ಮಂಗಳೂರು: "ಕೀರ್ತಿ ಅರಸಿಕೊಂಡು ಬಂದಾಗ ತಿರಸ್ಕರಿಸಕೂಡದು. ಕೊರಗನ್ನು ದೂರೀಕರಿಸುವಲ್ಲಿ ಕಲಾರಾಧನೆ ಸಹಕಾರಿ" ಎಂದು ಹಿರಿಯ ಹವ್ಯಾಸಿ ಅರ್ಥಧಾರಿ, ಪ್ರವಚನಕಾರ ಕಿರಣ್ ಕುಮಾರ್ ಪಡುಪಣಂಬೂರು ನುಡಿದರು. ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ- 6 ಸ್ವೀಕರಿಸಿ ಅವರು ಮಾತನಾಡಿದರು.
"ವಾಗೀಶ್ವರೀ ಸಂಘದ ಆರಂಭದ ದಿನಗಳಿಂದಲೂ ಮಹಾಮಾಯಾ ದೇವಸ್ಥಾನದ ಅರ್ಚಕರು ಯಕ್ಷಗಾನವನ್ನು ಪ್ರೋತ್ಸಾಹಿಸಿದ್ದರು" ಎಂದು ಮಂಗಳೂರಿನ ಮಹಾಮಾಯಾ ದೇವಸ್ಥಾನದ ಮೊಕ್ತೇಸರ ಹಾಗೂ ಅರ್ಚಕ ಡಾ. ನಾಗೇಶ್ ಭಟ್ ಅವರು ಶ್ರೀ ವಾಗೀಶ್ವರೀ ಶತಮಾನೋತ್ಸವದ ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
"ಕಳೆದ ನಾಲ್ಕು ದಶಕಗಳಿಂದ ತಾಳಮದ್ದಳೆ ಅರ್ಥಧಾರಿಯಾಗಿ, ಶನಿಕಥಾ ಪ್ರವಚನಗಾರನಾಗಿ, ಶಿಕ್ಷಕನಾಗಿ ಸೇವೆಸಲ್ಲಿಸುತ್ತಿರುವ ಕಿರಣ್ ಅವರ ಅಗಾಧ ಜ್ಞಾಪಕ ಶಕ್ತಿ, ಭಗವದ್ಗೀತೆಯ ಏಳ್ನೂರು ಶ್ಲೋಕಗಳು, ಡಿ.ವಿ.ಜ ಯವರ ನಾಲ್ನೂರು "ಮಂಕುತಿಮ್ಮನ ಕಗ್ಗ" ಗಳನ್ನ ಕಂಠಸ್ಥ ಮಾಡಿ, ಅರ್ಥಗಾರಿಕೆಯಲ್ಲಿ ಅಳವಡಿಸಿಕೊಂಡಿರುವ ಕಿರಣ್ ಅವರು ದೃಷ್ಟಿ ದೋಷ ಇದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸನ್ನು ಕಂಡಿದ್ದಾರೆ" ಎಂದು ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.
ಬಾಲಕೃಷ್ಣ ನಾಯರ್ ಸಂಸ್ಮರಣೆ:
ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಹಿರಿಯ ಅರ್ಥಧಾರಿಗಳಾಗಿ ಪರಿಸರದ ಹಲವು ಸಂಘಗಳಲ್ಲಿ ಸುಮಾರು ಐದು ದಶಕಗಳ ಕಾಲ ಅರ್ಥಧಾರಿಯಾಗಿ ಖ್ಯಾತಿ ಪಡೆದಿದ್ದ ಬಾಲಕೃಷ್ಣ ನಾಯರ್ ಅವರ ಸಂಸ್ಮರಣೆ ಮಾಡಲಾಯಿತು.ತರ್ಕಬದ್ದ ತೂಕದ ಮಾತುಗಾರಿಕೆ, "ಕೊಕ್ಕೆ" ಪ್ರಶ್ನೆಗಳ ಮೂಲಕ ತಾಳಮದ್ದಳೆಯ ರಂಗೇರಿಸುತ್ತಿದ್ದ ಸರಳ ಸಂಭಾಷಣಾಕಾರ ನಾಯರ್ ಅವರು ಹವ್ಯಾಸಿ ವಲಯದಲ್ಲಿ ಖ್ಯಾತಿಪಡೆದ ಅರ್ಥಧಾರಿಯಾಗಿದ್ದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ "ಸಂಮಾನ, ಸಂಸ್ಮರಣೆ, ತಾಳಮದ್ದಳೆ"ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.
ಶತಮಾನೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ ಸಿ.ಯಸ್. ಭಂಢಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಉದ್ಯಮಿ ಶಿವಪ್ರಸಾದ್ ಪ್ರಭು, ಯಕ್ಷಗುರು ಅಶೋಕ ಬೋಳೂರು, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು. ಪ್ರಭಾಕರ ಕಾಮತ್ ಸ್ವಾಗತಿಸಿದರು. ಶೋಭಾ ಐತಾಳ್ ಸಂಮಾನ ಪತ್ರ ವಾಚಿಸಿದರು.
ಪ್ರಧಾನ ಸಂಚಾಲಕ ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಸಂಘದ ಕಲಾವಿದರಿಂದ ಶ್ರೀರಾಮ ಚರಿತಾಮೃತ ಸರಣಿಯ "ಶ್ರೀರಾಮ ವನಗಮನ" ತಾಳಮದ್ದಳೆ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ