಹಣಕಾಸು ಸೌಲಭ್ಯವನ್ನು ಪಡೆದಿದ್ದಾರೆ. 


* ಕಳೆದ 40 ವರ್ಷಗಳ ಅವಧಿಯಲ್ಲಿ ‘ರುಡ್‍ಸೆಟ್’ ಅಭ್ಯರ್ಥಿಗಳು ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಪ್ರವರ್ತಕ ಕೆನರಾ ಬ್ಯಾಂಕ್ ಸೇರಿ ಇತರ ಹಣಕಾಸು ಸಂಸ್ಥೆಗಳು ಒಟ್ಟು 156.85 ಕೋಟಿ ರೂಪಾಯಿ ಸಾಲವನ್ನು ನೀಡಿವೆ.  

* ಸಂಸ್ಥೆ 20 ತರಬೇತಿ ಕಾರ್ಯಕ್ರಮಗಳ ಮೂಲಕ 371 ಸ್ವ-ಉದ್ಯಮಿಗಳಿಗೆ ಅವರ ಕೌಶಲವನ್ನು ಅಭಿವೃದ್ಧಿ ಪಡಿಸುವ ತರಬೇತಿ ನೀಡಿದೆ. ಇದು ಅವರ ಉದ್ಯಮದ ಅಭಿವೃದ್ಧಿಗೆ ಕಾರಣವಾಗಿದೆ. 

* ಸುಮಾರು 7 ತರಬೇತಿ ಕಾರ್ಯಕ್ರಮಗಳ ಮೂಲಕ 120 ಯಶಸ್ವಿ ಸ್ವ-ಉದ್ಯಮಿಗಳಿಗೆ ತಮ್ಮ ಉದ್ಯಮವನ್ನು ಬೆಳೆಸುವ/ವಿಸ್ತರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. 


* ಸುಮಾರು 159  ಗ್ರಾಮೀಣ ಅಭಿವೃದ್ಧಿ ತರಬೇತಿಗಳ ಮೂಲಕ 6366 ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಇತರ ನಿರುದ್ಯೋಗಿಗಳಿಗೆ ಸ್ವಾವಲಂಬನೆಯ ದಾರಿಯನ್ನು ತೋರಲಾಗಿದೆ.  

* ಸುಮಾರು 83 ಕಾರ್ಯಕ್ರಮಗಳ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ 137 ಕಾರ್ಯಕ್ರಮಗಳ ಮೂಲಕ ಬ್ಯಾಂಕ್/ಸರಕಾರಿ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳಿಗೆ ಉದ್ಯಮಶೀಲತೆ ಹಾಗೂ ರುಡ್‍ಸೆಟ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಸಂವೇದನೆ ನೀಡುವ ತರಬೇತಿ ನೀಡಲಾಗಿದೆ. 

* ಸುಮಾರು1,04,666 ನಿರುದ್ಯೋಗಿ ಯುವಜನರಿಗೆ 1313 ಉದ್ಯಮಶೀಲತಾ ಪ್ರೇರಣಾ ಶಿಬಿರಗಳ ಮೂಲಕ ಸ್ವ-ಉದ್ಯೋಗವನ್ನು ಕೈಗೊಳ್ಳಲು ಪ್ರೇರಣೆ ನೀಡಲಾಗಿದೆ. ಇದೊಂದು ಅಗಾಧವಾದ ಸಾಧನೆಯೇ ಸರಿ. 

1982ರಲ್ಲಿ ಉಜಿರೆಯಲ್ಲಿ ಪ್ರಾರಂಭವಾದ ‘ರುಡ್‍ಸೆಟ್’ ಸಂಸ್ಥೆ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವ ಸಮರ್ಪಣಾ ಮನೋಭಾವ ಮತ್ತು ಪ್ರೇರಣಾದಾಯಕವಾದ ನೇತೃತ್ವದಲ್ಲಿ 40 ವರ್ಷಗಳ ಸಾರ್ಥಕ ಸೇವೆಯಲ್ಲಿ ಪ್ರಗತಿಪಥದಲ್ಲಿ ದಾಪುಗಾಲು ಹಾಕುತ್ತಿದೆ.


ಸಂಸ್ಥೆಯ ರೂವಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮರ್ಥ ನಾಯಕತ್ವ, ಪ್ರಾಯೋಗಿಕ ಹಂತದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪರಿ, ಗಹನವಾದ ಅಧ್ಯಯನ ಆಸಕ್ತಿ ಮತ್ತು ದಣಿವರಿಯದ ದುಡಿತ, ಕೊನೆಗೂ ದೇಶದ ಆರ್ಥಿಕ ಚೈತನ್ಯಕ್ಕೆ ಪೆಟ್ಟು ನೀಡುವ, ನಿರುದ್ಯೋಗವೆಂಬ ಪೆಡಂಭೂತವನ್ನು ಎದುರಿಸಿ ಯುವ ಜನರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಯಶಸ್ವಿ ಸೂತ್ರವನ್ನು ‘ರುಡ್‍ಸೆಟ್’ನ ರೂಪದಲ್ಲಿ ಸಿದ್ಧಪಡಿಸಿ ರಾಷ್ಟ್ರ ನಿರ್ಮಾಣದಲ್ಲಿ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಪಾಲ್ಗೊಳ್ಳುತ್ತಿದೆ.


ರುಡ್‍ಸೆಟ್‍ನ ಪ್ರಮುಖಾಂಶಗಳು:

ಕರ್ನಾಟಕ ರಾಜ್ಯದ 7 ಜಿಲ್ಲೆಗಳಲ್ಲಿ ಹಾಗೂ ದೇಶದ ಇತರ 16 ರಾಜ್ಯಗಳ 20 ಜಿಲ್ಲೆಗಳಲ್ಲಿ ಒಟ್ಟು 27 ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇಲ್ಲಿಯವರೆಗೆ 17,155 ತರಬೇತಿಗಳಲ್ಲಿ 5,22,699 ಯುವ ಜನರು ತರಬೇತಿ ಪಡೆದಿರುತ್ತಾರೆ. ಇವರಲ್ಲಿ 2,42,932 ಯುವತಿಯರು ಹಾಗೂ ಯುವಕರು 2,79,767 ತರಬೇತಿ ಪಡೆದು ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಯಶಸ್ವಿ ಉದ್ಯಮಿಗಳಾಗಿ ಸಮಾಜದಲ್ಲಿ ಉದ್ಯೋಗ ಸೃಷ್ಠಿಸುವಲ್ಲಿ ಸಹಕಾರಿಗಳಾಗುವಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಸ್ವ ಉದ್ಯೋಗ ತರಬೇತಿ ಪರಿಕಲ್ಪನೆ ಅತೀ ಮುಖ್ಯ ಪಾತ್ರ ವಹಿಸಿದೆ.


ಜಿಲ್ಲೆಗೊಂದು ಆರ್‍ಸೆಟಿ:

ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಸ್ವ ಉದ್ಯೋಗದ ಪರಿಕಲ್ಪನೆಯ ಯಶಸ್ಸಿನಿಂದ ಪ್ರೇರಿತಗೊಂಡ ಕೇಂದ್ರ ಸರಕಾರವು, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ರುಡ್‍ಸೆಟ್ ಮಾದರಿ ಸಂಸ್ಥೆಗಳನ್ನು ದೇಶದ ಪ್ರತಿ ಜಿಲ್ಲೆಯಲ್ಲಿ ಪ್ರಾರಂಭ ಮಾಡಲು ಜಿಲ್ಲಾ ಅಗ್ರಣೀಯ ಬ್ಯಾಂಕುಗಳಿಗೆ ಆದೇಶ ನೀಡಿ, ಪೂಜ್ಯ ಡಾII ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಷ್ಟ್ರ ಮಟ್ಟದ ಓಐಖಂಅ ಕಮಿಟಿಯ ಗೌರವಾಧ್ಯಕ್ಷರಾಗಿ, ದೇಶಾದ್ಯಂತ 590 ರುಡ್‍ಸೆಟ್/ಆರ್‍ಸೆಟಿ ಸಂಸ್ಥೆಗಳು ಸ್ಥಾಪನೆಗೊಂಡಿದ್ದು ರುಡ್‍ಸೆಟ್ ಸಂಸ್ಥೆಗೆ ಸಂದ ಗೌರವವಾಗಿದೆ.


ರುಡ್‍ಸೆಟ್ ಸಂಸ್ಥೆಗೆ ಸಂದ ಗೌರವ:

1. ಗ್ರಾಮೀಣ ಅಭಿವೃದ್ಧಿಯಲ್ಲಿ ವಹಿಸಿರುವ ಸಕ್ರಿಯ ಪ್ರಾತ್ರಕ್ಕೆ 1998-99 ನೇ ಸಾಲಿನ ಕೇಂದ್ರ ಸರ್ಕಾರದ ‘ಫಿಕ್ಕಿ’ ಪ್ರಶಸ್ತಿ ಲಭಿಸಿದೆ.

2. ಸಣ್ಣ ಮತ್ತು ಮಧ್ಯಮಸ್ತರ ಉದ್ದಿಮೆಗಳನ್ನು ಸ್ಥಾಪಿಸುವಲ್ಲಿ ರುಡ್‍ಸೆಟ್ ಸಂಸ್ಥೆಗೆ ಸಿಡ್ಬಿಯಿಂದ 2010-11ರ ಸಾಲಿನ ರಾಷ್ಟಮಟ್ಟದ ‘ಸಿಡ್ಬಿ’ ಪ್ರಶಸ್ತಿ ಲಭಿಸಿದೆ.

3. ಸಂಸ್ಥೆಯಲ್ಲಿ ತರಬೇತಿ ಪಡೆದು ಐವರು ಮಹಿಳೆಯರಿಗೆ ರಾಷ್ಟ್ರ ಮಟ್ಟದ ಐ.ಐ.ಎಂ. ನಬಾರ್ಡ್ ಗ್ರಾಮೀಣ ಉದ್ಯಮಶೀಲತಾ ಪ್ರಶಸ್ತಿ ದೊರೆತಿದೆ.

4. 2006-07ರ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ರುಡ್‍ಸೆಟ್ ಸಂಸ್ಥೆಗೆ ಸಮಾಜ ಸೇವೆಗಾಗಿ ಲಭಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top