|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಸೆಯ ಪಾಶದಿಂದ ಮುಕ್ತಿ ಪಡೆದರಷ್ಟೇ ಮನಃಶಾಂತಿ: ರಾಘವೇಶ್ವರ ಶ್ರೀ

ಆಸೆಯ ಪಾಶದಿಂದ ಮುಕ್ತಿ ಪಡೆದರಷ್ಟೇ ಮನಃಶಾಂತಿ: ರಾಘವೇಶ್ವರ ಶ್ರೀ

ಮುರೂರು ರಾಮಕಥೆಗೆ ಶ್ರೀ ಸಚ್ಚಿದಾನಂದ ಜ್ಞಾನೇಶ್ವರೀಭಾರತೀ ಸ್ವಾಮೀಜಿ ಸಾನ್ನಿಧ್ಯ



ರಾಮಲೀಲಾ ಮೈದಾನ, ಮೂರೂರು (ಕುಮಟಾ): ಆಸೆಯ ಪಾಶದಿಂದ ಮುಕ್ತಿ ಪಡೆದರೆ ಮಾತ್ರ ಮನಃಶಾಂತಿ ಸಾಧಿಸಲು ಸಾಧ್ಯ. ಆಸೆಯ ಪಾಶದಿಂದ ಏನು ಅನಾಹುತವಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ 'ರಾಮಸೇತು' ರಾಮಕಥಾ ಸರಣಿಯ ಮೂರನೇ ದಿನದ ಪ್ರವಚನ ಅನುಗ್ರಹಿಸಿದ ಅವರು, "ಆಸೆ ಮನದಾಳದಲ್ಲಿ ಹುಟ್ಟಿಕೊಂಡರೆ ತಾನು ಸುಮ್ಮನಿರುವುದಿಲ್ಲ. ನಮ್ಮನ್ನು ಸಮ್ಮನಿರಲು ಬಿಡುವುದಿಲ್ಲ. ಆಸೆ ಅನಾಹುತಕ್ಕೆ ಕಾರಣ. ಇದು ರಜೋಗುಣ. ಭಯ, ಚಿಂತೆ, ದ್ವೇಷ, ಕ್ರೋಧ ಎಲ್ಲವೂ ಆಸೆಯ ಸುತ್ತ ಹುಟ್ಟುಕೊಳ್ಳುತ್ತವೆ" ಎಂದು ವಿಶ್ಲೇಷಿಸಿದರು.


ಸಾತ್ವಿಕ ಆಸೆಗಳು ಕೂಡಾ ಮನಃಶಾಂತಿ ಕದಡಬಲ್ಲದು. ಆದರೆ ಧರ್ಮಸಮ್ಮತವಲ್ಲದ ಆಸೆಗಳು ವ್ಯಕ್ತಿಯ ಅಧಃಪತನಕ್ಕೆ ಕಾರಣವಾಗುತ್ತದೆ. ಸೀತೆಯ ಕುರಿತಾದ ಸಲ್ಲದ ಆಸೆ ರಾವಣನನ್ನೂ ಸೊರಗಿಸಿತು ಎಂದು ವಾಲ್ಮೀಕಿ ಬಣ್ಣಿಸಿದ್ದಾನೆ. ರಾವಣ ಸೊರಗಿದ್ದನ್ನು ವಾಲ್ಮೀಕಿ ರಾಮಾಯಣ ಬಿಟ್ಟು ಉಳಿದೆಲ್ಲೂ ಬಣ್ಣಿಸಿಲ್ಲ. ರಾಮ- ರಾವಣರ ಸಮರ ಆರಂಭಕ್ಕೆ ಮುನ್ನವೇ ರಾವಣ ಸೊರಗಿದ್ದನ್ನು ವಾಲ್ಮೀಕಿ ಮನೋಜ್ಞವಾಗಿ ಚಿತ್ರಿಸಿದ್ದಾನೆ ಎಂದರು.


ಆಸೆಯ ಶಕ್ತಿ ಅಂಥದ್ದು. ಮೈಥಿಲಿಯ ಅಪೇಕ್ಷೆಯಿಂದಾಗಿ ಆತನ ಹಿತೈಷಿಗಳೂ ಆತನನ್ನು ಅವಗಣನೆ ಮಾಡುವಂತಾಗುತ್ತದೆ. ಆತನ ಸುಕೃತಗಳು ಕೂಡಾ ಆತನ ನೆರವಿಗೆ ಬರಲಿಲ್ಲ. ತಾಯಿ ಕೈಕಸಿ, ಪತ್ನಿ ಮಂಡೋದರಿ, ಸಹೋದರ ವಿಭೀಷಣ, ಕುಂಭಕರ್ಣ, ಮಂತ್ರಿ ಅನಿಂದ್ಯ ಹೀಗೆ ಎಲ್ಲ ಆಪ್ತರ ಅವಗಣನೆಗೆ ರಾವಣ ಒಳಗಾದದ್ದು ಆಸೆಯ ಕಾರಣದಿಂದ ಎಂದು ವಿವರಿಸಿದರು.


ರಾಮ- ರಾವಣ ಸಮರ ಆರಂಭ ಇನ್ನೂ ಆಗದಿದ್ದರೂ, ಸೀತೆ- ರಾವಣನ ಸಮರ ವರ್ಷದಿಂದ ನಡೆದಿತ್ತು. ರಾವಣನ ನಿಯಂತ್ರಣದಲ್ಲಿ ಸೀತೆ ಇದ್ದರೂ, ಆಕೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪ್ರೀತಿ, ದೈನ್ಯತೆಯಿಂದ ಭೀತಿವರೆಗೆ ಎಲ್ಲ ಅಸ್ತ್ರಗಳನ್ನು ಸೀತೆಯ ಮೇಲೆ ಪ್ರಯೋಗಿಸಿದರೂ, ಸೀತೆಯ ಮನಸ್ಸು ಕಿಂಚಿತ್ತೂ ಚಂಚಲವಾಗಲಿಲ್ಲ. ರಾವಣನಿಗೆ ಸೀತೆ ದಕ್ಕಲಿಲ್ಲ. ಇದು ಸೀತೆಯ ಗೆಲುವು ಎಂದು ಬಣ್ಣಿಸಿದರು.


ಲಂಕೆಗೆ ಬೆಂಕಿ ಹಚ್ಚಿದ ಆಂಜನೇಯ, ರಾವಣನ ಗರ್ವ ಭಂಗ ಮಾಡಿದ್ದಾನೆ. ಶತ್ರುಸೇನೆ ಅಂಗಳದವರೆಗೆ ಬಂದಿದ್ದ ಸಂದರ್ಭದಲ್ಲಿ ಮತ್ತೆ ಮಂತ್ರಾಲೋಚನೆಗೆ ರಾವಣ ಮುಂದಾಗುತ್ತಾನೆ. ಸೀತೆಯನ್ನು ಮರಳಿ ಒಪ್ಪಿಸಬೇಕು ಎಂಬ ತೀರ್ಮಾನ ಬರಬಹುದು ಎಂಬ ಪರಿಸ್ಥಿತಿ ಬಂದಾಗ ಸಭೆಯನ್ನು ವಿಸರ್ಜಿಸಿದ್ದ. ಧಮಶಾಸ್ತ್ರ, ರಾಜನೀತಿಯ ಬೋಧನೆ ಆತನಿಗೆ ರುಚಿಸದೇ ಧೃತಿ ಮತ್ತು ಮತಿಯ ತುಮುಲ ಕಾಡಿತು ಎಂದರು.


ದೈವಜ್ಞ ಬ್ರಾಹ್ಮಣ ಸಮಾಜದ ಕರ್ಕಿ ಜ್ಞಾನೇಶ್ವರಿ ಮಠದ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರೀಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತ ರಚನೆಕಾರರಾದ ಡಾ.ಗಜಾನನ ಶರ್ಮಾ, ಕಥಾಸಿದ್ಧತೆಯ ಸತ್ಯನಾರಾಯಣ ಶರ್ಮಾ ಮತ್ತು ಸುರೇಶ್ ಅಡಗೋಡಿ ಉಪಸ್ಥಿತರಿದ್ದರು.


ಗಾಯನದಲ್ಲಿ ಶ್ರೀಪಾದ ಭಟ್ ಕಡತೋಕ, ಶಂಕರಿಮೂರ್ತಿ ಬಾಳಿಲ, ರಘುನಂದನ ಬೇರ್ಕಡವು, ಸಾಕೇತ್ ಶರ್ಮಾ, ದೀಪಿಕಾ ಭಟ್, ಪೂಜಾ ಭಟ್, ಮೃದಂಗದಲ್ಲಿ ಗಣೇಶ್ ಭಾಗ್ವತ್ ಗುಂಡ್ಕಲ್, ಸಿತಾರದಲ್ಲಿ ಸುಬ್ರಹ್ಮಣ್ಯ ಹೆಗಡೆ, ಕೊಳಲಿನಲ್ಲಿ ನಿರಂಜನ ಹೆಗಡೆ, ಹಾರ್ಮೋನಿಯಂನಲ್ಲಿ ಪ್ರಜ್ಞಾಲೀಲಾ, ಚಿತ್ರಕಲೆಯಲ್ಲಿ ನೀರ್ನಳ್ಳಿ ಗಣಪತಿ ಸಹಕರಿಸಿದರು. ರೂಪಕವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರ್ದೇಶಿಸಿದರು.

ರಾಮಕಥಾ ನಿರ್ವಹಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post