ಗೃಹರಕ್ಷಕ ದಳ ಆವರಣದಲ್ಲಿ 2.25 ಲಕ್ಷ ರೂ ವೆಚ್ಚದಲ್ಲಿ ಪುಷ್ಪೋದ್ಯಾನ ನಿರ್ಮಾಣ

Upayuktha
0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಆವರಣಕ್ಕೆ ಸುಂದರ ಉದ್ಯಾನವನ ಮೆರುಗು ತಂದಿದೆ. ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ 2.25 ಲಕ್ಷ ರೂ. ವೆಚ್ಚದಲ್ಲಿ ಬಣ್ಣ ಬಣ್ಣದ ಹೂವುಗಳ ಹಾಗೂ ವಿವಿಧ ಹಣ್ಣುಗಳ ಗಿಡಗಳನ್ನು ನೆಡಲಾಗಿದೆ.


ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿಯ ಎಡ ಭಾಗದಲ್ಲಿ ಸುಮಾರು ಒಂದು ಸಾವಿರ ಚದರ ಅಡಿ ಜಾಗದಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಅವರ ಮನವಿ ಮೇರೆಗೆ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ತಕ್ಷಣ ಸ್ಪಂದಿಸಿ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಿಂದ 2.25 ಲಕ್ಷ ರೂ. ಮಂಜೂರು ಮಾಡಿದ್ದಾರೆ.


ಗೃಹರಕ್ಷಕ ದಳದ ಮಹಾ ಸಮಾದೇಷ್ಟ, ಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಅವರು ಮಾ.30ರಂದು ಗೃಹರಕ್ಷಕದಳದ ಜಿಲ್ಲಾ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಕಚೇರಿ ಆವರಣದಲ್ಲಿ ತ್ಯಾಜ್ಯ ತುಂಬಿರುವುದನ್ನು ವೀಕ್ಷಿಸಿ ಅಸಮಾಧಾನ ವ್ಯಕ್ತಪಡಿಸಿದ ಡಿಜಿಪಿಯವರು ತಕ್ಷಣ ಶುಚಿಗೊಳಿಸಿ, ಪರಿಸರದಲ್ಲಿ ಗಿಡಗಳನ್ನು ನೆಡುವಂತೆ ಸೂಚಿಸಿದ್ದರು. ಅವರ ಸೂಚನೆಯನ್ನು ಧನಾತ್ಮಕವಾಗಿ ಸ್ವೀಕರಿಸಿ, ಪ್ರಾಯೋಜಕತ್ವದ ಮೂಲಕ ಉದ್ಯಾನವನ ನಿರ್ಮಾಣ ಮಾಡಲಾಗಿದೆ ಎಂದು ಡಾ.ಚೂಂತಾರು ತಿಳಿಸಿದ್ದಾರೆ.


*ಹಸಿರು ಪರಿಸರಕ್ಕೆ ಒತ್ತು: ಗೃಹರಕ್ಷಕದಳ ಕಳೆದ 5 ವರ್ಷಗಳಿಂದ ಹಸಿರು ಪರಿಸರ ನಿರ್ಮಾಣ ಹಾಗೂ ಜಾಗೃತಿ ಮೂಡಿಸುವಲ್ಲಿ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿರುವ ಪ್ರತಿ ಗೃಹರಕ್ಷಕರು ಒಂದೊಂದು ಗಿಡ ನೆಡಲು ಸಂಕಲ್ಪ ಕೈಗೊಂಡಿದ್ದಾರೆ. 5 ವರ್ಷಗಳಲ್ಲಿ 5 ಸಾವಿರಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದಾರೆ, ಈ ವರ್ಷವೂ ಅರಣ್ಯ ಇಲಾಖೆಯಿಂದ ಗಿಡ ಪಡೆಯಲು ನಿರ್ಧರಿಸಲಾಗಿದೆ. ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಸಹಕಾರದಲ್ಲಿ ನೆಟ್ಟಿರುವ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ.




ಗೃಹರಕ್ಷಕದಳದ ಜಿಲ್ಲಾ ಕಚೇರಿ ಆವರದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಿ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಹೂವುಗಳು ಅರಳಿ ನಿಂತಾಗ ಮತ್ತಷ್ಟು ಆಕರ್ಷಣೀಯವಾಗಿ ಕಾಣಿಸಲಿದೆ. ಪ್ರಾಯೋಕತ್ವ ನೀಡಿದ ಕರ್ಣಾಟಕ ಬ್ಯಾಂಕ್‌ಗೆ ಅಭಾರಿ.

-ಡಾ.ಮುರಲೀ ಮೋಹನ್ ಚೂಂತಾರು

ಕಮಾಂಡೆಂಟ್ ಗೃಹರಕ್ಷಕದಳ ದ.ಕನ್ನಡ




ಗೃಹರಕ್ಷಕದಳ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯಲ್ಲಿ ಅವರ ಅವಶ್ಯಕತೆ ಈಡೇರಿಸಲು ಸಹಕಾರ ನೀಡಿದ್ದೇವೆ. ಉದ್ಯಾನವನ ಗೃಹರಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಸಮಾಜಕ್ಕಾಗಿ ಶ್ರಮಿಸುವ ಅವರಿಗೆ ಮುಂದಿನ ದಿನಗಳಲ್ಲಿ ಬ್ಯಾಂಕ್ ವತಿಯಿಂದ ಮತ್ತಷ್ಟು ಕೊಡುಗೆ ನೀಡಲು ಬದ್ಧ.

-ಮಹಾಬಲೇಶ್ವರ ಎಂ.ಎಸ್.

ಎಂ.ಡಿ. ಕರ್ಣಾಟಕ ಬ್ಯಾಂಕ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top