ಮಂಗಳೂರು-ಬೆಂಗಳೂರು ರಾತ್ರಿ ರೈಲಿನಲ್ಲಿ ಕಳ್ಳರ ಕಾಟ: ಪ್ರಯಾಣಿಕರೇ ಎಚ್ಚರ

Upayuktha
0

ಸುರಕ್ಷತಾ ಸಿಬ್ಬಂದಿ ಇಲ್ಲದೆ ಸಂಚರಿಸುತ್ತಿರುವ ರೈಲುಗಳು


ಮಂಗಳೂರು: ಮಂಗಳೂರು-ಬೆಂಗಳೂರು ರೈಲು ಪ್ರಯಾಣವೀಗ ಸುರಕ್ಷಿತವಲ್ಲ.... ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಕಳ್ಳರ ಕಾಟ ಜೋರಾಗಿದ್ದು, ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವ ರೈಲುಗಳಲ್ಲಿ ಪ್ರಯಾಣಿಕರು ಅತಿ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ.


ಈ ರೈಲುಗಳಲ್ಲಿ ರೈಲ್ವೆ ರಕ್ಷಣಾ ಸಿಬ್ಬಂದಿ ಕೂಡ ಇಲ್ಲದಿರುವುದು ಪ್ರಯಾಣಿಕರ ಆತಂಕ ಹೆಚ್ಚಿಸಿದೆ ಮತ್ತು ಕಳ್ಳರ ಕೆಲಸವನ್ನು ಸುಲಭವಾಗಿಸಿದೆ.


ಮೊನ್ನೆ ಮೊನ್ನೆ- ಅಂದರೆ ಜೂನ್ 24ರಂದು ಕಾಸರಗೋಡಿನಿಂದ ಕಣ್ಣೂರು-ಯಶವಂತಪುರ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಕಸಿದು ಕಳ್ಳನೊಬ್ಬ ಪರಾರಿಯಾದ ಘಟನೆ ರೈಲು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.


ಕಾಸರಗೋಡಿನ ಪೇರಿಯ ನಿವಾಸಿ ಗಣೇಶ್‌ ಮತ್ತು ಅವರ ಕುಟುಂಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ರೈಲು ಶ್ರವಣಬೆಳಗೊಳ ನಿಲ್ದಾಣ ತಲುಪುವಷ್ಟರಲ್ಲಿ ಬೆಳಗಿನ ಜಾವ 3:30ರ ವೇಳೆಗೆ ಈ ಘಟನೆ ನಡೆದಿದೆ.  ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಮಹಿಳೆಯ ಬ್ಯಾಗನ್ನು ಬಲವಂತವಾಗಿ ಕಸಿದುಕೊಂಡು ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ.


ಬ್ಯಾಗಿನಲ್ಲಿ ನಗದು, 3 ಎಟಿಎಂ ಕಾರ್ಡ್‌ಗಳು, 2 ಮೊಬೈಲ್‌ಗಳು, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿದಂತೆ ಕೆಲವು ದಾಖಲೆಪತ್ರಗಳಿದ್ದವು.


ಪ್ರಯಾಣಿಕರು ರೈಲಿನ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿದರೂ ರೈಲು ನಿಲ್ಲದೆ ಮುಂದಕ್ಕೆ ಹೋಗಿದೆ.  ರೈಲು ಯಶವಂತಪುರ ತಲುಪಿದ ಬಳಿಕ ಲಿಖಿತ ದೂರು ನೀಡಲಾಗಿದೆ. ಬ್ಯಾಗ್ ಕಸಿದು ಪರಾರಿಯಾದ ಕಳ್ಳ ಸುಮಾರು 35 ವರ್ಷ ವಯಸ್ಸಿನವನಾಗಿದ್ದು ಕೆಂಪು ಟೀ ಶರ್ಟ್‌ ಧರಿಸಿದ್ದ. ಈ ವೇಳೆಗೆ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಒಬ್ಬನೇ ಒಬ್ಬ ಸಿಬ್ಬಂದಿಯೂ ಇರಲಿಲ್ಲ ಎಂದು ಗಣೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top