ಸೌರಯುಗಾದಿ: ಬಿಸು- ವಿಷು; ಕೃಷಿಗೆ ತೊಡಗುವ ಉತ್ಸಾಹ

Upayuktha
0


ಅದೋ ನೋಡಿ... ಅನ್ನದಾತ 'ಪುಂಡಿಬಿತ್ತ್ ಪಾಡ್‌ಗ, ನಾಲೆರು ಮಾದಾಗ’ ಅಂದರೆ 'ಹಿಡಿ ಬೀಜ ಬಿತ್ತೋಣ, ನೇಗಿಲುಕಟ್ಟಿ ಒಂದು ಸುತ್ತು ಉಳುಮೆ ಮಾಡೋಣ' ಎನ್ನುತ್ತಾ ನೇಗಿಲನ್ನು ಹೆಗಲೇರಿಸಿ ಕೋಣ ಅಥವಾ ಎತ್ತುಗಳನ್ನು ಅಟ್ಟುತ್ತಾ ಕೃಷಿ ಕಾಯಕಕ್ಕೆ ತೊಡಗಲು ಗದ್ದೆಗೆ ಹೊರಟಿದ್ದಾನೆ. ಹೌದು... ಇದು ಸೌರ ಯುಗಾದಿಯ ದಿನದ ರೈತನ ಆದ್ಯತೆಯ ಕಾಯಕ.         


ಸೌರ ಪದ್ಧತಿಯನ್ನು ಅಂಗೀಕರಿಸಿದವರಿಗೆಲ್ಲ ಹೊಸ ವರ್ಷ ಆರಂಭವಾಗುವುದು ಯುಗಾದಿಯಿಂದ. ಇಗಾದಿ, ಬಿಸು, ವಿಷು ಎಂಬಿತ್ಯಾದಿ ಹೆಸರಿನಿಂದ ಆಚರಿಸುವ ಪರ್ವ ದಿನ ಸನ್ನಿಹಿತವಾಗುವುದು ಮೇಷ ಸಂಕ್ರಮಣದ ಮರುದಿನದಿಂದ. ತುಳುವರ ಪಗ್ಗು ತಿಂಗಳ ಮೊದಲ ದಿನ 'ಇಗಾದಿ'.


ನಿಸರ್ಗದಲ್ಲಿ ನಳನಳಿಸುವ ನಾವೀನ್ಯವನ್ನು ಕಾಣುತ್ತಾ ನಲವೇರಿ ನರ್ತಿಸುತ್ತಾ ಕೃಷಿಗೆ ಗಮನ ಹರಿಸಲು ಇದೇ ಸುಮುಹೂರ್ತ ವೆಂದು ಕೃಷಿಕ ಪರಿವರ್ತಿತ ಪ್ರಕೃತಿಯಿಂದ ಹೊಸ ಸಂದೇಶವನ್ನು ಸ್ವೀಕರಿಸಿ ಸೌರ ಯುಗಾದಿಯಂದು ಎಚ್ಚೆತ್ತು ಕೊಂಡಂತಿದೆ.


ಪರಿಸರ ಪಲ್ಲವಿಸಿದೆ. ಚೈತ್ರಮಾಸ-ವಸಂತ ಋತು, ಸೌರಮೇಷ ತಿಂಗಳು ಸನ್ನಿಹಿತವಾಗಿದೆ. ಸೂರ್ಯನಿರಲಿ, ಚಂದ್ರನಾಗಲಿ ಪ್ರಾಕೃತಿಕ ಪರಿವರ್ತನೆಗೆ ನಿಯಾಮಕರು ತಾನೆ? ಈ ಬದಲಾವಣೆಯನ್ನು ಗಮನಿಸುತ್ತಾ ಮಾನವ ಕಾಲ ನಿರ್ಣಯಿಸಿದ, ಕೃಷಿ ಸಂಸ್ಕೃತಿ ಬೆಳೆಸಿದ, ಬದುಕು ಕಟ್ಟಿದ. ಆದುದರಿಂದಲೇ ಪ್ರಾಚೀನವೆಂದು ಸ್ವೀಕರಿಸಲ್ಪಟ್ಟ ಸೌರ ಪದ್ಧತಿ ಮಾನವ ಜೀವನಕ್ಕೆ ಸಮೀಪವೆಂದು ಸ್ವೀಕಾರ. ಆದರೆ ಚಂದ್ರನನ್ನು ಬಿಟ್ಟಿಲ್ಲ, ಸೂರ‍್ಯನ ಚಲನೆಯನ್ನು ಅನುಸರಿಸುವಮ ಸೌರಮಾನಿಗಳಿಗೆ ಎರಡೂ ವಿಧಾನವೂ ಮಾನ್ಯವೆ. ಆಚರಣೆಗೆ ಮಾತ್ರ ಸೂರ‍್ಯ ಪ್ರಧಾನವಾದ ಸೌರಮಾನ ವಿಧಾನ. 


ಚಿಗುರು ನೆನಪಿಸುತ್ತದೆ!

ಗಿಡ, ಮರ, ಬಳ್ಳಿಗಳೆಲ್ಲ ಚಿಗುರುವ ತಿಂಗಳು. ಚಿಗುರು ಹೊಸತನ್ನು ಸಾಂಕೇತಿಸುತ್ತದೆ. ಈ ಹೊಸತು ಪ್ರಕೃತಿಯಿಂದ ಕಂಡ ಸತ್ಯ. ಹಾಗಿದ್ದರೆ ನಿಸರ್ಗದಿಂದ ಹೊಸದಾದುದನ್ನು ಪಡೆಯಬಹುದು. ಅದಕ್ಕೆ ಪ್ರಕೃತಿಯೇ ಕ್ಷೇತ್ರ. ಈ ಕ್ಷೇತ್ರದಿಂದ ಅಥವಾ ಗದ್ದೆ, ಕೃಷಿ ಭೂಮಿಯಿಂದಲೇ ಹೊಸ ಬೆಳೆ ತೆಗೆಯಬಹುದೆಂಬ ಸತ್ಯವನ್ನು ಸ್ಮರಿಸಿಕೊಳ್ಳುವ ಕಾಲ. ಕೃಷಿಕ ಸಿದ್ಧನಾಗು, ಎನ್ನುತ್ತಾ ಅಥವಾ ಪ್ರಕೃತಿಯ ಮೂಲಕ ಘೋಷಣೆ ಮೊಳಗಿಸುತ್ತಾ ಯುಗಾದಿ ಬರುತ್ತದೆ.  


ವಸಂತಾಗಮನವಾಗಿದೆ. ಕೋಗಿಲೆ ಸಹಜವಾಗಿ ಕುಹು... ಕುಹು ಎಂದು ಸುಸ್ವರದಿಂದ ಹಾಡುತ್ತಿದೆ. ಹೌದು, ಇದೆಲ್ಲ, ಈ ಸೂರ್ಯೋದಯದಿಂದಲೇ ಆರಂಭವೇ? ಅಲ್ಲ. ಪ್ರತಿದಿನವೂ ದಿನಮಣಿ ದಿನದ ಯಾತ್ರೆ ಆರಂಭಿಸುತ್ತಾನೆ. ಕ್ರಮಿಸುತ್ತಾನೆ. ಆದರೆ ಸೌರಯುಗಾದಿ ಅಥವಾ ಪಗ್ಗು ತಿಂಗಳ (ಮೇಷ ಮಾಸ) ತಿಂಗೊಡೆ, ಸಿಂಗೊಡೆ ಅಥವಾ ‘ತಿಂಗಳುದ್ಯೊ’ ದಂದು ಮಾತ್ರ ಸೂರ‍್ಯ ಹನ್ನೆರಡು ರಾಶಿಗಳ ಒಂದು ಚಕ್ರದ ಯಾತ್ರೆಯನ್ನು ಮುಗಿಸಿ ಮತ್ತೆ  ಪ್ರಥಮದ ಮೇಷರಾಶಿಗೆ ಪ್ರವೇಶಿಸುತ್ತಾನೆ.   


ಒಮ್ಮೆ ಸಮಗ್ರ ಪ್ರಾಕೃತಿಕ ಸ್ಥಿತ್ಯಂತರ, ಮಾಸಗಳ ಬದಲಾವಣೆ, ಋತುಗಳ ವೈವಿಧ್ಯ, ಮಳೆ - ಚಳಿ - ಬೇಸಗೆ ಪರಿಣಾಮ ಬೀರಿಯಾಗಿದೆ. ಮತ್ತೆ ಹೊಸತಾಗಿ ಹನ್ನೆರಡು ತಿಂಗಳ ಅನಂತರ ಹೊಸ ಆವರ್ತನಕ್ಕೆ ಸೂರ‍್ಯ ಸಿದ್ಧವಾದ ದಿನ. ಈ ಪರ್ವ ಆಚರಣೆಯ ಸಂಪ್ರದಾಯ ನಮಗೆ ಪ್ರಕೃತಿಯನ್ನೊಮ್ಮೆ ದಿಟ್ಟಿಸಿ ನೋಡುವ ಪರ್ವವಾಗುತ್ತದೆ. 


ಪಗ್ಗುಡೆ ಎರುಕಟ್ ದ್  ದತ್ತೊನುಲ, ಬಗ್ಗ್ ದ್ ನೇಜಿ ಪಾಡೊನುಲ' (ಕೋಣಕಟ್ಟಿ ಉತ್ತುಕೊ, ಬಗ್ಗಿನೇಜಿ ಹಾಕಿಕೋ) ಎಂಬ ಮಾತು ಯುಗಾದಿ ಸಂಬಂಧಿಯಾಗಿದೆ. ಈ ದಿನದಿಂದಲೇ ಕೃಷಿ ಚಟುವಟಿಕೆಗಳು ಆರಂಭ ಎನ್ನುವಂತಿವೆ. ಇವು ಯುಗಾದಿ ಆಚರಣೆಯ ಅವಿಭಾಜ್ಯ ಅಂಗ (ಕೃಷಿಕರಿಗೆ ಮಾತ್ರ), ಕೃಷಿ-ಆಚರಣೆ-ಮಾನವ ಬಹುಕು ಏಕಸೂತ್ರದಂತೆ ಪರಸ್ಪರ ಸಂಬಂಧಿಯಾಗಿ ಕಾಣುವುದಿಲ್ಲವೆ?


ಭೂದೇವಿ ಸಿದ್ಧಳಾದಳು...

ಮಕರ ಮಾಸದಲ್ಲಿ ಭೂಮಿ ದೇವಿ ರಜಸ್ವಲೆಯಾಗುವ ಸಂದೇಶವಿರುವ ‘ಕೆಡ್ಡಸ’ (ಭೂರಜಸ್ವಲಾ ದಿನಗಳು) ಆಚರಣೆ. ಮುಂದೆ ಬೇಸಗೆಕಾಲ. ಬಳಿಕದ ಮಳೆಗಾಲಕ್ಕೆ ಮೊದಲು ಋತುಸ್ನಾತೆಯಾದ ಭೂದೇವಿಯನ್ನು ಬೆಳೆ ಬೆಳೆಯುವ ಫಲವಂತಿಕೆಯನ್ನು ನೀಡುವ ಸಲುವಾಗಿ ಸಿದ್ಧಗೊಳಿಸುವ ಪ್ರಕ್ರಿಯೆಯಾಗಿ ನಮ್ಮ ಆಚರಣೆಗಳು ನೇರ್ಪುಗೊಂಡಿವೆ ಅನ್ನಿಸುತ್ತಿದೆ.      


ಆದರೆ ಕೃಷಿ ಕೃಶವಾಗುತ್ತಾ ಕೃಷಿ ಭೂಮಿ ಕಣ್ಮರೆಯಾಗುತ್ತಿದೆ. ಹಾಗಾಗಿ ಉಜ್ಜಲವಾಗಿ ಬೆಳೆದ ‘ಕೃಷಿ ಸಂಸ್ಕೃತಿ’ ಉಳಿಯುತ್ತದೋ ಗೊತ್ತಿಲ್ಲ. ಅಂತಹ ವಿವರವಾದರೂ ತಿಳಿದಿರಲಿ ಎಂಬುದು ಆಶಯ. 


ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ?

ಕೋಲ, ಬಲಿ, ಅಂಕ, ಆಯನಗಳ ಉತ್ಸಾಹ, ನಾಗ- ಬಹ್ಮಲೋಕ, ದೈವಗಳ ಸಾಮ್ರಾಜ್ಯ ಸೃಷ್ಟಿಯಾಗುತ್ತಾ ಪ್ರತಿ ರಾತ್ರಿಯೂ ದಿವ್ಯವಾಗುವ ಶ್ರಾಯ. ಇದಕ್ಕೆ ಪೂರಕವಾಗಿ ಒದಗಿ ಬಂದಿರುತ್ತದೆ ವಸಂತ ಋತುವಿನ ಬಿನ್ನಾಣ. ಈ ನಡುವೆ ಕಾಲ ನಿಯಾಮಕ ಸೂರ್ಯ ಮೇಷ ರಾಶಿ ಪ್ರವೇಶಿಸಿ ಹೊಸ ಕ್ರಮಣ ಆರಂಭಿಸುವ ಪರ್ವ ಕಾಲ ‘ಸೌರಯುಗಾದಿ’ ಸಮನಿಸುತ್ತದೆ. ಗೌಜಿ - ಗದ್ದಲಗಳಿಲ್ಲದ, ಸಂಭ್ರಮದ ವಿಧಿಯಾಚರಣೆಗಳಿಲ್ಲದ ಹಬ್ಬ.


ಜಾತ್ರೆ-ನೇಮಗಳ ಸಹಿತ ಶುಭ ಶೋಭನಾದಿಗಳ ಗುಂಗಿನಿಂದ ಹೊರ ಬಂದು ಕೃಷಿಗೆ ತೊಡಗು ಎಂಬ ಆಶಯವೂ ‘ಸೌರಯುಗಾದಿ’ಯ ಆಚರಣೆಯಲ್ಲಿದೆ. ಹೊಸ ವರ್ಷಾರಂಭವಾಗಿರುವುದರಿಂದ ಶುಭ ಪ್ರತೀಕ್ಷೆಯೂ ಸೌರಯುಗಾದಿಯ ಆಶಯವಾಗಿದೆ. ಕೃಷಿ ಮತ್ತು ಮುಂದಿನ ವರ್ಷದ ಜೀವನ ನಿರಾತಂಕವಾಗಿ ನಡೆಯಲಿ ಎಂಬ ಹರಕೆಯೊಂದಿಗೆ ‘ಕಣಿ’ ದರ್ಶನ. ಈ ಮೂಲಕ ನೂತನ ವರ್ಷದ ಮೊದಲ ದಿನ ಮಂಗಲದ್ರವ್ಯಗಳನ್ನು ಹೊಂದಿರುವ ‘ಕಣಿ’ಯನ್ನು ನೋಡುವುದು ಹಲವೆಡೆ ಪ್ರಧಾನ ವಿಧಿಯಾಗಿ ನಡೆಯುತ್ತದೆ. ದೇವಾಲಯಗಳಿಗೆ ಹೋಗುವುದು, ದೈವಗಳಿಗೆ ಸೇವೆ ಸಲ್ಲಿಸುವುದು ಮುಖ್ಯ ಆಚರಣೆಯಾಗುವ ಕ್ರಮವೂ ಚಾಲ್ತಿಯಲ್ಲಿದೆ. 


ತುಳುನಾಡಿನ ಉದ್ದಕ್ಕೂ ವೈವಿಧ್ಯದಿಂದ ನಡೆಯುವ ‘ಇಗಾದಿ’ ಅಥವಾ ‘ಯುಗಾದಿ’ ‘ವಿಷು' ಎಂದೇ ವಿಶೇಷವಾಗಿ ‘ಬಿಸು’ವಾಗಿ ಸ್ವೀಕರಿಸಲ್ಪಟ್ಟು ನಡೆಯತ್ತದೆ. ಆದರೆ ಕೃಷಿಕನ ಲಕ್ಷ್ಯವಿರುವುದು ಮುಂದಿನ ವರ್ಷದ ಬೇಸಾಯದ ಸ್ವರೂಪ ಹೇಗಿರಬೇಕು ಎಂದು ನಿರ್ಧರಿಸುವಲ್ಲಿ. ಅದಕ್ಕಾಗಿ ಆತ ‘ಯುಗಾದಿ ಫಲ’ ಕೇಳುವಲ್ಲಿ ಆಸಕ್ತನಿರುತ್ತಾನೆ. ಈ ವರ್ಷದ ಮಳೆ ಹೇಗೆ ಎಂದು ಪಂಚಾಂಗ ವಿವರಿಸುವ ‘ಯುಗಾದಿ ಫಲ’ವು ಮಳೆಯ ಪ್ರಮಾಣವನ್ನು ತಿಳಿಸುತ್ತದೆ. ಯಾವ ಬಣ್ಣದ ಧಾನ್ಯಗಳ ಬೆಳೆ ಹುಲುಸಾಗಿ ಬೆಳೆದೀತು ಎಂಬ ಭವುಷ್ಯವನ್ನು ತಿಳಿಯುವ ಕುತೂಹಲವು ರೈತನದ್ದಾಗಿರುತ್ತದೆ. ‘ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ’ (ಕಪ್ಪು ಬಣ್ಣದ ಧಾನ್ಯ ಅಥವಾ ಅಕ್ಕಿಯಾಗುವ ಭತ್ತದ ತಳಿ ಆದೀತೋ ಬಿಳಿ ಬಣ್ಣದವು ಆದೀತೊ ಅಥವಾ ಯಾವುದು ಒಳ್ಳೆಯದಾದೀತು) ಎಂಬ ನಿರ್ಧಾರಕ್ಕೆ ಬಂದು ‘ಕಜೆಬಿದೆ’- ಕುಚ್ಲು ಅಕ್ಕಿಯ ಬೀಜ ಅಥವಾ ‘ಮಡಿಬಿದೆ- ಬೆಳ್ತಿಗೆಯ ಬೀಜವನ್ನು ‘ಕೈಬಿತ್ತ್’ (ಸಾಂಕೇತಿಕವಾಗಿ ಗದ್ದೆ ಮೂಲೆಯಲ್ಲಿ ಒಂದು ಹಿಡಿ ಪ್ರಮಾಣದಲ್ಲಿ ಹಾಕುವುದು) ಪಾಡುನಿ ಎಂಬ ಯುಗಾದಿಯಂದು ನಡೆಸಲಾಗುವ ಕೃಷಿ ಆರಂಭದ ಪ್ರಕ್ರಿಯೆಯಲ್ಲಿ ಒಂದು ಪರಂಪರೆಯಿಂದ ಸಾಗಿ ಬಂದ ಸಂಪ್ರದಾಯವಿದೆ.


ಬುಳೆಪು ಕಾಣಿಕೆ:

ಭೂ ಸುಧಾರಣೆ ಕಾನೂನು ಅನುಷ್ಠಾನದ  ಪೂರ್ವದಲ್ಲಿ ‘ಬೆನ್ನಿಬುಡ್ಪುನಿ ಮತ್ತು ಮಲ್ಪುನಿ’ (ಸಾಗುವಳಿ ಮಾಡುತ್ತೇನೆ ಎಂದು ತೊಡಗುವ ಅಥವಾ ಸಾಗುವಳಿ ಬಿಡುತ್ತೇನೆ ಎಂದು ಒಕ್ಕಲು ಬಿಟ್ಟುಹೋಗುವ ಕ್ರಮ) ಎಂಬ ನಿರ್ಣಯಕ್ಕೆ ಯುಗಾದಿ ನಿಗದಿತ ದಿನವಾಗಿತ್ತು. ಏಕೆಂದರೆ ಕೃಷಿ ಆರಂಭವೇ ಇಲ್ಲಿಂದ ಆಗಿರುವುದರಿಂದ ಭೂ ಒಡೆತನ ಉಳುವವನದ್ದಾಗಿರವುದರಿಂದ ಭೂ ಒಡೆಯನಿಗೆ ಮುಂದಿನ ವರ್ಷದ ಅಥವಾ ಹೊಸ ವರ್ಷದಲ್ಲಿ ಕೃಷಿ ಮುಂದುವರಿಸಲು ‘ಬುಳೆಪು ಕಾಣಿಕೆ’ (ತರಕಾರಿ,ಹಣ್ಣುಗಳನ್ನು ಭೂಮಾಲಕನಿಗೆ ಸಾಂಕೇತಿಕವಾಗಿ ಅರ್ಪಿಸುವುದು) ಸಲ್ಲಿಸಿ ಅಪ್ಪಣೆ ಕೇಳುವ ಕ್ರಮವೂ ಮರೆತುಹೋಗಿದೆ. ಆದರೆ ಊರ ದೇವಾಲಯಕ್ಕೆ ಈ ಕಾಣಿಕೆ ಸಂದಾಯದ ಸಂಪ್ರದಾಯ ಇಂದಿಗೂ ಕೆಲವೆಡೆ ಇದ್ದಂತಿದೆ. 


ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಅಂದರೆ, ಅವರಿಗೆ ನಮಸ್ಕರಿಸುವುದೂ ಸತ್‌ಸಂಪ್ರದಾಯ ವಾಗಿದೆ. ಮನೆಮಂದಿಗೆ ಹಾಗೂ ಪೂರ್ಣ ಕಾಲಿಕ ಕೆಲಸದವರಿಗೂ ಹೊಸಬಟ್ಟೆ ಕೊಡುವ ಕ್ರಮವು ‘ಇಗಾದಿ’ಯಂದು ನಡೆಯುತ್ತದೆ. ಇಗಾದಿಯ ಅಂಗವಾಗಿ ‘ತಾರಾಯಿ ಕುಟ್ಟುನಿ’ (ತೆಂಗಿನಕಾಯಿಯನ್ನು ಉಪಯೋಗಿಸಿ ಆಡುವ ಆಟ) ಒಂದು ಜನಪದ ಆಟ ಆಡುವ ಕ್ರಮವಿತ್ತು. ‘ಬಿಸುತ ಕಟ್ಟ’ ಎಂಬ ಕೋಳಿ ಅಂಕವೂ ‘ಬಿಸು’ ಅಂಗವಾಗಿ ನಡೆಯುವುದಿದೆ. 


ಹಬ್ಬಗಳ ಆಚರಣೆಯ ಗುರಿ ‘ಆನಂದ’ವನ್ನು ಪಡೆಯುವುದು. ಆದರೆ ಯುಗಾದಿ ಸರಳ, ಭಾವನಾತ್ಮಕ ಆಚರಣೆಯಾಗಿ ನೆರವೇರುತ್ತದೆ. ಇಲ್ಲಿ ಹಳೆಯ ಕಹಿಯನ್ನು ಮರೆಯುವ, ‘ಸಿಹಿ’ಯನ್ನು ಬಯಸುವ ನಿರೀಕ್ಷೆ ಇದೆ. ಕಹಿಯಲ್ಲೂ ಸಿಹಿಯನ್ನು ಆನಂದಿಸುವ ಅಧ್ಯಾತ್ಮವಿದೆ. ಒಟ್ಟಿನಲ್ಲಿ ‘ಕರ್ತವ್ಯ’ಕ್ಕೆ ಎಚ್ಚರಿಕೆ ಇದೆ. ‘ತೊಡಗು’ ಎಂಬ ಸಂದೇಶವಿದೆ. ಅದೇನಿದ್ದರೂ ಕೃಷಿ ಆರಂಭಕ್ಕೆ ಇಗಾದಿ (ಯುಗಾದಿ ಅಥವಾ ಬಿಸು) ಎಂಬ ಅನುಸಂಧಾನವಿದ್ದಾಗ ಮಾತ್ರ.  


ಆದರೆ ಈ ಕಾಲದಲ್ಲೂ ‘ಇಗಾದಿ’ ನೆನಪಿದೆ, ಯುಗಾದಿ ಆಚರಿಸಲ್ಪಡುತ್ತಿದೆ, ‘ಬಿಸು ಕಣಿ’ಯ ದರ್ಶನ ಸಂಭ್ರಮದಿಂದ ನಡೆಯುತ್ತಿದೆ ಎನ್ನುವುದು ಮಾತ್ರ ಸಂತಸದ ಸಂಗತಿ. ವೈವಿಧ್ಯಮಯ ಕಲ್ಪನೆಯೊಂದಿಗೆ ಸೂಕ್ತ ಅನುಸಂಧಾನ ವಿಧಾನದಿಂದ ‘ಸೌರಯುಗಾದಿ’ ನೆರವೇರುವುದು. ಇದರ ಹಿನ್ನೆಲೆ ಕೃಷಿ ಆಧಾರಿತ ಬದುಕಿನ ನೋಟ. 


• ಹಳೆಯ ಕಹಿಯನ್ನು ಮರೆತು ಮುಂದೆ ಅಡಿ ಇಡುವ ಸಂಭ್ರಮದ ನಡುವೆಯೂ ‘ಬಾಗುವ’ 

(ನಮಸ್ಕರಿಸುವ) ಸಂದೇಶವಿದೆ.

• ‘ಕಣಿ’ ಎಂಬುದು ಹಣ್ಣು, ಕಾಯಿ, ಅಕ್ಕಿ, ಕನ್ನಡಿ, ಚಿನ್ನಾಭರಣ ಇತ್ಯಾದಿ ಮಂಗಳ ದ್ರವ್ಯಗಳನ್ನು ದೇವರ ಮುಂದೆ ಜೋಡಿಸಿಟ್ಟು ಯುಗಾದಿಯಂದು ಬೆಳಗ್ಗೆ ಎದ್ದೊಡನೆ ನೋಡುವ ಮಂಗಲದ್ರವ್ಯ ದರ್ಶನ ಪ್ರಕ್ರಿಯೆ. 

• ‘ಕಣಿ’ಯಿಂದ ಶುಭಫಲ ನಿರೀಕ್ಷೆ ಇದೆ. ‘ವಿಷು'ಎಂಬುದು ‘ಸೌರಯುಗಾದಿ’. ಇದು ತುಳುವರಲ್ಲಿ ‘ಬಿಸು’ ಆಯಿತು. ಈ ಹೆಸರಿನಲ್ಲಿ ವಿವಿಧ ಸಾಮೂಹಿಕ ಆಚರಣೆಗಳು ಇತ್ತೀಚೆಗೆ ನಡೆಯುತ್ತಿವೆ.


• ಉತ್ತರದಿಂದ ದಕ್ಷಿಣ ತುಳುನಾಡಿನತ್ತ ಗಮನಿಸಿದರೆ ನಾಲ್ಕೈದು ವಿಧದ ಸೌರ ಯುಗಾದಿಯ ಆಚರಣಾ ವೈವಿಧವಿದೆ. 

• ಸೌರಯುಗಾದಿಯಲ್ಲಿ ಜಾನಪದ- ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗದ ಆಚರಣಾ ವಿಧಾನವಿದೆ. 

• ‘ಕಣಿ’ಯೊಂದಿಗೆ ಅಟ್ಟದ ಮೇಲಿನ ‘ತಾಳೆಗರಿ’ಯ ಗ್ರಂಥಗಳನ್ನು ಸ್ವಚ್ಛಗೊಳಿಸಿ ಇಡುವ ಕ್ರಮವಿದೆ. ಇತ್ತೀಚೆಗೆ ಪಂಚಾಂಗ (ಹೊಸ)ವನ್ನು ಇಡುವುದು ರೂಢಿಯಾಗಿದೆ.

-ಕೆ.ಎಲ್. ಕುಂಡಂತಾಯ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top