||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಡ್ಡಿ ಬಗ್ಗೆ ವಾದ ನೆಡೆಯುತ್ತಿರಲಿ.... ಸ್ವಲ್ಪ ಪ್ಯಾಂಟ್ ಬಗ್ಗೆ ಮಾತಾಡೋಣ!!!

ಚಡ್ಡಿ ಬಗ್ಗೆ ವಾದ ನೆಡೆಯುತ್ತಿರಲಿ.... ಸ್ವಲ್ಪ ಪ್ಯಾಂಟ್ ಬಗ್ಗೆ ಮಾತಾಡೋಣ!!!


ಪ್ಯಾಂಟ್ ಬಗ್ಗೆ ಮಾತಾಡೋಣ ಅಂದರೆ ತೀರ ಪ್ಯಾಂಟ್ ಸುಡುವುದು, ಸುಡ್ತೀನಿ ಅಂದವರಿಗೆ ಪಾರ್ಸಲ್ ಕಳಿಸುವ ಕ್ಷುಲ್ಲಕ ವಿಚಾರಗಳು ಬೇಡ!!  


ಅಷ್ಟಕ್ಕೂ ಹಳೇ ಪ್ಯಾಂಟುಗಳನ್ನು ಕಳೆ ಮಿಷನ್‌ನಲ್ಲಿ ತೋಟದ ಕಳೆ ಹೊಡೆಯುವಾಗ ಮತ್ತು ತೋಟಕ್ಕೆ ಔಷಧಿ ಹೊಡೆಯುವಾಗ ಉಪಯೋಗಕ್ಕೆ ಬರುವುದರಿಂದ ಹಳೇ ಪ್ಯಾಂಟುಗಳನ್ನು ಸುಡುವ ಯಾವ ಆಂದೋಲನ ನೆಡೆದರೂ ಕೊಡುವುದಿಲ್ಲ!! 


ಹಾಗೆ ಕೊಡುವುದಾದರೆ ಅವನಿಗೆ ಕೊಡೋಣ...... "ಒಂದು ಸೆರಟು (ಶರ್ಟ್) ಕೊಡು, ಒಂದು ಹಳೇ ಪ್ಯಾಂಟು ಕೊಡು, ಒಂದು ದವಸ ಕೊಡು, ಶಕುನ ನುಡಿದೈತೆ, ಶ್ರೀ ಕೃಷ್ಣ ನುಡಿಯುತ್ತಿದ್ದಾನೆ, ಕೈ ಬಿಚ್ಚಿ ನೀಡು, ಮನೆಲೊಂದು ಶುಭ ಆಗತೈತೆ" ಅನ್ನು ಹಾಲಕ್ಕಿಗೆ ಕೊಡುವ!!.


***

ಸುಮಾರು ಕ್ರಿಸ್ತ ಪೂರ್ವ ಐದನೇ ಶತಮಾನದಲ್ಲಿ ಪರ್ಷಿಯನ್ನರು (ಈಗಿನ ಇರಾನ್‌ನಲ್ಲಿ) ಪ್ಯಾಂಟ್ ತೊಡುತ್ತಿದ್ದರಂತೆ.  Archaeological evidence (!!!?) ಪ್ರಕಾರ ಪ್ಯಾಂಟನ್ನು ಹೋಲುವ ಬಟ್ಟೆಯನ್ನು ಕ್ರಿಸ್ತ ಪೂರ್ವ 2900 ಧರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.


ನಂತರ, ಪೈಜಾಮ ರೀತಿಯ ಪ್ಯಾಂಟನ್ನು ಕ್ರಿಸ್ತ ಪೂರ್ವ 1200 ಮತ್ತು ಕ್ರಿಸ್ತ ಪೂರ್ವ 900 ರಲ್ಲಿ ಕುದುರೆ ರೇಸ್, ಕುದುರೆ ಮೇಲೆ ಪ್ರಯಾಣಿಸುವಾಗ ಪುರುಷರು ಮತ್ತು ಮಹಿಳೆಯರು ತೊಡುತ್ತಿದ್ದರು ಅಂತ ಮೇಲುಕೊಪ್ಪದಲ್ಲಿ ಕುಳಿತು ಗೂಗಲ್ ಸರ್ಚ್ ಮಾಡಿದಾಗ, ಗೂಗಲ್‌ನಲ್ಲಿ ದೊರೆಯುವ ಇತಿಹಾಸ ಹೇಳುತ್ತೆ. ಆಗಿನ ಚೀನ, ಗ್ರೀಕ್ ದೇಶಗಳಲ್ಲೂ ಯದ್ದ ಕಾಲದಲ್ಲಿ ಪ್ಯಾಂಟ್ ಧರಿಸುವ ಪದ್ದತಿ ಇತ್ತಂತೆ.


ಪ್ಯಾಂಟ್ ಕಂಡು ಹಿಡಿದವರು ಯಾರು ಅಂತ ಹುಡುಕಿ ಹೊರಟರೆ... ಸಿಂಪಲ್ ಆ್ಯನ್ಸರ್ 'ಗೊತ್ತಿಲ್ಲ' ಎನ್ನುವುದು ಗೂಗಲ್‌ನದೇ ದಾಖಲೆಯಲ್ಲಿ ಇರುವ ಸ್ಪಷ್ಟ ಉತ್ತರ!!! ನನ್ನದಲ್ಲ!!!


ಅಲ್ಲಿಂದ ನಂತರ ಅಧಿಕೃತವಾಗಿ ಸಿಗುವ ದಾಖಲೆಯಲ್ಲಿ, ಮಹಿಳೆಯರು ಮೊನ್ನೆ ಮೊನ್ನೆ ಅಂದರೆ ಕ್ರಿಸ್ತ ಶಕ 1800 (222 ವರ್ಷಗಳ ಹಿಂದೆ!!) ರಲ್ಲಿ ಇಂಗ್ಲೇಂಡಿನಲ್ಲಿ ಎಲಿಜಬತ್ ಸ್ಮಿತ್ ಮಿಲ್ಲರ್ ಅನ್ನುವ ಮಹಿಳೆ ಪ್ಯಾಂಟ್ ಧರಿಸಿದ್ದಳು ಅಂತ ಕತೆ ಇದೆ!! ನಂತರ ಅಮೇರಿಕಾದಲ್ಲಿ 1825 ಮಹಿಳೆಯರು ಪ್ಯಾಂಟ್ ಧರಿಸಲು ಶುರು ಮಾಡಿದರಂತೆ.


2016ರ ವಿಜಯದಶಮಿಯ ದಿನ RSS ಕೂಡ ತನ್ನ ಸಂಘ ಸ್ಥಾಪನೆಯ 90 ವರ್ಷಗಳ ನಂತರ ಯುನಿಫಾರಂ ಆಗಿ ಚಡ್ಡಿಯ ಬದಲಿಗೆ ಖಾಕಿ ಪ್ಯಾಂಟನ್ನು ಬದಲಾಯಿಸಿಕೊಂಡಿದೆ. 


**

ಇನ್ನು 1871 ರಲ್ಲಿ ಜೀನ್ಸ್ (ಬ್ಲೂ ಜೀನ್ಸ್) ಪ್ಯಾಂಟನ್ನು ಅಮೇರಿಕದಲ್ಲಿ ಮೊದಲು ಕಾರ್ಮಿಕರಿಗೆ ಧರಿಸಲು ಅನುಕೂಲ ಅಂತ ಹೊಲಿದು ಧರಿಸಲಾಯಿತಂತೆ.   ಈಗಂತು ಎಲ್ಲರೂ ಜೀನ್ಸ್ ಧರಿಸುತ್ತಾರೆ.  ಸ್ವಾರಸ್ಯಕರ ಒಂದು ವಿಷಯ ಅಂದ್ರೆ ಜೀನ್ಸ್ ಧರಿಸದೇ ಇರುವ ವಿಶ್ವದ ಏಕೈಕ ದೇಶವೆಂದರೆ ಉತ್ತರ ಕೊರಿಯಾ!!  (ಆ ದೇಶಕ್ಕೆ ಹೋಗೋದಾದರೆ ಇದೊಂದು ವಿಷಯ ನಿಮ್ಮ ನೆನಪಿನಲ್ಲಿ ಇರಲಿ!!) ಈ ಜೀನ್ಸ್ ಭಾರತಕ್ಕೆ ಬಂದಿದ್ದು 70-80 ರ ದಶಕದಲ್ಲಿ.  ಅದು ಲೆವಿಸ್ ಎನ್ನುವ ಕಂಪನಿ ತಂದಿದ್ದು (ಇಂಪೋರ್ಟ್).  1995 ರಲ್ಲಿ ಭಾರತದಲ್ಲೇ ಜೀನ್ಸ್ ಪ್ಯಾಂಟ್ ತಯಾರಿಸಲಾಯಿತು.  ಹಾಗೆ ಭಾರತದಲ್ಲಿ ಮೊದಲು ಜೀನ್ಸ್ ಪ್ಯಾಂಟ್ ತಯಾರಿಸಿದ ಕಂಪನಿಯ ಹೆಸರು ಅರವಿಂದ ಮಿಲ್ಸ್ ಅಂತ!!.


ಈಗೀಗ ಜೀನ್ಸ್ ಪ್ಯಾಂಟಿನ ಮಂಡಿ ಬಳಿಯಲ್ಲಿ ಇಲಿ ತಿಂದ ಹಾಗೆ ಹರಿದು ಹೋಗಿದ್ದರೆ, ಬ್ಲೂ ಜೀನ್ಸ್‌ನ ತೊಡೆ ಭಾಗದಲ್ಲಿ ಐರನ್ ಬಾಕ್ಸ್ ಇಟ್ಟು ಬಿಳಿಚಿಕೊಳ್ಳುವಂತೆ ಮಾಡಿದ್ದರೆ... ಅದು ಲೇಟೆಸ್ಟ್ ಸ್ಟೈಲು!!


**

ಇನ್ನು ಸಿನಿಮಾ ಜಗತ್ತಿನಲ್ಲಿ ಪ್ಯಾಂಟಿನ ಸ್ಟೈಲ್ ಆಗಾಗ ಬದಲಾಗುತ್ತಾ ಇರುತ್ತೆ. ಬ್ಲಾಕ್ & ವೈಟ್ ಸಿನಿಮಾ ಸಮಯದ ಚಾರ್ಲಿ ಚಾಪ್ಲಿನ್ ಕಾಲದಲ್ಲಿ ಪೈಜಾಮ ತರಹದ ಪ್ಯಾಂಟ್, ಆಮೇಲೆ ಬೆಲ್ ಬಾಟಮ್ ಪ್ಯಾಂಟ್, ಟೈಟ್ ಪ್ಯಾಂಟ್, ಮೂಲಂಗಿ ಪ್ಯಾಂಟ್, ಲೋ ವೆಯಿಸ್ಟ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್ ಅಂತೆಲ್ಲ ಎರಡು ಮೂರು ವರ್ಷಕ್ಕೆ ಬದಲಾಗ್ತಾ ಇದೆ.


70-80 ರ ದಶಕದಲ್ಲಿ ಪಾದದ ಬಳಿ ಗಂಟೆ ತರಹ ಕಾಣುವ ಒಂದು ಅಡಿಗಿಂತಲೂ ಅಗಲವಾದ ಪ್ಯಾಂಟಿನ ತುದಿ ಬಹಳ ಫ್ಯಾಷನ್ ಆಗಿತ್ತು. ಬೆಲ್ ಬಾಟಮ್ ಅಂತ ಅದರ ಹೆಸರು. 'ಬೆಲ್ ಬಾಟಮ್' ಹೆಸರಲ್ಲಿ ಸಿನಿಮಾ ಬರುವಷ್ಟು ಫೇಮಸ್ ಸ್ಟೈಲ್ ಅದು!!!.  


***


ಸ್ಟಾಂಡಪ್ ಕಾಮಿಡಿಯಲ್ಲಿ ಹೇಳುವ ಒಂದು ಜೋಕು ಹೀಗಿದೆ, ಈಗಿನ ಕಾಲೇಜ್ ಹೈಕಳು ಧರಿಸುವ ಲೋ ವೆಯಿಸ್ಟ್ ಪ್ಯಾಂಟಿನ ಬಗ್ಗೆ ಈ ಜೋಕು.


"ಇವತ್ತು ಲೋ ವೆಯಿಸ್ಟ್ ಪ್ಯಾಂಟ್ ಷರಟು ಧರಿಸಿದ ಯುವಕರನ್ನು ಕಂಡ್ರೆ ಒಂತರ ಹೆದರಿಕೆ ಆಗುತ್ತೆ!! 


"ಅದರಲ್ಲೂ ನಮಗೆ ನೆಗಡಿ ಇದ್ರೂ, ಅವರ ಬಳಿ ಹೋಗುವುದಕ್ಕೆ ಮತ್ತಷ್ಟು ಭಯ ಪಡಬೇಕು!! ಪ್ಯಾಂಟನ್ನು ಎಷ್ಟು ಕೆಳಗೆ ಕಟ್ಟಿಗೊಂಡಿರ್ತಾರೆ ಅಂದ್ರೆ.... ಕಾಲೇಜ್ ಹುಡುಗರ ಮುಂದೆ ಜೋರಾಗಿ ಸೀನುವುದಕ್ಕೂ ಭಯ ಆಗುತ್ತೆ!!" ಹಾಗಂತ ಜೋಕು ಹೇಳಿದ್ದು ಸುಧಾ ಬರಗೂರು. (ಬರಗೂರರ ಈ ಜೋಕನ್ನು ಯಾವುದೇ ಪರಿಷ್ಕರಣೆ ಇಲ್ಲದೆ ಯತಾವತ್ತಾಗಿ ಇಲ್ಲಿ ಕೊಡಲಾಗಿದೆ!!) 


ಹಾಂ, ಕೊನೆಯಲ್ಲೊಂದು ವಿಚಾರ...


ಮುಂದಿನ ಕೆಲವು ದಿನಗಳು ಪ್ಯಾಂಟನ್ನೂ ಸೇರಿ ಯಾವ ಬಟ್ಟೆಗಳನ್ನೂ ಹೊರಗಡೆ ಒಣಗಲು ಹರುಗುವುದು ಬೇಡ.  ಒಂದು ಮಳೆಗಾಲ, ಬಟ್ಟೆ ಒಣಗುವುದಿಲ್ಲ, ಇನ್ನೊಂದು ನಮ್ಮ ಬಹುತೇಕ  ಗಂಭೀರ ಜನಪ್ರತಿನಿಧಿಗಳಿಗೆ ಮತ್ತು ಅವರ ಕಾರ್ಯಕರ್ತರಿಗೆ ಕೆಲಸ ಇಲ್ಲ!!. ಕೆಲಸ ಇಲ್ಲದ ಅವರಲ್ಲಿ ಕೆಲವರು ಬಟ್ಟೆ ಸುಡುವ (ಚಡ್ಡಿ, ಹಿಜಾಬು, ಶಾಲು.... ಸದ್ಯದಲ್ಲೇ ಪ್ಯಾಂಟೂ ಇದಕ್ಕೆ ಸೇರಬಹುದು!!?) ಆಂದೋಲನದ ನೇತ್ರತ್ವ ವಹಿಸಿದ್ದರೆ, ಇನ್ನು ಕೆಲವರು ಆ  ಬಟ್ಟೆಗಳನ್ನು ಮನೆ ಮನೆಯಿಂದ ಸಂಗ್ರಹಿಸಿ ಕಳಿಸುವ ನೇತ್ರತ್ವ ವಹಿಸಿದ್ದಾರೆ.  


ಹೊರಗಡೆ  ಒಣಗಲು ಬಟ್ಟೆಗಳನ್ನು ಹರುಗಿ, ಆಮೇಲೆ ಹರುಗಿದ ಬಟ್ಟೆಗಳಲ್ಲಿ 40% ಬಟ್ಟೆಗಳನ್ನೂ ಯಾರಾದರು ಕದ್ದರೆ, "ಇಷ್ಟು ಗಂಭೀರ ರಾಜಕಾರಣಿಗಳನ್ನು ಓಟು ಕೊಟ್ಟು ಗೆಲ್ಲಿಸಿದೆವಲ್ಲ, ನಮ್ಮ ಪ್ಯಾಂಟ್ ತಗೊಂಡು ನಾವೇ ಹೊಡ್ಕೋಬೇಕು!!" ಅಂತ ಗೊಣಗುವ ಪರಿಸ್ಥಿತಿ ಬರುವುದು ಬೇಡ.  ಬಟ್ಟೆಗಳನ್ನು ಒಳಗಡೆಯೇ ಒಣಗಿಸಿ.


ಜವಾಬ್ದಾರಿಯುತ TRP ದೃಶ್ಯ ಮೀಡಿಯಾದವರು ಇಡೀ ದಿನ ಚಡ್ಡಿಯನ್ನು ಬ್ರೇಕಿಂಗ್ ನ್ಯೂಸ್ ಮಾಡ್ತಿದಾರೆ!!  ಅದೇ ಟಿವಿಯಲ್ಲಿ ನಾಳೆ ಪ್ಯಾಂಟಿನ ಬಗ್ಗೆ ಪ್ಯಾನಲ್ ಚರ್ಚೆ ಶುರುವಾದರೆ ನಾನೂ ಹೋಗಣಾ ಅಂತಿದಿನಿ.  ಪ್ಯಾಂಟಿನ ಬಗ್ಗೆ ನಿಮ್ಮ ಬಳಿ ಇನ್ನಷ್ಟು ಮಾಹಿತಿ ಇದ್ದರೆ ಕೊಡಿ!! 

-ಅರವಿಂದ ಸಿಗದಾಳ್, ಮೇಲುಕೊಪ್ಪ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post