ಪುತ್ತೂರು: ನಮ್ಮ ಜೀವನ ಪ್ರಸ್ತುತ ದಿನಗಳಲ್ಲಿ ಸುಂದರವಾಗಿದೆ. ಆದರೆ ಮುಂದೆಯೂ ಹೀಗೆಯೇ ಇರಬೇಕಾದರೆ, ನಮ್ಮ ಮುಂದಿನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಈಗಲೇ ಯೋಚನೆ ಮಾಡಬೇಕು. ನಮ್ಮ ನಿರ್ದಿಷ್ಟವಾದ ಮುಂದಿನ ಗುರಿ ಏನು ಹಾಗೂ ಬೇರೆ ಬೇರೆ ಉದ್ಯೋಗಕ್ಕೆ ಹೋಗಬೇಕಾದರೆ ಯಾವ ರೀತಿಯ ಪೂರ್ವ ತಯಾರಿಗಳನ್ನು ನಡೆಸಬೇಕೆಂದು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಇಂಡಿವೀಜುವಲ್ ಡೆವಲಪ್ಮೆಂಟ್ ಸಂಸ್ಥೆಯ ನಿರ್ದೇಶಕ ಪ್ರೊ. ರೋನಾಲ್ಡ್ ಪಿಂಟೋ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿಜ್ಞಾನ ಘಟಕ, ಉದ್ಯೋಗ ಮಾಹಿತಿ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಉದ್ಯೋಗ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜು ಜೀವನದಿಂದ ಒಂದು ಸಂಸ್ಥೆಗೆ ಉದ್ಯೋಗಕ್ಕೆ ಹೋಗುವ ಮುನ್ನವೇ ತಯಾರಿ ಮಾಡಿಕೊಳ್ಳಬೇಕು. ಒಂದು ಕ್ಯಾಂಪಸ್ ಮತ್ತು ಕಂಪೆನಿಗೆ ಅಜಗಜಾಂತರ ವ್ಯತ್ಯಾಸವಿದೆ. ಆಧುನಿಕ ಜಗತ್ತಿನಲ್ಲಿ ಜ್ಞಾನ ಅನ್ನೋದು ಆಧುನಿಕ ವಿಜ್ಞಾನವಿದ್ದ ಹಾಗೆ. ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಉದ್ಯೋಗಗಳಿಗೆ ಪೂರ್ವ ತಯಾರಿ ಮಾಡಬೇಕು. ಜೀವನ ಅನ್ನೋದು ಸುಲಭವಾಗಿಲ್ಲ.ಕಷ್ಟ ನಷ್ಟ ಗಳನ್ನು ಎದುರಿಸುವ ಧೈರ್ಯ ಇರಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಪಿ ಮಾತನಾಡಿ ವಿದ್ಯಾರ್ಥಿಗಳು ಓದುವ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ಜ್ಞಾನ ಸಂಪಾದನೆಯಿಂದ ಉತ್ತಮ ಉದ್ಯೋಗಗಳನ್ನು ಪಡೆಯಲು ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಸ್ವ ಅಧ್ಯಯನವನ್ನು ಮಾಡಿಕೊಂಡು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ತಮ್ಮ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಂಡು ತನ್ನ ಗುರಿಯ ಕಡೆಗೆ ಕಾಲಿಡಬೇಕು. ಇಂದಿನ ದಿನಗಳಲ್ಲಿ ಮಾಹಿತಿ ಹಾಗೂ ಅವಕಾಶಗಳಿಗೆ ಕೊರತೆ ಇಲ್ಲ. ವಿಜ್ಞಾನ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಕಲ್ಪನೆಗಳನ್ನು ಮೂಡಿಸಿಕೊಳ್ಳಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಪೇಕ್ಷಾ ಪ್ರಾರ್ಥಿಸಿದರು. ಐಕ್ಯೂಎಸಿ ಘಟಕದ ಸಂಯೋಜಕರು ಹಾಗೂ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಕೆ ಎಸ್ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ನಿಶಾ.ಎನ್ ವಂದಿಸಿದರು. ತೃತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರೀವರದಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ