ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರ ಮಾರ್ಗದರ್ಶನದಂತೆ ರಾಜ್ಯ ಮಹಿಳಾ ವಿಭಾಗವು ಶ್ರೀಮತಿ ರೂಪಾ ಶಾಸ್ತ್ರಿಗಳ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ವಿಭಾಗವನ್ನು ರಚಿಸಲು ಇಂದು ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ಮಂಗಳೂರಿನ ಪತ್ತುಮುಡಿ ಸೌಧದ ಸಭಾಂಗಣದಲ್ಲಿ ನೆರವೇರಿದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ, ಮಹಾಸಭಾ ಉಪಾಧ್ಯಕ್ಷರಾದ ಶ್ರೀ ಮಹೇಶ ಕಜೆಯವರು, ಹಿರಿಯ ಸಂಘಟಕ ಶ್ರೀ ಪ್ರದೀಪಕುಮಾರ ಕಲ್ಕೂರ, ಮಂಗಳೂರು ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ। ರಾಜೇಂದ್ರ ಪ್ರಸಾದ್, ಎಕೆ ಬಿಎಂಎಸ್ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾದ ಶ್ರೀ ತಾರಾನಾಥ ಹೊಳ್ಳ, ಶ್ರೀ ಉಮೇಶ ಶಾಸ್ತ್ರಿ, ಶ್ರೀ ಪೊಳಲಿ ಗಿರಿ ಪ್ರಕಾಶ ತಂತ್ರಿ, ಕೂಟ ಮಹಾಜಗತ್ತು ಅಂಗಸಂಸ್ಥೆಗಳ ಮಹಿಳಾ ವಿಭಾಗದ ಅಧ್ಯಕ್ಷರು, ಕಾರ್ಯದರ್ಶಿಗಳು, ಹವ್ಯಕ ಮಹಾಸಭಾದ ಮಹಿಳಾ ವಿಭಾಗದ ಅಧ್ಯಕ್ಷರು ಮತ್ತು ಸಂಸ್ಥೆಯ ಸದಸ್ಯರು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮಹಿಳಾ ಸದಸ್ಯರು ಭಾಗವಹಿಸಿದ್ದರು.
ಪೂರ್ವಭಾವಿ ಸಭೆಯನ್ನುದ್ದೇಶಿಸಿ ರಾಜ್ಯ ಸಂಚಾಲಕಿ ಶ್ರೀಮತಿ ರೂಪಾ ಶಾಸ್ತ್ರಿಯವರು ಮಾತನಾಡುತ್ತಾ ಮಹಿಳಾ ವಿಭಾಗದ ಸಂಘಟನೆ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಹಾಗೂ ಈಗಾಗಲೇ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಸಭೆಗೆ ಮನವರಿಕೆ ಮಾಡಿಕೊಟ್ಟರು.
ದಕ್ಷಿಣ ಕನ್ನಡ ಭಾಗದ ಖ್ಯಾತ ಸಂಘಟಕ ಹಿರಿಯರಾದ ಶ್ರೀ ಪ್ರದೀಪ್ ಕುಮಾರ ಕಲ್ಕೂರ ಅವರು ಮಾತನಾಡುತ್ತಾ ಮಹಿಳಾ ಸಂಘಟನೆ ಬಲವರ್ಧನೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಮಹಾಸಭಾದ ಉಪಾಧ್ಯಕ್ಷರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಗಳಾದ ಶ್ರೀ ಮಹೇಶ್ ಕಜೆ ಅವರು ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಾಢ್ಯಗೊಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಸಂಘಟನೆ ದಕ್ಷಿಣ ಕನ್ನಡದಲ್ಲಿ ಹತ್ತಾರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ಎಕೆಬಿಎಂಎಸ್ ನಾಯಕರೆಲ್ಲರ ಸಹಕಾರ ಮತ್ತು ಮಾರ್ಗದರ್ಶನದ ಮೂಲಕ ಸಂಘಟನೆಯನ್ನು ಬಲಾಡ್ಯಗೊಳಿಸೋಣ. ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯೋಣ. ಬ್ರಾಹ್ಮಣ ಮಹಾಸಭಾದ ಧ್ಯೇಯ ವಾಕ್ಯವಾದ ಸ್ವಾವಲಂಬನೆ, ಸಂಘಟನೆ ಮತ್ತು ಸಂಸ್ಕಾರವನ್ನು ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಪ್ರಮುಖ ಮಹಿಳಾ ವಿಭಾಗದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಪೂರ್ವಭಾವಿ ಸಭೆಯನ್ನು ನಡೆಸಲು ಸ್ಥಳ ಮತ್ತು ಉಪಾಹಾರದ ವ್ಯವಸ್ಥೆ ಮಾಡಿದ ಶ್ರೀ ಪತ್ತುಮುಡಿ ಸೂರ್ಯನಾರಾಯಣ ರಾಯರಿಗೆ ಸಭೆಯು ಕೃತಜ್ಞತೆಯನ್ನು ಅರ್ಪಿಸಿತು.
ಧನ್ಯವಾದ ಸಮರ್ಪಣೆಯನ್ನು ಕಾರ್ಯಕ್ರಮವನ್ನು ಸಂಘಟಿಸಿದ ಕೆ. ತಾರಾನಾಥ ಹೊಳ್ಳರು ನೆರವೇರಿಸಿದರು.
ಸಭೆಯಲ್ಲಿ ಎಲ್ಲರೂ ಬಲಾಢ್ಯವಾದ ಮಹಿಳಾ ವಿಭಾಗವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಚಿಸಲು ತಮ್ಮ ಬೆಂಬಲ ಮತ್ತು ಸಹಕಾರವನ್ನು ಘೋಷಿಸಿದರು. ಶಾಂತಿ ಮಂತ್ರದೊಂದಿಗೆ ಸಭೆಯು ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ