|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೇಷ್ಟ ಸಾಹಿತಿ, ವಿಮರ್ಶಕ ಎಸ್. ಆರ್. ವಿಜಯಶಂಕರ್ ಅವರಿಗೆ ಅಕಲಂಕ ಪುರಸ್ಕಾರ- 2021

ಶ್ರೇಷ್ಟ ಸಾಹಿತಿ, ವಿಮರ್ಶಕ ಎಸ್. ಆರ್. ವಿಜಯಶಂಕರ್ ಅವರಿಗೆ ಅಕಲಂಕ ಪುರಸ್ಕಾರ- 2021



ಉಡುಪಿ: ಹಿರಿಯ ಸಾಹಿತಿ, ವಿದ್ವಾಂಸ ದಿ. ಉಪ್ಪಂಗಳ ರಾಮ ಭಟ್ಟರ ಸ್ಮಾರಕ ದತ್ತಿನಿಧಿಯಿಂದ ಕೊಡಲಾಗುತ್ತಿರುವ ಅಕಲಂಕ ಪುರಸ್ಕಾರ-2021ಕ್ಕೆ ಹಿರಿಯ ವಿಮರ್ಶಕ ಎಸ್‌.ಆರ್. ವಿಜಯಶಂಕರ್ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್‌ ಹಾಗೂ ತಾಲೂಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಈ ಪುರಸ್ಕಾರವನ್ನು ನೀಡಲಾಗುತ್ತಿದೆ.


ವಿಮರ್ಶಾತ್ಮಕ ಲೇಖನ, ಸಂಕಲನ, ಅಂಕಣ ಬರಹ, ವ್ಯಕ್ತಿ ಚಿತ್ರಣ, ಕಾವ್ಯಾಧ್ಯಯನದ ಮೂಲಕ ಸಾಹಿತ್ಯ ಲೋಕದಲ್ಲಿ ಸಾಹಿತ್ಯಾಸಕ್ತರೆಲ್ಲರ ಗಮನ ಸೆಳೆದ ಚಾಣಕ್ಯ, 65ರ ನವ ತರುಣ ಅನುಭವೀ ಸಾಹಿತಿ ಶ್ರೀ ಎಸ್. ಆರ್. ವಿಜಯಶಂಕರ್.


ತನ್ನ ಕಲ್ಪನೆಗಳಿಗೆ ಜೀವ ತುಂಬುತ್ತ ತನ್ನ ಮನದಾಳದ ಚಿಂತನೆಗಳನ್ನು ಮಂಥನ ಮಾಡುತ್ತ ನವನೀತವನ್ನು ಹೊರ ತೆಗೆದು ಸಾಹಿತ್ಯ ಪ್ರೇಮಿಗಳಿಗೆ ಅದರ ಸವಿಯುಣ್ಣಿಸುವ ಕಾಯಕದಲ್ಲಿ ಸೈ ಎನಿಸಿಕೊಂಡವರು  ವಿಜಯಶಂಕರ್.


ವಸುಧಾ ವಲಯದ ಒಡನಾಟಗಳಿಗೆ ಮಣಿದು ಮನೋಗತವಾದ ಒಳದನಿಗೆ ತಲೆ ಬಾಗಿ, ಒಡಲೊಳಗಣ ಬಯಕೆಗಳ ನಿಜಗುಣಗಳಿಗೆ ಒರೆ ಹಚ್ಚಿ ನಿಧಾನ ಶೃತಿಗೆ ಹೂ ಬೆರಳುಗಳ ಸಂದಿನಲ್ಲಿ ತನ್ನೊಳಗಿನ ಸಾಹಿತ್ಯದ- ಇಂಗದ ತೃಷೆಗೆ ಕೃತಿ ಆಕೃತಿಗಳ ರೂಪವ ನೀಡಿ ಕಲ್ಪನೆಯ ಹೂದೋಟದೊಳಗೆ ಕೃತಿಗಳ ಪ್ರತಿಮಾ ಲೋಕವನ್ನೇ ಸೃಷ್ಟಿಗೈದ ಅಪ್ರತಿಮ ವಿಮರ್ಶಕ ಅಪ್ರಮೇಯ ಎಸ್ ಆರ್ ವಿಜಯಶಂಕರ್ ರವರು.


ಅವರ ಆ ಹೂದೋಟದೊಳಗೆ ಶ್ರೇಷ್ಟ ವ್ಯಕ್ತಿಗಳ, ಚಿತ್ರಗಳ ಆಪ್ತ ನೋಟವಿದೆ. ಹಿರಿಯ ಸಾಹಿತಿಗಳ ಬದುಕು ಬರಹದ ಭಾವಪೂರ್ಣ ಕಥನವಿದೆ, ಬೆಳದಿಂಗಳ ನೋಡಾ ಎಂಬಂತಹ ಹಲವು ವಿಮರ್ಶಾ ಪ್ರಬಂಧಗಳ ಕಂಪಿದೆ. ಒಟ್ಟಾರೆ ಅವರ ಬರಹಗಳಿಗೆ ಓದುಗನ ಕಣ್ಮನ ತಣಿಸುವ ಶಕ್ತಿ ಇದೆ. ಹಾಗಾಗಿ ಅವರ ವಿಮರ್ಶಾತ್ಮಕ ಲೇಖನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಒಂದಷ್ಟು ಪುಷ್ಠಿ ನೀಡಿದೆ.

ಬಾಲ್ಯದಲ್ಲಿ ಮನೆಯಲ್ಲಿ ಹರಡಿದ್ದ ಅಪಾರ ಪುಸ್ತಕಗಳ ಸಂಗ್ರಹ ಕನ್ನಡದ ಕಲಿಕೆಗೆ ಕನ್ನಡಿ ಹಿಡಿದರೆ, ಶಾಲೆಯ ದಿನಗಳಲ್ಲಿ ಸಂಸ್ಕೃತಿಯ ಸೆಲೆ ಸಂಸ್ಕೃತವೂ ಒಲಿಯಿತು. ಕಾಲೇಜು ಅಂಗಳದಲ್ಲಿ ಆಂಗ್ಲ ಭಾಷೆ ಅರಗಿತು. ವ್ಯಾಸಂಗದ ಸಮಯದಲ್ಲಿ ಮೇಧಾವಿ ಅಧ್ಯಾಪಕರುಗಳ ಸಾಂಗತ್ಯ ದೊರೆಯಿತು. ಇದು ಇವರೊಳಗಿನ ಸಾಹಿತ್ಯದ ಆಸಕ್ತಿಯ ಕದ ತೆರೆಸಿತು. ಯು ಆರ್ ಅನಂತ ಮೂರ್ತಿ, ಜಿ. ಎಚ್. ನಾಯರ್, ಪೋಲಂಕಿ ರಾಮಮೂರ್ತಿ, ಎಸ್ ಅನಂತನಾರಾಯಣರಂತಹ ಪ್ರಬುದ್ಧ ಪಂಡಿತರು ಆ ತೆರೆದ ಬಾಗಿಲಲ್ಲಿ ಕಂಡ ಶ್ರೇಷ್ಟರು. ಜೊತೆಗೆ ಸಂಬಂಧಿಗಳೂ.. ಸಾಹಿತಿಗಳು. ಚಿಕ್ಕಪ್ಪ ಸುಬ್ರಾಯ ಚೊಕ್ಕಾಡಿಯವರ ಮೂಲಕ ಗೋಪಾಲಕೃಷ್ಣ ಅಡಿಗ, ಕೆ.ವಿ. ಸುಬ್ಬಣ್ಣ ರಂತಹ ಅತಿರಥ ಮಹಾರಥರು ಹತ್ತಿರವಾದರು. ಹಾಗಾಗಿ ಬಾಲ್ಯದಲ್ಲೇ ಸಾಹಿತ್ಯದ ನಂಟು ಮೈಗಂಟಿಕೊಂಡಿತು.


ವಿಜಯಶಂಕರ್ ರವರದ್ದು ಬಂಟ್ವಾಳ ಸಮೀಪದ ಸರವು ಎಂಬ ಪುಟ್ಟ ಹಳ್ಳಿಯಲ್ಲಿನ ಅಡಿಕೆ ವ್ಯವಸಾಯ ಅವಲಂಬಿತ ಸುಸಂಸ್ಕೃತ ಮನೆತನ. ತಂದೆ ಸರವು ರಾಮ ಭಟ್ಟರು ಪದವೀಧರರಾದರೂ ಕೃಷಿಯನ್ನೇ ಅಪ್ಪಿಕೊಂಡು ಜೀವನ ನಡೆಸಿದವರು. ತಾಯಿ ಸಂಸಾರದ ಸ್ಥಾಯಿ... ರತ್ನವೇಣಿ. ಹಳ್ಳಿಯ ಜೀವನವಾದರೂ ಸಂಸಾರ ಸಂತೃಪ್ತಿಯ ಸ್ಥಾವರ.


ಬಾಳ ಪಯಣದಲ್ಲಿ ಕೆಲವು ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಇಂಟೆಲ್ ಟೆಕ್ನಾಲಜಿ ಎಂಬ ಅಂತರರಾಷ್ಟ್ರೀಯ ಕಂಪ್ಯೂಟರ್ ಚಿಪ್ ಸಂಬಂಧಿತ ವೃತ್ತಿ ಸೇವೆಯಲ್ಲಿ ತೊಡಗಿಕೊಂಡಿರುವ ವಿಜಯಶಂಕರ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರನ್ನು ಜೀವನದ ತಾಣವನ್ನಾಗಿಸಿಕೊಂಡ ಇವರು ಮೊದಲು ಉದಯವಾಣಿ, ವಿಜಯವಾಣಿ' ಪ್ರಜಾವಾಣಿ ಕನ್ನಡ ಪ್ರಭಾ, ಕಸ್ತೂರಿ, ಮಯ್ಯೂರ ಇತ್ಯಾದಿ ಮಾಸ ಪತ್ರಿಕೆಗಳಲ್ಲೂ ಲೇಖನಗಳನ್ನು ಪ್ರಕಟಿಸುತ್ತ ಸಾಹಿತ್ಯ ಲೋಕಕ್ಕೆ ದಾಪುಗಾಲಿಟ್ಟವರು ವಿಜಯಶಂಕರ್. ವೃತ್ತಿಯಲ್ಲಿ ಕಾರ್ಪೊರೇಟರ್ ವಲಯದ ಆಡಳಿತ ದತ್ತ ಮುಖ ಮಾಡಿ ನಿಂತಿದ್ದರೂ ಪೃವೃತ್ತಿಯಿಂದ ಸತತ ಸಾಹಿತ್ಯಿಕ ವಿಮರ್ಶೆಯಲ್ಲಿ ಒಲವು ಬೆಳೆಸಿಕೊಂಡವರು ಇವರು. ಅದೆಲ್ಲದರ ಫಲವಾಗಿ ಪ್ರಶಸ್ತಿಗಳ ಮಹಾಪೂರವೇ ಇವರೆಡೆಗೆ ಸಾಗಿ ಬಂದವು.


ಪ್ರೊ. ವಿ ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಡಾ.ಸುನಿತಾ ಶೆಟ್ಟಿ ವಿಮರ್ಶಾ ಪ್ರಶಸ್ತಿ, ಡಾ. ಜಿ.ಎಸ್. ಶಿವರುದ್ರಷ್ಟ ವಿಮರ್ಶಾ ಪ್ರಶಸ್ತಿ, ಪ್ರೊ. ಬಿ. ಎಚ್. ಶ್ರೀಧರ್ ಸಾಹಿತ್ಯ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಇತ್ಯಾದಿ ಸಾಧನೆಗಳ ಮುಕುಟದಲ್ಲಿ ಮಿನುಗುವ ನವ ಮಣಿಗಳಾದವು.


ಜೀವನದ ಮೂರುವರೆ ದಶಕಗಳಲ್ಲಿ 13 ಸ್ವತಂತ್ರ ಕೃತಿ, ನಾಲ್ಕು ಸಂಪಾದಿತ ಕೃತಿ, ಇದೀಗ ನವ್ಯ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ಕೃತಿ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಲೋಕಾರ್ಪಣೆಗೊಳ್ಳಲಿದೆ. ನಿಧಾನ ಶೃತಿ, ನುಡಿ ಸಸಿ, ಅಂಕಣ ಬರಹಗಳ ಸಂಕಲನಗಳಾದರೆ ತಿರುಮಲೇಶ್, ಕೀರ್ತಿನಾಥ ಕುರ್ತಕೋಟಿಯವರ ಮೊನೋಗ್ರಾಫ್' ಸಾಂಸ್ಕೃತಿಕ ಬರಹಗಳ ಸಂಕಲನ- ಹೂಬೆರಳು. ಅ೦ಬೇಡ್ಕರ್, ವಿಶ್ವೇಶ್ವರಯ್ಯ, ನಿಟ್ಟೂರು ಶ್ರೀನಿವಾಸ ರಾವ್, ದೇವನೂರ ಮಹಾದೇವರಂತಹ ಮುತ್ಸದ್ಧಿಗಳ ಬಗೆಗಿನ ಲೇಖನ, ಕನ್ನಡದ ಕಣ್ಮಣಿಗಳಾದ ದ.ರಾ.ಬೇಂದ್ರೆ 'ಗೋಪಾಲ ಕೃಷ್ಣ ಅಡಿಗ, ಶಿವರಾಮ ಕಾರಂತ, ಯು. ಆರ್. ಅನಂತಮೂರ್ತಿ. ಮಾಸ್ತಿ ವೆಂಕಟೇಶ ಐಯ್ಯಂಗಾರರಂತಹ ಶ್ರೇಷ್ಟ ಸಾಹಿತಿಗಳ ವ್ಯಕ್ತಿತ್ವ, ಕೃತಿ ಕರ್ತೃತ್ವದ ಬಗ್ಗೆ ಶೋಧನೆ ನಡೆಸಿ, ಬರಹಗಾರನ/ ಸಾಹಿತಿಯ ಬರಹದ ಶೈಲಿ, ಭಾಷಾ ಸಿದ್ಧಿ, 'ಭಾಷಾ ಶುದ್ದಿ, ಪ್ರತಿಭೆ 'ಸಂಪನ್ನತೆ ಸಾಧನೆಗಳನ್ನು ಒರೆ ಹಚ್ಚಿ ವಿಮರ್ಶಿಸುವುದು ಅದೊಂದು ಕಠಿಣ ಅಥವಾ ಮಹಾಯಜ್ಞ ವೇ ಸರಿ. ಇಂತಹ ಮಹಾನ್ ಸಾಧನೆಗಳ ಸಾಕಾರಮೂರ್ತಿ 'ಯುವ ಸಾಹಿತಿಗಳ ಮಹಾನ್ ಸ್ಪೂರ್ತಿ' ವಿಮರ್ಶಾ ತಜ್ಞ: ಎಸ್. ಆರ್. ವಿಜಯಶಂಕರ್ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲ್ಲೂಕು ಘಟಕದ ಸರಕಾರದೊಂದಿಗೆ *ಅಕಲಂಕ ಪುರಸ್ಕಾರ 2021 ನ್ನು ಗೌರವಪೂರ್ವಕವಾಗಿ ನೀಡಿ ಅಭಿನಂದಿಸುತ್ತಿದೆ.

- ರಾಜೇಶ್ ಭಟ್ ಪಣಿಯಾಡಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post