||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಆರೋಗ್ಯ ದಿನ – ಏಪ್ರಿಲ್ 7

ವಿಶ್ವ ಆರೋಗ್ಯ ದಿನ – ಏಪ್ರಿಲ್ 7


ಪ್ರತಿ ವರ್ಷ ಏಪ್ರಿಲ್ 7ರಂದು ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ‘ವಿಶ್ವ ಆರೋಗ್ಯ ದಿನ’ ಎಂದು ಆಚರಣೆ ಮಾಡುತ್ತಿದೆ. 1950 ಏಪ್ರಿಲ್ 7 ರಂದು ಈ ದಿನಾಚರಣೆ ಆರಂಭವಾಯಿತು. 1948 ಏಪ್ರಿಲ್ 7ರಂದು ವಿಶ್ವ ಸಂಸ್ಥೆ ಉಗಮವಾಯಿತು. ಸ್ವಿಜರ್ ಲ್ಯಾಂಡಿನ ಜಿನಿವಾದಲ್ಲಿ ಇದರ ಮುಖ್ಯ ಕಛೇರಿ ಇದೆ. ಇದಕ್ಕೆ ಆರು ಪ್ರಾಂತೀಯ ಕಛೇರಿ ಇದ್ದು 150 ಶಾಖೆಗಳು ವಿಶ್ವದೆಲ್ಲೆಡೆ ಇದೆ. ಈ ದಿನದ ನೆನಪಿಗಾಗಿ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಜಾಗತಿಕವಾಗಿ ಎಲ್ಲ ದೇಶಗಳ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿ ರೋಗ ನಿಯಂತ್ರಿಸುವ, ತಡೆಗಟ್ಟುವ ಮತ್ತು ಜಾಗೃತಿ ಮೂಡಿಸುವ ವಿಶೇಷ ಜವಾಬ್ದಾರಿ ವಿಶ್ವ ಸಂಸ್ಥೆಗೆ ಇದೆ. ಪ್ರತಿ ವರ್ಷ ಧ್ಯೇಯ ವಾಕ್ಯ ಇಟ್ಟುಕೊಂಡು ಈ ಆಚರಣೆ ಮಾಡಲಾಗುತ್ತದೆ. 2017 ರಲ್ಲಿ ಖಿನ್ನತೆಯನ್ನು ಸೋಲಿಸಿ ಎಂಬುದಾಗಿತ್ತು. 2019 ರಲ್ಲಿ ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ ಎಂಬುದಾಗಿತ್ತು. 2022 ರಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಧ್ಯೇಯವಾಕ್ಯ  “Our Planet, our Health” ಅಂದರೆ “ನಮ್ಮ ಭೂಮಂಡಲ ನಮ್ಮ ಆರೋಗ್ಯ” ಎಂಬುದಾಗಿದೆ. ಈಗ ಸದ್ಯ ವಿಶ್ವದೆಲ್ಲೆಡೆ ಸಾಂಕ್ರಾಮಿಕವಾಗಿ ವ್ಯಾಪಕವಾಗಿ ಹೆಚ್ಚುತ್ತಿರುವ ಕೋವಿಡ್-19 ರೋಗದ ಹಿನ್ನಲೆ ಮತ್ತು ಕಲುಷಿತಗೊಂಡಿರುವ ಭೂಮಂಡಲ ಹಾಗೂ ಹೊಸದಾಗಿ ಹುಟ್ಟುತ್ತಿರುವ ನವ ನವೀನ ರೋಗದ ಕಾರಣದಿಂದಾಗಿ ಈ ಘೋಷವಾಕ್ಯವನ್ನು ವಿಶ್ವ ಸಂಸ್ಥೆ ಆರಿಸಿಕೊಂಡಿದೆ.


ಆರೋಗ್ಯವೇ ಭಾಗ್ಯ:

ಈ ಹಿಂದೆ ವಿಶ್ವ ಸಂಸ್ಥೆ ಆರೋಗ್ಯ ಎಂದರೆ “ರೋಗವಿಲ್ಲದಿರುವುದೇ ಆರೋಗ್ಯ” ಎಂಬ ವ್ಯಾಖ್ಯಾನ ನೀಡಿತ್ತು. ಆದರೆ ಈಗ ಬದಲಾದ ಪರಿಸ್ಥಿತಿ ಮತ್ತು  ಕಾಲಘಟ್ಟದಲ್ಲಿ ಈ ವ್ಯಾಖ್ಯಾನ ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದರೂ ತಪ್ಪಾಗಲಾರದು. ಯಾಕೆಂದರೆ ಈಗ ದುರ್ಬಿನು ಹಾಕಿ ಹುಡುಕಿದರೂ ನಮಗೆ ಆರೋಗ್ಯವಂತ ವ್ಯಕ್ತಿ ಸಿಗುವುದು ಕಷ್ಟ. ಒಂದು ವೇಳೆ ಆತ ಅಥವಾ ಆಕೆ ದೈಹಿಕವಾಗಿ ಆರೋಗ್ಯವಂತನಾಗಿದ್ದರೂ ಮಾನಸಿಕವಾಗಿ ಬಹಳಷ್ಟು ಒತ್ತಡ ಅಥವಾ ಆತಂಕದಿಂದ ಇರುತ್ತಾನೆ. ಈ ನಿಟ್ಟಿನಲ್ಲಿ ನಾವು ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತ ಎಂದು ಪ್ರಾಮಾಣೀಕರಿಸಬೇಕಾದರೆ ಆತ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಆರೋಗ್ಯವಂತನಾಗಿರಲೇ ಬೇಕು. ಆದರೆ ಈಗಿನ ನಮ್ಮ ದಾವಂತದ ಜೀವನ ಶೈಲಿ, ತಿನ್ನುವ ಕಲುಷಿತ ಆಹಾರ, ಉಸಿರಾಡುವ ಕಲುಷಿತ ಗಾಳಿ, ಒತ್ತಡದ ಕೆಲಸದ ಶೈಲಿ ಮತ್ತು ವಿಷಪೂರಿತ ಪರಿಸರದಿಂದಾಗಿ ಪರಿಪೂರ್ಣ ಆರೋಗ್ಯವಂತ ವ್ಯಕ್ತಿ ಒಂದು ಲಕ್ಷದಲ್ಲಿ ಒಬ್ಬ ಸಿಕ್ಕಿದರೆ ನಮ್ಮ ಪುಣ್ಯ. ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ರೋಗಗಳು ಹುಬ್ಬಿಕೊಂಡು ಮನುಕುಲವನ್ನು ಹಿಂಡಿ ಹಿಪ್ಪೆ ಮಾಡಿ ಹೈರಾಣಾಗಿಸಿದೆ. ಇದಕ್ಕೆ ಈಗ ಜಗತ್ತನ್ನೇ ನಡುಗಿಸಿದ ಸಾಂಕ್ರಾಮಿಕ ರೋಗ “ಕೋವಿಡ್-19 ಒಂದು ಉತ್ತಮ ಉದಾಹರಣೆ” ನಾವಿನ್ನೂ ಈ ಕೋವಿಡ್-19 ನಿಂದ ಸಂಪೂರ್ಣವಾಗಿ ಹೊರಬಂದಿಲ್ಲ.  


ಪುರಾತನ ರೋಗಗಳಾದ ಕುಷ್ಟರೋಗ, ಸಿಫಿಲಿಸ್ ಮುಂತಾದ ಖಾಯಿಲೆಗಳು ಮಾಯವಾಗಿದೆ. ಆದರೆ ಕೆಟ್ಟ ಜೀವನ ಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕಲುಷಿತ ವಾತಾವರಣದಿಂದಾಗಿ ಬರುವ ರೋಗಗಳಾದ ಅಧಿಕ ರಕ್ತದೊತ್ತಡ, ಹೃದಯಾಘಾತ, ಮಾನಸಿಕ ಖಿನ್ನತೆ ಮುಂತಾದ ರೋಗಗಳು ಮನುಕುಲವನ್ನು ತನ್ನ ಕಪಿ ಮುಷ್ಟಿಯಲ್ಲಿ ಬಂಧಿಸಿದೆ. ಈ ರೋಗಗಳ ಸಂಖ್ಯೆ ದಿನೇ ದಿನೇ ವೃದ್ಧಿಸಿದೆ. ಇದರ ಜೊತೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಬಹಳಷ್ಟು ಹೆಚ್ಚಾಗಿದೆ. ಇಂದಿನ ದಾವಂತದ ಒತ್ತಡದ ಜೀವನ ಕ್ರಮದಿಂದ ಯಾರಿಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೂ ಪುರುಸೊತ್ತಿಲ್ಲದಿರುವುದೇ ಬಹಳ ಸೋಜಿಗ ಮತ್ತು ದುರಂತ ಎಂದರೆ ಅತಿಶಯೋಕ್ತಿಯಾಗಲಾರದು. ಈ ಮೇಲೆ ಪಟ್ಟಿ ಮಾಡಿದ ಹೆಚ್ಚಿನ ಎಲ್ಲಾ ರೋಗಗಳನ್ನು ನಮ್ಮ ಆಹಾರ ಪದ್ಧತಿ ಬದಲಾವಣೆ, ಜೀವನ ಶೈಲಿ ಬದಲಾವಣೆ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡಿ ತಡೆಗಟ್ಟಬಹುದು ಎನ್ನುವುದೇ ಬಹಳ ಆಶಾದಾಯಕ ವಿಚಾರ.


ಬಹಳಷ್ಟು ರೋಗಗಳನ್ನು ಔಷಧಿ ರಹಿತವಾಗಿ ನಿಯಂತ್ರಿಸಬಹುದು ಎಂಬುದು ಅತ್ಯಂತ ಪ್ರಾಮುಖ್ಯವಾದ ವಿಚಾರ. ಈ ವಿಚಾರವನ್ನು ಜನರು ಅರಿತು ಪಾಲಿಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ವಿಪರ್ಯಾಸವೆಂದರೆ ಜನರು ಇದನ್ನು ಅರ್ಥೈಸಿಕೊಳ್ಳದೆ ಉಡಾಫೆಯಿಂದ ವರ್ತಿಸುವ ಕಾರಣದಿಂದಾಗಿ ಆಹಾರಕ್ಕಿಂತ ಔಷಧಿಯನ್ನು ಜಾಸ್ತಿ ತಿನ್ನುವ ವರ್ಗದ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.


ನಮ್ಮ ಆರೋಗ್ಯದ ರಕ್ಷಣೆಗೆ ಸೂತ್ರಗಳು:

1. ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ. ಕೆಲಸದ ವಾತಾವರಣದಲ್ಲಿ ಒತ್ತಡ ಜಾಸ್ತಿ ಇದ್ದಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊಸ ಕೆಲಸ ನೋಡಿಕೊಳ್ಳಿ. ಆರೋಗ್ಯಕ್ಕಿಂತ ಮಿಗಿಲಾದ ವಸ್ತು ಇನ್ನಾವುದೂ ಇಲ್ಲ. ನೆನಪಿರಲಿ ಎಷ್ಟು ಹಣ ನೀವು ಕೂಡಿಟ್ಟರೂ ಒಂದು ಖಾಯಿಲೆ ಒಂದು ಸೂಕ್ತ ಚಿಕಿತ್ಸೆ ಪಡೆಯುವಷ್ಟರಲ್ಲಿ ನಿಮ್ಮ ಕೂಡಿಟ್ಟ ಹಣ ಕರಗಿ ಹೋಗಿರುತ್ತದೆ. ಈಗಿನ ಶೇಕಡಾ 50 ಮಂದಿ ಯುವಜನರು ವೃತ್ತಿ ಸಂಬಂಧಿತವಾದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಈ ಕಾರಣದಿಂದ ಆತ್ಮಹತ್ಯೆಯಂತಹ ಘಟನೆ ಪ್ರತಿದಿನ ನಾವು ನೋಡುತ್ತೇವೆ ಕೇಳುತ್ತೇವೆ ಮತ್ತು ಮರೆಯುತ್ತೇವೆ.


2. ಧೂಮಪಾನ ಮದ್ಯಪಾನಕ್ಕೆ ತಿಲಾಂಜಲಿ ಇಡಿ. ಕ್ಯಾನ್ಸರ್‌ನಂತಹ ಮಾರಕ ರೋಗಗಳು ಈ ದುಶ್ಚಟಗಳಿಂದಲೇ ಬರುತ್ತದೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯವಾದ ಮಾತು. ರಾತ್ರಿ ಕಂಡ ಬಾಯಿಗೆ ಹಗಲು ಬೀಳುವ ಮೂರ್ಖ ಕೆಲಸಕ್ಕೆ ಮುಂದಾಗಬೇಡಿ.


3. ದೈನಂದಿನ ಜೀವನದಲ್ಲಿ ಯೋಗ, ಪ್ರಾಣಯಾಮ ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್ ಸೈಕ್ಲಿಂಗ್, ಮುಂತಾದವುಗಳನ್ನು ಅಳವಡಿಸಿಕೊಂಡಲ್ಲಿ, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತ ನಿಮ್ಮ ಹತ್ತಿರ ಸುಳಿಯುವುದೇ ಇಲ್ಲ.


4. ಆದಷ್ಟು ಹಸಿ ತರಕಾರಿ, ಹಸಿರು ಸೊಪ್ಪು, ಕಾಳು ಬೇಳೆ ಇರುವ ಆಹಾರ ಸೇವಿಸಿ. ಮೂಲಹಾರಕ್ಕೆ ಹೆಚ್ಚು ಒತ್ತು ಕೊಡಿ. ನಾರಿನಂಶ ಮತ್ತು ಪೌಷ್ಠಿಕಾಂಶ ಇರುವ ಆಹಾರ ಜಾಸ್ತಿ ಸೇವಿಸಿ.


5. ತಾಜಾ ಹಣ್ಣು ಹಂಪಲು ನೈಸರ್ಗಿಕ ಪೇಯ, ಮತ್ತು ನೀರನ್ನು ಧಾರಾಳವಾಗಿ ಸೇವಿಸಿ. ಕೃತಕ ಆಹಾರ ಪದ್ಧತಿ ಸಿದ್ಧ ಆಹಾರ, ದಿಢೀರ್ ಆಹಾರ, ಕೃತಕ ಪೇಯಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಿ. ಜಂಕ್ ಪುಡ್ ಬೇಡವೇ ಬೇಡ.


6. “ಬೇಗ ಮಲಗಿ ಬೇಗ ಏಳು” ಎಂಬ ಹಿರಿಯರ ಮಾತನ್ನು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿ. ತಡರಾತ್ರಿವರೆಗೆ ಮೋಜು, ಮಸ್ತಿ, ಕುಡಿತ, ಕುಣಿತ ಮಾಡಿ ಪ್ರಾತಃ ಕಾಲದಲ್ಲಿ ಮಲಗಿ ಸೂರ್ಯ ನಡುನೆತ್ತಿಗೆ ಬಂದಾಗ ಏಳುವ ಹವ್ಯಾಸ ಬಹಳ ಅಪಾಯಕಾರಿ.


7. ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ. ಆದರೆ ದೈನಂದಿನ ಜೀವನದ ಅತಿ ಅನಿವಾರ್ಯದಲ್ಲಿ ಮಾತ್ರ ಬಳಸಿ.

 

8. ಸ್ವಯಂ ಔಷಧಿಗಾರಿಕೆ ಮಾಡುವುದೇ ಬೇಡ, ಡಾ| ಗೂಗಲ್ ಸಹವಾಸ ಬೇಡವೇ ಬೇಡ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ವೈದ್ಯರ ಪರಿಹಾರ ನೀಡುತ್ತಾರೆ. ನಿಮ್ಮ ನಂಬಿಕೆ ಎಂದೂ ಹುಸಿಯಾಗದು. ನಿರಂತರವಾಗಿ ನಿಯಮಿತವಾಗಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಇದ್ದರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯುವುದಿಲ್ಲ.


ಕೊನೆಮಾತು

ಆರೋಗ್ಯ ಎಂದರೆ ಮಾರುಕಟ್ಟೆಯಲ್ಲಿ ಖರೀದಿಸಬಹುದಾದ ವಸ್ತು ಅಲ್ಲ ಎಂಬ ಕಟು ಸತ್ಯವನ್ನು ಜನರು ಅರಿಯಲೇ ಬೇಕು. ಆರೋಗ್ಯ ಎಂದರೆ ನಮ್ಮ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕವಾಗಿ ಮಾನಸಿಕ ಸಮತೋಲನ ಹೊಂದಿರುವುದೇ ಆಗಿದೆ. ಕೇವಲ ರೋಗವಿಲ್ಲದಿದ್ದಲ್ಲಿ ಒಬ್ಬ ವ್ಯಕ್ತಿಯನ್ನು ಆರೋಗ್ಯವಂತ ಎಂದು ಪರಿಗಣಿಸಲು ಸಾಧ್ಯವಿಲ್ಲ.


“ಆರೋಗ್ಯವೇ ಭಾಗ್ಯ” ಎಂಬುದು ನಮಗೆಲ್ಲ ತಿಳಿದೇ ಇದೆ. ಮೊದಲೆಲ್ಲಾ ರೋಗವಿಲ್ಲದ ಸ್ಥಿತಿಗೆ “ಆರೋಗ್ಯ” ಎಂಬುದಾಗಿ ಹೇಳಿದ್ದಾರೆ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ತಿನ್ನುವ ಆಹಾರ, ಸೇವಿಸುವ ಗಾಳಿ, ಬದುಕುವ ಜೀವನ ಶೈಲಿ ಎಲ್ಲವೂ ಕಲುಷಿತವಾಗಿದೆ. ಈ ಕಾರಣದಿಂದಲೇ ರೋಗವಿಲ್ಲದ ಆರೋಗ್ಯವಂಥ ಮನುಷ್ಯನ್ನು ಭೂತಗನ್ನಡಿ ಹುಡುಕಿ ಹಿಡಿದರೂ ಸಿಗದಂತಹ ಪರಿಸ್ಥಿತಿ ಬಂದಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ, ಖಿನ್ನತೆ ಹೀಗೆ ಒಂದಲ್ಲ ಒಂದು ರೋಗ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಆರೋಗ್ಯ ಎಂಬ ಶಬ್ದವನ್ನು ರೋಗವಿಲ್ಲದ ದೇಹಸ್ಥಿತಿಯ ಬದಲಾಗಿ, ಜೀವನೋತ್ಸಾಹ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಮಧುಮೇಹ, ರಕ್ತದೊತ್ತಡ ಇದ್ದರೂ, ದಿನಬೆಳಗೆದ್ದು ಕೆಲಸ ಮಾಡಲು ಹುಮ್ಮಸ್ಸು ಇದ್ದಲ್ಲಿ ಆತನನ್ನು ಆರೋಗ್ಯವಂತ ವ್ಯಕ್ತಿಯೆಂದು ಕರೆಯುವ ಅನಿವಾರ್ಯತೆ ಒದಗಿದೆ. ಯಾವುದೇ ರೋಗವಿಲ್ಲದಿದ್ದರೂ ಖಿನ್ನತೆಯಿಂದಾಗಿ ಅಥವಾ ಇನ್ನಾವುದೇ ಕಾರಣದಿಂದ ಕೆಲಸ ಮಾಡುವ ಆಸಕ್ತಿ ಅಥವಾ ಹುಮ್ಮಸ್ಸು ಇಲ್ಲದಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ರೋಗಿ ಎನ್ನುವ ಕಾಲಘಟ್ಟದಲ್ಲಿ ನಾವಿಂದು ನಿತ್ತಿದ್ದೇವೆ. ರೋಗವಿದ್ದರೂ, ರೋಗವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಮಾಜದ ಬೆಳವಣಿಗೆಗೆ ಪೂರಕವಾಗಿ ಧನಾತ್ಮಕ ಕೊಡುಗೆ ಕೊಡುವ ವ್ಯಕ್ತಿಗಳನ್ನು ಆರೋಗ್ಯವಂತ ಎಂದು ಪರಿಗಣಿಸಲಾಗುತ್ತದೆ ಎಂದರೂ ಅತಿಶಯೋಕ್ತಿಯಲ್ಲ ಮಧುಮೇಹ ಮತ್ತು ರಕ್ತದೊತ್ತಡ ಎನ್ನುವುದನ್ನು ಸೂಕ್ತ ಔಷದಿ,ü ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮಾರ್ಪಾಡು ಮಾಡಿಕೊಂಡು ನೂರು ಕಾಲ ಸುಖವಾಗಿ ಬದುಕಲು ಬೇಕಾದ ಎಲ್ಲಾ ವ್ಯವಸ್ಥೆಗಳು ಈಗ ಎಲ್ಲರಿಗೂ ಲಭ್ಯವಿರುವುದೇ ಸಮಾಧಾನಕಾರ ಅಂಶವಾಗಿದೆ.


ಎಲ್ಲ ರೋಗಗಳಿಗೂ ಔಷಧಿ ಇದೆ. ಮತ್ತು ಎಲ್ಲ ರೋಗಗಳನ್ನು ವೈದ್ಯರು ಗುಣಪಡಿಸುತ್ತಾರೆ ಎಂಬ ಭ್ರಮಾ ಲೋಕದಿಂದ ಜನರು ಹೊರಬರಲೇಬೇಕು, ಇಲ್ಲವಾದಲ್ಲಿ ದಿನಕ್ಕೊಂದರಂತೆ ಹೊಸ ರೋಗಗಳು ಹುಟ್ಟುತ್ತದೆ. ಮತ್ತು ಪ್ರತಿಯೊಂದು ರೋಗಕ್ಕೆ ಒಬ್ಬ ತಜ್ಞ ವೈದ್ಯರು ಹುಟ್ಟಿಕೊಳ್ಳಬಹುದೇ ಹೊರತು, ಸುಂದರ ಸುದೃಢ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ “ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ” ಎಂಬ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ದಿನದ ಆಚರಣೆಯ ಧ್ಯೇಯ ವಾಕ್ಯಕ್ಕೆ ನ್ಯಾಯ ಒದಗೀತು. ಇಲ್ಲವಾದಲ್ಲಿ ಎಲ್ಲರಿಗೂ ಆರೋಗ್ಯ ಎನ್ನುವುದು ಮರೀಚಿಕೆಯಾಗುವ ಎಲ್ಲ ಸಾಧ್ಯತೆಗಳು ಇದೆ. ಹೀಗಾಗಿ ವಿಶ್ವ ಆರೋಗ್ಯ ದಿನದಂದು ನಾವೆಲ್ಲ ಸುಂದರ ಸುದೃಢ ಸಮಾಜದ ನಿರ್ಮಾಣ ಮಾಡುವ ಪ್ರತಿಜ್ಞೆ ಮಾಡೋಣ. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಒಳಿತು ಅಡಗಿದೆ.


-ಡಾ|| ಮುರಲೀ ಮೋಹನ್‍ ಚೂಂತಾರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com

hit counter

0 Comments

Post a Comment

Post a Comment (0)

Previous Post Next Post