|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಳಿ ಹಿಂಡುವವರು ಚಾಡಿಕೋರರೆ? ಮನ ಪರಿವರ್ತಕರೇ?

ಹುಳಿ ಹಿಂಡುವವರು ಚಾಡಿಕೋರರೆ? ಮನ ಪರಿವರ್ತಕರೇ?



ಗಂಡ ಹೆಂಡತಿ, ಮಕ್ಕಳು, ವೃದ್ಧರು ಮುಂತಾಗಿ ಎಲ್ಲರೂ ಸೇರಿಕೊಂಡು ಚಂದದಿಂದ ಒಂದು ಸಂಸಾರ ನಡಿಯುತ್ತಿದ್ದರೆ ಅದನ್ನು ನೋಡುವದೇ ಒಂದ ಸೊಗಸು. ಬಹುಷಃ ಇಂಥ ಸಂಸಾರದಲ್ಲಿ ಸ್ವರ್ಗವನ್ನೇ ಕಾಣಬಹುದು. ಆದರೆ ಹತ್ತಾರು ವರ್ಷಗಳಿಂದ ಅನ್ಯೋನ್ಯತೆಯಲ್ಲಿದ್ದ ಇಂಥ ಸಂಸಾರಗಳನ್ನು ನರಕವನ್ನಾಗಿಸಲು ಕೇವಲ ಕೆಲವು ಕ್ಷಣದ ಚಾಡಿ ಮಾತುಗಳು ಸಾಕಾಗುತ್ತವೆ. ಈ ಚಾಡಿಕೋರರು ಅದೆಷ್ಟು ಪರಿಣಾಮಕಾರಿಗಳಾಗಿರುತ್ತಾರೆ ಎಂದರೆ ನಂಬಲಸಾಧ್ಯವಾದಷ್ಟು, ಉಪೇಕ್ಷಿಸಲಾರದಷ್ಟು. ಹಾಗಾದರೆ ಒಂದು ಕ್ಷಣದ ಆ ಮಾತಿಗೆ ಅಷ್ಟೊಂದು ಶಕ್ತಿ ಹೇಗೆ ಬರುತ್ತದೆ? ಅದರ ಮರ್ಮವೇನು?  ಪರಿಣಾಮ ಯಾರಿಗೆ?  ದೌರ್ಬಲ್ಯ ಯಾರಲ್ಲಿದೆ? ಇದನ್ನೆಲ್ಲ ಪರಿಗಣಿಸಿದರೆ ಇದರಿಂದ ಸ್ವಲ್ಪವಾದರೂ ಹೊರಗೆ ಬರಬಹುದು ಅಥವಾ ಜಾಗೃತರಾಗಿರಬಹುದು.


ನಾವು ಮೊದಲಾಗಿ ಯೋಚಿಸಬೇಕಾದದ್ದೆಂದರೆ ನಮ್ಮ ಸುರಕ್ಷತೆ. ಎಷ್ಟೋ ವರ್ಷಗಳಿಂದ ಅನ್ಯೋನ್ಯತೆಯಲ್ಲಿದ್ದು ಕೆಲವೊಂದು ಸಲ ಭಿನ್ನಾಭಿಪ್ರಾಯವಿದ್ದರೂ ಪರಸ್ಪರ ಹೊಂದಾಣಿಕೆಯಿಂದ ಇಷ್ಟೊಂದು ವರ್ಷಗಳು ಕಳೆದಿರುವಾಗ ಯಾರದೋ ಮಾತಿಗೆ ಮರುಳಾಗುವುದೆಂದರೆ ಅದು ನಮ್ಮ ದೌರ್ಬಲ್ಯ ಮಾತ್ರವಲ್ಲ ಅಜ್ಞಾನವೂ ಹೌದು. ಚಾಡಿ ಹೇಳುವವರು ಯಾವಾಗಲೂ ಅವರ ಅನುಕೂಲಕ್ಕೋಸ್ಕರ ನಮ್ಮನ್ನು ಬಳಸಿಕೊಳ್ಳುತ್ತಾರೆನ್ನುವ ಪರಿಜ್ಞಾನ ನಮ್ಮಲ್ಲಿರಬೇಕು. ಒಂದು ವೇಳೆ ಚಾಡಿಮಾತು ಕೇಳುವುದಾದರೂ ಸಾವಿರ ಸಲ ವಿಮರ್ಶೆ ಮಾಡಬೇಕು.


ಒಂದು ವೇಳೆ ಅವರು ಹೇಳುವುದು ಸತ್ಯವಾದರೂ ಅದರಿಂದ ನಮ್ಮ ಸಂಸಾರ, ವ್ಯವಹಾರ ಹಾಳಾಗುವುದಾದರೆ ಆ ಸತ್ಯವನ್ನು ಕೂಡ ಬದಿಗೆ ತಳ್ಳುವುದೇ ಶ್ರೇಷ್ಠ. ಅದೇ ರೀತಿ ಇನ್ನೊಬ್ಬರ ವಿಷಯವನ್ನು ನಮ್ಮಲ್ಲಿ ಯಾರಾದರು ಹೇಳುತ್ತಿದ್ದರೆ ನಾವು ಅದನ್ನು ಕುತೂಹಲದಿಂದ ಕೇಳುತ್ತೇವೆ, ನಂಬುತ್ತೇವೆ. ಆದರೆ ಅಂಥವರು ನಮ್ಮ ವಿಷಯವನ್ನೂ ಇನ್ನೊಬ್ಬರಲ್ಲಿ ಅಷ್ಟೇ ರಂಗಾಗಿ ಹೇಳುತ್ತಾರೆನ್ನುವುದೂ ಅಷ್ಟೇ ಸತ್ಯ. ಇಂಥವರ ಸ್ವಭಾವವೇ ಒಬ್ಬರಿಂದೊಬ್ಬರಿಗೆ ಭಿನ್ನಾಭಿಪ್ರಾಯ ಬರುವಂತೆ ವಾತಾವರಣ ಸೃಷ್ಟಿ ಮಾಡುವುದು ಮತ್ತು ತಮ್ಮ ಬೇಳೆ ಬೇಯಿಸಿಕೊಳ್ಳುವುದು. ಹಿಂದೆ ನಾರದನೆಂಬ ಗಾನ ಗಾರುಡಿಗ ಇದ್ದನು. ಇವನನ್ನು ಎಲ್ಲರೂ ಚಾಡಿಕೋರ ಎನ್ನುತ್ತಿದ್ದರು. ವಿಪರ್ಯಾಸ ನೋಡಿ. ಚಾಡಿಮಾತಿನಿಂದಲೂ ಲೋಕಹಿತವನ್ನು ಮಾಡಬಹುದೆಂದು ನಾರದ ಮಹರ್ಷಿಯು ನಮಗೆ ಪಾಠ ಮಾಡಿದ್ದ. ಅಥವಾ ಈತನ ಚಾಡಿ ಮಾತನ್ನು ಕೇಳಿ ಆತ ನುಡಿದಂತೆ ಅನುಸರಿಸಿ ಹಲವಾರು ಲೋಕಕಂಟಕರು ನಾಶವೂ ಆಗಿದ್ದರು. ಅದು ಅಂದಿಗಾದರೆ ಇಂದು ಈ ಕಲೆಯು ಸಂಸಾರಗಳನ್ನು ಒಡೆಯಲಷ್ಟೇ ಬಳಕೆಯಾಗುವುದು ಖೇದಕರ. 


ರಾಮಾಯಣದ ಮಂಥರೆಯಿರಬಹುದು, ಮಹಾಭಾರತದ ಶಕುನಿ ಇರಬಹುದು ಅವರ ವಂಶಜರು ಇಂದಿಗೂ ಇದ್ದಾರೆನ್ನುವದು ಸತ್ಯ. ಇವರ ದುರುದ್ದೇಶದಿಂದ ಚಾಡಿಮಾತು ಹೇಳಿದವನೂ ಕೇಳಿದವನೂ ನಾಶವಾದರೇ ಹೊರತು ಯಾರೂ ಉದ್ಧಾರವಾಗಲೇ ಇಲ್ಲ. ಆದರೆ ಇಂದಿಗೂ ಈ ಕ್ರಿಯೆ ನಿರಂತರ.  ನನ್ನದೇ ಅನುಭವ ಹೇಳುವುದಾದರೆ ನಾನು ಒಂದು ಕಾಲದಲ್ಲಿ ಬಸ್ ಚಾಲಕನಾಗಿದ್ದೆ. ಅಹಂಕಾರವಲ್ಲ.. ನಿಯತ್ತಿನಿಂದ ಹನ್ನೊಂದು ವರ್ಷ ಯಾವುದೇ ಅಪಘಾತಗಳಿರದೆ, ಯಾರಲ್ಲೂ ದ್ವೇಷವಿರದೆ, ಬಸ್ಸಿನ ಮಾಲಕನಿಗೆ ಯಾವತ್ತೂ ಎದುರಾಡದೆ, ಎಲ್ಲ ಪ್ರಯಾಣಿಕರಿಂದಲೂ ಪ್ರೀತಿಯನ್ನು ಗಳಿಸಿದ್ದೆ. ಒಟ್ಟಾರೆ ಒಬ್ಬ ವಾಹನ ಮಾಲಕನಾದವನು ಯಾವ ರೀತಿಯ ಚಾಲಕನನ್ನು ಬಯಸುತ್ತಾನೋ ಆ ರೀತಿಯಲ್ಲಿ ಯಾವ ಕುಂದು ಕೊರತೆಯೂ ಇರದೆ ದುಡಿಯುತ್ತಿದ್ದೆ. ಆ ಕ್ಷಣದಲ್ಲಿ ಯಾವನೋ ಒಬ್ಬನಿಗೆ ಕೆಲಸದ ಅವಶ್ಯಕತೆ ಇತ್ತು. ಅದಕ್ಕೆ ಆತ ಆರಿಸಿಕೊಂಡದ್ದು ಚಾಡಿಮಾತಿನ ದಾರಿ.


ಆತ ನನ್ನ ಬಗ್ಗೆ ಬೇಡವಾದ ಚಾಡಿಮಾತೊಂದನ್ನು ಮಾಲಕನಿಗೆ ರವಾನಿಸಿದ. ಆವಾಗ ನನ್ನ ಚಾಲನೆಯಿಂದ ಮಾಲಕನು ಬೇಸತ್ತಿರಬೇಕು. ಯಾಕೆಂದರೆ ಮೃಷ್ಟಾನ್ನ ಭೋಜನವಾದರೂ ಸತತವಾಗಿ ಉಂಡರೆ ಅದರಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಕೊನೆಕೊನೆಗೆ ಇದರಿಂದ ಒಮ್ಮೆ ಬಿಡುಗಡೆ ಆದರೆ ಸಾಕೆನಿಸುತ್ತದೆ. ಆವಾಗಲೇ ಸಪ್ಪೆ ಗಂಜಿಯೋ, ಒಂದುಪವಾಸವೋ, ಒಂದು ಹೋಟೇಲೂಟವೋ, ಒಂದು ಸಣ್ಣ ಫಲಾಹಾರವೋ ಇಷ್ಟವಾಗುತ್ತದೆ. ಅದು ಒಂದು ಕ್ಷಣಿಕದ ನಿರ್ಧಾರವಾದರೂ ಆ ಕ್ಷಣಕ್ಕೆ ಅಪ್ಯಾಯಮಾನವಾಗುತ್ತದೆ. ಆದರೆ ಅದೇ ಮುಂದೆ ನಿತ್ಯವಾದಾಗ ಮೃಷ್ಟಾನ್ನ ಭೋಜನದ ಮಹತ್ವ ಗೊತ್ತಾಗುತ್ತದೆ. ಅಲ್ಲಿಗೆ ಕಾಲ ಮಿಂಚಿರುತ್ತದೆ.


ಅಂತೆಯೇ ನಾನು ಪ್ರೀತಿಸುತ್ತಿದ್ದ ವೃತ್ತಿಯಾಗಲಿ, ನನ್ನ ನಿಯತ್ತಾಗಲಿ ನಿಷ್ಠೆಯಾಗಲಿ ಮಾಲಕನಿಗೆ ಗಣನೆಗೆ ಬರಲಿಲ್ಲ. ಚಾಡಿಕೋರನಿಗೆ ಕೆಲಸ ಬೇಕಾಗಿತ್ತು, ಮಾಲಕನಿಗೆ ಬದಲಾವಣೆ ಬೇಕಿತ್ತು, ಜತೆಗೆ ವಿವೇಕವೂ ಕೈಕೊಟ್ಟಿತ್ತು. ಪರಿಣಾಮ ನಿರೀಕ್ಷಿತವೇ. ಮಾಲಕ ನನಗೆ ಹೇಳಿದ ' ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ. ಕಾರಣ... ನಿಮ್ಮ ಚಾಲನೆ ಸರಿ ಇಲ್ಲವೆಂಬ ನೆಪ. ಸರಿ.. ನಾನು ಕೂಡಲೆ ಚಾವಿಯನ್ನು ಕೊಟ್ಟು ಹೊರಟೇ ಬಿಟ್ಟೆ. ಕಾರಣವನ್ನೂ ಕೇಳಲಿಲ್ಲ, ನಾಳೆಯಿಂದ ಜೀವನಕ್ಕೆ ಏನೆಂಬ ಕಲ್ಪನೆಯನ್ನೂ ಮಾಡಿಲ್ಲ. ವೃತ್ತಿ ಗೊತ್ತಿರುವುದರಿಂದ ಮತ್ತು ಅದರಲ್ಲಿ ಪ್ರಭುತ್ವವೂ ಇರುವುದರಿಂದ ಭವಿಷ್ಯದ ಬಗ್ಗೆ ಕಿಂಚಿತ್ತೂ ಹೆದರಿಕೆಯೇ ಇಲ್ಲದ ಕಾರಣ ಸ್ಥಿತಪ್ರಜ್ಞೆಯಿಂದಲೇ ಹನ್ನೊಂದು ವರ್ಷದ ನನ್ನ ಸೇವೆಗೆ ತಿಲಾಂಜಲಿಯನ್ನಿಟ್ಟೆ. ಮುಂದೆ ಆ ಬಸ್ಸಿಗೆ ಹಲವಾರು ಚಾಲಕರು ಆಗಿ ಹೋದರು. ಖಾಸಗಿ ಸಂಸ್ಥೆಗಳಲ್ಲಿ ಭದ್ರತೆ ಇಲ್ಲದಿರುವುದರಿಂದ ಇದೆಲ್ಲ ಸಹಜವೇ. ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂಥ ಪ್ರಕ್ರಿಯೆಗಳು ಅನಾದಿಯಿಂದ ಬಂದವುಗಳೇ. ಆದರೊಂದು ವಿಚಾರ. ಚಾಡಿಕೋರನಾಗಲಿ ಆತನ ಮಾತಿಗೆ ಬೆಲೆ ಕೊಡುವವನಾಗಲಿ ಪ್ರಪಂಚದಲ್ಲಿ ಉದ್ಧಾರವಾದ ಉದಾಹರಣೆಗಳೇ ಇಲ್ಲ. ಮುಂದೆ ಆಗುವುದೂ ಇಲ್ಲ. ವಿಚಿತ್ರವೆಂದರೆ ಆ ಚಾಡಿಕೋರ ನನಗೆ ವರದಾನವನ್ನೇ ಮಾಡಿದ ಎಂದು ಇಂದು ನನಗನಿಸುತ್ತದೆ. ನನ್ನ ಮುಂದಿನ ವ್ಯವಹಾರದ ಪ್ರಗತಿಗೆ ಆ ಒಂದು ಕ್ಷಣ ಸಾಕ್ಷಿಯಾಯಿತು. ಬಸ್ಸಿನ ಮಾಲಕ ಅಂದಿನಂತೆಯೇ ಇಂದೂ ಒತ್ತಡದಲ್ಲೇ ಇದ್ದಾನೆ, ಆ ಚಾಲಕನೂ ಬಸ್ಸಿನಿಂದ ಬಸ್ಸಿಗೆ ವಲಸೆ ಹೋಗುತ್ತಲೇ ಇದ್ದಾನೆ. ನನಗಾದರೋ ಆ ಕೆಲಸವನ್ನು ಇನ್ನಷ್ಟು ದಿನಗಳ ಹಿಂದೆಯೇ ಆತನಿಗೆ ಮಾಡಬಹುದಿತ್ತು ಎಂದು ಇವತ್ತು ಅನಿಸಿದೆ.


ಕೆಲವು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಈ ಮನಪರಿವರ್ತಕರ ದಂಡೇ ಇರುತ್ತದೆ. ಯಜಮಾನನಾದವನ ದೌರ್ಬಲ್ಯಗಳನ್ನು ಮನಗಂಡು ಅವರಿಗೆ ಬೇಕಾದದ್ದನ್ನು ಪೂರೈಸಿಕೊಟ್ಟಾಗ ಅವರ ಮಾತಿಗೆ ಅಥವಾ ಅವರ ಗಾಳಕ್ಕೆ ಯಜಮಾನನೆಂಬ ಮಿಕ ಬಿದ್ದಂತೆಯೇ. ಅತಿ ವಿನಯ, ಅತಿಯಾದ ಭಕ್ತಿಯ ಅಭಿನಯ, ಅತಿಯಾದ ಜವಾಬ್ದಾರಿಯ ಮುಖವಾಡ ಇವೇ ಮೊದಲಾದವು ಇವರ ಮೂಲ ಬಂಡವಾಳ. ಅಂದರೆ ಮಠಾಧೀಶರಿಂದ ತೊಡಗಿ ರಾಜಕಾರಣದವರೆಗೂ ಇವರ ಕಾರಭಾರಕ್ಕೆ ಕೊರತೆ ಇಲ್ಲ. ಸರ್ವಸಂಗ ಪರಿತ್ಯಾಗಿ ಎಂದೆನಿಸಿರುವ ಜಗದ್ಗುರುಗಳೂ ಇಂಥವರ ಗುಲಾಮರಾಗುತ್ತಾರೆಂದರೆ ಇವರ ಚಾಡಿಮಾತಿಗೆ ಬೆಲೆ ಕಟ್ಟಲಾದೀತೇ? ಇದಕ್ಕೆ ಪರಿಹಾರವೆಂದರೆ ಇಂಥವರ ಸಂಪರ್ಕವನ್ನು ಕಡಿಮೆಗೊಳಿಸಬೇಕು. ಅವರ ಮತ್ತು ನಮ್ಮ ನಡುವೆ ಒಂದು ಆರೋಗ್ಯಪೂರ್ಣ ಅಂತರವನ್ನು ಕಾಯ್ದುಕೊಳ್ಳಬೇಕು. ಅಂಥವರ ಮಾತುಗಳನ್ನು ಕೇಳಲೇಬೇಕಾದ ಅನಿವಾರ್ಯತೆ ಉಂಟಾದಾಗ ಪ್ರತಿಕ್ರಿಯೆಯನ್ನು ಕೊಡದೆ ಇರಬೇಕು. ಯಾಕೆಂದರೆ ನಮ್ಮ ಒಂದು ಪ್ರತಿಕ್ರಿಯೆಯೂ ಆತನಿಗೆ ಬಂಡವಾಳವಾಗಬಹುದು.


ನಮ್ಮ ವ್ಯವಹಾರಗಳಲ್ಲಿ ನಮ್ಮ ಸಂಬಂಧಗಳಲ್ಲಿ ನಮಗೆ ವಿಶ್ವಾಸವಿದ್ದರೆ ಅಂತು ಇಂಥವರಿಂದ ನಮಗ್ಯಾವ ಬಾಧೆಯೂ ಇರದು. ವಿಶ್ವಾಸ ಎನ್ನುವಾಗ ನನಗೊಂದು ಘಟನೆ ನೆನಪಾಗುತ್ತದೆ. ಒಂದು ದಿನ ನಮ್ಮ ಮನೆಗೆ ನನ್ನ ಗೆಳೆಯರೊಬ್ಬರು ಬಂದಿದ್ದರು. ಅವರು ಯಾವಾಗಲೂ ಏನಾದರೊಂದು ತಮಾಷೆಯ ಮಾತಾಡಿಕೊಂಡಿರುವುದೇ ಜಾಸ್ತಿ. ಅವರು ನನ್ನ ಹೆಂಡತಿ ಮಹಾಲಕ್ಷ್ಮಿಯಲ್ಲಿ ನನ್ನ ಕುರಿತಾಗಿ ' ಇವರು ಮುಂಚೆ ಡ್ರೈವರ್ ಆಗಿದ್ದರು. ಆವಾಗ ಏನೆಲ್ಲ ಮಾಡಿದ್ದಾರೆಂದು ನಿನಗೆ ಗೊತ್ತೆ?' ಎಂದು ತಮಾಷೆಗೆಂದು ಹೇಳಿದಾಗ ಮಹಾಲಕ್ಷ್ಮಿಗೆ ನನ್ನಲ್ಲಿ ಅಚಲವಾದ ವಿಶ್ವಾಸವಿದ್ದುದರಿಂದ ಅವಳು ಹೇಳಿದ ಮಾತು ನನಗೆ ಈಗಲೂ ಕಿವಿಯಲ್ಲಿ ಕೇಳಿಸುತ್ತದೆ. ಹಾಗೂ ಅವಳ ವಿಶ್ವಾಸಕ್ಕೆ ನಾನು ಯೋಗ್ಯನೂ ಆಗಿದ್ದೆ ಎನ್ನುವುದು ಹೆಮ್ಮೆಯೂ ಎನಿಸುತ್ತದೆ. ಅವಳು ಹೇಳಿದ್ದೇನು ಗೊತ್ತೆ.. ನನ್ನ ಗಂಡನ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ ನೀವು ಏನು ಹೇಳಿದರೂ ನಾನು ನಂಬುವುದೂ ಇಲ್ಲ. ಮುಂದೆ ತಮಾಷೆಗಾದರೂ ಇಂತಹದ್ದನ್ನು ನನ್ನಲ್ಲಿ ಹೇಳಬೇಡಿ. ನನಗೆ ಅದನ್ನು ಕಲ್ಪಿಸಿಕೊಳ್ಳಲೂ ಇಷ್ಟವಿಲ್ಲ. ಮತ್ತು ಅವರು ಹಾಗೆ ಇರುವವರೂ ಅಲ್ಲವೆಂದು. ಅಲ್ಲಿಗೆ ಆ ವಿಷಯ ಮುಗಿಯಿತು. ಅಂದರೆ ವಿಶ್ವಾಸವಿಲ್ಲದಿದ್ದರೆ ಅದೊಂದೆ ಮಾತು ಮನೇಯನ್ನೇ ಕೆಡಿಸಿಬಿಡಲು ಸಾಕಾಗುತ್ತದೆ. ಪ್ರಥಮವಾಗಿ ನಾವು ಸತ್ಯದಲ್ಲಿರಬೇಕು. ಆವಾಗ ವಿಶ್ವಾಸ ಮೂಡಬೇಕು. ಅಂಥ ವಿಶ್ವಾಸದ ಅಡಿಗಟ್ಟಿನಲ್ಲಿ ಯಾವ ಸೌಧವನ್ನೂ ಕಟ್ಟಬಹುದು. ಯಾವ ಸಾಧಕನೂ ಆಗಬಹುದು ಏನಂತೀರಿ...?

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post