|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಮೃತ ಮಹೋತ್ಸವ ಸಂಭ್ರಮಕ್ಕೆ ಇನ್ನು ಉಳಿದಿರುವುದು ಮೂರೇ ದಿನ

ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಮೃತ ಮಹೋತ್ಸವ ಸಂಭ್ರಮಕ್ಕೆ ಇನ್ನು ಉಳಿದಿರುವುದು ಮೂರೇ ದಿನ



ಮಂಗಳೂರು: ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಮೃತ ಮಹೋತ್ಸವ ಜೂನ್ 3 ಮತ್ತು 4 ರಂದು ವಿಜೃಂಭಣೆಯಿಂದ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್ 3ರಂದು ಬೆಳಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮತ್ತು ಸ್ವಾಮಿ ಏಕಗಮ್ಯಾನಂದಜಿ ಅವರು ರಾಮಕೃಷ್ಣ ಮಠದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಅಮೃತ ಮಹೋತ್ಸವ ಸಂಭ್ರಮದ ಕಾರ್ಯಕ್ರಮಗಳ ಸಂಪೂರ್ಣ ವಿವರ ನೀಡಿದರು.

ಎರಡು ದಿನಗಳ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 75ಕ್ಕೂ ಹೆಚ್ಚು ಸನ್ಯಾಸಗಳು ಹಾಗೂ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ಭಕ್ತರು ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಅಮೃತ ಸಂಗಮ- ಚಿಂತನ ಮಂಥನ ಕಾರ್ಯಕ್ರಮದಲ್ಲಿ 6 ಗೋಷ್ಠಿಗಳಿದ್ದು,  ಸುಮಾರು 18 ಮಂದಿ ಸ್ವಾಮೀಜಿಗಳಾದಿಯಾಗಿ ವಿದ್ವಾಂಸರು ಸರಳತೆಯ ಪರಿಕಲ್ಪನೆಯಡಿ  ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.


ಮಂಗಳೂರಿನ - ವಿಶೇಷವಾಗಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸ್ವಾಮಿ ಏಕಗಮ್ಯಾನಂದಜಿ ತಿಳಿಸಿದರು. ಶ್ರೀಮಠವು ಸುಮಾರು 400ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದ್ದು, ಅತಿಥಿ ಸತ್ಕಾರ, ವಸತಿ, ಸಾರಿಗೆ ವ್ಯವಸ್ಥೆಗಳಿಂದ ತೊಡಗಿ ಈ ಎಲ್ಲ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಅವರ ಪಾತ್ರ ಬಹು ದೊಡ್ಡದು ಎಂದು ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಮಹಾನಗರಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿ ಹಾಗೂ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಸ್ಥರಾದ ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು. ಮಠದ ಸ್ವಯಂಸ್ಏವಕರಾದ ಶ್ರೀ ರಂಜನ್ ಬೆಳ್ಳರ್ಪಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.


ಸ್ವಾಮಿ ವಿವೇಕಾನಂದರು 125 ವರ್ಷಗಳ ಹಿಂದೆ- 1897ರಲ್ಲಿ ರಾಮಕೃಷ್ಣ ಮಹಾಸಂಘ ಎಂಬ ಸನ್ಯಾಸಿಗಳ ಸಂಘವನ್ನು ಸ್ಥಾಪಿಸಿದರು. ಆ ಸಂಘದ ನೇತೃತ್ವದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಎಂಬ ಅವಳಿ ಸಂಸ್ಥೆಗಳನ್ನು ತಮ್ಮ ಗುರುಗಳಾದ ಅಧ್ಯಾತ್ಮದ ಮೇರು ಶಿಖರ ಶ್ರೀ ರಾಮಕೃಷ್ಣ ಪರಮಹಂಸರ ಹೆಸರಿಲ್ಲಿ ಸ್ಥಾಪಿಸಿದರು. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ 'ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ' ಎಂಬ ಧ್ಯೇಯದೊಂದಿಗೆ ಜಗತ್ತಿನಾದ್ಯಂತ ಶಾಖೋಪಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಆಧ್ಯಾತ್ಮಿಕ ಹಾಗೂ ಜನಸೇವಾ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

ಹಿನ್ನೆಲೆ:

ಮಂಗಳೂರಿನಲ್ಲಿ ಇಂದಿಗೆ 75 ವರ್ಷಗಳ ಹಿಂದೆ 3-6-1947ರಂದು ಮಂಗಳೂರಿನ ಭಕ್ತರ ಒತ್ತಾಸೆಯ ಮೇರೆಗೆ ಅಂದಿನ ರಾಮಕೃಷ್ಣ ಮಹಾಸಂಘದ ಹಿರಿಯ ಯತಿವರೇಣ್ಯರು ಮಂಗಳೂರು ನಗರದಲ್ಲಿ ರಾಮಕೃಷ್ಣ ಮಠವನ್ನು ಪ್ರಾರಂಭಿಸಿದರು.

ಪ್ರಸಕ್ತ ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಏಳು ಎಕರೆ ವಿಸ್ತೀರ್ಣದ ಆವರಣವನ್ನು 11-8-1951ರಂದು ದಿ. ಸಾವಕಾರ್ ವೆಂಕಟೇಶ್ ಪೈ ಇವರು ಹಿಂದೂ ಸೇವಾ ಸಂಘದ ಮೂಲಕ ಶ್ರೀಮಠಕ್ಕೆ ಹಸ್ತಾಂತರಿಸಿದರು. ಹೀಗಾಗಿ ಅದೇ ವರುಷ ಮತ್ತೊಂದು ಸಂಸ್ಥೆಯಾದ ರಾಮಕೃಷ್ಣ ಮಿಷನ್ ಕೂಡ ಮಂಗಳೂರಿನಲ್ಲಿ ಕಾರ್ಯಾರಂಭಿಸಿತು.

ಒಂದೆಡೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯಾದರೆ, ಮಂಗಳೂರಿನಲ್ಲಿರುವ ರಾಮಕೃಷ್ಣ ಮಠಕ್ಕೂ ಎಪ್ಪತ್ತೈದು ಸಂವತ್ಸರಗಳು ತುಂಬಿ ಅಮೃತ ವರ್ಷದ ಆಚರಣೆಯಾಗುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಈ 75 ವರ್ಷಗಳಲ್ಲಿ ಮಠದ ಕಾರ್ಯ ವರ್ಣನಾತೀತ. ಈ ಆಶ್ರಮದಲ್ಲಿ ಪ್ರತಿನಿತ್ಯ ವೇದಮಂತ್ರಘೋಷ, ಭಗವದ್ಗೀತೆ ಪಠಣ, ಪೂಜೆ, ಧ್ಯಾನ, ಸಂಧ್ಯಾರತಿ, ಪಾಠ ಪ್ರವಚನಗಳು ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ.


ಸೇವಾಕ್ಷೇತ್ರದಲ್ಲಂತೂ ರಾಮಕೃಷ್ಣ ಮಿಷನ್ ತನ್ನ ವಿಶೇಷತೆಯನ್ನು ಮೆರೆದಿದೆ. ಕಳೆದ ಎಪ್ಪತ್ತೈದು ವರ್ಷಗಳಿಂದ ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ, ವಸತಿ ಹಾಗೂ ಮಾರ್ಗದರ್ಶನ ನೀಡಲು ಬಾಲಕಾಶ್ರಮವೆಂಬ ವಿದ್ಯಾರ್ಥಿನಿಲಯವನ್ನು ಮುನ್ನಡೆಸಿಕೊಂಡು ಬಂದು ನೂರಾರು ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಗಳನ್ನಾಗಿಸಿದೆ. ಅಲ್ಲದೇ ಪ್ರತಿನಿತ್ಯ ಮಠದ ಸುತ್ತಮುತ್ತಲಿನ, ಪಠ್ಯದಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಶೈಕ್ಷಣಿಕವಾಗಿ ದತ್ತು ಪಡೆದು ಉಚಿತವಾಗಿ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಹಾಯ, ನಿಯಮಿತವಾಗಿ ಶಿಕ್ಷಕರಿಗೆ, ಕಾಲೇಜು ಅಧ್ಯಾಪಕರಿಗೆ ಯುವಜನತೆಗೆ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.


ಇತ್ತೀಚೆಗೆ ಆರೇಳು ವರ್ಷದಿಂದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಮಂಗಳೂರಿನ ಮನೆಮಾತಾಗಿದೆ. ಜಾತಿ-ಮತ, ಪಕ್ಷ-ಪಂಗಡ, ಮೇಲು-ಕೀಳೆಂಬ ಬೇಧಭಾವಗಳಿಲ್ಲದೇ ಆಬಾಲವೃದ್ಧರಾದಿಯಾಗಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜ ಕಾರ್ಯ ಮಾಡಲು ವೇದಿಕೆಯಾಗಿದೆ. ಪ್ರತಿ ಭಾನುವಾರ ಶ್ರಮದಾನ, ಪ್ರತಿನಿತ್ಯ ಮನೆ ಮನೆ ಭೇಟಿ, ಸ್ವಚ್ಛ ಮನಸ್ ಕಾರ್ಯಕ್ರಮ, ದಕ-ಉಡುಪಿ ಜಿಲ್ಲೆಗಳಲ್ಲಿ ಸ್ವಚ್ಛಗ್ರಾಮ ಅಭಿಯಾನ, ಕಾಲೇಜು ವಿದ್ಯಾರ್ಥಿಗಳಿಗೆ ಸ್ವಚ್ಛ ಸೋಚ್‌ನಂತಹ ಕಾರ್ಯಕ್ರಮಗಳ ಮೂಲಕ ಈ ಸ್ವಚ್ಛ ಮಂಗಳೂರು ಅಭಿಯಾನ ದೇಶಾದ್ಯಂತ ಮಾದರಿಯಾಗಿದೆ. ಹತ್ತು ಸಾವಿರಕ್ಕೂ ಅಧಿಕ ಸ್ವಯಂಸೇವಕರು ಈ ಸ್ವಚ್ಛತಾ ಅಭಿಯಾನದ ಶಕ್ತಿಯಾಗಿ ರೂಪುಗೊಂಡು ಮಂಗಳೂರನ್ನು ಆದರ್ಶ ನಗರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ.


ಅಮೃತ ಸಂಗಮ: ಸಾಧು ಭಕ್ತ ಸಮ್ಮೇಳನ ಎಂಬ ಹೆಸರಿನಲ್ಲಿ ಎರಡು ದಿನಗಳ ಚಿಂತನ-ಮಂಥನ ಕಾರ್ಯಕ್ರಮ- ಸರಳತೆ ಪರಿಕಲ್ಪನೆಯಡಿಯಲ್ಲಿ ನಡೆಯಲಿದೆ.


ಇದೇ ಸಂದರ್ಭದಲ್ಲಿ ಸಾಧು ನಿವಾಸ- 'ಅಮೃತ ಸದನ'ವನ್ನು ಸ್ವಾಮಿ ವೀರೇಶ್ವರಾನಂದ ಅವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ಉಚಿತ ತರಬೇತಿ ಕೇಂದ್ರದ ಕಟ್ಟಡ- 'ಅಮೃತ ಭವನ'ಕ್ಕೆ ಭೂಮಿ ಪೂಜೆ ಹಾಗೂ ಶ್ರೀಮಠದ ನೂತನ ಮಹಾದ್ವಾರ- 'ಅಮೃತ ಪಥ'ದ ಲೋಕಾರ್ಪಣೆಯೂ ನಡೆಯಲಿದೆ.


ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲೇ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಮಹೋತ್ಸವವೂ ನಡೆಯುತ್ತಿರುವುದು ವಿಶೇಷವಾಗಿದೆ.


ಜೂನ್ 3ರಂದು ಶುಕ್ರವಾರ ಬೆಳಗ್ಗೆ ಅಮೃತ ವರ್ಷದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪಶ್ಚಿಮ ಬಂಗಾಳದ ಬೇಲೂರು ಮಠದ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಪರಮಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹರಾಜ್ ಅವರ ದಿವ್ಯ ಸನ್ನಿಧಾನವಿರಲಿದೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮತ್ತು ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿರುವ ರಾಮಕೃಷ್ಣ ಮಠದ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಅವರ ದಿವ್ಯ ಉಪಸ್ಥಿತಿ ಇರಲಿದೆ.


ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 'ಅಮೃತ ವರ್ಷ' ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ. ಎನ್. ವಿನಯ್ ಹೆಗ್ಡೆ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ನಿಕಟಪೂರ್ವ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗದಗದ ಪೂರ್ವ ಶಾಸಕ ಡಿ.ಆರ್ ಪಾಟೀಲ್, ಕರ್ನಾಟಕ ವೃತ್ತದ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್‌ ಎಸ್. ರಾಜೇಂದ್ರ ಕುಮಾರ್ ಹಾಗೂ ಉದ್ಯಮಿ, ಸಮಾಜಸೇವಕ ದಯಾನಂದ ಪೈ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.


ಅಪರಾಹ್ನ 12:00ರಿಂದ 1:30ರ ವರೆಗೆ ನಡೆಯುವ ಮೊದಲನೇ ಗೋಷ್ಠಿಯಲ್ಲಿ 'ಯುಗಾವತಾರಿ- ಸರಳತೆಯ ರಾಯಭಾರಿ' ವಿಷಯದಲ್ಲಿ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜಿ,  'ಸರಳತೆ, ಗಾಂಭೀರ್ಯದ ಸಂಗಮ- ಶ್ರೀಮಾತೆ' ವಿಚಾರವಾಗಿ ಚಂಡೀಘಡದ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ಅನುಪಮಾನಂದಜಿ, 'ಸರಳತೆಯ ಸಂತನೀತ- ವಿಶ್ವವಿಜೇತ' ಎಂಬ ವಿಷಯದಲ್ಲಿ ದಾವಣಗೆರೆಯ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ತ್ಯಾಗೀಶ್ವರಾನಂದಜಿ ಅವರು ಉಪನ್ಯಾಸಗಳನ್ನು ಮಂಡಿಸಲಿದ್ದಾರೆ.


ಭೋಜನ ವಿರಾಮದ ಬಳಿಕ ಅಪರಾಹ್ನ 2ರಿಂದ 2:30ರ ವರೆಗೆ ಕುದ್ರೋಳಿ ಗಣೇಶ್ ಅವರಿಂದ ಹರಿಕಥಾ ಜಾದೂ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗೋವಾದ ರಾಮಕೃಷ್ಣ ಮಿಶನ್ ಮುಖ್ಯಸ್ಥರಾದ ಸ್ವಾಮಿ ಮಹೇಶಾತ್ಮಾನಂದಜಿ ಇದನ್ನು ಉದ್ಘಾಟಿಸಲಿದ್ದಾರೆ.


ಅಪರಾಹ್ನ 2:30ರಿಂದ 4 ಗಂಟೆಯ ವರೆಗೆ ನಡೆಯುವ 2ನೇ ಗೋಷ್ಠಿಯಲ್ಲಿ- ಸರಳತೆ ಮತ್ತು ನಾಯಕತ್ವ ವಿಷಯದಲ್ಲಿ ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ; ಸರಳ ಬದುಕಿನ ಹೊರನೋಟ ಮತ್ತು ಒಳನೋಟ ಕುರಿತು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದಜಿ; ಸಂತರಾಜ್ಯದ ಸರಳತೆಯ ಚಕ್ರವರ್ತಿ- ವಿಷಯದಲ್ಲಿ ರಾಣಿಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪ್ರಕಾಶಾನಂದಜಿ ಅವರು ಉಪನ್ಯಾಸ ಮಂಡಿಸಲಿದ್ದಾರೆ.


ಸಾಯಂಕಾಲ 4:30ರಿಂದ 5:30ರ ವರೆಗೆ 3ನೇ ಗೋಷ್ಠಿಯಲ್ಲಿ ಸರಳತೆಗೊಲಿದ ಶ್ರೀಕೃಷ್ಣ ಎಂಬ ವಿಷಯದಲ್ಲಿ ಉಡುಪಿಯ ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಹಾಗೂ ಸರಳತೆಯಿಂದ ಜೀವನ ಸಾಮರಸ್ಯ ಎಂಬ ವಿಷಯದಲ್ಲಿ ಮೈಸೂರಿನ ಸಂಸ್ಕೃತ ವಿದ್ವಾಂಸರಾದ ಡಾ. ಪ್ರಸನ್ನಾಕ್ಷಿ ಕೆ.ಎಲ್ ಉಪನ್ಯಾಸ ನೀಡಲಿದ್ದಾರೆ.


ಬಳಿಕ 5:30ರಿಂದ 6:15ರ ವರೆಗೆ  ಯತಿಪೂಜಾ ಕಾರ್ಯಕ್ರಮ ಜರಗಲಿದೆ. ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ವಿಶೇಷ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಪುತ್ತೂರಿನ ವೇ.ಮೂ ಶ್ರೀಕೃಷ್ಣ ಉಪಾಧ್ಯಾಯ ಅವರಿಂದ ವೇದಮಂತ್ರ ಘೋಷ, ಬಳಿಕ ಸ್ವಾಮಿ ರಘುರಾಮಾನಂದಜಿ ಅವರಿಂ ಸಂಧ್ಯಾರತಿ ಕಾರ್ಯಕ್ರಮ ನೆರವೇರಲಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



ಸಂಜೆ 7:00ರಿಂದ 8:30 ರ ವರೆಗೆ ಸಂಗೀತ ಸಂಧ್ಯಾ- ಪುಣೆಯ ವಿದುಷಿ ಮಂಜೂಷಾ ಪಾಟೀಲ್ ನಡೆಸಿಕೊಡಲಿದ್ದಾರೆ.


ಜೂನ್ 4ರಂದು ಶನಿವಾರ ಮುಂಜಾನೆ 6:30ರಿಂದ 7:00 ಗಂಟೆಯ ವರೆಗೆ ಉಷಃ ಕೀರ್ತನೆ, ಬಳಿಕ ನಿರ್ದೇಶಿತ ಧ್ಯಾನ ಕಾರ್ಯಕ್ರಮ ಇರುತ್ತದೆ.


ಬೆಳಗ್ಗೆ 8:15ರಿಂದ 9:45ರ ವರೆಗೆ ವಿಶೇಷ ಗೋಷ್ಠಿ ಜರಗಲಿದೆ. ರಾಮಕೃಷ್ಣ ಮಠ ಮಂಗಳೂರು- 75 ವರ್ಷಗಳ ಪಯಣ ಕುರಿತು ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ; ಮಠದ ನೂತನ ಕಾರ್ಯಕ್ರಮಗಳು ಹಾಗೂ ಪ್ರಯೋಗಗಳ ಕುರಿತು ಸ್ವಾಮಿ ಏಕಗಮ್ಯಾನಂದಜಿ; ಮಂಗಳೂರು ರಾಮಕೃಷ್ಣ ಮಠ- ಸ್ಪೂರ್ತಿಯ ಕೇಂದ್ರ ಎಂಬ ವಿಷಯದಲ್ಲಿ ಮಠದ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ ಅವರು ಮಾತನಾಡಲಿದ್ದಾರೆ.


ಅನಂತರ 4 ಹಾಗೂ 5ನೇ ಗೋಷ್ಠಿಗಳು ಜರಗಲಿವೆ. ಅಪರಾಹ್ನ 1:45ರ ಬಳಿಕ ಸ್ವಾಮಿ ಮುಕ್ತಿಪದಾನಂದಜಿ ಅವರಿಂದ ಹರಿಕಥೆ, 6ನೇ ಗೋಷ್ಠಿ ನಡೆಯಲಿದೆ.


ಸಂಜೆ 4:45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಸಂಜೆ 7ರಿಂದ 8ರ ವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ- ಶ್ರೀರಾಮ ಪಟ್ಟಾಭಿಷೇಕ- ಯಕ್ಷರೂಪಕ ಪ್ರದರ್ಶನವಿದೆ.


web counter

0 Comments

Post a Comment

Post a Comment (0)

Previous Post Next Post