ಪುತ್ತೂರು: ಚಂಡೆ ಮದ್ದಳೆಯ ಸದ್ದು ಕೇಳಿದ ಕೂಡಲೇ ಎಲ್ಲರೂ ಆಕರ್ಷಿತರಾಗುತ್ತಾರೆ. ಇದುವೇ ಯಕ್ಷಗಾನದ ಶಕ್ತಿ. ಕಲಾವಿದರಿಗೆ ಸ್ವತಂತ್ರವಾಗಿ ತಮ್ಮ ಕಲೆಯನ್ನು ಬಿಂಬಿಸುವ ಕಲಾ ಪ್ರಕಾರ ಎಂದರೆ ಅದು ಯಕ್ಷಗಾನದ ತಾಳಮದ್ದಳೆ ಮಾತ್ರ. ಯಕ್ಷಗಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಹಾಗೂ ಮುಂದುವರಿಸಿಕೊಂಡು ಹೋಗಬೇಕು ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭ ಅಡಿಗ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಲಲಿತ ಕಲಾ ಸಂಘ, ಯಕ್ಷರಂಜಿನಿ ಹಾಗೂ ಐಕ್ಯೂಎಸಿ ಘಟಕ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷ ರಂಜಿನಿ ಹಾಗೂ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಉದ್ಘಾಟಕರಾಗಿ ಸೋಮವಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಯಕ್ಷಗಾನ ಎನ್ನುವುದು ಒಂದು ಅಪೂರ್ವವಾದ ಕಲೆ. ಯಕ್ಷಗಾನದಲ್ಲಿ ಏನು ಇಲ್ಲ ಎಂದು ಹುಡುಕಲು ಸಾಧ್ಯವಿಲ್ಲ. ಏಕೆಂದರೆ ಯಕ್ಷಗಾನದಲ್ಲಿ ಎಲ್ಲವೂ ಇದೆ. ಹಾಗಾಗಿ ಯಕ್ಷಗಾನದ ಹಿರಿಯ ಕಲಾವಿದರು ಹಾಗೂ ಅಭಿಮಾನಿಗಳ ಅನುಭವಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಕಾಲೇಜಿನಲ್ಲಿ ವಿಶಿಷ್ಟ ಸ್ಥಾನ ದೊರಕಿದ್ದು ಯಕ್ಷರಂಜಿನಿ ಉತ್ಕೃಷ್ಟವಾಗಿ ಮುನ್ನಡೆಯಲಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಕಾಲೇಜಿನ ಯಕ್ಷ ರಂಜಿನಿ ತಂಡ ಹಲವಾರು ವರ್ಷಗಳಿಂದ ತನ್ನದೇ ಆದ ಇತಿಹಾಸವನ್ನು ಸೃಷ್ಟಿಸಿದ್ದು, ಯಕ್ಷ ರಂಜಿನಿಯಲ್ಲಿ ತೊಡಗಿಸಿಕೊಂಡ ಅದೆಷ್ಟೋ ಹಿರಿಯ ವಿದ್ಯಾರ್ಥಿಗಳು ಕರಾವಳಿಯಲ್ಲಿ ಅದ್ಭುತ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಯಕ್ಷಗಾನ ಅನ್ನುವುದು ಕೇವಲ ಮನರಂಜನೆ ಅಲ್ಲ ಅದೊಂದು ಆಧ್ಯಾತ್ಮಿಕ ಭಾಗವಾಗಿದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾರ್ಯಕ್ರಮದಲ್ಲಿ ಯಕ್ಷ ರಂಜಿನಿ ತಂಡದ ಸಂಯೋಜಕ ಗೋವಿಂದರಾಜ್ ಶರ್ಮ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ನಂತರ ಯಕ್ಷರಂಜಿನಿ ವಿದ್ಯಾರ್ಥಿಗಳಿಂದ ಕಾರ್ತವೀರ್ಯಾರ್ಜುನ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಲಲಿತ ಕಲಾ ಸಂಘದ ಸಂಯೋಜಕ ಡಾ.ಶ್ರೀಶ ಕುಮಾರ್ ಮತ್ತು ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ಯಕ್ಷರಂಜಿನಿ ತಂಡದ ವಿದ್ಯಾರ್ಥಿ ಸುಧಾಂಶು ಸ್ವಾಗತಿಸಿ, ಶ್ರೀಹರ್ಷ ವಂದಿಸಿದರು. ತೃತಿಯ ಪತ್ರಿಕೋದ್ಯಮ ವಿದ್ಯಾರ್ಥಿ ಶ್ರೀರಾಮ ಕುರಿಯ ಕಾರ್ಯಕ್ರಮವನ್ನು ನಿರೂಪಿಸಿದರು.