ಕೆಲವು ದಿನಗಳಿಂದ ಕೇರಳದಲ್ಲಿ ಸದ್ದು ಮಾಡುತ್ತಿರುವ ಟೊಮೆಟೋ ಜ್ವರ ಅಥವಾ ಟೊಮೆಟೋ ಫ್ಲೂ ಒಂದು ವೈರಾಣುವಿನಿಂದ ಹರಡುವ ಸೋಂಕು ಜ್ವರವಾಗಿದ್ದು, ಐದು ವರ್ಷಗಳಿಗಿಂತ ಕೆಳಗಿರುವ ಮಕ್ಕಳಲ್ಲಿ ಕಂಡು ಬರುತ್ತದೆ. ಸುಮಾರು 80 ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ. ನೆರೆ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ಕೂಡಾ ಈ ಜ್ವರದ ಬಗ್ಗೆ ಪ್ರಕಟಣೆ ಹೊರಡಿಸಿ ಮಕ್ಕಳಲ್ಲಿ ಜ್ವರ ಬಂದ ತಕ್ಷಣವೇ ವೈದ್ಯರಲ್ಲಿ ತೋರಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದೆ. ಈ ಜ್ವರ ಬಂದರೆ ಮಕ್ಕಳಲ್ಲಿ ಮೈಯಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವ ಕಾರಣದಿಂದ ಟೊಮೆಟೋ ಫ್ಲೂ ಅಥವಾ ಟೊಮೆಟೋ ಜ್ವರ ಎಂದು ಅನ್ವರ್ಥನಾಮ ಬಂದಿದೆ.
ಜ್ವರದ ಲಕ್ಷಣಗಳು ಏನು?
1. ವಿಪರೀತ ಜ್ವರ, ಸುಸ್ತು, ಮತ್ತು ಮೈಕೈನೋವು.
2. ವಿಪರೀತ ನಿರ್ಜಲೀಕರಣ
3. ಚರ್ಮದಲ್ಲಿ ಕೆಂಪು ಗುಳ್ಳೆಗಳು ಮತ್ತು ತುರಿಕೆ ಕಂಡು ಬರುತ್ತದೆ.
4. ಗಂಟು ನೋವು, ಹೊಟ್ಟೆಯಲ್ಲಿ ನೋವು ಇರಬಹುದು.
5. ವಾಂತಿ, ವಾಕರಿಕೆ ಕೂಡಾ ಕಂಡು ಬರುತ್ತದೆ.
6. ಕೆಮ್ಮು, ಅಕ್ಷಿ ಬರುವುದು, ಮೂಗಿನಲ್ಲಿ ದ್ರವ ಸೋರುವಿಕೆ
7. ಭೇದಿ ಕೂಡಾ ಕಂಡು ಬರಬಹುದು.
8. ವಿಪರೀತ ಜ್ವರವಿದ್ದಲ್ಲಿ ಕಾಲು ಕೈಗಳಲ್ಲಿ ಚರ್ಮದ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ.
ಏನು ಮುನ್ನೆಚ್ಚರಿಕೆ ವಹಿಸಬೇಕು?
1. ಎಲ್ಲಾ ವೈರಾಣು ಸೋಂಕಿನಂತೆ ಈ ಜ್ವರವು ಸಾಂಕ್ರಾಮಿಕವಾಗಿ ವೇಗವಾಗಿ ಹರಡುತ್ತದೆ. ಈ ಕಾರಣದಿಂದ ಅಂತಹಾ ವ್ಯಕ್ತಿಯನ್ನು ಬೇರೆಯವರಿಂದ ಬೇರ್ಪಡಿಸಿ ಇಡತಕ್ಕದ್ದು. ಇಂತಹ ವ್ಯಕ್ತಿಗಳು ಬಳಸಿದ ಬಟ್ಟೆ, ತಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಸರಿಯಾಗಿ ತೊಳೆದು ಸೋಂಕು ನಾಶಕ ದ್ರಾವಣ ಬಳಸಿದ ಬಳಿಕವೇ ಇತರರು ಬಳಸÀತಕ್ಕದ್ದು.
2. ಮೈಮೇಲೆ ಬಿದ್ದ ಕೆಂಪು ಗುಳ್ಳೆಗಳನ್ನು ಅದರ ಪಾಡಿಗೆ ಬಿಡಬೇಕು. ಗುಳ್ಳೆಗಳನ್ನು ಉಗುರಿನಿಂದ ಒಡೆಯಬಾರದು. ಬ್ಯಾಕ್ಟೀರಿಯಾ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಅವುಗಳು ತನ್ನಿಂತಾನೆ ಒಡೆದು ಬಿದ್ದು ಹೋಗುತ್ತದೆ. ತುರಿಕೆ ಇದ್ದಲ್ಲಿ ತುರಿಕೆ ನಿವಾರಣಾ ದ್ರಾವಣ ಬಳಸಬಹುದು.
3. ಮಕ್ಕಳಲ್ಲಿ ಬೇಗ ನಿರ್ಜಲೀಕರಣವಾಗುವ ಸಾಧ್ಯತೆ ಇರುವುದರಿಂದ ಅವರಿಗೆ ಸಾಕಷ್ಟು ದ್ರವಾಹಾರ, ಜ್ಯೂಸ್ ಮತ್ತು ನೈಸರ್ಗಿಕ ಪಾನೀಯ ನೀಡತಕ್ಕದ್ದು.
4. ಮಕ್ಕಳಲ್ಲಿ ವಿಶೇಷವಾಗಿ ವಿಶ್ರಾಂತಿ ಅತೀ ಅಗತ್ಯ. ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕತಕ್ಕದ್ದು.
5. ಇದೊಂದು ತನ್ನಿಂತಾನೇ ಗುಣವಾಗುವ ಜ್ವರವಾಗಿದ್ದು, ಒಂದು ವಾರದಲ್ಲಿ ಕಡಿಮೆಯಾಗುತ್ತದೆ. ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಮೈಕೈ ನೋವಿಗೆ ನೋವು ನಿವಾರಕ ಔಷಧಿ ಮತ್ತು ಜ್ವರಕ್ಕೆ ಜ್ವರ ನಿಯಂತ್ರಣ ಔಷಧಿ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಸ್ವಯಂ ಔಷಧಿಗಾರಿಕೆ ಮಾಡಬಾರದು. ವೈದ್ಯರ ಸಲಹೆಯಂತೆ ಔಷಧಿ ಮತ್ತು ಚಿಕಿತ್ಸೆ ಪಡೆಯತಕ್ಕದ್ದು.
ಕೊನೆಮಾತು:
ಐದು ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಜ್ವರ ವೈರಾಣುವಿನಿಂದ ಹರಡುತ್ತದೆ. ಯಾವ ವೈರಾಣು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚಿಕುನ್‍ಗುನ್ಯಾ ಮತ್ತು ಡೆಂಗ್ಯೂ ಜ್ವರ ಬಾಧಿಸುವ ವೈರಾಣುವಿಗೂ ಈ ವೈರಾಣುವಿಗೂ ಸಾಮ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕೇರಳದ ಕೊಲ್ಲಂ, ನೆಡುವತ್ತೂರು ಅಂಚಲ್ ಮತ್ತು ಅರ್ಯಂಕಾವು ಪ್ರದೇಶದಲ್ಲಿ ಈ ಜ್ವರ ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಬಾಯಿಯಲ್ಲಿ ಮತ್ತು ನಾಲಗೆಯಲ್ಲಿಯೂ ಕೆಲವೊಂದು ರೋಗಿಗಳಲ್ಲಿ ಗುಳ್ಳೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಹೆಚ್ಚಾಗಿ ಕೈ, ಕಾಲು, ನಿತಂಬ, ಹೊಟ್ಟೆಭಾಗದಲ್ಲಿ ದೊಡ್ಡದಾದ ಕೆಂಪು ಗುಳ್ಳೆಗಳು ಕಂಡು ಬರುತ್ತದೆ. ವಿಪರೀತ ಸುಸ್ತು, ಜ್ವರ ಮತ್ತು ನಿರ್ಜಲೀಕರಣವಿರುವ ಕಾರಣದಿಂದ ಮಕ್ಕಳಲ್ಲಿ ಜ್ವರ ಬಂದ ಕೂಡಲೇ ವೈದ್ಯರ ಬಳಿ ತೋರಿಸಿಕೊಳ್ಳುವುದು ಮತ್ತು ಚಿಕಿತ್ಸೆ ಪಡೆಯುವುದು ಜಾಣತನ ಎಂದು ವೈದ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಕೋವಿಡ್-19 ವೈರಾಣು ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಇನ್ನೊಂದು ವೈರಾಣು ಸೋಂಕು ಎದುರಿಸಲು ಮಾನಸಿಕವಾಗಿ ಸಿದ್ದರಿಲ್ಲ ಎಂಬ ಕಾರಣದಿಂದ ನಾವೆಲ್ಲ ಜಾಗರೂಕರಾಗಿ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
- ಡಾ. ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K), FPFA, M.B.A
ಮೊ : 9845135787
drmuraleechoontharu@gmail.com
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ