ಪುಸ್ತಕ ಕನ್ನಡ ಪುಸ್ತಕ ಲೋಕದಲ್ಲಿ ಒಂದು ವಿನೂತನ ಪ್ರಯೋಗ: ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ
ಬೆಂಗಳೂರು: ಲೇಖಕ ಎನ್. ವಿ. ರಮೇಶ್ ಅವರ 17 ಪುಸ್ತಕಗಳ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯು ಮೇ 1, ಭಾನುವಾರ ಮೈಸೂರಿನ ಜಯನಗರ, ಹೊಸ ಕೋರ್ಟಿನ ಎದುರಿನ ನೇಗಿಲಯೋಗಿ ಸಭಾಂಗಣದಲ್ಲಿ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ ಆಯೋಜಿಸಿತ್ತು.
ಬೆಂಗಳೂರು ಆಕಾಶವಾಣಿ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಪ್ರಭ ಪತ್ರಿಕೆ ಸ್ಥಳೀಯ ಸಂಪಾದಕ ಅಂಶಿ ಪ್ರಸನ್ನಕುಮಾರ್ ಪುಸ್ತಕಗಳ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ನಿ. ಗಿರಿಗೌಡ, ಡಿ.ಎನ್. ಲೋಕಪ್ಪ, ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಎನ್. ಸತ್ಯನಾರಾಯಣ, ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ಸಂಸ್ಕೃತಿ ಪೋಷಕರಾದ ಶ್ರೀಮತಿ ಎ.ಹೇಮಗಂಗಾ ಭಾಗವಹಿಸಿದ್ದರು. ರೇಡಿಯೋ-ರಂಗಭೂಮಿಯ ಕಲಾವಿದೆ, ಸಾಹಿತಿಗಳು, ನಿವೃತ್ತ ವಿಜ್ಞಾನಿಗಳಾದ ಸಿ.ಎಫ್.ಟಿ.ಆರ್.ಐ ಹಾಗೂ ಬಾಲ ವಿಜ್ಞಾನದ ಪ್ರಧಾನ ಸಂಪಾದಕರಾದ ಶ್ರೀಮತಿ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಎನ್.ವಿ. ರಮೇಶ್ (ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು, ಆಕಾಶವಾಣಿ) ಅವರು ರಚಿಸಿರುವ ಪುಸ್ತಕಗಳು ಕನ್ನಡ ಪುಸ್ತಕ ಲೋಕದಲ್ಲಿ ಒಂದು ವಿನೂತನ ಪ್ರಯೋಗ, ಸ್ತುತ್ಯರ್ಹ ಪ್ರಯತ್ನ. ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ದುಡಿದ ರಮೇಶ್ ಅವರು ತಮ್ಮ ಅನುಭವ ಕಥಾಮೃತವನ್ನು ಇಲ್ಲಿ ಓದುಗರೊಂದಿಗೆ ಹಂಚುವುದರ ಜೊತೆಗೆ ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಅಕ್ಷರ ಕಾಣಿಕೆ ಸಲ್ಲಿಸಿದ್ದಾರೆ. ಎಲ್ಲೂ ಕ್ಲಿಷ್ಟ ಪದಗಳ ಆಡಂಬರವಿಲ್ಲ, ನಾಟಕೀಯ ಶೈಲಿಯ ಶೋಕಿಯಿಲ್ಲ. ಸರಳ, ನೇರ ವಿಷಯ ಮಂಡನೆ. ಆಪ್ತ ಸಂಗಾತಿ ಮಾತಿಗೆ ತೊಡಗಿದಂತಿರುವ ಆಪ್ಯಾಯಮಾನವಾದ ರಮೇಶ್ ಅವರ ಬರವಣಿಗೆಯ ರೀತಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ರೇಡಿಯೊ ಮೂಲೆಪಾಲಾಯಿತು ಅಂದುಕೊಂಡರೂ ಈ ಮೊಬೈಲ್ ಹಾಗೂ ಆನ್‍ಲೈನ್ ಯುಗದಲ್ಲಿ ಶ್ರವಣ ಮಾಧ್ಯಮವು ‘ಪಾಡ್ ಕಾಸ್ಟ್,’ ‘ಕ್ಲಬ್ ಹೌಸ್’, ‘ಆಲೆಕ್ಸ’ ಗಳ ಮೂಲಕ ಪುನಃ ಜೀವತಳೆಯುತ್ತಿದೆ. ಈ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಸಾಕಷ್ಟು ಪಳಗಿದ ರಮೇಶ್ ಅಂಥವರ ಆಳವಾದ ಪರಿಣಿತಿ, ಅನುಭವ ಸಂಪತ್ತು ಸಮಾಜಕ್ಕೆ ಅತ್ಯವಶ್ಯಕವೆನಿಸುತ್ತದೆ ಎಂದು ಪುಸ್ತಕ ಪರಿಚಯ ಮಾಡಿದ ಮಾಧ್ಯಮ ಸಮಾಲೋಚಕ– ಅಂಕಣಕಾರ- ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಎನ್.ವಿ. ರಮೇಶ್‍ರವರ ಪುಸ್ತಕಗಳ ಬಗ್ಗೆ ಪರಿಚಯವನ್ನು ಡಾ. ಲೀಲಾ ಪ್ರಕಾಶ್, ಎ.ಎಸ್.ನಾಗರಾಜು, ಶ್ರೀಮತಿ ಉಷಾ ನರಸಿಂಹನ್, ಕಾಳಿಹುಂಡಿ ಶಿವಕುಮಾರ್ ಮತ್ತಿರರು ಮಾಡಿಕೊಟ್ಟರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ