|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಡಾ. ಟಿ ಎಸ್ ನಾಗಾಭಾರಣ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಡಾ. ಟಿ ಎಸ್ ನಾಗಾಭಾರಣ

ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಕನ್ನಡಾಭಿವೃದ್ಧಿ ಸಾಧ್ಯ



ಮಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ನಿರೂಪಿಸಲು ಕಳೆದ 30 ವರ್ಷಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾಕಷ್ಟು ಕೆಲಸಗಳನ್ನು ಮಾಡಿದೆ. ಕನ್ನಡವನ್ನು ಆಡಳಿತದಲ್ಲೂ ಜಾರಿಗೆ ತರುವ ಪ್ರಯತ್ನ ನಡೆದಿದೆ. ಆದರೆ ಸಮುದಾಯದ ಪಾಲ್ಗೊಳ್ಳುವುಕೆಯಿಂದ ಮಾತ್ರ ಇವೆಲ್ಲಾ ಪರಿಣಾಮಕಾರಿಯಾಗಿರಲು ಸಾಧ್ಯ, ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ ಎಸ್ ನಾಗಾಭಾರಣ ಅಭಿಪ್ರಾಯಪಟ್ಟಿದ್ದಾರೆ. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸೋಮವಾರ ಆಯೋಜಿಸಲಾಗಿದ್ದ, ʼಕನ್ನಡ ಅಭಿವೃದ್ಧಿ ಪ್ರಾಧಿಕಾರ- 30’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಅತಿ ಬಳಕೆಯ ಕುರಿತು ಆತಂಕ ವ್ಯಕ್ತಪಡಿಸಿ, ತಂತ್ರಜ್ಞಾನ ನಮಗೆ ಲಾಭದಾಯಕವಾಗಿರಬೇಕು ಮತ್ತು ಜ್ಞಾನಾರ್ಜನೆಗೆ ಸೀಮಿತವಾಗಿರಬೇಕು, ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಐತಿಹಾಸಿಕ ರವೀಂದ್ರ ಕಲಾಭವನದಲ್ಲಿ ನಡೆಯುತ್ತಿರುವ ಸಂಕಿರಣ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಿರಲಿ, ಎಂದು ಶುಭ ಹಾರೈಸಿದರು.  


ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರು, 1992 ರಿಂದ ಇದುವರೆಗೆ ಕನ್ನಡ ಅನುಷ್ಠಾನದಕ್ಕೆ ಪ್ರಧಿಕಾರದ ವತಿಯಿಂದ ಹಲವು ಪ್ರಯತ್ನಗಳು ನಡೆದಿವೆ. ಈ ಮೂವತ್ತರ ಸಂಭ್ರಮದಲ್ಲಿ ಮಕ್ಕಳ ಸಾಹಿತ್ಯದ 19 ಪುಸ್ತಕಳು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿವೆ. ʼಪದಕಣಜʼ ಆಪ್ ನಲ್ಲಿ ಸುಮಾರು ಆರೂವರೆ ಲಕ್ಷ ಕನ್ನಡ ಪದಗಳಿವೆ. 2021 ನ್ನು ʼಕನ್ನಡ ಕಾಯಕ ವರ್ಷʼ ವಾಗಿ ಆಚರಿಸಲಾಗಿದೆ, ಎಂದು ಪ್ರಾಧಿಕಾರದ ಯೋಜನೆಗಳನ್ನು ಮೆಲುಕುಹಾಕಿದರು. 


ಅತಿಥಿಗಳನ್ನು ಸ್ವಾಗತಿಸಿದ ಪ್ರಾಧಿಕಾರದ ಸದಸ್ಯ ಡಾ. ರಮೇಶ್ ಗುಬ್ಬಿಗೂಡು, ಕನ್ನಡದ ಅಭಿವೃದ್ಧಿಯ ಬಗ್ಗೆ ತಳಮಟ್ಟದ ಚರ್ಚೆ ಅಗತ್ಯ. ಅದನ್ನು ಒಂದು ಪುಸ್ತಕವಾಗಿ ಮುಖ್ಯಮಂತ್ರಿಗಳಿಗೆ ತಲುಪಿಸಬೇಕೆಂಬ ಆಶಯ ಅಧ್ಯಕ್ಷರಿಗಿದೆ, ಎಂದರು. ವಿಶ್ವವಿದ್ಯಾನಿಲಯ ಕಾಲೇಜಿನ  ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ ಕೆ ಅವರು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಡಾ. ಮಾಧವ ಎಂ ಕೆ ಅವರ ʼಕನ್ನಡ ಸಾಹಿತ್ಯ- ಕೆಲವ ಒಳನೋಟಗಳುʼ ಎಂಬ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ ಎಸ್ ನಾಗಾಭಾರಣ ಲೋಕಾರ್ಪಣೆ ಮಾಡಿದರು.  


ವಿಚಾರ ಸಂಕಿರಣದಲ್ಲಿ, ʼರಾಷ್ಟ್ರೀಯ ಉದ್ಯೋಗ ನೀತಿ- ಪರಿಷ್ಕೃತ ಮಹಿಷಿ ವರದಿʼ, ʼಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರು- ಕೇಂದ್ರದ ಭಾಷಾನೀತಿʼ, ʼಸಾರ್ವಜನಿಕ ವಲಯದಲ್ಲಿ ಕನ್ನಡ- ತ್ರಿಭಾಷಾ ಸೂತ್ರʼ ಮತ್ತು ʼಭವಿಷ್ಯದ ಔದ್ಯೋಗಿಕ ಕ್ಷೇತ್ರಗಳಲ್ಲಿ ಕನ್ನಡಿಗರು- ಸಾಧ್ಯತೆ ಸಿದ್ಧತೆʼ ಎಂಬ ನಾಲ್ಕು ವಿಷಯಗಳು ಚರ್ಚೆಗೆ ಬಂದವು. ʼಕನ್ನಡ ಗೆಳೆಯರ ಬಳಗʼ ದ ಸಂಚಾಲಕ ರಾ. ನಂ. ಚಂದ್ರಶೇಖರ್, ʼಚಾಣಕ್ಯ ಕರಿಯರ್ ಅಕಾಡೆಮಿʼಯ ಮುಖ್ಯಸ್ಥ ಎನ್ ಎಂ ಬಿರಾದಾರ್, ಭಾರತ್ ಎಲೆಕ್ಟ್ರಾನಿಕ್ಸ್ ರಾಜಭಾಷ ವಿಭಾಗದ ಉಪ ವ್ಯವಸ್ಥಾಪಕ ಡಾ. ಎಚ್. ಎಲ್ ಗೋಪಾಲಕೃಷ್ಣ ಮತ್ತು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ತಜ್ಞ ಡಾ. ಉದಯ ಶಂಕರ ಪುರಾಣಿಕ ವಿಷಯ ಮಂಡನೆ ಮಾಡಿದರು. 


ಸ್ನೇಹ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ದಾಮ್ಲೆ, ಕನ್ನಡ ಗಣಕ ಪರಿಷತ್ನ ಕಾರ್ಯದರ್ಶಿ ಜಿ ಎನ್ ನರಸಿಂಹಮೂರ್ತಿ, ಹೆಚ್ಎಎಲ್ ನ ನಿವೃತ್ತ ಮಹಾ ವ್ಯವಸ್ಥಾಪಕ ಬಾ.ಹ ಉಪೇಂದ್ರ, ತೆಂಕ ನಿಡಿಯೂರಿನ ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು, ಶಿಕ್ಷಕಿ ಮತ್ತು ವಿಜ್ಞಾನ ಲೇಖಕಿ ಕ್ಷಮಾ ಭಾನುಪ್ರಕಾಶ್ ಅವರು ಪೂರಕ ಟಿಪ್ಪಣಿ ಒದಗಿಸಿದರು. ಸಾಹಿತ್ಯಾಸಕ್ತರು ಮತ್ತು ವಿದ್ಯಾರ್ಥಿಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಗಮನ ಸೆಳೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post