|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೈಚಾರಿಕ ಸಂಘರ್ಷವಿರಲಿ, ಆದರೆ ಸತ್ಯ ಒಪ್ಪಿಕೊಳ್ಳೋಣ: ನಿತ್ಯಾನಂದ ವಿವೇಕ ವಂಶಿ

ವೈಚಾರಿಕ ಸಂಘರ್ಷವಿರಲಿ, ಆದರೆ ಸತ್ಯ ಒಪ್ಪಿಕೊಳ್ಳೋಣ: ನಿತ್ಯಾನಂದ ವಿವೇಕ ವಂಶಿ

ವಿವಿ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟಿಸಿ ವಿವೇಕಾನಂದ ಶಿಕ್ಷಣ ವಾಹಿನಿಯ ಸಂಸ್ಥಾಪಕರ ಮಾತು



ಮಂಗಳೂರು: ನಮ್ಮವರೊಂದಿಗೇ ನಾವು ಹೋರಾಡುವುದು ಅರ್ಥವಿಲ್ಲದ್ದು. ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ವೈಚಾರಿಕ ಸಂಘರ್ಷ ಇಲ್ಲಿ ಸಹಜ ಮತ್ತು ದೇಶದ ಬೆಳವಣಿಗೆಗೆ ಪೂರಕ. ಆದರೆ ಅಲ್ಲಿ ನಮ್ಮ ಗೆಲುವು ಮುಖ್ಯವಾಗಬಾರದು, ಸತ್ಯವನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ಬೇಕು, ಎಂದು ವಿವೇಕಾನಂದ ಶಿಕ್ಷಣ ವಾಹಿನಿಯ ಸಂಸ್ಥಾಪಕ ನಿತ್ಯಾನಂದ ವಿವೇಕ ವಂಶಿ ಅಭಿಪ್ರಾಯಪಟ್ಟರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ, 2021-22 ನೇ ಸಾಲಿನ ವಿದ್ಯಾರ್ಥಿ ಸಂಘವನ್ನುಉದ್ಘಾಟಿಸಿ ಮಾತನಾಡಿದ ಅವರು, ಚಿಂಥನ- ಮಂಥನದಿಂದ ಹುಟ್ಟುವ ವಿಷವನ್ನು ಕುಡಿಯಬಲ್ಲವನು, ಈ ವಾದ ವಿವಾದಗಳು ಕ್ಷುಲ್ಲಕ, ನಾವು ತಿಳಿದುಕೊಂಡಿರುವುದಕ್ಕೂ ಮೀರಿದ್ದು ಏನೋ ಇದೆ  ಎಂಬುದನ್ನು ಬೇಗನೆ ಅರ್ಥಮಾಡಿಕೊಂಡವನು ನಾಯಕನಾಗುತ್ತಾನೆ, ದೇಶದ ಆಸ್ತಿಯಾಗುತ್ತಾನೆ. “ಇತಿಹಾಸವನ್ನು ಇದ್ದಂತೇ ಸ್ವೀಕರಿಸಬೇಕು. ಯಾವುದೇ ವಿಚಾರವನ್ನು ಹೇರುವಿಕೆ ಸಲ್ಲ. ವಿವಾದಗಳ ಮೂಲಕ ನಾಯಕನಾಗಲು ಬಯಸುವವರ ಬಗ್ಗೆ ವಿದ್ಯಾರ್ಥಿಗಳು ಎಚ್ಚರದಿಂದಿರಬೇಕು. ಯಾವುದಕ್ಕೆ, ಯಾವ ಸಮಯದಲ್ಲಿ, ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ಎಚ್ಚರಿಕೆಯಿರಲಿ. ಉತ್ಸಾಹವನ್ನು ಸರಿಯಾಗಿ ಬಳಸಿಕೊಂಡು, ಮಧ್ಯಮ ಮಾರ್ಗದಲ್ಲಿ ನಿಂತು ಯೋಚಿಸಿದರೆ ಎಲ್ಲವೂ ಅರ್ಥವಾಗುತ್ತದೆ,” ಎಂದರು.  


ಮುಖ್ಯ ಅತಿಥಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರು ಮಾತನಾಡಿ, “ನನಗೆ ಸಿಕ್ಕ ಪ್ರಶಸ್ತಿ ರಾಜ್ಯಕ್ಕೇ ಸಿಕ್ಕ ಗೌರವ. ಕೃಷಿಕ ಯಾವತ್ತೂ ಪ್ರೀತಿಯಿಂದ ಕೆಲಸ ಮಾಡಬೇಕು. ಅವನು ಮಾಡುವ ಕೆಲಸದಿಂದ ಪ್ರಾಣಿ-ಪಕ್ಷಿಗಳಿಗೆ, ಇತರರಿಗೆ, ದೇಶಕ್ಕೇ ಲಾಭವಿದೆ. “ನಾನು ನೀರಿಲ್ಲದ ಭೂಮಿಯಲ್ಲಿ ಒಸರು ಮೂಡಿಸಲು ಹಗಲು ಕೂಲಿ ಕೆಲಸ ಮಾಡಿ ರಾತ್ರಿ ಸುಮಾರು 12 ಗಂಟೆಯವರೆಗೆ ಸುರಂಗ ಕೊರೆಯುತ್ತಿದ್ದೆ. 7 ನೇ ಸುರಂಗದಲ್ಲಿ ನೀರು ದೊರೆತಿದೆ. ಈಗ 350 ಕ್ಕೂ ಹೆಚ್ಚು ಅಡಿಕೆ, ತೆಂಗು, ಕೋಕೋ, ಕಾಳುಮೆಣಸು ಬೆಳೆಯಿತ್ತಿದ್ದೇನೆ,” ಎಂದು ತಮ್ಮ ಪಯಣವನ್ನು ವಿವರಿಸಿದರು. 


ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ರಾಷ್ಟ್ರೀಯ ಶಿಕ್ಷಣ ಪದ್ಧತಿ – 2020 ರ ಪ್ರಕಾರ ಶಿಕ್ಷಣ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಲ್ಲ. ಇದಕ್ಕೆ ಅಮೈ ಮಹಾಲಿಂಗ ನಾಯ್ಕ, ನಿತ್ಯಾನಂದ ವಿವೇಕ ವಂಶಿ ಯವರೇ ಉದಾಹರಣೆ. ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಕಾಲೇಜಿನ ಘನತೆ ಉಳಿಸಲು ಕಟಿಬದ್ಧರಾಗಿರಬೇಕು, ಎಂದರು. ಇದೇ ವೇಳೆ ಅಮೈ ಮಹಾಲಿಂಗ ನಾಯ್ಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರಾಂಶುಪಾಲರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  


ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ ಎ ಅತಿಥಿಗಳನ್ನು ಸ್ವಾಗತಿಸಿದರು. ದೀಪಕ್ ಮತ್ತು ತಂಡದ ಪ್ರಾರ್ಥನೆಯಿತ್ತು. ಶ್ರೀಲಕ್ಮೀ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್ ಧನ್ಯವಾದ ಸಮರ್ಪಿಸಿದರು. ಸಂಘದ ಕಾರ್ಯದರ್ಶಿ ಪ್ರಕಾಶ್, ಸಹ ಕಾರ್ಯದರ್ಶಿ ಅಂಕಿತಾ ಎಸ್, ಲಲಿತ ಕಲಾ ಸಂಘದ ಕಾರ್ಯದರ್ಶಿನಿ ಅಪರ್ಣಾ ಎಸ್. ಶೆಟ್ಟಿ, ಸಹ ಕಾರ್ಯದರ್ಶಿನಿ ಕಾವ್ಯಾ ಎನ್ ಕೆ ಮೊದಲಾದವರು ವೇದಿಕೆಯಲ್ಲಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈವಿಧ್ಯ ನೋಡುಗರ ಗಮನ ಸೆಳೆಯಿತು. 


ಮಹಾಲಿಂಗ ನಾಯ್ಕರ ನೀರಿನ ಪಾಠ

ಅಮೈ ಮಹಾಲಿಂಗ ನಾಯ್ಕ ಅವರು ತಮ್ಮ ಮಾತಿನುದ್ದಕ್ಕೂ ನೀರಿನ ಸಂರಕ್ಷಣೆಯ ಬಗ್ಗೆ ಕಾಳಜಿಯ ಮಾತುಗಳನ್ನಾಡಿದರು. ಮುಂದಿನ ಜನಾಂಗಕ್ಕೆ ನೀರು ಬೇಕೆಂದರೆ ನಾವೆಲ್ಲರೂ ಒಗ್ಗಟ್ಟಿನಿಂದ ನೀರುಳಿಸಬೇಕು. ನಾನು ಅಡಕೆಗೆ  ಮತ್ತು ತೆಂಗಿನ ಗಿಡಗಳಿಗೆ ಬೇಕಾದಷ್ಟೇ ನೀರುಣಿಸುತ್ತೇನೆ. ಜಮೀನಿಗೆ ಬೀಳುವ ಮಳೆಯ ನೀರೆಲ್ಲಾ ಸುರಂಗಕ್ಕೆ ಇಂಗುವಂತೆ ಮಾಡುತ್ತಿದ್ದೇನೆ. ಜನಸಂಖ್ಯೆ ಏರಿದಷ್ಟೂ ಹೆಚ್ಚುವ ನೀರಿನ ಬೇಡಿಕೆಯನ್ನು ಪೂರೈಸಲು ನಾವು ಇದನ್ನು ಮಾಡಬೇಕಿದೆ, ಎಂದ ಅವರು ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಬೇಕು ಎಂದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم