ಉದ್ಯಮದ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸಿದ್ಧರಾಗಲಿ: ಪ್ರತಾಪ್ ಶ್ರೀನಿವಾಸನ್

Upayuktha
0

ಮಂಗಳೂರು ವಿವಿಯಲ್ಲಿ ಉದ್ಯೋಗ ಮೇಳಕ್ಕೆ ಚಾಲನೆ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಆಕಾಂಕ್ಷಿಗಳು



ಮಂಗಳೂರು: ಉದ್ಯಮ, ಶಿಕ್ಷಣ ಮತ್ತು ಪಠ್ಯಕ್ರಮ ಈ ಮೂರೂ ಜೊತೆಯಾಗಿ ಸಾಗಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು ತುಂಬಾ ಮುಖ್ಯ, ಎಂದು 'ಮ್ಯಾಜಿಕ್ ಬಸ್'ನ ಪ್ರಾದೇಶಿಕ ಕಾರ್ಯಕ್ರಮ ನಿರ್ವಾಹಕ (ದಕ್ಷಿಣ) ಪ್ರತಾಪ್ ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ.


ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶನಿವಾರ ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ (ಯುಇಐಜಿಬಿ) ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು (ಯುಟಿಪಿಸಿ), ಮಂಗಳಾ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಆಯೋಜಿಸಿರುವ ವಿಶ್ವವಿದ್ಯಾನಿಲಯ ಮಟ್ಟದ ಎರಡು ದಿನಗಳ ಉದ್ಯೋಗ ಮೇಳವನ್ನು ಉದ್ಘಾಟಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ,  ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಉದ್ಯೋಗವೂ ದೊರೆಯುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು. ವಿದ್ಯಾರ್ಥಿಗಳು ಆರಂಭದಲ್ಲಿ ಸಂಬಳಕ್ಕಿಂತ ಹೆಚ್ಚು ದೊರೆಯುವ ಅವಕಾಶ ಮತ್ತು ಅನುಭವಗಳ ಕಡೆಗೆ ಗಮನಹರಿಸಬೇಕು. ನಿಷ್ಠೆ, ಸಾಮರ್ಥ್ಯ, ಬುದ್ಧಿವಂತಿಕೆಯಿದ್ದವರಿಗೆ ಅವಕಾಶಗಳು ಸಾಕಷ್ಟಿವೆ, ಎಂದರು.  


ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಅರ್ಹತೆ ಇದ್ದರಷ್ಟೇ ಸಾಲದು ಸೂಕ್ತ ರೀತಿಯಲ್ಲಿ ಪ್ರಯತ್ನ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅರ್ಹತೆ ಸಾಮರ್ಥ್ಯಕ್ಕೆ ಪರ್ಯಾಯವಲ್ಲ, ಎಂದು ಎಚ್ಚರಿಸಿದರು. “ಋಣಾತ್ಮಕ ಚಿಂತನೆ ಬಿಟ್ಟು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಗಮನಹರಿಸೋಣ. ಸಂಬಂಧಗಳ ನಿರ್ವಹಣೆಯಂತಹ ಕೌಶಲ್ಯಗಳು, ಧನಾತ್ಮಕ ಹವ್ಯಾಸಗಳು, ಸಮಯಪ್ರಜ್ಞೆ, ನೈತಿಕ ತತ್ವಗಳು, ಸಮಸ್ಯೆಯನ್ನೇ ಅವಕಾಶಗಳನ್ನಾಗಿಸಿಕೊಳ್ಳುವ  ಆತ್ಮವಿಶ್ವಾಸ ನಮ್ಮಲ್ಲಿರಬೇಕು,” ಎಂದು ಉದ್ಯೋಗಾರ್ಥಿಗಳಿಗೆ ಕಿವಿಮಾತು ಹೇಳಿದರು.  


ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅತಿಥಿಗಳನ್ನು ಸ್ವಾಗತಿಸಿದರು. ಯುಇಐಜಿಬಿ ಹಾಗೂ ಯುಟಿಪಿಸಿ ಮುಖ್ಯಸ್ಥ ಪ್ರೊ. ಕೆ ಎಸ್ ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುಟಿಪಿಸಿ ಯೋಜನೆ ಆಧರಿತ ಸಲಹೆಗಾರ್ತಿ ಶಾರದಾ ಹೆಚ್ ಎಸ್ ಧನ್ಯವಾದ ಸಮರ್ಪಿಸಿದರು. ಡಾ. ಪ್ರೀತಿ ಕೀರ್ತಿ ಡಿಸೋಜ ಹಾಗೂ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಮಂಗಳಾ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  


ಅದೃಷ್ಟ ಪರೀಕ್ಷೆಗಿಳಿದ ಸಾವಿರಾರು ಆಕಾಂಕ್ಷಿಗಳು!

ವಿಶ್ವವಿದ್ಯಾನಿಲಯದ ಮಾನವಿಕ, ನಿರ್ವಹಣೆ, ವಿಜ್ಞಾನ ಸಂಕೀರ್ಣ ಮತ್ತು ಉಪನ್ಯಾಸ ಸಂಕೀರ್ಣಗಳಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಅಪೋಲೋ ಫಾರ್ಮಸಿ, ಮುತ್ತೂಟ್ ಫೈನಾನ್ಸ್, ಮೆಡಿಪ್ಲಸ್, ಜಸ್ಟ್ ಡಯಲ್, ಬೈಜೂಸ್, ಆಕ್ಸಿಸ್ ಬ್ಯಾಂಕ್, ಕಾಂಚನಾ ಗ್ರೂಪ್ ಆಫ್ ಕಂಪೆನೀಸ್, ಹೋಂಡಾ ಮ್ಯಾಟ್ರಿಕ್ಸ್, ದಿಯಾ ಸಿಸ್ಟಮ್ಸ್, ಹೆಚ್ಡಿಎಫ್ಸಿ ಬ್ಯಾಂಕ್, ಮಾಂಡೊವಿ ಮೋಟರ್ಸ್, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ 45 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಸ್ಥಳೀಯರು ಮಾತ್ರವಲ್ಲದೆ, ಉಡುಪಿ, ಕೊಡಗು ಮೊದಲಾದ ಜಿಲ್ಲೆಗಳ ಸಾವಿರಾರು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಮ್ಯಾಜಿಕ್ ಬಸ್ ಸಂಸ್ಥೆಯ ಸಿಬ್ಬಂದಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಟೋಕನ್ ಒದಗಿಸಿ ನೇರ ಸಂದರ್ಶನಕ್ಕೆ ಅವಕಾಶ ಕಲ್ಪಿಸಿತು. ಭಾನುವಾರ ಇನ್ನೂ ಹೆಚ್ಚಿನ ಆಕಾಂಕ್ಷಿಗಳು ಆಗಮಿಸುವ ನಿರೀಕ್ಷೆಯಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top