ಜುಲೈ 24ರಂದು ಮಂಗಳೂರಿನಲ್ಲಿ ದ.ಕ ಜಿಲ್ಲಾ 9ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ

Upayuktha
0
ಕಲಾ ವೈವಿಧ್ಯ ಮತ್ತು ಬೃಹತ್ ವಿದ್ಯಾರ್ಥಿ ಸನ್ಮಾನ


ಮಂಗಳೂರು: ಜುಲೈ 24 ರಂದು ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಸಿರಿ ಚಾವಡಿ ಸಭಾಂಗಣದಲ್ಲಿ ಯೋಧ ದಿವಂಗತ ತಾರಾನಾಥ ಬೋಳಾರ್ ವೇದಿಕೆಯಲ್ಲಿ 9ನೇ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ, ಕಲಾ ವೈವಿಧ್ಯ ಮತ್ತು ಬೃಹತ್ ವಿದ್ಯಾರ್ಥಿ ಸನ್ಮಾನವನ್ನು ಆಯೋಜಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಸಹಕಾರದೊಂದಿಗೆ ನಡೆಯುವ ಸಮ್ಮೇಳನವನ್ನು ಬೆಳಿಗ್ಗೆ 9.30 ಕ್ಕೆ ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ದೀಪ ಪ್ರಜ್ವಲಿಸಿ ಉದ್ಘಾಟಿಸುವರು.


ಸಮ್ಮೇಳನವು ಹಿರಿಯ ಕನ್ನಡ ತುಳು ದ್ವಿಭಾಷಾ ಕವಿ ಸಾಹಿತಿ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ನೂರು ಮಂದಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ ಅವರು 'ಮಂಜರಿ' ಕೃತಿಯನ್ನು ಲೋಕಾರ್ಪಣೆ ಮಾಡುವರು.


ಮೊಟ್ಟ ಮೊದಲ ಬಾರಿಗೆ ತುಳು ಲಿಪಿಯಲ್ಲಿ ಬರೆಯಲ್ಪಡುವ ಚುಟುಕು ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ಸಾರ್ ಅವರು ಅವರು ಅನಾವರಣಗೊಳಿಸಿ ಮಾತಾಡುವರು.ಜನಪ್ರಿಯ ವ್ಯಂಗ್ಯಚಿತ್ರಗಾರ ಗೋಪಿ ಹಿರೇಬೆಟ್ಟು ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಇದರ ಕೇಂದ್ರ ಸಂಚಾಲಕರಾಗಿರುವ ಎಂ.ಜಿ.ಆರ್ ಅರಸ್ ಅವರು ಉದ್ಘಾಟನೆ ಮಾಡುವರು. ದ ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಪ್ರಸ್ತಾವಿಕವಾಗಿ ಮಾತನಾಡುವರು.


ಯುವ ಉದ್ಯಮಿ ರವೀಶ್ ಬೋಳಾರ್, ಕೋಟೆಕಾರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನಮನೆ ಕೋಟೆಕಾರುಗುತ್ತು, ಕನ್ನಡ ಸಾಹಿತ್ಯ ಪರಿಷತ್ತಿನ  ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ.ಮಂಜುನಾಥ್ ರೇವಣ್ಕರ್, ಉದ್ಯಮಿ ನಾರಾಯಣ ಮೂಳೂರು, ಶ್ರೀ ಕೆ ಭುವನಾಭಿರಾಮ ಉಡುಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಡಾ.ರತ್ನಾ ಹಾಲಪ್ಪ, ದ ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಸಮ್ಮೇಳನದ ಕಾರ್ಯಾಧ್ಯಕ್ಷ ಕಾ.ವೀ. ಕೃಷ್ಣದಾಸ್ ಉಪಸ್ಥಿತರಿರುವರು. ಉದ್ಘಾಟನಾ ಸಮಾರಂಭದಲ್ಲಿ ಇತ್ತೀಚೆಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರಿಗೆ ಗೌರವ ಸನ್ಮಾನವನ್ನು ಏರ್ಪಡಿಸಲಾಗಿದೆ ಜೊತೆಗೆ  ಸಮ್ಮೇಳನದ ಲಾಂಛನ ವಿನ್ಯಾಸ ಮಾಡಿದ ವಿಜಯವಾಣಿ ಪತ್ರಿಕೆಯ ಉಪಸಂಪಾದಕ ರಾಜೇಶ್ ದೋಟ ಆವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.


ಬೆಳಿಗ್ಗೆ 11 ಗಂಟೆಗೆ ಜನಪ್ರಿಯ ಚುಟುಕು ಕವಿ,ಸಾಹಿತಿ ವಿ. ಶಾಂತರಾಮ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದ್ದು ಗೋಷ್ಠಿಯಲ್ಲಿ ಜಿಲ್ಲೆಯ 33 ಕವಿ ಕವಯತ್ರಿಯರು ಭಾಗವಹಿಸಲಿದ್ದಾರೆ.


ಮಧ್ಯಾಹ್ನ 2 ರಿಂದ ಜನಪ್ರಿಯ ಕವಿ ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು ಕನ್ನಡ, ಹವ್ಯಕ, ಅರೆಭಾಷೆ, ಕೊಂಕಣಿ, ತುಳು, ಬ್ಯಾರಿ, ಮಲಯಾಳಂ, ಕರಾಡ, ಇಂಗ್ಲಿಷ್, ಹಿಂದಿ, ತಮಿಳು, ಶಿವಳ್ಳಿ, ಕೊರಗ ಭಾಷೆ, ಮರಾಠಿ ಹೀಗೆ 14 ಭಾಷೆಗಳಲ್ಲಿ ಕವಿತಾ ವಾಚನ ನಡೆಯಲಿದೆ.


ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ವಿದ್ಯಾರ್ಥಿ ಸನ್ಮಾನ ನಡೆಯಲಿದ್ದು ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ಸಾರ್ ಅವರು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಿದ್ದಾರೆ. ತುಳು ನಾಟಕರಂಗ ಮತ್ತು ತುಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ನೂರು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸುವರು.


ಸಮ್ಮೇಳನದ ಕಾರ್ಯಾಧ್ಯಕ್ಷ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಆಶಯ ಭಾಷಣ ಆಡುವರು.ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಖ್ಯಾತ ಲೆಕ್ಕ ಪರಿಶೋಧಕ ಸಿಎ ಎಸ್ ಎಸ್ ನಾಯಕ್, ಉದ್ಯಮಿ ಸಂಘಟಕ ಗುರುಪ್ರಸಾದ್ ಕಡಂಬಾರ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿರಿವರು.


ಚುಸಾಪ ಕೇಂದ್ರ ಸಮಿತಿ ಸಂಚಾಲಕ ಎಂಜಿಆರ್ ಅರಸ್, ಚುಸಾಪ ದ.ಕ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ದ.ಕ ಚುಸಾಪ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಇದರ ಅಧ್ಯಕ್ಷ ಚಂದ್ರಹಾಸ ಪಕ್ಷಿಕೆರೆ, ಕಾಸರಗೋಡು ಜಿಲ್ಲಾ ಚುಸಾಪದ ಅಧ್ಯಕ್ಷ ಶಿವರಾಮ ಕಾಸರಗೋಡು, ಮೈಸೂರು ಜಿಲ್ಲಾ ಚುಸಾಪದ ಅಧ್ಯಕ್ಷೆ ಡಾ.ರತ್ನ ಹಾಲಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.


ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

********

ಧರ್ಮದರ್ಶಿ ಡಾ|ಹರಿಕೃಷ್ಣ ಪುನರೂರು, ಸಾಹಿತಿ ಡಾ.ಸುರೇಶ್ ನೆಗಳಗುಳಿ,ರಂಗನಟ ಚಿತ್ರನಟ ರಮೇಶ್ ರೈ ಕುಕ್ಕುವಳ್ಳಿ, ಪತ್ರಕರ್ತ ವಿಜಯಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾದ  ಆರಿಫ್ ಪಡುಬಿದ್ರಿ, ಹಿರಿಯ ಸಾಹಿತಿ ಸದಾನಂದ ನಾರಾವಿ, ಹಿರಿಯ ರಂಗ ಭೂಮಿ ಕಲಾವಿದ ಸುಂದರ್ ರೈ ಮಂದಾರ, ಉಪನ್ಯಾಸಕ, ಲಿಪಿ ರಚನಾ ಸಮಿತಿ ಮತ್ತು ವಿಶ್ವವಿದ್ಯಾನಿಲಯದ ಬೇರಿ ಶಿಲೆಬಸ್ ಸಮಿತಿ ಸದಸ್ಯ ಪ್ರೊ| ಹೈದರಾಲಿ, ಹಿರಿಯ ಲೇಖಕಿ ಮತ್ತು ವಿದ್ವಾಂಸರಾದ ಡಾ ಮೀನಾಕ್ಷಿ ರಾಮಚಂದ್ರ, ರಾಜ್ಯದ ಖ್ಯಾತ ವ್ಯಂಗ್ಯಚಿತ್ರಕಾರ ಗೋಪಿ ಹಿರೇಬೆಟ್ಟು, ಲೇಖಕ ಪೊಲೀಸ್ ಇಲಾಖೆಯ ಶಾಂತಪ್ಪ ಬಾಬು, ಸಮ್ಮೇಳನದ ಲಾಂಛನ ವಿನ್ಯಾಸಗೊಳಿಸಿದ ಪತ್ರಕರ್ತ ರಾಜೇಶ್ ದೋಟ ಆವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.


ಬೃಹತ್ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ

*******

ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಒಟ್ಟು 500 ವಿದ್ಯಾರ್ಥಿಗಳು ಪರಿಷತ್ತಿನ ಶಿಕ್ಷಣ ಪ್ರತಿಭಾ ಸನ್ಮಾನಕ್ಕೆ ಅರ್ಜಿ ಸಲ್ಲಿಸಿದ್ದು 200 ಮಂದಿ ವಿದ್ಯಾರ್ಥಿಗಳನ್ನು ಜುಲೈ 24ರ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು.ಇನ್ನುಳಿದ 300 ವಿದ್ಯಾರ್ಥಿಗಳನ್ನು ಆಗಸ್ಟ್ 26ರಂದು ಮಂಗಳೂರಿನಲ್ಲಿ ನಡೆಯುವ ಸಮ್ಮೇಳನೋತ್ತರ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನಿಸಲು ಆಹ್ವಾನಿಸಲಾಗಿದೆ.


ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

******

ಸಮ್ಮೇಳನದಲ್ಲಿ ಸಾಹಿತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು ವಿಶ್ವ ವಿಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರಿಂದ ಹರಿಕಥಾ ಶೈಲಿಯ ವಿಶೇಷ ಜಾದೂ ಕಾರ್ಯಕ್ರಮ ನಡೆಯಲಿದೆ. ಕಲಾವಿದ ಜಗದೀಶ್ ಡಿ. ಕೆ ಅವರಿಂದ 'ಕಿರಿಕ್ ಕಿಟ್ಟಿ' ಹಾಸ್ಯರಂಜನೆ ನಡೆಯಲಿದೆ. ಸನಾತನ ನಾಟ್ಯಾಲಯ ತಂಡದಿಂದ 'ನಾಟ್ಯಾಂಜಲಿ' ನೃತ್ಯ ಕಾರ್ಯಕ್ರಮ ನಡೆಯಲಿದೆ.


ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ಸಮ್ಮೇಳನದ ಮಾಧ್ಯಮ ಸಮಿತಿ ಅಧ್ಯಕ್ಷ ರೇಮಂಡ್ ಡಿಕುನಾ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top