ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ವೈರಸ್‌ನ 4ನೇ ಪ್ರಕರಣ ದೆಹಲಿಯಲ್ಲಿ ಭಾನುವಾರ ಪತ್ತೆಯಾಗಿದೆ. ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆಯಿಲ್ಲದ 31 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ ಎಂದು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕುಮಾರ್ ಹೇಳಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದವರನ್ನು ಗುರುತಿಸಿ ಪ್ರತ್ಯೇಕ ವಾಸಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಕಿಪಾಕ್ಸ್ 70ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು 'ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ' ಎಂದು ಶನಿವಾರ ಘೋಷಿಸಿತ್ತು. ಜಾಗತಿಕವಾಗಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಐದು ಮಂದಿ ಸಾವನ್ನಪ್ಪಿದ್ದಾರೆ.