||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡಿನ ಕನ್ನಡದ ಕುವರನ ಸಿನೆಮಾ ಜಾಗತಿಕ ಮಟ್ಟದಲ್ಲೂ ಮಿಂಚಿತೇ...!

ಕಾಸರಗೋಡಿನ ಕನ್ನಡದ ಕುವರನ ಸಿನೆಮಾ ಜಾಗತಿಕ ಮಟ್ಟದಲ್ಲೂ ಮಿಂಚಿತೇ...!


ಮೇಲಿನ ಶೀರ್ಷಿಕೆಯನ್ನು ಹೇಗೆ ಬೇಕಿದ್ದರೂ ತೆಗೆದುಕೊಳ್ಳಿ. ಆದರೆ ಈಗ 777 ಚಾರ್ಲಿ ಮಾತ್ರ ಭಾಷೆ, ದೇಶದ ಗಡಿದಾಟಿ ನಿಂತಿದೆ...!


ಕಥೆ, ಕಾವ್ಯಗಳು ಬೆರಗು ಹುಟ್ಟಿಸೋದು ಓದುಗನೊಳಗೆ ಪ್ರಭಾವ ಬೀರುವಂಥಹ ಸಹಜ ವಿಷಯಗಳು, ಮನಸಿನ ಭಿತ್ತಿಯೊಳಗೆ ಗಾಢವಾಗಿ ಬೇರೂರಿದಾಗ ಮಾತ್ರ. ಬರಹಗಾರನ ಅಕ್ಷರ ಕಟ್ಟುವರೀತಿ ಓದುವಿಕೆಯಿಂದಲೂ, ಜೀವನಾನುಭವದಿಂದಲೂ ಬರಬಹುದು. ಇದರಲ್ಲಿ ಎರಡನೆಯದು ಅತ್ಯಂತ ಮುಖ್ಯವಾದುದು. ಕಿರಣ ಗೆದ್ದದ್ದು ಇಲ್ಲೇ....!


777 ಚಾರ್ಲಿ ದೃಶ್ಯಕಾವ್ಯದ ಬಗ್ಗೆ ಊರೆಲ್ಲಾ ಎಂಥ ಗುಲ್ಲು! "ಆ ಹುಡುಗ ಸಿನೆಮಾ ಮಾಡಿದ್ದಾನಂತೆ, ಟ್ರೇಲರ್ ಚೆನ್ನಾಗಿದೆಯಂತೆ, ಕೋಟಿ ವೀವರ್ಸ್ ಅಂತೆ. ಪ್ರಧಾನ ಪಾತ್ರ ನಾಯಿಯಂತೆ."


ಇತ್ಯಾದಿ ಇತ್ಯಾದಿ ಒಂದು ಕಡೆಯಾದರೆ,


"ಎಂಥ ಮರಾಯರೇ ಎಂತದಿದ್ರೂ ಮಾಡಿದ್ದು ಕನ್ನಡ ಸಿನೆಮಾ ಅಲ್ವ... ಕನ್ನಡ ಸಿನೆಮಾದ ಹಣೆಬರಹ ನಮಗೊತ್ತಿಲ್ವ... ಮತ್ತೆ ಈ ಮೀಸೆ ಬರದ ಹುಡುಗನಿಗೆ ಎಂಥ ಅನುಭವ... ಅವನೆಂಥ ಸಾಹಿತಿಯ?... ಕವಿಯ...? ವಿದ್ವಾಂಸನ...? ಡಿಗ್ರಿ ಕೂಡಾ ಮಾಡಿಲ್ಲವಂತೆ...! ಅವನೆಂತ ಕತೆ ಬರೆಯೋದು.... ಎಲ್ಲಾ ಪ್ರಚಾರದ ಹುಚ್ಚು ಮಾರಾಯರೇ...!" ಎಂದವರೂ ನಿನ್ನೆ ನಿನ್ನೆವರೆಗೆ ಇದ್ದರಂತೆ....


ಇದೇ ಕಿರಣ  ಮೀಸೆ ಮೊಳೆಯುವ ಮೊದಲು, ಇವನ ಸೋದರ ಮಾವ, ಡಾ. ರತ್ನಾಕರ ಮಲ್ಲಮೂಲೆ ಬರೆದ, ಉಮೇಶ್ ಸಾಲಿಯಾನ್ ನಿರ್ದೇಶನದ 'ಮಳೆ ನಿಂತ ಮೇಲೆ' ನಾಟಕದಲ್ಲಿ ಅಭಿನಯಿಸಿ, ಕಾಸರಗೋಡು ಕರ್ನಾಟಕದ ಹಲವರ ಮನಗೆದ್ದದ್ದು ನನಗೆ ಗೊತ್ತು. 'ಕಾವಳ' ಎಂಬ ಕಿರುಚಿತ್ರ ಮಾಡಿ, ಅದರ ಪ್ರೊಜೆಕ್ಟರು, ಸ್ಕ್ರೀನು ಹಿಡಿದು ಕಾಸರಗೋಡಿನ ಕನ್ನಡ ಮಾಧ್ಯಶಾಲೆಗಳಿಗೂ ಸಂಘ ಸಂಸ್ಥೆಗಳಿಗೂ ಸುತ್ತಾಡುತ್ತಿದ್ದುದು ನನಗೆ ಗೊತ್ತು.  


ಮಾದಕ ವಸ್ತು ಸೇವನೆಯ ದುಷ್ಪರಿಣಾಮ, ಎಂಡೋಸಲ್ಫಾನ್ ದುಷ್ಪರಿಣಾಮ, ಮಹಿಳಾ ದೌರ್ಜನ್ಯ ಇತ್ಯಾದಿ ಕಾವಳದ ಕಥಾವಸ್ತುವಾಗಿತ್ತು. ಸಮಾಜಘಾತುಕ ಶಕ್ತಿಗಳು ಯುವಜನತೆಯ ದಾರಿತಪ್ಪಿಸುವ ಪರಿಣಾಮಕಾರಿ ಸಣ್ಣ ಚಿತ್ರವಾಗಿತ್ತದು.  ಕಿರಣನೂ ಇದರಲ್ಲಿ ಅಭಿನಯಿಸಿದ್ದ.  


ಇದೇ ಕಿರಣ ಸ್ವಲ್ಪ ಮಟ್ಟಿಗೆ ಬೆಂಗಳೂರು ಭಾಷೆಯಂತಿರುವ ಕನ್ನಡ ಮಾತನಾಡುತ್ತಾ, ಅಲ್ಲಲ್ಲಿ ಸ್ವಲ್ಪ ಇಂಗ್ಲಿಷ್ ಬೆರೆಸಿ ಮಾಸಿದ ಬಟ್ಟೆಬರೆಯಲ್ಲಿ ನನ್ನೆದುರು ನಿಂತ ಮಬ್ಬುಗತ್ತಲ ನೆನಪು ನನಗೀಗಲೂ ಇದೆ.


ಹೌದು ಕಾವಳ ಈತನ ನಿರ್ದೇಶನದ ಕಿರುಚಿತ್ರ ಅದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನೋಡುವಂಥದ್ದಲ್ಲ ಊರಾಚೆಯಿರುವ ಶಾಲೆಗಳೇ ಥಿಯೇಟರುಗಳು ವಿದ್ಯಾರ್ಥಿಗಳು ಮತ್ತು ಪೋಷಕರೇ ಪ್ರೇಕ್ಷಕರು ಉದಾರಿಗಳು ಸಂಗ್ರಹಿಕೊಟ್ಟ ಹಣವೇ ಖರ್ಚಿಗೆ ದಾರಿ ಹೀಗಿತ್ತು ಕಿರಣನ ಹತ್ತು ವರುಷಗಳ ಒಂದು ಪಯಣ.


ಕಾಸರಗೋಡಿನ ಹಲವು ಶಾಲೆಯ ಹೊರಾಂಗಣದಲ್ಲಿ ಅಥವಾ ಸಂಘಸಂಸ್ಥೆಗಳ ಕಟ್ಟಡಗಳ ಪಕ್ಕದಲ್ಲಿ ಕತ್ತಲಾಗತ್ತಲೇ ಸಿನಿಮಾ ಆರಂಭವಾಗುತ್ತಿತ್ತು. ಮುತುವರ್ಜಿಯಿಂದ ಬಂದವರೆಲ್ಲರೂ ನೋಡಿ ಆನಂದಿಸುತ್ತಿದ್ದರು, ಕಿರಣ್ ಕೂಡಾ ಹೊಸ ಪ್ರೇಕ್ಷನಂತೆ ಅಮಾಯಕನಂತೆ ತನ್ನ ಚಿತ್ರವನ್ನು ತಾನೇ ಗಂಭೀರತೆಯಿಂದ ನೋಡುತ್ತಾ ಮೈ ಮರೆತ್ತಿದ್ದದ್ದನ್ನೂ ನಾನೂ ನೋಡುತ್ತಿದ್ದೆ.

 

ಹೀಗೆ ಪರಿಚಯವಾದ ಈ ಸಿನಿಕ ಮೊಬೈಲ್ ನಲ್ಲಿ ಅಪರೂಪಕ್ಕೆ ಸಂದೇಶ ಕಳಿದ್ದು ಬಿಟ್ಟರೆ ಈತನ ಪರಿಚಯವಿಲ್ಲ.   


ಒಂದು ಸುಭಾಷಿತ ದಲ್ಲಿ ಹೀಗೆ ಹೇಳುತ್ತದೆ.

"ಸದ್ಗುಣಗಳು ಮನುಷ್ಯನಲ್ಲಿ ಇದ್ದುದೇ ಹೌದಾದರೆ ಅವು ತಾವಾಗಿಯೇ ಅರಳುತ್ತವೆ. ಯಾವ ಪ್ರತಿಬಂಧಕಗಳೂ ಅವುಗಳನ್ನು ತಡೆಯಲು ಸಾಧ್ಯವಿಲ್ಲ ಅಂತೆಯೇ ಕಸ್ತೂರಿಯ ಪರಿಮಳವನ್ನೂ ಬಚ್ಚಿಡಲು ಸಾಧ್ಯವಾಗದು ಅದು ಎಲ್ಲಿದ್ದರೂ ಸುವಾಸನೆಯನ್ನು ಹರಡಿಯೇ ಹರಡುತ್ತದೆ."


ಏನನ್ನೋ ಸಾಧಿಸಬೇಕೆಂಬ ತುಡಿತ ಮತ್ತೆ ಮತ್ತೆ ಹಾತೊರೆಯುವ ಹೊಸತನ ಕಲಿಕೆಯ ಹಂಬಲ ಕಿರಣನ ನಡವಳಿಕೆಯಲ್ಲಿ ನಾನು ಗಮನಿಸಿದ್ದು ಸತ್ಯ. ಆದರೆ ಈತ ಹೀಗೊಂದು ರೀತಿಯಲ್ಲಿ 'ಜಾಗತಿಕ ಮಟ್ಟ'ದಲ್ಲಿ ಇದ್ದಕ್ಕಿದ್ದ ಹಾಗೆ ಗುರುತಿಸುವ ಒಬ್ಬ ವ್ಯಕ್ತಿಯಾಗಬಹುದೆಂದು ಕಲ್ಪನೆಯೂ ನನಗಿರಲಿಲ್ಲ. ಬಹುಶಃ ನಡೆ ನುಡಿಯ ಸಂಸ್ಕಾರ ಮನೆಯ ವಾತಾವರಣದಿಂದ ಬಳುವಳಿಯಾಗಿರಬಹುದೆಂದು ಹೇಳುತ್ತಾರೆ. 


"ಇಲ್ಲ ಇಲ್ಲ; ಪ್ರತಿಭೆ ಪಾಂಡಿತ್ಯ ಕೌಶಲ್ಯ ಇತ್ಯಾದಿಗಳಿಗೆ ಶ್ರೇಷ್ಠ ಪರಂಪರೆ ಬೇಕು; ಇಂತದ್ದೇ ಜಾತಿಯಲ್ಲಿ ಹುಟ್ಟಬೇಕು. ಪರಿಪಕ್ವವಾದ ಹಿನ್ನೆಲೆ ಇರಬೇಕು" ಎನ್ನುವವರೂ ಈಗಲೂ ಇದ್ದಾರೆ!. ಇದರಲ್ಲಿ ಯಾವುದು ಸರಿ ಅಂತ ನನಗೆ ಗೊತ್ತಿಲ್ಲ. ಆದರೆ ಕಿರಣನಂತವರಿಗೆ ಗೊತ್ತು. 


ಕಾಸರಗೋಡಿನ ಮಲ್ಲಮೂಲೆಯ ಪರಿಸರದಲ್ಲಿ ಹುಟ್ಟಿಬೆಳೆದ ಡಾ. ರತ್ನಾಕರ ಮಲ್ಲಮೂಲೆ ಎಂಬ ಸರಳ ನಡೆಯ, ನೇರನುಡಿಯ ಪ್ರಾಧ್ಯಾಪಕ, ಕೃಷ್ಣ ಮಣಿಯಾಣಿ ಎಂಬ ನಿವೃತ್ತ ಮಿಲಿಟರಿ ಯೋಧ, ಕರುಣಾಕರ ಎಂಬ ಅನುಭವಿ ಟೈಲರ್,  ನಾರಾಯಣ ಎಂಬ ಸಾಚಾ ಕೃಷಿಕ ಹೀಗೆ ಇವರೆಲ್ಲರ ಒಡನಾಟ ಸ್ವಲ್ಪ ಮಟ್ಟಿಗೆ ನನಗಿದೆ. ಇವರೆಲ್ಲರ ಸಹೋದರಿ ಗೃಹಿಣಿ ಗೋದಾವರಿಯಕ್ಕನ ಮಗನೇ ಈ ಕಿರಣರಾಜ. ಅಚ್ಯುತ ಮಣಿಯಾಣಿ ಈತನ ತಂದೆ. ಇತ್ತೀಚೆಗೆ ಈತ ತಂದೆಯನ್ನೂ ಕಳೆದುಕೊಂಡ ವಿಷಯವೂ ನನಗೆ ಗೊತ್ತು. ಕಿರಣನಿಗೆ ಒಬ್ಬ ತಮ್ಮ ಭರತರಾಜ, ಮಂಗಳೂರಿನಲ್ಲಿ ಸ್ಕೌಟ್ ಆ್ಯಂಡ್ ಗೈಡ್ ನ ಜಿಲ್ಲಾ ಸಂಯೋಜನಾಧಿಕಾರಿ. ತಂಗಿ ಹರ್ಷಿತ ಒಂದು ಮಗುವಿನ ತಾಯಿ.


ಇವರ ಈ 'ಮಲ್ಲಮೂಲೆ ಮನೆತನ' ಎಂಬುದು ಬಹಳ ಕುತೂಹಲ ಮೂಡಿಸುವ ಒಂದು ಕುಟುಂಬ. ದೇವರು, ತರವಾಡು, ದೈವಸ್ಥಾನ, ಕುಟುಂಬ, ಸಂಬಂಧ, ಸದಾ ಕಾಲ ಪರಂಪರಾಗತ ಕಾರ್ಯಕ್ರಮಗಳು ಇಲ್ಲಿನ ಒಂದು ವಿಶೇಷ.  ಇವರ ಸಂಬಂಧಗಳು ನಾನಾ ಕಡೆ ಚೆದುರಿದ್ದರೂ ಒಂದು ಪುಟ್ಟ ಕಾರ್ಯಕ್ರಮಕ್ಕೂ ಇವರೆಲ್ಲರೂ ಮಲ್ಲಮೂಲೆಯಲ್ಲಿ ಒಂದು. ಮಾನವೀಯತೆಯ ಅಕ್ಷಯ ಪಾತ್ರೆಯಂತಿರುವ ಮನೆ ಇದು.


ಪ್ರಾಣಿ, ಪಕ್ಷಿ, ಗಿಡ, ಬಳ್ಳಿ ಇವೆಲ್ಲವೂ ಇವರಿಗೆ ಅತ್ಯಂತ ಹತ್ತಿರ ಮಾತ್ರವಲ್ಲ, ಇವರಿಗೆ ಇವೆಲ್ಲ ಇಲ್ಲದಿದ್ದರೆ ಬದುಕಲೇ ಆಗದೇನೋ ಎಂಬ ಹಾಗೆ. ಇವರೆಲ್ಲರೂ ಹೀಗೆಲ್ಲ ಬದುಕುವ  ರೀತಿ ನೋಡುವುದನ್ನು ಕಂಡು ನನ್ನಂತವನಿಗೆ ಒಂಥರ ಥ್ರಿಲ್.


ಎಲ್ಲರೂ ನಿಷ್ಕಾಮ ಕರ್ಮಿಗಳೇ ಸರಿ ಮೇಲಾಗಿ ಮಾನವ ಪ್ರೇಮಿಗಳು ಹಾಗಾಗಿ ಸುಗುಣ ಸೌಂದರ್ಯ ಸಹಜವಾಗಿ ಹೊರಹೊಮ್ಮಿದೆ. ಇದು ನನ್ನರಿವಿನ ಸತ್ಯಗಳು. ಕಿರಣನ ಕತೆ ಬರೆಯುವ ಜಾಣ್ಮೆಗೆ, ಕ್ರಿಯಾಶೀಲತೆಗೆ ಈ ಮನೆತನದ ಪರಂಪರೆ ಮತ್ತು ಆಗುಹೋಗುಗಳು ಸಹಾಯಕ ಆಗಿವೆ. ಎಂದರೂ ತಪ್ಪಾಗದು.


ಇವೆಲ್ಲ ಕಿರಣನ ಗತ್ತು ಮಾತ್ರ ಅಲ್ಲಣ್ಣ; ಇದು ನೋಡಿ ನಿಜವಾದ ಕನ್ನಡದ ಸ್ವತ್ತು. ಬಹಳ ಕಾಲದ ತರುವಾಯ ಮರೆತೇ ಹೋಗಿದ್ದ ಈ ಹುಡುಗ ಮತ್ತೆ ಅಲ್ಲೋ ಇಲ್ಲೋ ಅಷ್ಟಷ್ಟು ಸುದ್ದಿಯಲ್ಲಿದ್ದರೂ... ನನಗೆ ಆಸಕ್ತ ವಿಷಯವಲ್ಲದ ಕಾರಣವೋ ಏನೋ ಮರೆತ್ತಿದ್ದೆ.


ಆದರೆ ಈಗ ಜಾಲತಾಣಗಳಲ್ಲಿ ಸುದ್ದಿಮಾದ್ಯಮಗಳಲ್ಲಿ ಪ್ರತಿಷ್ಠಿತ ಪತ್ರಿಕೆಗಳಲ್ಲಿ, ಈ ಹುಡುಗನದೇ ಸುದ್ದಿ.  ನಾಯಿಯ ಸಿನಿಮಾ ಗೆದ್ದ ಅಬ್ಬರದ ಸದ್ದು;  ಅಷ್ಟೇ ವಾಸ್ತವದ ವಾರ್ತೆ....!


ಆದರೆ ನನಗದಲ್ಲ ಅಚ್ಚರಿ ಕಾಸರಗೋಡಿನ ಕೆಲವು ಕನ್ನಡದ ಪ್ರತಿಭಾವಂತರೆಲ್ಲ ಏನೇನೋ ಸಾಹಸಗಳ ಸರಮಾಲೆಗಳನ್ನೇ ಮಾಡಿ ಜಗತ್ತಿಗೇ ಬೆರಗು ಹುಟ್ಟಿಸುತ್ತಿದ್ದರೂ ಕನ್ನಡಿಗನೆಂಬ ಭಾವದಲ್ಲೇ ಬದುಕುತ್ತಿದ್ದರೂ,  ಇಲ್ಲಿನ ಕೆಲವು ಕನ್ನಡಿಗರು ಮಲೆಯಾಳಿಗಳಾಗುತ್ತಿದ್ದಾರೆನ್ನುವುದು ವಿಷಾದ! ಹೇಗೆಂದು ಕೇಳಬೇಡಿ ಮಾತ್ರ...!


ಕನ್ನಡದ ಚಾರ್ಲಿನಾಯಿ ಕಾಸರಗೋಡಿಗೆ ಬಂದಿದೆ. ಮುಖ್ಯ ಪಾತ್ರ 'ನಾಯಿ' ಅಂತಲೋ ಕತೆ ಬರೆದದ್ದು, ನಿರ್ದೇಶನ  ಮಾಡಿದ್ದು ಕಾಲೇಜಿಗೆ ಹೋಗದ, ವಿದ್ವತ್ತು, ಪರಂಪರೆ ಇಲ್ಲದ ಹುಡುಗ ಅಂತಲೋ ಇದೆಲ್ಲ  ಪ್ರಚಾರ ಪ್ರಿಯತೆಯ ಸೊಕ್ಕು ಅಂತಲೋ ಇನ್ನಾದರೂ ಕಡೆಗಣೇಸ್ಬೇಡಿ ಮಾರಾಯ್ರೇ. 

ಕುತೂಹಲಕ್ಕಾದ್ರೂ  ಒಮ್ಮೆ ಹೋಗಿ ನೋಡಿ ಬನ್ನಿ. 

ಹಾಯ್ ಕಿರಣ ನಿನಗೆ ನನ್ನ ಶುಭಕಾಮನೆ ಮಗುವೆ. ನಿನ್ನಂತವರಿರುವಾಗ ಕನ್ನಡಕ್ಕೆ ಎಲ್ಲಿಯ ಕೊನೆ...?

ಕೀರ್ತಿವಂತನಾಗಿ ಬೆಳೆ; ನಾವಿದ್ದೇವೆ ನಿನ್ನ ಜತೆ.

-ದಯಾನಂದ ರೈ ಕಳ್ವಾಜೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post