||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನ್ಯಾನೋ ಕಥೆಗಳು-1

ನ್ಯಾನೋ ಕಥೆಗಳು-1

ಜಾತಿ ವ್ಯವಸ್ಥೆ 

ಆತ ಒಬ್ಬ ಕ್ರಾಂತಿಕಾರಿ ಯುವಕ. ಮೇಲ್ಜಾತಿಯಲ್ಲಿ ಹುಟ್ಟಿದ್ದರೂ ಜಾತಿ ವ್ಯವಸ್ಥೆಯ ಬಗ್ಗೆ ತೀರದ ಆಕ್ರೋಶ.  ಬದಲಾವಣೆ ತನ್ನಿಂದವೇ ಆಗಲಿ ಎಂದು ತಂದೆ ತಾಯಿಯರ ವಿರೋಧದ ನಡುವೆ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆ ಆದ. ಆತನ ಮಕ್ಕಳು ಈಗ ತಂದೆಯ ಜಾತಿಯನ್ನಾಗಲಿ ತಾಯಿಯ ಜಾತಿಯನ್ನಾಗಲಿ ಸ್ವೀಕರಿಸಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಬಾಳುತ್ತಿದ್ದಾರೆ. ಜಾತಿ ವ್ಯವಸ್ಥೆ ಮಾತ್ರ ಆತನ ಹಿಂದಿನಿಂದ ಯಥಾಸ್ಥಿತಿ ನಗುತ್ತಾ ಇದೆ.


*********

ಭ್ರಮ ನಿರಸನ

ನೂರೊಂದು ಕನಸುಗಳನ್ನು ಕಟ್ಟಿಕೊಂಡು ಹೆತ್ತು ಹೊತ್ತುಸಾಕಿ ಸಲಹಿ ವಿದ್ಯಾಭ್ಯಾಸ ಕೊಟ್ಟ ತಂದೆ ತಾಯಿಯರನ್ನು ಬಿಟ್ಟು ಅವನೊಡನೆ ಮುಂಬೈಯ ರೈಲು ಹತ್ತಿದ ಅವಳಿಗೆ ಸತ್ಯ ದರ್ಶನವಾದಾಗ ತುಂಬಾ ತಡವಾಗಿತ್ತು. ಒಂದು ಕ್ಷಣದ ತಪ್ಪಿಗೆ ಎಂತ ಬೆಲೆ ತೆರಬೇಕಾಯಿತೆನ್ನುವ ಸತ್ಯ ತಿಳಿದಾಗ ತನ್ನದೆಲ್ಲವನ್ನು ಕಳೆದುಕೊಂಡು ಬಿಟ್ಟಿದ್ದಳು. ಭ್ರಮ ನಿರಸನಗೊಂಡ ಮನಸ್ಸು ಆತ್ಮಹತ್ಯೆಗೆ ಶರಣಾಯಿತು.


**********

ಮುಖವಾಡ

ಅಭಿನವ್ ಒಬ್ಬ ಗೌರವಾನ್ವಿತ ವ್ಯಕ್ತಿ ಊರ ಪರವೂರ ಜನರೆಲ್ಲಾ ತುಂಬು ಗೌರವ ದಿಂದ ಅವನನ್ನು ನೋಡುತ್ತಿದ್ದರು. ಬಡ ಬಗ್ಗರಿಗೆ,ಕಷ್ಟದಲ್ಲಿರುವವರಿಗೆ ತನ್ನಿಂದಾದಷ್ಟು ಸಹಾಯ ಮಾಡುವ ಗುಣವನ್ನು ಹೊಂದಿದ್ದ ಅವನ ಬಗ್ಗೆ ಎಲ್ಲರೂ ತುಂಬು ಅಭಿಮಾನ  ಗೌರವವನ್ನು ಇಟ್ಟಿದ್ದರು. ಆದರೆ ಪೊಲೀಸರ  ಧಾಳಿಯಲ್ಲಿ ಆತನ ಮನೆಯೇ ಮಾದಕ ಜಾಲದ ಕೇಂದ್ರವೆಂದು ಸಾಬೀತಾದಾಗ ಎಲ್ಲವೂ ತಲೆಕೆಳಗಾಯಿತು


******

ವಿದ್ಯೆಯ ಬೆಲೆ

ರಂಗಣ್ಣ ತನ್ನ ನಾಲ್ಕು ಮಕ್ಕಳಿಗೆ ವಿದ್ಯೆಯ ಹೊರತು ಬೇರೇನನ್ನೂ ಕೊಡಲಾರದವನಾಗಿದ್ದ. ತನ್ನ ಮಕ್ಕಳಲ್ಲಿ ವಿದ್ಯೆ ಇದ್ದರೆ ಪ್ರಪಂಚದಲ್ಲಿ ಎಲ್ಲಿದ್ದರೂ ಬದುಕಬಹುದು, ನೀವೆಲ್ಲಾ ಚೆನ್ನಾಗಿ ವಿದ್ಯೆ ಬುದ್ದಿ ಕಲಿತು ಜಾಣರಾಗಿ ಎಂದು ಹೇಳುತ್ತಿದ್ದ. ರಂಗಣ್ಣನ ಕೊನೆಯ ಮಗ ಮಂಜೇಶನಿಗೆ ತಂದೆಯ ಉಪದೇಶ ಹಿಡಿಸುತ್ತಿರಲಿಲ್ಲ ಆತ ತನ್ನ ಶ್ರೀಮಂತ ಸಹಪಾಠಿಗಳ ಜತೆ ಸೇರಿ ವಿದ್ಯೆಯನ್ನು ನಿರ್ಲಕ್ಷಿಸಿದ. ವಿದ್ಯೆಯ ಬೆಲೆ ಆತನಿಗೆ ತಿಳಿಯುವಾಗ ಕಾಲ ಮಿಂಚಿತ್ತು.


******

ಆದರ್ಶ  ಶಿಕ್ಷಕಿ

ಬಡತನದಲ್ಲಿ ಬೆಳೆದ ಸಂತೋಷ ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿದ್ದು ಶಾಲೆಯಲ್ಲಿ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸಿ ಉತ್ತಮ ಸ್ಥಾನ ಪಡೆಯುತ್ತಿದ್ದ. ಬೂದಿ ಮುಚ್ಚಿದ ಕೆಂಡದಂತಿದ್ದ ಅವನ ಪ್ರತಿಭೆಯನ್ನು ಹೊರ ತರುವಲ್ಲಿ ಶಿಕ್ಷಕಿ ನೇಹಾಳ ಪಾತ್ರ ಪ್ರಮುಖವಾಗಿತ್ತು. ಸಂತೋಷನ ಪ್ರತಿಯೊಂದು ಚಟುವಟಿಕೆಗಳಿಗೂ ಪ್ರೋತ್ಸಾಹ ಕೊಟ್ಟು ಅವನ ಪ್ರತಿಭೆ ಹೊರತರುವಂತೆ ಮಾಡಿದ್ದರಿಂದ ಆತ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಿರುವ ಬಾಲಪ್ರತಿಭೆ ಎನ್ನುವ ಬಿರುದು ಪಡೆದು ಹೆತ್ತವರಿಗೂ ದೇಶಕ್ಕೂ ಕೀರ್ತಿ ತಂದ.


********


ಶ್ರಮದ ಬೆಲೆ

  

ಯಾವ ಕೆಲಸವನ್ನೂ ಮಾಡದೆ ಉಂಡಾಡಿಯಾಗಿ ತಿರುಗಾಡುತ್ತಿದ್ದ ಮಗನಿಗೆ, ರಾಮಣ್ಣ ನಿತ್ಯ ಬುದ್ದಿ ಹೇಳಿ ತನ್ನ ಜತೆ ಗದ್ದೆ ಉಳುಮೆಗೆ ಬರಲು ಹೇಳುತ್ತಿದ್ದ. ಅಲ್ಲಿ ಇಲ್ಲಿ ತಿರುಗಾಡುವುದೇ ಕಸುಬಾಗಿದ್ದ ಪ್ರಥಮನಿಗೆ ತಂದೆಯ ಮಾತುಗಳು ಹಿಡಿಸುತ್ತಿರಲಿಲ್ಲ. ಕೊರೊನಾ ಬಂದು ಸರಕಾರ ಲಾಕ್ ಡೌನ್ ಆದೇಶಿಸಿದಾಗ ಅನಿವಾರ್ಯವಾಗಿ ಮನೆಯಲ್ಲೇ ಉಳಿಯಬೇಕಾದಾಗ ಅವನನ್ನು ತಂದೆ ತನ್ನ ಜತೆ ಗದ್ದೆಗೆ ಕರೆದು ಕೊಂಡು ಹೋಗಿ ಉಳುಮೆ ಮಾಡುವುದನ್ನು ಕಲಿಸಿದ. ಕೆಲಸ ಮಾಡಿ ಅಭ್ಯಾಸವಿಲ್ಲದ ಆತ ದಣಿದರೂ ರಾತ್ರಿ ಮಲಗಿದ ಕೂಡಲೇ ಇಷ್ಟರ ತನಕ ಬಾರದೆ ಇದ್ದ ಸುಖ ನಿದ್ರೆ ಬಂದಾಗ ಶ್ರಮದ ಬೆಲೆ ಆತನಿಗೆ ಗೊತ್ತಾಯಿತು.

 

*******


ಮಾಡಿದ್ದುಣ್ಣೋ ಮಹರಾಯ

ವೃದ್ದಾಶ್ರಮದ ಬಾಗಿಲಲ್ಲಿ ಕುಳಿತ ಸಾಗರನಿಗೆ ಅಂದೇಕೋ ಬೇಡ ಬೇಡವೆಂದರೂ ಹಳೆಯ ನೆನಪುಗಳು  ಮನದಲ್ಲಿ ಸಾಗರದ ಅಲೆಗಳಂತೆ ಉಕ್ಕಿ ಉಕ್ಕಿ ಬರುತ್ತಿತ್ತು. ಚಿಕ್ಕಂದಿನಿಂದ ತನ್ನನ್ನು ಮುದ್ದಿಸಿ ತನ್ನ ಬೇಕು ಬೇಡಗಳನ್ನು ಪೂರೈಸುತ್ತಾ ತಮ್ಮ ಆಸೆ ಅಕಾಕ್ಷೆಗಳನ್ನೆಲ್ಲ ಬದಿಗೊತ್ತಿ ತನಗಾಗಿ ಕಷ್ಟಪಟ್ಟು ಹಗಲಿರುಳೂ  ಬೆವರು ಹರಿಸಿ ದುಡಿದ ತಂದೆಯನ್ನು ವೃದ್ದಾಪ್ಯದಲ್ಲಿ ತಾನು ಅನಾಥಾಶ್ರಮಕ್ಕೆ ಸೇರಿಸಿದಾಗ ಅವರು ಎಷ್ಟು ಬೇಸರ ದುಃಖ ಪಟ್ಟಿರಬಹುದು ಎನ್ನುವ ಒಂದು ಚಿಕ್ಕ ಯೋಚನೆ ತನಗೆ ಅಂದು ಬರುತ್ತಿದ್ದರೆ ತಾನು ಇಂದು ಈ ವೃದ್ಧಾಶ್ರಮದಲ್ಲಿ ಮಕ್ಕಳಿದ್ದು ಈ ರೀತಿ ಅನಾಥನಂತೆ ದಿನ ಕಳೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿದಾಗ ಪಶ್ಹಾತ್ತಾಪದಿಂದ ಸಾಗರನ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯಿತು. ತಂದೆಯನ್ನು ತಾನು ಅಂದು ನಡೆಸಿಕೊಂಡ ರೀತಿ ನೆನೆದು ಆತ ನಾಚಿಕೆಯಿಂದ ಮುಖ ಕೆಳಗೆ ಹಾಕಿ ಕುಳಿತುಕೊಂಡ.

**********

ಕಷ್ಟ

ತಂದೆ ಕಷ್ಟ ಪಟ್ಟು ದುಡಿದು ಸಂಪಾದಿಸುತ್ತಿದ್ದ ಹಣದಲ್ಲಿ ಗೆಳೆಯರೊಡನೆ ಪಿಕ್ನಿಕ್ ಎಂದು ಮಜಾ ಉಡಾಯಿಸುತ್ತಿದ್ದ  ಸಂಜೀವನಿಗೆ ತಂದೆಯ ಆಕಸ್ಮಿಕ ನಿಧನದಿಂದ 10 ರೂಪಾಯಿ ಸಂಪಾದಿಸುವುದೂ ಎಷ್ಟು ಕಷ್ಟ ಎನ್ನುವ ಅರಿವಾಯಿತು. ಮುಂದೆಂದೂ ಆತ ಹಣ ಪೋಲು ಮಾಡಲಿಲ್ಲ

 

- ಶ್ರೀಮತಿ ಪಂಕಜಾ ಕೆ.ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಕುರ್ನಾಡು, ದ.ಕ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post