ಬಪ್ಪಳಿಗೆಯ ಅಂಬಿಕಾ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯರಿಗೆ ಬೀಳ್ಕೊಡುಗೆ

Upayuktha
0

ರಾಮಚಂದ್ರ ಭಟ್ಟರು ಒಬ್ಬ ಮಾದರಿ ಉಪನ್ಯಾಸಕ: ಸುಬ್ರಹ್ಮಣ್ಯ ನಟ್ಟೋಜ



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಭಟ್ ಕೆ ಅವರನ್ನು ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳ ಪರವಾಗಿ ಮಂಗಳವಾರ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಆಧುನಿಕ ದಿನಗಳಲ್ಲಿ ಶಿಕ್ಷಕರೂ ಭ್ರಷ್ಟ ವ್ಯವಸ್ಥೆಯ ಭಾಗವಾಗುತ್ತಿರುವುದು ಆತಂಕಕಾರಿ. ಅದರಲ್ಲೂ ನೈತಿಕ ಭ್ರಷ್ಟಾಚಾರ ಶೈಕ್ಷಣಿಕ ವಲಯವನ್ನು ತನ್ನ ಕಬಂಧ ಬಾಹುಗಳೊಳಗೆ ಸೆರೆಹಿಡಿಯಲಾರಂಭಿಸಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ತೋರಬಹುದಾದ ಮಾದರಿ ಶಿಕ್ಷಕರು ಕಡಿಮೆಯಾಗುತ್ತಿದ್ದಾರೆ ಎಂಬುದು ಬೇಸರದ ವಿಚಾರ. ಆದರೆ ಅಂಬಿಕಾದಲ್ಲಿ ಕಾರ್ಯನಿರ್ವಹಿಸಿದ ರಾಮಚಂದ್ರ ಭಟ್ ಒಬ್ಬ ಆದರ್ಶ ಶಿಕ್ಷಕರೆನ್ನುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.


ರಾಮಚಂದ್ರ ಭಟ್ಟರು ಕೇವಲ ವಿದ್ಯಾರ್ಥಿಗಳಿಗಲ್ಲದೆ ತನ್ನ ಜತೆಗಿನ ಇತರ ಉಪನ್ಯಾಸಕರಿಗೂ ಮಾದರಿಯಾಗಿ ಕಾರ್ಯನಿರ್ವಹಿಸಿದವರು. ಸ್ವಯಂಶಿಸ್ತನ್ನು ಅಳವಡಿಸಿಕೊಂಡು ವರ್ಚಸ್ಸು ಹೆಚ್ಚಿಸಿಕೊಂಡವರು. ಅವರ ಜೀವನಾನುಭವವನ್ನು ಇತರರಿಗೂ ಹಂಚಿ ಶೈಕ್ಷಣಿಕ ಶಿಸ್ತನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದವರು. ಶೈಕ್ಷಣಿಕ ಕ್ಷೇತ್ರದ ಅಪಸವ್ಯಗಳನ್ನು ಕಂಡು ಶಿಕ್ಷಕರಾಗುವುದೇ ಬೇಡ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ನೆಲೆಯೂರುತ್ತಿರುವ ಸಂದರ್ಭದಲ್ಲಿ ಆಶಾಕಿರಣದಂತೆ ಗೋಚರಿಸುವ ವ್ಯಕ್ತಿಗಳಲ್ಲಿ ರಾಮಚಂದ್ರ ಭಟ್ಟರೂ ಒಬ್ಬರು ಎಂದು ನುಡಿದರು.


ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ಮಾತನಾಡಿ, ರಾಮಚಂದ್ರ ಭಟ್ಟರು ತುಂಬಾ ಸಮಯಪ್ರಜ್ಞೆ ಹೊಂದಿರುವಂತಹ ವ್ಯಕ್ತಿ. ನಾಲ್ಕು ದಶಕಗಳಿಗೂ ಮೀರಿದ ಉಪನ್ಯಾಸದ ಅನುಭವ ಹೊಂದಿದ್ದರೂ ಪ್ರತಿನಿತ್ಯ ಸಿದ್ಧತೆ ಮಾಡಿಕೊಂಡೇ ತರಗತಿಗೆ ತೆರಳುತ್ತಿದ್ದಂತಹವರು. ಸ್ವತಃ ಅನುಭವದ ಗಣಿಯಾಗಿದ್ದರೂ ಕಲಿಕೆಯ ಹಂಬಲ ಇರುವಂತಹವರು ಎಂದು ನುಡಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಚಂದ್ರ ಭಟ್, ವಿದ್ಯಾರ್ಥಿಗಳು ಸಂಸ್ಥೆಯ ನಿಜವಾದ ರಾಯಭಾರಿಗಳು. ಈಗಾಗಲೇ ಪ್ರಸಿದ್ಧಿ ಪಡೆದಿರುವ ಅಂಬಿಕಾ ಸಂಸ್ಥೆಯ ಹೆಸರನ್ನು ಮತ್ತಷ್ಟು ಪಸರಿಸುವ ಕಾರ್ಯವನ್ನು ವಿದ್ಯಾರ್ಥಿಗಳು, ಶಿಕ್ಷಕರು ನಡೆಸಬೇಕಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಅಂಬಿಕಾ ಸಂಸ್ಥೆಯ ಹೆಸರು ಅನುರಣಿಸುವಂತಾಗಬೇಕು. ತನ್ನ ಕರ್ತವ್ಯದ ದಿನದಲ್ಲಿ ಎಲ್ಲರನ್ನೂ ಒಳಗೊಂಡು ಕಾರ್ಯನಿರ್ವಹಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಹಾಗೂ ಬಪ್ಪಳಿಗೆ ಸಂಸ್ಥೆಯ ನೂತನ ಪ್ರಾಂಶುಪಾಲೆ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಕ್ಯಾಂಪಸ್ ನಿದೇಶಕ ಭಾಸ್ಕರ ಶೆಟ್ಟಿ, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಉಪ ಪ್ರಾಚಾರ್ಯ ಗಣೇಶ್ ಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top