ಉಜಿರೆ: ಕಾವ್ಯಕ್ಕೆ ಒಂದು ನಿರ್ದಿಷ್ಟ ಸ್ವರೂಪವನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಆಂತರಿಕ ಭಾವನೆಗಳ ಸ್ಫೋಟದಿಂದ ಕಾವ್ಯವು ತನ್ನ ಸ್ವರೂಪವನ್ನು ತಾನೇ ಪಡೆದುಕೊಳ್ಳುತ್ತ ಹೊರಬರುತ್ತದೆ. ಹಾಗಾಗಿ ಅದಕ್ಕೆ ಒಂದು ನಿಶ್ಚಿತವಾದ ಸ್ವರೂಪವನ್ನು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ. ಪಂಪನ ಕಾಲದ ಕಾವ್ಯಕ್ಕೂ ಇಂದಿನ ಕಾಲದ ಕಾವ್ಯಕ್ಕೂ ಅಗಾಧ ಅಂತರ ಕಂಡು ಬರುವುದು ಈ ಕಾರಣದಿಂದ ಎಂದು ಹಿರಿಯ ಕವಿ- ಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಜಿರೆಯ ಎಸ್. ಡಿ. ಎಂ. ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಉಜಿರೆಯಲ್ಲಿ ಏರ್ಪಡಿಸಿದ್ದ ಕವಯಿತ್ರಿ ಪಿ. ಕೆ. ಸುಲೋಚನಾ ಅವರ 'ಕೊಡುವ ಮೊದಲು' ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ಒಂದು ನಿರ್ದಿಷ್ಟ ಕಾಲಘಟ್ಟದ ಅನುಭವ ಕವಿಯ ಹೃದಯದಿಂದ ಅಡಕವಾಗಿ ಸಾಂದ್ರವಾಗಿ ಸಂಕ್ಷಿಪ್ತವಾಗಿ ಮತ್ತು ಅರ್ಥಗರ್ಭಿತವಾಗಿ ಹೊರಹೊಮ್ಮಿದರೆ ಅದನ್ನು ಕಾವ್ಯ ಅನ್ನಬಹುದು. ಸುಲೋಚನಾ ಅವರ ಕೃತಿಯಲ್ಲಿ ಅಂತಹ ಸೂಚನೆ ಕಂಡುಬರುತ್ತದೆ ಎಂದು ಡಾ. ಪೆರ್ಲ ಅವರು ಹೇಳಿದರು.
ದೀಪ ಪ್ರಜ್ವಲನೆ ಮಾಡಿ ಮಾತಾಡಿದ ಪ್ರಾಂಶುಪಾಲ ಡಾ. ಪಿ. ಎನ್. ಉದಯಚಂದ್ರ ಅವರು ಕಾಲೇಜಿನ ಯುವ ಸಮೂಹಕ್ಕೆ ಶಿಕ್ಷಣದೊಂದಿಗೆ ಇತರ ಜ್ಞಾನಗಳ ಅವಕಾಶ ಒದಗುವಂತೆ ಮಾಡುವುದು ನಮ್ಮ ಧ್ಯೇಯ. ಸಾಹಿತ್ಯ ಸಂವರ್ಧನೆ ಅಂಥವುಗಳಲ್ಲಿ ಒಂದು ಎಂದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ.ಕ. ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ ಮಾತನಾಡಿ ರೆವೆನ್ಯೂ ಇಲಾಖೆಯ ಪುತ್ತೂರಿನ ಉಪ ತಹಶೀಲ್ದಾರ್ ಸುಲೋಚನಾ ಪಿ. ಕೆ. ಓರ್ವ ಕವಯಿತ್ರಿಯಾಗಿ ನಮ್ಮ ಮುಂದೆ ಬಂದಿರುವುದು ನಮಗೆ ಹೆಮ್ಮೆಯ ವಿಚಾರ. ಅವರ ಇತರ ಸಾಹಿತ್ಯ ಕೃತಿಗಳು ಆದಷ್ಟು ಶೀಘ್ರ ಬೆಳಕು ಕಾಣುವಂತಾಗಲಿ ಎಂದು ಹಾರೈಸಿದರು.
ಸಾಹಿತ್ಯ ಪರಿಷತ್ ವತಿಯಿಂದ ಕವಯಿತ್ರಿಯನ್ನು ಗೌರವಿಸಲಾಯಿತು. ಸಾಹಿತ್ಯ ಮತ್ತು ಕ್ರೀಡೆ ತನ್ನ ಮೆಚ್ಚಿನ ಹವ್ಯಾಸವಾಗಿದ್ದು ಈಗ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆತಿರುವುದು ಸಂತಸ ತಂದಿದೆ ಎಂದು ಕವಯಿತ್ರಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತಾಡಿದ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅವರು ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಪೋಷಣೆ ಮತ್ತು ಸಂವರ್ಧನೆಯನ್ನು ನಿರಂತರ ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಾಹಿತ್ಯ ಕ್ಷೇತ್ರಕ್ಕೆ ಹೊಸಚೈತನ್ಯ ಮೂಡುವಂತಾದುದು ಸಂತೋಷದ ವಿಚಾರ ಎಂದರು.
ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಪಿ. ಸಂಪತ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಾಧ್ಯಾಪಕ ರಾಜಶೇಖರ ಹೊಸಮನೆ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ