ಕಾರ್ಪೋರೇಟರ್ ಗಳಿದ್ದರೆ ಕೊಳ್ಳೆ ಹೊಡೆಯಲು ಬಿಡುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆ ವಿಳಂಬ ಹುನ್ನಾರ | ಪೂಜೆ ಮಾಡಿ, ಕಮಿಷನ್ ಹೊಡೆಯುವುದಷ್ಟೇ ಶಾಸಕರ ಕೆಲಸ | ಮಾಜಿ ಕಾರ್ಪೋರೇಟರ್ ಕೆಂಡಾಮಂಡಲ
ಬೆಂಗಳೂರು: ಕಾರ್ಪೋರೇಟರ್ ಗಳಿದ್ದರೆ ದುಡ್ಡು ಹೊಡೆಯಲು ತಮಗೆ ಆಗುವುದಿಲ್ಲ ಎಂದು ಬೆಂಗಳೂರು ನಗರದ ಬಿಜೆಪಿ ಶಾಸಕರು ಹಾಗೂ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಬೇಕಂತಲೇ ಮುಂದೂಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಆಡಳಿತ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದರೆ, ಜನರ ಕಷ್ಟಗಳಿಗೆ ಸ್ಪಂದಿಸ ಬೇಕೆಂಬ ಇಚ್ಛಾಶಕ್ತಿ ಇದ್ದರೆ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕಾರ್ಪೋರೇಟರ್ ಎಸ್.ಉದಯ್ ಕುಮಾರ್ ಹೇಳಿದರು.
ಮಹಾದೇವಪುರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2 ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಬಿಬಿಎಂಪಿ ಅನಾಥವಾಗಿದೆ. ನಾಗರಿಕರ ಸಮಸ್ಯೆಗಳನ್ನು ಆಲಿಸಲು ಸದಸ್ಯರಿಲ್ಲ. ಸುಪ್ರೀಂಕೋರ್ಟ್ 8 ವಾರಗಳ ಗಡುವು ನೀಡಿದ್ದರೂ ಸರ್ಕಾರ ಚುನಾವಣೆಗೆ ಮೀನಾಮೇಷ ಎಣಿಸುತ್ತಿದೆ ಎಂದು ಗುಡುಗಿದರು.
ಶಾಸಕರು ಇದ್ದಾರೆ ಅಲ್ಲಿ - ಇಲ್ಲಿ ಪೂಜೆ ಮಾಡುವುದಷ್ಟೇ ಕೆಲಸ. ಜನರ ಕೈಗೆ ಸಿಗುವುದಿಲ್ಲ. ಕಮಿಷನ್ ಹೊಡೆಯಲು ಕಷ್ಟವಾಗುತ್ತದೆ ಎಂದು ಬಿಜೆಪಿ ಶಾಸಕರು, ಸರ್ಕಾರ ಚುನಾವಣೆ ಬೇಡ ಎಂಬ ತೀರ್ಮಾನ ಮಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಬೆಂಗಳೂರು ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕಿದೆ. ಸ್ಥಳೀಯ ಕಾರ್ಪೋರೇಟರ್ ಗಳಿಲ್ಲದಿದ್ದರೆ ಖಂಡಿತಾ ಆ ಕೆಲಸ ಸಾಧ್ಯವಿಲ್ಲ. ಬೆಂಗಳೂರು ನಗರ ಬಹಳ ವಿಸ್ತಾರವಾಗಿದೆ. ಕಾರ್ಪೋರೇಟರ್ ಗಳ ಅವಶ್ಯಕತೆ ಇದ್ದೇ ಇದೆ. ಬೆಂಗಳೂರು ನಾಗರಿಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ನಡುವೆ ಸಂಪರ್ಕ ಕಡಿತವಾಗಬಾರದೆಂದರೆ ಕಾರ್ಪೋರೇಟರ್ ಗಳ ಆಯ್ಕೆ ನಡೆಯಲೇ ಬೇಕು. ಕೂಡಲೇ ಸರ್ಕಾರ ಚುನಾವಣೆ ನಡೆಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.
'ಜನಹಿತ' ಆ್ಯಪ್ ಷಡ್ಯಂತ್ರ
ಜನಹಿತ ಎಂಬ ಆ್ಯಪ್ ಮಾಡಿ, ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿ ಮತದಾರರ ಗುರುತಿನ ಚೀಟಿ ಸಂಖ್ಯೆ ಪಡೆದು ನೋಂದಾಯಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಯಾವ ಜನಹಿತ ಕಾಯುವ ಆ್ಯಪ್ ಅಲ್ಲ. ಚುನಾವಣೆ ನಿಟ್ಟಿನಲ್ಲಿ ನಡೆಸಿರುವ ಕುತಂತ್ರ. ಐಡಿ ಕಾರ್ಡ್ ಪಡೆದು ತಮ್ಮ ಮತದಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ನಾವು ಕಾರ್ಯಕರ್ತರಿಗೆ,ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸವನ್ನೂ ಮಾಡುತ್ತೇವೆ ಎಂದು ಎಚ್ಚರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ