ಯಾಂತ್ರೀಕರಣ ಪ್ರಕೃತಿಗೆ ಸುಸ್ಥಿರತೆಯನ್ನು ಕೊಡಬಹುದೇ?

Upayuktha
0

ಮೇ 25ನೇ ತಾರೀಕು ಚಾಪೆ ನೇಜಿಯ ಸಿದ್ಧತೆಯಲ್ಲಿ ತೊಡಗಿದ್ದೆ. ಮೊದಲೆಲ್ಲಾ ಬೀಜ ಬಿತ್ತುವುದು ಏಪ್ರಿಲ್ 15ರ ನಂತರ ಆಗ ಬೇಸಿಗೆ ಮಳೆ ಪ್ರಾರಂಭ. ಎತ್ತಿನಲ್ಲಿ ಹೂಟೆ ಮಾಡಿ ಹೆಂಟೆ ಏನಾದರೂ ಇದ್ದರೆ ಹುಡಿ ಮಾಡುವುದಕ್ಕೆ ಹಲಗೆ ಹೊಡೆದು ಬೀಜ ಬಿತ್ತುವ ಕ್ರಮ. ತಟ್ಟೆಯಲ್ಲಿ ಬೀಜ ಬಿತ್ತುತ್ತಿದ್ದಂತೆ ನನ್ನ ನೆನಪು 50 ವರ್ಷದ ಹಿಂದಕ್ಕೆ ಓಡಿತು. ಜೂನ್ ಒಂದಕ್ಕೆ ಮಳೆಗಾಲ ಪ್ರಾರಂಭವೆಂದೇ ಲೆಕ್ಕ. ನೇಜಿ ತೆಗೆದು ಸಾಲು ಹಿಡಿದು ನೆಡುವಲ್ಲಿ ಹೆಣ್ಣಾಳುಗಳದೇ ಮೇಲುಗೈ. ನೇಜಿ ನೆಡುವಾಗ ರಭಸದ ಮಳೆಯ ಉದಾಸೀನ ಹೋಗುವುದಕ್ಕೋಸ್ಕರ ಹಾಡುವ ತುಳು ಪಾಡ್ದನಗಳು, ಕೆಲವೊಮ್ಮೆ ಹಾಸ್ಯಗಳು, ಹಸಿದ ಹೊಟ್ಟೆಯನ್ನು ತಂಪಾಗಿಸುವ ಘಮಘಮಿಸುವ ಹಲಸಿನಹಣ್ಣು, ಹೆಕ್ಕುವ ನರ್ತೆಗಳು ಹಿಡಿಯುವ ಮೀನುಗಳು, ಏಡಿಗಳು ಇನ್ನು ನೆನಪು ಮಾತ್ರ. ಸೂರ್ಯ ಹುಟ್ಟುವುದಕ್ಕೆ ಮೊದಲೇ ಎದ್ದು, ಹೂಡುವ ಎತ್ತುಗಳಿಗೆ ಆಹಾರವನ್ನು ಇಟ್ಟು ತಿಂದಾದಮೇಲೆ ನೊಗ ನೇಗಿಲು ಗಳೊಂದಿಗೆ ಗದ್ದೆ ಎಡೆಗೆ ಸಾಗುವ, ನೇಗಿಲನ್ನು ಕಟ್ಟಿ ಎದುರು ನಿಂತು ಎತ್ತುಗಳಿಗೂ ಭೂಮಿಗೂ ನಮಸ್ಕರಿಸುವ ಆ ದಿನಗಳು ಇನ್ನೆಂದೂ ಕಾಣ ಸಿಗಲಾರದು. ಎತ್ತುಗಳನ್ನು ಪ್ರೀತಿಯಿಂದ ಮೈದಡವುತ್ತ, ಸಾಲು ಬಿಟ್ಟು ನಡೆದರೆ ಹೂಂಕರಿಸುತ್ತಾ, ಸಮಯ ಕಳೆಯುವುದಕ್ಕೆ ಒಮ್ಮೊಮ್ಮೆ ಸುಶ್ರಾವ್ಯವಾದ ನಾದ ಹೊರಡಿಸುತ್ತಾ, ನೇಗಿಲಿನ ತುದಿಯನ್ನು ಒಂದರ ಪಕ್ಕ ಒಂದ ರಂತೆ ಕೂರಿಸುತ್ತಾ ಹೋಗುವ ಕೃಷಿ ಸಂಸ್ಕೃತಿ ಸಂಪೂರ್ಣ ಮರೆಯಾಗಿ ಹೋಯಿತು. ಇಂದು ಎತ್ತುಗಳೂ ಇಲ್ಲ, ನೇಗಿಲುಗಳೂ ಇಲ್ಲ,ನೂರಕ್ಕೆ ನೂರು ಯಾಂತ್ರೀಕರಣ.


ಸುಮಾರು 40 ವರುಷಕ್ಕೆ ಹಿಂದೆಯೇ ಬಾಡಿಗೆಗೆ ದೊರೆಯುವ ಪವರ್ ಟಿಲ್ಲರ್ ಒಂದು ನಮ್ಮ ಮನೆಗೂ ಬಂತು. ಅದು ಸಾಗುತ್ತಿದ್ದಂತೆ ಆರು ಸಾಲು ನಡೆಯುವ ಎತ್ತುಗಳ ಹೂಟೆಯನ್ನು ಒಂದೇ ಸರ್ತಿಗೆ ಮಾಡುವುದನ್ನು ಕಂಡು ವಿಸ್ಮಿತರಾಗಿದ್ದೆವು. ಮುಂದೊಂದು ದಿನ ಪಾರಂಪರಿಕ  ಕೃಷಿ ಸಂಸ್ಕೃತಿಯನ್ನು ನಾಶಮಾಡಬಹುದು ಎಂಬ ಯಾವ ಕಲ್ಪನೆಯೂ ಇರಲಿಲ್ಲ. ಅದರ ಅನುಕೂಲವನ್ನು ನೋಡಿ ನಮ್ಮ ಮನೆಗೂ ಹೊಸತೊಂದು ಟಿಲ್ಲರ್ ಬಂತು. ನಾವೆಲ್ಲರೂ ಹೂಡಲು ಕಲಿತವರೇ. ನಮ್ಮ ಗದ್ದೆ ಶತಮಾನಗಳಷ್ಟು ಹಿಂದಿನದ್ದು. ಅಷ್ಟು ವರುಷಗಳಿಂದ ಬೇಸಾಯ ಮಾಡಿದರೂ ಆರು ಇಂಚಿಗಿಂತ ಜಾಸ್ತಿ ಹೂತು ಕೊಳ್ಳುತ್ತಿರಲಿಲ್ಲ. ನಿರಂತರ ಯಂತ್ರ ಹೂಟೆಯಿಂದಾಗಿ ಗದ್ದೆ ಹೂತುಕೊಳ್ಳುವ ಆಳ ಹೆಚ್ಚುತ್ತಾ ಬಂತು. ಪವರ್ ಟಿಲ್ಲರ್ನ ಸಾಮರ್ಥ್ಯ ಉಳುವವನ ರಟ್ಟೆಯ ಬಲವನ್ನು ಒಮ್ಮೊಮ್ಮೆ ಪರೀಕ್ಷಿಸುತ್ತಿತ್ತು.


ಹೊಸತಲೆಮಾರಿನ ಮಂದಿಗೆ ಗದ್ದೆ ಬೇಸಾಯದಲ್ಲಿ ಆಸಕ್ತಿ ಇಲ್ಲದ ಕಾರಣ ನಾಟಿಯನ್ನು ಕೂಡ ಯಂತ್ರದ ಮೂಲಕ ಮಾಡುವ ಪರಿಸ್ಥಿತಿ ಬಂತು.ರಾಕ್ಷಸಾಕಾರದ ಕೊಯ್ಲು ಯಂತ್ರ ಗದ್ದೆಯಲ್ಲಿ ಸಾಗಿದರೆ, ಒಂದರಿಂದ ಒಂದೂವರೆ ಅಡಿಯಷ್ಟು ಗುಂಡಿ ಬೀಳುವುದರಿಂದಾಗಿ ಪವರ್ ಟಿಲ್ಲರ್ ಮೂಲೆ ಸೇರಿತು. ಸಣ್ಣ ಟ್ರಾಕ್ಟರ್ ಗಳ ಸಾಮರ್ಥ್ಯ ಕುಂದಿ ದೊಡ್ಡ ದೊಡ್ಡ ಟ್ರ್ಯಾಕ್ಟರುಗಳು ಬರಬೇಕಾಯಿತು. ಅನೇಕ ಕಡೆ ಟ್ರ್ಯಾಕ್ಟರುಗಳು ಸಾಗದೆ ಜೆಸಿಬಿ ಯಂತ್ರದ ಮೂಲಕ ಎಳೆಸಿದ ಕತೆಯನ್ನು ಕೇಳಿದ್ದೇನೆ. ಹೆಚ್ಚು ಹೆಚ್ಚು ಅಶ್ವಶಕ್ತಿಯ ಯಂತ್ರಗಳು ಬರಬಹುದು ಆದರೆ ಮುಂದೆಂದೂ ಎತ್ತುಗಳಾಗಲಿ ಮನುಷ್ಯರಾಗಲಿ ಅದರಲ್ಲಿ ನಡೆಯುವುದು ಕಷ್ಟ ಎಂಬ ಪರಿಸ್ಥಿತಿ ಬರಬಹುದು. ಶಾಶ್ವತವಾಗಿ ಗದ್ದೆಗೆ ತಿಲಾಂಜಲಿಯನ್ನು ಕೊಡಬೇಕಾಗಬಹುದು.   

ನಮ್ಮ ಪಕ್ಕದ ಗದ್ದೆಯವರು ಯಾಂತ್ರೀಕರಣದತ್ತ ಮನ ಮಾಡಲಿಲ್ಲ. ಎತ್ತಿ ನಿಂದಲೇ ಹೂಡುತ್ತಿದ್ದ ಕಾರಣ ಹೂತುಕೊಳ್ಳುವುದು ಕಡಿಮೆ. ಹೊಸ ತಲೆಮಾರುಗಳ ನಿರಾಸಕ್ತಿಯಿಂದಾಗಿ ಇಂದು ಅದು ಗೋಮಾಳ ಆಗಿದೆ. ಕೆಲವೊಮ್ಮೆ ನನಗೆ ಯೋಚನೆಗೆ ಬರುವುದುಂಟು ನಿರಾಸಕ್ತಿ ಕೂಡ ಭವಿಷ್ಯದ ಬೇಸಾಯಕ್ಕೆ ಕೊಡುಗೆ ನೀಡಬಲ್ಲುದು. ಅದು ಕೂಡ ಪ್ರಕೃತಿ ನಿಯಮವೇ.


ಯಾಂತ್ರೀಕರಣ ಈಗಿನ ಅಗತ್ಯ ಇರಬಹುದು. ಆದರೆ ಅದು ಸುಸ್ಥಿರತೆಯನ್ನು ಖಂಡಿತ ಕೊಡಲಾರದು. ಪಾರಂಪರಿಕ ಪ್ರಕೃತಿಸಹಜ ಕೃಷಿಯೇ ಶಾಶ್ವತ.


-ಎ.ಪಿ ಸದಾಶಿವ ಮರಿಕೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top