||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ.... ಭಾಗ-3

ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ.... ಭಾಗ-3ಅಪಘಾತಕ್ಕೆ ಅವಸರವೇ ಕಾರಣ.. ಮುತ್ತಿನಂಥ ಮಾತು. ನಮ್ಮ ಸರಕಾರಿ ಬಸ್ಸುಗಳಲ್ಲಿ ಕಾಣಬರುವ ಈ ಬರಹ ಸಾಧಾರಣ ಎಲ್ಲ ಪ್ರಯಾಣಿಕರಿಗೂ ಮನನವಾಗಿರುತ್ತದೆ. ಅಲ್ಲವೇ ಮತ್ತೆ ಎಷ್ಟೊಂದು ಸತ್ಯ ಅಡಗಿದೆ ಈ ವಾಕ್ಯದಲ್ಲಿ. ಅಪಘಾತಗಳಾಗಲು ಹಲವಾರು ಕಾರಣಗಳಿರಬಹುದು. ಆದರೆ ಅದರಲ್ಲಿ ಅವಸರದ ಪಾತ್ರವೇ ಪ್ರಧಾನವಾಗಿರುವುದು. ವಾಹನ ಚಾಲನೆ ಎನ್ನುವುದು ವೃತ್ತಿಯೂ ಹೌದು, ಹವ್ಯಾಸವೂ ಹೌದು. ಯಾರು ಇದನ್ನು ವೃತ್ತಿ ಎಂದು ಸ್ವೀಕರಿಸುವನೋ ಆತ ಸಾಧ್ಯವಾದಷ್ಟು ಪರಿಪೂರ್ಣನಾಗಿರಬೇಕಾಗುತ್ತದೆ.


ಹಾಗಾದರೆ ಹವ್ಯಾಸಿ ಚಾಲಕರು ಹೇಗೆ ಬೇಕಾದರೂ ಇರಬಹುದೆಂದಲ್ಲ. ರಸ್ತೆಯಲ್ಲಿ ಯಾವ ವಾಹನ ಓಡುತ್ತದೋ ಅದರ ಚಾಲಕನು ಪರಿಪೂರ್ಣನಾಗಿಯೇ ಇರಬೇಕು. ಆದರೆ ಹವ್ಯಾಸಿಗೆ ಜೀವನಕ್ಕೆ ಬೇರೆ ವ್ಯವಸ್ಥೆ ಇರುವುದರಿಂದ ಪ್ರಭುತ್ವ ಇಲ್ಲದಿದ್ದರೆ ಚಾಲನೆಯನ್ನು ಬಿಡಲೂ ಬಹುದು. ಆದರೆ ಚಾಲನೆಯೇ ವೃತ್ತಿಯಾಗಿ ಸ್ವೀಕರಿಸಿದವರಿಗೆ ಅದರಲ್ಲಿ ಸಂಪೂರ್ಣ ಪ್ರಭುತ್ವ ಇರಲೇಬೇಕು. ನಾನು ಸಾಧಾರಣ ಮೂವತ್ತೈದು ವರ್ಷಗಳಿಂದ ವೃತ್ತಿಪರ ಚಾಲಕನಾಗಿರುವುದರಿಂದ ನನ್ನ ಕೆಲವು ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕೆಂದಿದ್ದೇನೆ. ಕೆಲವಾದರೂ ಉಪಯೋಗಕ್ಕೇ ಬಂದರೆ ಈ ಲೇಖನ ಸಾರ್ಥಕವಾದಂತೇಯೇ.


ಮೊದಲಾಗಿ ಹೇಳುವುದಾದರೆ ನಾವೆಷ್ಟೇ ವಾಹನ ಚಾಲನೆಯಲ್ಲಿ ಪಳಗಿರಬಹುದು ಆದರೆ, ಪ್ರತಿಯೊಂದು ದಿನವೂ ನಮಗೆ ಕಲಿಯಬೇಕಾದದ್ದು ಬಹಳವಿದೆ ಎನ್ನುವ ಪ್ರಜ್ಞೆ ಇರಲೇಬೇಕು. ವಾಹನ ಮನೆಯಿಂದ ಹೊರಟ ಮೇಲೆ ಪುನಃ ಮನೆಗೆ ಬರುವಲ್ಲಿವರೆಗೆ ಚಾಲಕನಾದವನ ಜೀವ ಇನ್ನೊಬ್ಬರ ಕೈಯಲ್ಲಿ ಇರುತ್ತದೆ. ಅದೇರೀತಿ ಇನ್ನೊಬ್ಬರ ಜೀವವೂ ನಮ್ಮ ಕೈಯಲ್ಲಿರುತ್ತದೆ. ಆದ್ದರಿಂದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯವೇ. ನಾನು ವಾಹನ ಚಾಲನೆ ಕಲಿಯುವಾಗ ನನ್ನ ಗುರುಗಳು ಹೇಳಿದ ಮಾತೊಂದು ನನಗೆ ಈಗಲೂ ನೆನಪಿದೆ. ಅದೇನೆಂದರೆ ಕಾನೂನು ಅಥವಾ ನಿಯಮಗಳನ್ನು ಪ್ರತಿ ಶತ ನೂರರಷ್ಟು ಪಾಲಿಸಲೇ ಬೇಕು. ಆದರೆ ಯಾವಾಗ ತನ್ನ ಜೀವಕ್ಕೆ ಅಪಾಯವಿದೆ ಎಂಬ ಅರಿವುಂಟಾಗುತ್ತದೋ ಅಥವಾ ನಿಯಮ ಪಾಲನೆಯೇ ಮುಳುವಾಗುತ್ತದೋ ಆವಾಗ ನಿಯಮ ಮುರಿಯುವುದು ತಪ್ಪಲ್ಲ. ಆದರೆ ಇದು ಕೊನೆಯ ದಾರಿ. ಅಂತೆಯೇ ರಸ್ತೆ ನಿಯಮಗಳಿರುವುದು ನಮ್ಮ ಸುರಕ್ಷತೆಗೆ ಹೊರತು ಅದನ್ನು ಮುರಿದು ಅಹಂಕಾರ ತೋರಿಸಲಿಕ್ಕಲ್ಲ. ಕೆಲವರಿಗೆ ನಿಯಮಗಳನ್ನು ಪಾಲಿಸದೇ ಇರುವುದೆಂದರೆ ತಾನೇನೋ ಸಾಧಿಸಿದೆ ಎಂಬ ಭಾವವಿರಬಹುದು. ಆದರೆ ಅದು ಯಾವತ್ತಿಗಾದರೂ ಅಪಾಯಕ್ಕೆ ದಾರಿಯೇ. ಎಲ್ಲರೂ ನಿಯಮ ಪಾಲಿಸುವಾಗ ಅದ್ಯಾವನೋ ಒಬ್ಬ ನಿಯಮ ತಪ್ಪಿದರೂ ಅದು ಅನಾಹುತಕ್ಕೇ ಕಾರಣವೆಂಬ ಅರಿವು ಇರಬೇಕು.  


ಇನ್ನು ಕೆಲವರು ವಾಹನವನ್ನು ತೀರಾ ಓಡಿಸಲು ಕಷ್ಟವಾದಾಗ ಮಾತ್ರ ರಿಪೇರಿ ಮಾಡಿಸುವುದು. ಹೆಡ್ ಲೈಟಾಗಲಿ,  ಬ್ರೇಕ್ ಲೈಟಾಗಲಿ ಉರಿದರೂ ಸರಿ, ಇಲ್ಲದಿದ್ದರೂ ಸರಿ ಇವರಿಗೇನೂ ಬಿದ್ದು ಹೋಗಿಲ್ಲ. ಆದರೆ ಈ ಲೈಟುಗಳು ವಾಹನ ಓಡಿಸುವವನಿಗೆ ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯ ತನ್ನ ಹಿಂದಿನಿಂದ ಅಥವಾ ಎದುರಿಂದ ಬರುವ ವಾಹನಗಳಿಗೂ. ಉದಾಹರಣೆಗೆ ಎದುರಿನ ವಾಹನಕ್ಕೆ ಬ್ರೇಕ್ ಲೈಟ್ ಇಲ್ಲದೆ ಅದೆಷ್ಟೋ ಅಪಘಾತಗಳಾಗಿವೆ. ಕಾರಣ ಎಲ್ಲರಿಗೂ ತಿಳಿದಿರುವಂಥದ್ದೇ. ಅದೇರೀತಿ ರಾತ್ರಿಯಲ್ಲಿ ಎದುರಿನಿಂದ ಬರುವ ವಾಹನದಲ್ಲಿ ಒಂದೇ ಹೆಡ್ ಲೈಟ್ ಉರಿಯುತ್ತಿದ್ದರೆ ಅದನ್ನು ನಾವು ದ್ವಿಚಕ್ರ ವಾಹನವೆಂದು ಭಾವಿಸುತ್ತೇವೆ. ಒಂದು ವೇಳೆ ಬಲ ಬದಿಯ ಲೈಟ್ ಉರಿಯುತ್ತಿದ್ದರೆ ಪರವಾಗಿಲ್ಲ. ಎಡ ಬದಿಯ ಲೈಟ್ ಮಾತ್ರವಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಎರಡು ಬದಿಯ ಲೈಟ್ ಕೂಡ ಅತ್ಯವಶ್ಶವೇ. ಒಂದೇ ಲೈಟ್ ಕಂಡರೆ ತಕ್ಕಷ್ಟು ಅಂತರವಿಟ್ಟುಕೊಳ್ಳುವುದೇ ಜಾಣತನ. ಇನ್ನು ಕೆಲವರಿಗೆ ಒಂದು ಕೆಟ್ಟ ಅಭ್ಯಾಸವಿದೆ. ಹೆಡ್ ಲೈಟ್ ಯಾವಾಗ ಡಿಮ್ ಡೀಪ್ ಮಾಡಬೇಕೆಂಬ ಅರಿವಿಲ್ಲದಿರುವುದು ಅಥವಾ ಆ ನಿಯಮವನ್ನು ಉಪೇಕ್ಷಿಸುವುದು. ಇದರಿಂದ ಅದೆಷ್ಟೋ ವಾಹನಗಳು ಅಪಘಾತಕ್ಕೀಡಾಗಿವೆ. ಪ್ರಖರವಾದ ಬೆಳಕನ್ನು ಬಿಟ್ಟಾಗ ತನ್ನ ವಾಹನ ಎದುರಿನ ಚಾಲಕನಿಗೆ ಕಾಣದೇ ಇರುವುದರಿಂದ ವಾಹನದ ಪಥ ಬದಲಾಗಿ ಅಪಘಾತವಾದರೆ ಬೆಳಕು ಬಿಟ್ಟವನನ್ನೂ ಬಲಿ ಪಡೆಯದೆ ಇರದು. ಬೆಳಕಿನ ಕಥೆ ಹೀಗಾದರೆ ಕನ್ನಡಿಯ ಕಥೆ ಇನ್ನೊಂದು. 


ಪ್ರತಿಯೊಂದು ವಾಹನಕ್ಕೂ ಹಿಂಭಾಗ ಕಾಣುವಂಥ ಕನ್ನಡಿಗಳು ಇರುತ್ತವೆ. ಇವು ಶೋಕಿಗೆ ಇರುವುದಲ್ಲ. ನಿಜವಾಗಿಯೂ ಇವು ಸುರಕ್ಷಿತವಾದ ಚಾಲನೆ ಬಯಸುವವವನಿಗೆ ವರದಾನವೇ. ಹಾಗೂ ಈ ಕನ್ನಡಿಗಳು ಚಾಲಕನ ಮೂರನೇ ಕಣ್ಣುಗಳು. ಇದನ್ನು ಯಾರು ಕರಾರುವಕ್ಕಾಗಿ ಕ್ಲಪ್ತ ಸಮಯದಲ್ಲಿ ಬಳಸಿಕೊಳ್ಳುತ್ತಾನೋ ಆತ ಹಲವಾರು ಸಂಭಾವ್ಯ ಅಪಘಾತಗಳನ್ನು ತಪ್ಪಿಸಿದಂತೆಯೇ. ಸಾಧಾರಣ ಪ್ರತಿಶತ ತೊಂಭತ್ತೊಂಭತ್ತು ಪಥ ಬದಲಾಯಿಸುವಾಗ ಅಂದರೆ ಎಡ ಬಲಕ್ಕೆ ಹೋಗುವಾಗ ಕನ್ನಡಿಗಳನ್ನು ಉಪಯೋಗಿಸಿಕೊಳ್ಳದೆ ಹಟಾತ್ತಾನೆ ತಿರುಗಿದಾಗ ಅಪಘಾತ ಆಗದಿದ್ದರೆ ಅದು ಪವಾಡವೆಂದೇ ಹೇಳಬೇಕು. ಇತ್ತೀಚಿನ ಕೆಲವು ಯುವಕರು ದ್ವಿಚಕ್ರ ವಾಹನಕ್ಕೆ ಅಳವಡಿಸಿದ ಕನ್ನಡಿಗಳನ್ನು ಕಳಚಿಟ್ಟು ವಾಹನ ಚಲಾಯಿಸುವುದೂ ಒಂದು ಶೋಕಿ ಅಂದುಕೊಂಡಿದ್ದಾರೆ. ಮತ್ತೆ ಕೆಲವರು ಪೊಲೀಸರ ಕಣ್ಣಿಗೆ ಮಣ್ಣೆರಚಲಷ್ಟೇ ಈ ಕನ್ನಡಿಗಳ ಅವಶ್ಯಕತೆ ಎಂದು ಕೊಂಡಿದ್ದಾರೆ. ಅದೇನೇ ಇರಲಿ ಸೈಡ್ ಮಿರರ್ ಅನಿಸಿಕೊಂಡ ಈ ಕನ್ನಡಿಗಳನ್ನು ಯಾರು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾನೋ ಆತ ನಿಜವಾಗಿಯೂ ಪಳಗಿದ ಚಾಲಕನಾಗುತ್ತಾನೆ. ಯಾರಾತ ಹಿಂದೆ ಕತ್ತನ್ನು ಹೊರಳಿಸದೆ ಬರಿದೆ ಕನ್ನಡಿಗಳ ಮುಖಾಂತರ ವಾಹನವನ್ನು ಹಿಂದಕ್ಕೆ ಚಲಾಯಿಸಬಲ್ಲನೋ ಆತ ನಿಜವಾಗಿಯೂ ಪ್ರಬುದ್ಧನಾಗಿರುತ್ತಾನೆ. ಅಥವಾ ಇವತ್ತಿನ ವಾಹನ ದಟ್ಟಣೆಯ ಮಾರ್ಗಗಳಲ್ಲಿ ಅಷ್ಟು ಪ್ರಬುದ್ಧತೆ ಇರಲೇ ಬೇಕು. ಕೆಲವಾರು ಸಂದರ್ಭಗಳಲ್ಲಿ ನಾನು ನೋಡಿದ್ದೇನೆ ವಾಹನ ಮುಂದಕ್ಕೆ ಸರಿಯಾಗಿ ಚಲಾಯಿಸುವವರು ಕೂಡ ಹಿಂದಕ್ಕೆ ಚಲಾಯಿಸುವ ಪ್ರಸಂಗ ಬಂದಾದ ಕಕ್ಕಾಬಿಕ್ಕಿಯಾಗಿ ಎಡ ಬಲವೆಂದು ತಿಳಿಯದೆ ಎತ್ತೆತ್ತಲೋ ಹೊರಳಿಸಿ ಕಷ್ಟ ಪಡುತ್ತಾರೆ. ಇದು ಕಲಿಯುವಾಗ ಅತಿ ಶೀಘ್ರದಲ್ಲಿ ಚಾಲಕನಾಗಬೇಕೆಂದವರ ಕಥೆ.  


ಇನ್ನು ಕೆಲವು ವಿಚಾರಗಳು ಮಾರ್ಗವನ್ನು ನಾವು ಬಳಸಿಕೊಳ್ಳುವ ರೀತಿ. ಪ್ರಥಮವಾಗಿ ವಾಹನದ ವೇಗವನ್ನು ನಾವು ನಿಯಂತ್ರಿಸುವ ವ್ಯಾಪ್ತಿಯಲ್ಲೇ ಇಟ್ಟುಕೊಳ್ಳಬೇಕು. ಬದಲಾಗಿ ವೇಗವು ನಮ್ಮನ್ನು ನಿಯಂತ್ರಿಸಬಾರದು. ವೇಗವೆಂದರೆ ಅದು ನಮಗೆ ಅಥವಾ ಪ್ರಯಾಣಿಕರಿಗೆ ಹಿತ ತರುವಂತೆ ಇರಬೇಕೇ ವಿನಹ ಭಯ ಹುಟ್ಟಿಸುವಂತಿರಬಾರದು. ಯಾಕೆಂದರೆ ಪ್ರತಿಯೊಂದು ಪ್ರಯಾಣವೂ ನಮಗೂ ನಮ್ಮೆದುರಿನಿಂದ ಬರುವವನಿಗೂ ಸೌಖ್ಯವನ್ನು ಅನುಭವಿಸುವಂತಿರಬೇಕು. ರಸ್ತೆಗಳು ಯಾವ ರೀತಿಯಲ್ಲಿ ತಿರವುಗಳನ್ನು ಹೊಂದಿವೆ ಆ ಪ್ರಕಾರವೇ ನಿಧಾನವಾಗಿ ಸ್ಟೀಯರಿಂಗನ್ನು ತಿರುಗಿಸಿದರೆ ವಾಹನದೊಳಗಿರುವವರಿಗೆ ಯಾವ ತಿರುವುಗಳೂ ಅಹಿತವಾಗಲಾರದು. ಬದಲಾಗಿ ಅದರಲ್ಲೂ ಒಂದು ಸುಖವಿದೆ ಎಂಬ ಅರಿವಾಗುತ್ತದೆ. (ಹೆಚ್ಚಿನವರು ಈ ಸುಖದಿಂದ ವಂಚಿತರೇ ಆಗಿರುತ್ತಾರೆ.) ಯಾವುದೇ ತಿರುವುಗಳಲ್ಲಿ ಹಟಾತ್ತಾನೆ ತಿರುಗಿಸಿದಾಗ ಪ್ರಯಾಣಿಕರಿಗೆ ಹಿಂಸೆಯಾಗುವುದು ಖಂಡಿತ. ಇಂತಹ ಚಾಲನೆಯಿಂದ ಪ್ರಯಾಣದ ಸುಖ ಮರೀಚಿಕೆಯೇ. ಅಂತೆಯೇ ಸಾಧಾರಣವಾಗಿ ಎಲ್ಲರೂ ತಿರುವುಗಳಲ್ಲಿ ಒಳ ಬದಿಯಲ್ಲೇ ವಾಹನಗಳನ್ನು ಚಲಾಯಿಸುತ್ತಾರೆ. ಎಡ ಬದಿಯ ತಿರುವಿಗೆ ಇದು ಸರಿಯಾದರೂ ಬಲಬದಿಯ ತಿರುವುಗಳಲ್ಲಿ ಮುಂದಿನ ವಾಹನಕ್ಕಾಗುವಷ್ಚು ಜಾಗವನ್ನು ಬಿಡಲೇಬೇಕು. ಅಲ್ಲಿ ಒಳಬದಿಯಿಂದ ವಾಹನ ಮುಂದೋಡಿದಾಗ ಅಪಾಯದ ಅಂತಿಮ ಕ್ಷಣಗಳಲ್ಲಿ ಇದ್ದಂತೆಯೇ. ಕೆಲವು ರಸ್ತೆಗಳಲ್ಲಿ ವಿಭಾಜಕಗಳು ಇರುತ್ತವೆ. ಅಲ್ಲಿಯೂ ನಮ್ಮ ಪಥದಲ್ಲೇ ವಾಹನವನ್ನಿಡಬೇಕು ಆದರೆ ಹೆಚ್ಚಿನ ರಸ್ತೆಗಳು ದ್ವಿಮುಖ ಸಂಚಾರದವೇ ಆಗಿರುವುದರಿಂದ ತಿರುವುಗಳಲ್ಲಿರಲಿ ನೇರ ರಸ್ತೆಯಲ್ಲಿರಲಿ ಎಡ ಬದಿಯೇ ನಮಗೆ ಭದ್ರತೆಯನ್ನು ಕೊಡುವುದು.


ಮತ್ತೊಂದು ಕಿವಿಮಾತು ಏನೆಂದರೆ ಕೆಲವು ಸಂದರ್ಭಗಳಲ್ಲಿ ನಮಗೆ ಬಹಳ ಹೆದರಿಕೆಯಾಗುವಷ್ಟು ಅಪಾಯದ ಪ್ರಸಂಗಗಳು ಎದುರಾಗುತ್ತವೆ. ಆದರೆ ಅದನ್ನು ನಮ್ಮೊಳಗೇ ಇಟ್ಟುಕೊಳ್ಳಬೇಕು. ಪ್ರಯಾಣಿಕರಲ್ಲಿ ತೋರಿಸಿಕೊಳ್ಳಬಾರದು. ಹಾಗೆಂದು ಬೇಜವಾಬ್ದಾರಿಯೂ ಇರಬಾರದು. (ನನ್ನಲ್ಲಿ ನ್ಯಾನೊ ಕಾರಿತ್ತು. ನಾನದನ್ನು ಟ್ಯಾಕ್ಸಿಯಾಗಿ ಇಟ್ಟುಕೊಂಡಿದ್ದೆ. ಅದರಲ್ಲಿ ನಾನೊಮ್ಮೆ ಗೋಕರ್ಣಕ್ಕೆ ಬಾಡಿಗೆಗೆ ಹೋಗಿದ್ದೆ. ಬಾಡಿಗೆ ಗೊತ್ತು ಮಾಡಿದವರು ಕೂಡ ಚಾಲನೆಯಲ್ಲಿ ಪಳಗಿದವರು ಮಾತ್ರವಲ್ಲ ಹಳ್ಳಿ ರಸ್ತೆಗಳಲ್ಲಿ ಬಹಳ ಚಾಣಾಕ್ಷತನದಿಂದ ಚಲಾಯಿಸುವವರು. ಇವರು ಸ್ವಂತ ವಾಹನ ಇಟ್ಟುಕೊಂಡೇ ವ್ಯವಹಾರ ಮಾಡುತ್ತಿದ್ದವರು. ನನಗೂ ಬಹಳ ಒಳ್ಳೆಯ ಜತೆಯೆಂದು ಅವರ ಜತೆ ಗೋಕರ್ಣಕ್ಕೆ ಹೊರಟೆ. ನಾವು ನೂರು ಕಿ. ಮೀ. ದೂರ ಹೋಗುವಾಗ ನನ್ನ ಕಾರಿನ ಬ್ರೇಕ್ ವಿಫಲವಾಯಿತು. ಆದರೂ ಎರಡು ಮೂರು ಸಲ ಪಂಪ್ ಮಾಡುವಾಗ ಬ್ರೇಕ್ ಬರುತ್ತಿತ್ತು. ಈ ಕಾರಿನಲ್ಲಿ ನನಗೆ ಇಂಥ ಅನುಭವ ಬಹಳ ಬಾರಿ ಆಗಿದ್ದುದರಿಂದ ನಾನು ಈ ಗಾಡಿಯನ್ನು ಕೊಂಡು ಹೋಗಬಲ್ಲೆ ಎನ್ನುವ ಧೈರ್ಯವೂ ಇತ್ತು. ಕೆಲವು ಸಲ ಬ್ರೇಕ್ ಸರಿಯಾಗಿದ್ದರೆ ಕೆಲವು ಸಲ ಪಂಪ್ ಹೊಡೆದ ಮೇಲೆ ಸರಿಯಾಗತ್ತಿತ್ತು. ಆದರೆ ಇದು ಅಪಾಯಕಾರಿಯೇ ಎಂದು ನನಗೆ ಗೊತ್ತಿತ್ತು. ಈ ವಿಚಾರ ನನ್ನ ಪಕ್ಕ ಕೂತಂಥವರಿಗೆ ಗೊತ್ತಾಗಿತ್ತೋ ಇಲ್ಲವೋ ತಿಳಿಯದು. ಆದರೆ ಅವರಿಗೆ ಅನುಮಾನ ಬಂದಿತ್ತು ಎನ್ನುವುದು ನನಗನ್ನಿಸಿತು. ಆದರೂ ಏನೋ ಒಂದು ಧೈರ್ಯದಲ್ಲಿ ಗೋಕರ್ಣಕ್ಕೆ ಹೋಗಿ ವಾಪಸೂ ಬಂದೆವು.


ಆದರೆ ಊರಿಗೆ ಒಂದಿಪ್ಪತ್ತು ಕಿ.ಮೀ. ಇರುವಾಗ ಬ್ರೇಕ್ ಸಂಪೂರ್ಣ ಕೈ ಕೊಟ್ಟಿತು. ಆದರೆ ರಾತ್ರಿಯಾಗಿದ್ದರಿಂದ ನನ್ನೊಡನೆ ಇರುವವರೂ ಧೈರ್ಯ ಹೇಳಿದ್ದರಿಂದ ಸುಖವಾಗಿ ಅಲ್ಲದಿದ್ದರೂ ಅಪಾಯರಹಿತವಾಗಿ ಮನೆ ಸೇರಿದೆವು) ಈಗ ನನಗನಿಸುತ್ತದೆ ಬಾಡಿಗೆ ಕೈ ತಪ್ಪುತ್ತದೆ ಎಂದು ಎಷ್ಟೊಂದು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದೇ ಎಂದು. ನಾವು ಸಾಮಾನ್ಯವಾಗಿ ಇಂಥ ತಪ್ಪುಗಳನ್ನು ಮಾಡುವಾಗ ಮುಂದಿನ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸದಿರುವುದು ಕೂಡ ಭೀಕರ ಅಪಘಾತಗಳಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಅದೇರೀತಿ ಪ್ರಯಾಣಿಕರಲ್ಲಿರಲಿ ಇತರ ವಾಹನ ಚಾಲಕರೊಡನಿರಲಿ ನಾವು ಎಷ್ಟು ಸೌಜನ್ಯದಿಂದ ವರ್ತಿಸುತ್ತೇವೋ ಅಷ್ಟು ನಮಗೆ ನಮ್ಮ ಕಾಯಕದಲ್ಲಿ ಪ್ರೀತಿ ಮೂಡುತ್ತದೆ. ಅಂಥ ಪ್ರೀತಿಯಿಂದ ಮಾಡುವ ಯಾವುದೇ ಕಾಯಕವಾದರೂ ಪೂರ್ಣತ್ವದೆಡೆಗೇ ಕೊಂಡುಹೋಗುತ್ತದೆ. ಆದ್ದರಿಂದ ಚಾಲಕನಾದವನು ತನ್ನ ಮನಸ್ಥಿತಿಯನ್ನು ಸಮತೋಲನದಲ್ಲಿರುವಂತೆ ಕಾಯ್ದುಕೊಂಡಿರಬೇಕು.


ನಾನು ಬಸ್ಸಿನಲ್ಲಿ ಚಾಲಕನಾಗಿರುವಾಗ ವಾಹನ ಚಾಲನೆಯ ಸೂಕ್ಷ್ಮಗಳನ್ನು ಬಹಳಷ್ಟು ಕಲಿಯಲು ಅವಕಾಶವಾಯಿತು. ಇಲ್ಲಿ ಆರೋಗ್ಯವಿಲ್ಲದವರು, ವೃದ್ಧರು, ಮಕ್ಕಳು, ಗರ್ಭಿಣಿಯರು ಮುಂತಾದ ಅನೇಕರು ಪ್ರಯಾಣಿಸುವುದರಿಂದ ಚಾಲನೆ ಎನ್ನುವುದು ಅತಿ ಸೂಕ್ಷ್ಮವಾಗಿರಬೇಕಲ್ಲದೆ ಎಲ್ಲರಿಗೂ ಭದ್ರತೆಯ ಭಾವ ಬರುವಂತಿರಬೇಕು. ನಿರ್ವಾಹಕನಾದವನು ಯಾವುದೇ ಕೈ ಹಿಡಿದುಕೊಳ್ಳದೆ ತನ್ನ ಕಾಯಕವನ್ನು ಮಾಡುವಂತಿರಬೇಕು. ವಾಹನ ನಿಲ್ಲಿಸಿದ್ದಾಗಲಿ, ನಿಂತ ವಾಹನ ಚಲನೆಯಲ್ಲಿ ತೊಡಗಿಕೊಂಡದ್ದಾಗಲಿ ಪ್ರಯಾಣಿಕರಿಗೆ ತಿಳಿಯಲಾಗದಷ್ಟು ಸೂಕ್ಷ್ಮತೆ ಇದ್ದರೆ ಮಾತ್ರ ನಮ್ಮ ಬಸ್ಸಿನಲ್ಲಿ ಭದ್ರತೆಯ ಭಾವದಿಂದ ಪ್ರಯಾಣಿಕರು ಕಾದುಕೊಂಡು ಬರುತ್ತಾರೆ. ಇವತ್ತಿಗೂ ನನಗೆ ಹೆಮ್ಮೆ ಎನಿಸುವುದು ಏನೆಂದರೆ ಎಷ್ಟೇ ಜನಸಂದಣಿ ಇದ್ದರೂ ಚಾಲಕನನ್ನು ನೋಡದೆ ಚಾಲನೆಯ ವೈಖರಿಯಿಂದಲೇ ಇಂಥವನೇ ಚಾಲಕನೆಂದು ಗುರುತಿಸಿದಾಗ. ಅಷ್ಟರ ಮಟ್ಟಿಗೆ ನಾನು ಈ ವೃತ್ತಿಯಲ್ಲಿ ಕಲಿತಿದ್ದೇನೆ ಎಂದು ಹೇಳಬಲ್ಲೆ. ಹಾಗೆಂದು ನಾನು ಪೂರ್ಣ ಕಲಿತಿದ್ದೇನೆಂಬ ದಾರ್ಷ್ಟ್ಯವನ್ನು ತೋರಲಾರೆ. ಆದರೆ ಕಲಿತದ್ದಿಷ್ಟು ಎಂದು ಹೆಮ್ಮೆಯಿಂದ ಹೇಳಬಲ್ಲೆ.... ಮುಂದೆ ನೋಡೋಣ ನಮಸ್ಕಾರ.

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

web counter

0 Comments

Post a Comment

Post a Comment (0)

Previous Post Next Post