ಕನ್ಹಯ್ಯ ಲಾಲನಿಗೆ ಶ್ರದ್ಧಾಂಜಲಿಯ ನಾಲ್ಕು ಸಾಲುಗಳು

Chandrashekhara Kulamarva
0



ಚುಚ್ಚುವ ಸೂಜಿಗೆ ದಾರ ಪೋಣಿಸಿ

ಕಟ್ಟಿಕೊಡುವ ಪಾಠ ಕಲಿಸಿ

ಮಾನಕ್ಕೆ ಮೌನವಾಗಿ ಬಟ್ಟೆ ತೊಡಿಸುವ

ನಿಷ್ಠಾವಂತ ಸೇವಕ

ತಾನಾಯಿತು ತನ್ನ ಕೆಲಸವಾಯಿತು

ಮಾನವಂತ ಕಾಯಕ

ಬದುಕಿನ ಸೌಮ್ಯಕ್ಕೆ ತೆರೆದುಕೊಂಡ ಮನಸ್ಸಿನವ


ಕ್ರೌರ್ಯ ಕಟ್ಟಿಕೊಂಡು ಹುಟ್ಟುವ

ಸತ್ತ ಮನಸ್ಸುಗಳು

ಸೀಳುವ, ಸಿಡಿಯುವ, ಕಿಡಿ ಹಚ್ಚುವ ಕಲ್ಲು ತೂರುವ ಕಿಡಿಗೇಡಿ ಗೋ ಮುಖ ವ್ಯಾಘ್ರಗಳು

ನೀನು ನಂಬಿದೆ

ಅವರ ಉದ್ದಗಲ ಲೆಕ್ಕಾಚಾರಕ್ಕೆ ಬಗ್ಗಿದೆ


ಕಣ್ಣಿಲ್ಲದ ಕರುಣೆ ಸತ್ತ ಹೃದಯ ಹೀನ ಕತ್ತಿಗೆ

ಕುತ್ತಿಗೆ ಕೊಟ್ಟ ನಿನಗೆ

ಸೂಜಿಯ ಕಣ್ಣಾಲಿ ಕಾಣಲಿಲ್ಲ

ದಾರ ತುಂಡಾಗಿ ಸೂಜಿ ಬಿದ್ದ ಶಬ್ದ ಕೇಳಲಿಲ್ಲ

ಹರಿದ ಕತ್ತನ್ನು ನಿನಗೇ ಹೊಲಿದು ಕೊಳ್ಳಲಾಗಲಿಲ್ಲ!

ಎಂಥ ವಿಪರ್ಯಾಸ ಅಲ್ಲ!


ಕಟ್ಟುವ ಪದ್ಧತಿ ಕೊಲ್ಲುವ

ಸೌಮ್ಯತೆಯ ಹಿಂಸಿಸುವ

ಸಂಸ್ಕಾರ ಹೀನ ರಾಕ್ಷಸರು

ಧರ್ಮಾಂಧ ಕ್ರೂರಿಗಳು

ಆರೋಗ್ಯಕರ ಸಮಾಜದ ರೋಗಿಗಳು


ಬಿಡು ದರ್ಜಿ

ಸಮಾಜ ಮುತುವರ್ಜಿಯಿಂದ ನೋಡುತ್ತಿದೆ

ಜೀವ ಹರಿದು ನೆತ್ತರು ಚೆಲ್ಲಿದರೂ

ತುಂಡಾದ ದಾರ ಬದುಕಿದೆ

ಬಿದ್ದ ಸೂಜಿ ಎದ್ದು ನಿಂತಿದೆ


- ನಾರಾಯಣ ಭಟ್ ಹುಳೇಗಾರು

ಹವ್ಯಾಸಿ ಲೇಖಕರು, ಬೆಂಗಳೂರು


web counter

إرسال تعليق

0 تعليقات
إرسال تعليق (0)
To Top