|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಚಾರ್ಯ ಶಂಕರರು: ಎಳೆ ವಯಸ್ಸಿನಲ್ಲೇ ಸಮಾಜಕ್ಕೆ ಅದ್ವೈತದ ಬೆಳಕು ತೋರಿದ ಮಹಾನ್ ಚೇತನ

ಆಚಾರ್ಯ ಶಂಕರರು: ಎಳೆ ವಯಸ್ಸಿನಲ್ಲೇ ಸಮಾಜಕ್ಕೆ ಅದ್ವೈತದ ಬೆಳಕು ತೋರಿದ ಮಹಾನ್ ಚೇತನ



ಇಂದು ಇಡೀ ವಿಶ್ವವೇ ಯೂತ್ ಐಕಾನ್ ಎಂದು ಮೆಚ್ಚಿ ಮೆರೆಸುವ ವಿವೇಕಾನಂದರಂತಹ ವೀರ ಸನ್ಯಾಸಿಗೇ ಆರಾಧ್ಯ ಮೂತಿ೯ಯಾಗಿದ್ದವರು ಶಂಕರಾಚಾರ್ಯರು. ಬುದ್ಧಿ ಚಿಗುರೊಡೆಯುವ ವಯಸ್ಸಿನಲ್ಲೇ ಗುರುಗಳನ್ನು ಅರಸಿ ಹೊರಟ ಬಾಲ ಸನ್ಯಾಸಿ ಶಂಕರಾಚಾರ್ಯರು. 


ಇಂದು ಶಂಕರ ಜಯಂತಿ. ತಮ್ಮ ಅದ್ವೈತ ಸಿದ್ಧಾಂತ, ಅದರ ಸಮಥ೯ನೆಗಾಗಿ ಅವರು ಮಾಡಿದ ವಾದ ಮಂಡನೆ, ತಕ೯ ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಸಾವಿರಕ್ಕೂ ಹೆಚ್ಚು ವಷ೯ಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೆ ಉಳಿದಿದೆ. ಶಂಕರರಿಲ್ಲದಿದ್ದರೆ ಸನಾತನ ಧರ್ಮದ ಯಾವ ಅನುಯಾಯಿಗಳು ಇಂದು ಹಿಂದೂ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವೇದಾಂತ ತತ್ವ ಎಂದರೇನು ಎಂಬುದೇ ಅಥ೯ವಾಗದೇ ಇದ್ದಿದ್ದರೆ ನಾವು ರಾಮಕೃಷ್ಣ ಪರಮಹಂಸ, ವಿವೇಕಾನಂದರನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. 

 

ಕೇರಳದ ಕಾಲಡಿ ಎಂಬ ಹಳ್ಳಿಯ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಶಂಕರಾಚಾರ್ಯರು ಜನಿಸಿದರು. ತಾಯಿ ಆಯಾ೯ಂಬ, ತಂದೆ ಶಿವಗುರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ತಳೆದು ಸನ್ಯಾಸತ್ವವನ್ನು ಸ್ವೀಕರಿಸಲು ಒಲವು ತೋರಿದರು. ಆದರೇ, ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಶಂಕರರು ಬಹಳ ಕಷ್ಟಪಡಬೇಕಾಯಿತು. ಆಕೆಯ ಅಂತಿಮ ಕ್ಷಣದಲ್ಲಿ ತಾನು ಎಲ್ಲಿದ್ದರೂ ಆಕೆಯ ಎದುರು ಬಂದು ನಿಲ್ಲುವುದಾಗಿ ಮಾತು ಕೊಟ್ಟ ಶಂಕರರು ಸೂಕ್ತ ಗುರುವನ್ನು ಅರಸಿ ತಮ್ಮ ಪಯಣವನ್ನು ಆರಂಭಿಸಿದರು. ನಮ೯ದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನೇ ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಅವರಿಂದ ವೇದ,‌ ಯೋಗ, ಉಪನಿಷತ್ ಗಳನ್ನು ಅಭ್ಯಾಸ ಮಾಡಿದ ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೂ ವೇದಾಂತದ ಪಾಠ ಹೇಳಿಕೊಟ್ಟರು.  


ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದಗಳಲ್ಲಿ ಸೋಲಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು.


ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳು-

೧. ಉತ್ತರದಲ್ಲಿ ಬದರಿ ಪೀಠ

೨. ದಕ್ಷಿಣದಲ್ಲಿ ಶೃಂಗೇರಿ ಪೀಠ

೩. ಪೂರ್ವದಲ್ಲಿ ಪುರಿ ಪೀಠ

೪. ಪಶ್ಚಿಮದಲ್ಲಿ ದ್ವಾರಕಾ ಪೀಠ.

ಈ ನಾಲ್ಕು ಪೀಠಗಳು ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು, ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿದೆ. 

 

ಅದ್ವೈತ ಸಿದ್ಧಾಂತ...

ಸುಮಾರು ಕ್ರಿಸ್ತ ಶಕ 700ರಲ್ಲಿ ಬದುಕಿದ್ದ ಗೌಡಪಾದ ಮುನಿಗಳು ಮಾಂಡೂಕ್ಯ ಉಪನಿಷತ್ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ, ದೃಢವಾಗಿ ಪ್ರತಿಪಾದಿಸಿದರು. ಅವರ ಶಿಷ್ಯರು ಗೋವಿಂದ ಭಗವತ್ಪಾದರು.  ಅವರ ಶಿಷ್ಯರು ಶ್ರೀ ಶಂಕರಾಚಾರ್ಯರು ಅದ್ವೈತ ಸಿದ್ಧಾಂತಕ್ಕೆ ಸ್ಪಷ್ಟ ರೂಪಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು. 


ಅದ್ವೈತ ಎಂದರೆ, ಎರಡಲ್ಲ ದ್ದು ಅಂದರೆ, ಒಂದೇ ಆಗಿರುವುದು. ಜೀವಿಯಲ್ಲಿರುವ ಆತ್ಮವೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಆಗಿರುವುದೆಂದಥ೯. ಅದ್ವೈತ ಸಿದ್ಧಾಂತ ಜಗತ್ತಿನ ಪ್ರಾಚೀನ ಸಿದ್ಧಾಂತಗಳಲ್ಲಿ ಪ್ರಮುಖವಾದುದು. "ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಭೇದವೆಲ್ಲಾ ಅಳಿದು ಹೋಗಿ, ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೇ ಮೋಕ್ಷ, ಅದೇ ಪರಮ ಪುರುಷಾರ್ಥ". ಇದು ಅದ್ವೈತ ಸಿದ್ಧಾಂತದ ಸಾರಾಂಶ.  


ಸಾವಿರದ ಇನ್ನೂರು ವರ್ಷಗಳ ಹಿಂದೆ, ಕೇವಲ ಮೂವತ್ತೆರಡು ವರ್ಷ ಬದುಕಿದ್ದರೂ ಇಡೀ ಭಾರತಕ್ಕೆ ಅನ್ವಯವಾಗುವ ಸಂಪ್ರದಾಯ ಹುಟ್ಟು ಹಾಕಿ, ಜನರು ಅದನ್ನು ಅನುಸರಿಸುವಂತೆ ಮಾಡಿದ್ದು ಶಂಕರರ ಅತಿದೊಡ್ಡ ಸಾಧನೆ. ತಮ್ಮ ಅಲ್ಪಾವಧಿಯಲ್ಲೇ ಶಂಕರರು ಕೃತಿಗಳು ಮತ್ತು ಅವರ ಜೀವನ ಕ್ರಮ ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರಭಾವ ಬೀರಿದೆ. ಇಂದಿಗೂ ಹಿಂದೂ ಧರ್ಮದ ಹಲವಾರು ಕ್ರಮಗಳು ಶಂಕರಾಚಾರ್ಯರ ಸಿದ್ಧಾಂತದ ಪ್ರಕಾರ ನಡೆಯುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರ ಕಾರ್ಯ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. 

   

-ಸರೋಜ ಪಿ ಜೆ ನೆಲ್ಯಾಡಿ

ತೃತೀಯ ಬಿ ಎ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.




0 تعليقات

إرسال تعليق

Post a Comment (0)

أحدث أقدم