|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆನಪಿನಂಗಳ: ಮತ್ತೆ ಕಾಡುತಿದೆ ಅಳಂಬ

ನೆನಪಿನಂಗಳ: ಮತ್ತೆ ಕಾಡುತಿದೆ ಅಳಂಬ


ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ... ಇದು ಶ್ರೀರಾಮಚಂದ್ರನ ಮಾತು. ಅಂತಹ ಶ್ರೀರಾಮನಿಗೇ ಮಾತೃಭೂಮಿಯ ಮೋಹ ಬಿಟ್ಟಿಲ್ಲವೆಂದರೆ ನಮ್ಮಂಥವರ ಪಾಡೇನು. ಶ್ರೀರಾಮನಿಗಾದರೋ ಹದಿನಾಲ್ಕು ವರ್ಷಗಳ ನಂತರ ಮಾತೃಭೂಮಿಯಲ್ಲಿ ವಾಸ ಮಾಡುವ ಯೋಗವಿದ್ದರೆ ನಾವು ಶಾಶ್ವತವಾಗಿ ಬಿಟ್ಟು ಬಂದ ಅಳಂಬದಲ್ಲಿ ವಾಸ ಎನ್ನುವುದು ಈ ಜನ್ಮದಲ್ಲಿ ಕನಸಿನ ಮಾತೇ... ಇರಲಿ ವಿಷಯಕ್ಕೆ ಬರೋಣ. 


ನಾವು ಅಳಂಬವನ್ನು ಬಿಟ್ಟು ಸಾಧಾರಣ ದಶಕವೇ ಆದರೂ ನೆನಪುಗಳು ಮಾತ್ರ ಹೊಸತರಂತೆಯೇ ಇದೆ. ನೆನಪಾದಾಗ ಪುರುಸೊತ್ತಿದ್ದಲ್ಲಿ ನಾವು ಆಗಾಗ ಅಳಂಬಕ್ಕೆ ಹೋಗಿಬರುವ ಕಾರ್ಯಕ್ರಮವಿಟ್ಟುಕೊಳ್ಳುವುದಿದೆ. ಅದರಂತೆಯೇ ನಾವು ಇತ್ತೀಚೆಗೆ ಸಂಸಾರ ಸಮೇತರಾಗಿ ಹೋಗಿದ್ದೆವು. ಅಲ್ಲಿ ಹಿಂದಿನ ತೋಟವಾಗಲಿ, ಮನೆಯಾಗಲಿ, ಗದ್ದೆಗಳಾಗಲಿ ಯಾವುದೂ ಇಲ್ಲದಿದ್ದರೂ ಇಂತಿಂಥ ಜಾಗದಲ್ಲಿ ಇಂತಿಂಥದ್ದಿತ್ತು ಎಂಬ ಕುರುಹುಗಳೇ ನಮಗೆ ನಮ್ಮ ಗತವೈಭವದ ಕಡೆಗೆ ಸೆಳೆಯುತ್ತಿದ್ದವು. ತೋಟ ಮನೆ ಎಲ್ಲವೂ ನಾಶವಾಗಿ ಹುಲ್ಲು ಬೆಳೆದು ಏಕಪ್ರಕಾರವಾಗಿ ಬಯಲಿನಂತೆ ಕಾಣುತ್ತಿರುವ ಮಧ್ಯೆಯೇ ಬೀದಿಯಲ್ಲಿ ನಿಂತ ತೇರಿನಂತೆ ಗುಗ್ಗುಳ ಅಥವಾ ಧೂಪದ ಮರವೊಂದು ನಮ್ಮೆಲ್ಲರನ್ನೂ ಅಣಕಿಸುವಂತೆ ತಲೆ ಎತ್ತಿ ನಿಂತಿರುವುದು ಮಾತ್ರ ವಿಷೇಷವೇ. ಸತತ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೆ ಇನ್ನೂ ಅದು ನಿಂತಿದೆ ಎಂದರೆ ಆ ಮರದ ಛಲವನ್ನು ಮೆಚ್ಚಲೇಬೇಕು.  


ತಾನೊಂದು ನೆನೆದರೆ ಮಾನವ ಬೇರೊಂದು ಬಗೆವುದು ದೈವ ಎನ್ನುವಂತೆ ನಾವು ತೋಟದಲ್ಲಿ ಕೃಷಿ ಮಾಡಿಕೊಂಡಿದ್ದ ಕಾಲದಲ್ಲಿ ಈ ಗುಗ್ಗುಳದ ಮರವನ್ನು ಎಷ್ಟೋ ಬಾರಿ ಕಡಿಯಬೇಕೆಂದಿದ್ದೆವು. ಆದರೆ ಅದರ ಆಯುಷ್ಯ ಗಟ್ಟಿಯಾಗಿತ್ತೆನ್ನಬಹುದು. ಇದು ಹಗುರ ಮರವಾದ್ದರಿಂದ ಯಾವ ಕ್ಷಣಕ್ಕೂ ಗಾಳಿಗೆ ಉರುಳಿ ಬಿದ್ದರೆ ತೋಟದೊಳಗಿನ ಅಡಿಕೆ, ತೆಂಗು, ಬಾಳೆ ಗಿಡಗಳ ಕೃಷಿ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಆದರೂ ಅದೇನು ಕಾರಣವೋ ನಮಗೆ ಅದನ್ನು ಕಡಿಯುವ ಮನಸ್ಸಿದ್ದರೂ ಕಡಿಯಲಾಗಲೇ ಇಲ್ಲ. ತೋಟವೆಂದ ಮೇಲೆ ಹಲಸು, ಮಾವು, ಚಕ್ಕೋತ, ಜಾಂಬು, ದಿವಿ ಹಲಸು ಮುಂತಾದ ಅನೇಕ ಮರಗಳು ಇರುವುದ ಸಹಜ. ಆದರೆ ನಮಗೆ ಇತರ ಮರಗಳೆಲ್ಲ ಬೇಕೆಂಬ ಅಪೇಕ್ಷೆ ಇದ್ದರೆ ಗುಗ್ಗುಳದಂಥ ಮರಗಳು ಅನಪೇಕ್ಷಿತ. ನಮ್ಮ ಲೆಕ್ಕಾಚಾರದಂತೆ ಗುಗ್ಗುಳದ ಮರವೂ ಏನೋ ಒಂದು ಲೆಕ್ಕ ಹಾಕಿದ್ದಿರಬಹುದು. ಕಾಲ ಬಂದಾಗ ನಿಮಗೇ ಅರಿವಾಗುವುದು ಎಂಬ ಮೌನದಿಂದಲೇ ಇದ್ದಿರಬಹುದೆಂದು ಈಗ ನಮಗರಿವಾಗುತ್ತದೆ. 


ಕಾಲಚಕ್ರ ತಿರುಗಿದಂತೆ ನಮ್ಮ ಅಸ್ತಿತ್ವ ಅಳಂಬದಲ್ಲಿ ಅಲುಗಾಡತೊಡಗಿತು. ಅದೇರೀತಿ ನಾವು ವಿಧಿ ಲಿಖಿತದಂತೆ ಅಳಂಬವನ್ನು ತೊರೆಯಲೂ ಬೇಕಾಯಿತು. ನಮ್ಮೆಲ್ಲ ಬದುಕು ಸರಕಾರದ ಪಾಲಾದ ಮೇಲೆ ಅಲ್ಲಿದ್ದ ಎಲ್ಲ ಚರಾಚರ ಸೊತ್ತುಗಳೂ ಧರಾಶಾಯಿಯಾಯಿತು, ಜತೆಗೆ ನಮ್ಮ ಕನಸುಗಳೂ. ಅದೆಷ್ಟೋ ವರ್ಷಗಳ ನಂತರವೂ ಕಾಡುವ ಅಳಂಬದ ನೆನಪಿಗೆ ಪರ್ಯಾಯವೇ ಇರದಾದರೂ ಕೆಲವು ವಿಚಿತ್ರಗಳೂ ಆ ನೆನಪುಗಳನ್ನು ಅಚ್ಚಳಿಯದಂತಾಗಿಸಿವೆ. ಉದಾಹರಣೆಗೆ ಈ ಗುಗ್ಗುಳದ ಮರವೇ. ಪ್ರತಿ ಬಾರಿಯೂ ಕಡಿಯಬೇಕೆಂದು ಹೊರಟಾಗ ಅದೇನೋ ಅಡ್ಡ ಬಂದು ಆ ಮರವನ್ನು ರಕ್ಷಿಸಿತ್ತು. ಆದರೆ ಇಂದು ನಾವು ಬೇಕೆಂದು ಬೆಳೆಸಿದ ಮರಗಳು, ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಔಷಧಿ ಸಸ್ಯಗಳು, ಮನೆ, ಹಟ್ಟಿ, ಗೋವು, ನಾಯಿ, ಬೆಕ್ಕು ಹಾಗೂ ನಾವು ಕೂಡ ಅಳಂಬವನ್ನೇ ಬಿಟ್ಟು ಬಂದರೆ ಯಾತಕ್ಕೂ ಬೇಡದ, ಹಗುರ ಮರವಾದರೂ ಇನ್ನೂ ಜೀವಂತವಾಗಿ ನಮ್ಮನ್ನು ಅಣಕಿಸುವಂತೆ, ಅಲ್ಲ ನಮ್ಮ ಮೇಲೆ ಕನಿಕರ ತೋರುವಂತೆ  ಅಥವಾ ಒಬ್ಬಂಟಿಯೆಂಬ ವ್ಯಥೆಯಲ್ಲಿ ಸದಾ ಇರುವಂತೆ, ಏನನ್ನೋ ಕಳಕೊಂಡವನಂತೆ ಕಾಣುವುದು ನಮಗಾದರೆ ಅದರ ಒಳನೋಟವೇನೋ ಯಾರು ಬಲ್ಲವರು..??

***********

- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post