|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಣ ಚಿಂತನ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ವಾವಲಂಬಿ ಜೀವನಕ್ಕೆ ದಾರಿ ತೋರಬಹುದೇ?

ಶಿಕ್ಷಣ ಚಿಂತನ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ವಾವಲಂಬಿ ಜೀವನಕ್ಕೆ ದಾರಿ ತೋರಬಹುದೇ?



ಶ್ರೀಗುರುಗಳ ಕಲ್ಪನೆಯ ಮೂಸೆಯಲ್ಲಿ ಎದ್ದು ಬಂದಿರುವ ವಿ ವಿ ವಿ ಆ ದಾರಿಯತ್ತ ಇಟ್ಟಿರುವ ಪ್ರಥಮ ಹೆಜ್ಜೆ ಎಂದು ಅನೇಕರ ನಂಬಿಕೆ. ನಲಂದಾ ಮತ್ತು ತಕ್ಷಶಿಲಾ ಮಾದರಿಯ ವಿದ್ಯಾಭ್ಯಾಸ ಪದ್ಧತಿ ಮುಂದಿರುವ ಗುರಿ.


ಆಧುನಿಕ ವಿದ್ಯಾಭ್ಯಾಸ ಪದ್ಧತಿ ಸ್ವಾವಲಂಬನೆಗೆ ಒತ್ತು ಕೊಡುತ್ತಿದೆಯೇ? ಈ ಬಗ್ಗೆ ನಾನು ಕಂಡ ಅನುಭವಗಳನ್ನು ಒಂದಷ್ಟು ವಿವರಿಸಲು ಪ್ರಯತ್ನಿಸುವೆ.


ಅದೊಂದು ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸಭೆ. ಅನೇಕ ನೂತನ ವಿದ್ಯಾರ್ಥಿಗಳು ಅವರ ಹೆತ್ತವರು ಸಭೆಯಲ್ಲಿ ಭಾಗವಹಿಸಿದ್ದರು. ಸಮಯಕ್ಕೆ ಸರಿಯಾಗಿ ಸುರುವಾದ ಸಭೆಯಲ್ಲಿ ಅನುಭವಿಗಳ ಭಾಷಣದ ಸರಮಾಲೆಗೆ ಕೊರತೆಯೇನೂ ಇರಲಿಲ್ಲ. ವಿದ್ಯೆ, ಅಂಕ, ಶಿಸ್ತು, ಸಂಯಮ, ಉತ್ತಮ ಅಂಕ ಗಳಿಸದಿದ್ದರೆ ವ್ಯರ್ಥವಾಗುವ ಜೀವನ ಈ ಬಗ್ಗೆ ಹೆಚ್ಚಿನವರ ಮಾಹಿತಿಗಳು ಬಂದಿತ್ತು. ಅಂಕ ಗಳಿಸದಿದ್ದರೆ ಭವಿಷ್ಯ ಶೂನ್ಯವಾಗಬಹುದು ಎಂಬ ಮಾಹಿತಿಗೆ ಒತ್ತು ಹೆಚ್ಚು ಕೊಟ್ಟಂತೆ ತೋರುತ್ತಿತ್ತು. ಕಾಲೇಜು ವಿದ್ಯಾಭ್ಯಾಸದ ಅಂಗಣಕ್ಕೆ ಹೋದಮೇಲೆ ಈ ಮಾಹಿತಿಯು ಸರಿ ಇರಬಹುದು ಎಂದು ಒಪ್ಪಿಕೊಂಡರೂ ಆ ಕ್ಷಣಕ್ಕೆ ನನ್ನ ಮನಸ್ಸಿನಲ್ಲಿ ಉಂಟಾದ ಭಾವನೆಗಳನ್ನು ವ್ಯಕ್ತಪಡಿಸುವ ಸ್ಥಳ ಅದು ಅಲ್ಲವಾದ್ದರಿಂದ ಸುಮ್ಮನಾಗಿದ್ದೆ.


ನಮ್ಮ ಸುತ್ತಮುತ್ತಲೂ ಇಂದು ಅನೇಕ ವಿದ್ಯಾವಂತರಿದ್ದಾರೆ. ದ್ವಿ ಪದವಿ ಪಡೆದವರಿದ್ದಾರೆ. ಅವರೆಲ್ಲ ಮಾಡುವ ಕೆಲಸವನ್ನು ಕೇವಲ ಹತ್ತನೇ ಕ್ಲಾಸನ್ನು ಕಲಿತವರು ಮಾಡಬಲ್ಲರು. ಆದರೆ ಹತ್ತನೇ ಕ್ಲಾಸು ಕಲಿತವರು ಮಾಡುವ ಕೆಲಸವನ್ನು ಇವರಾರೂ ಮಾಡಲೊಲ್ಲರು ಮಾಡಲಾರರು. ನೋಡಿ ತಿಳಿ ಮಾಡಿಕಲಿ ಎಂಬುದು ಭಾರತೀಯ ವಿದ್ಯಾಭ್ಯಾಸದ ಮಾದರಿ. ಆಧುನಿಕ ವಿದ್ಯಾಭ್ಯಾಸದಲ್ಲಿ ಮೂರು ವರ್ಷಕ್ಕೆ 4 ಗೋಡೆಗಳ ಮಧ್ಯೆ ತುರುಕಿದರೆ ಮತ್ತೆ ಆತನು ಹೊರಬರುವುದು 23 ವರ್ಷಗಳ ನಂತರ. ನಾನು ಈ ಹಿಂದೆ ಬರೆದಂತೆ ಸೂಕ್ಷ್ಮವಾಗಿ ಎಲ್ಲಾ ಆಗುಹೋಗುಗಳನ್ನು ವೀಕ್ಷಿಸುವ ಪ್ರಾಯದಲ್ಲಿ, ಯಾರದೋ ಅನುಭವಗಳನ್ನು ಕೇಳಿ ತಿಳಿಯುವಂತೆ ಮತ್ತು ಅದನ್ನು ಅಚ್ಚುಕಟ್ಟಾಗಿ ಉತ್ತರ ಪತ್ರಿಕೆಯ ಮೂಲಕ ವಿವರಿಸಿ ಹೇಳಲು ಯಾವನು ಸಮರ್ಥನಾಗುತ್ತಾನೋ ಆತನು ಇಂದು ವಿದ್ಯಾವಂತ ಅನ್ನಿಸಿಕೊಳ್ಳುತ್ತಾನೆ. ಇಂತವರಿಗೆ ಸ್ವಾನುಭವಗಳು ಶೂನ್ಯ ವಾಗಿರುವ ಕಾರಣ ಅವರು ಸೀಮಿತ ಜ್ಞಾನದಲ್ಲಿ ಮಾತ್ರ ಕೆಲಸ ಮಾಡಬಲ್ಲರು. ಕಾಲೇಜು ಶಿಕ್ಷಣದಲ್ಲಿ ಅಂಕ ಗಳಿಸುವುದೇ ಗುರಿಯಾಗಿರುವಾಗ, ಬೇರೆ ಜ್ಞಾನಗಳಿಗೆ ಆಸ್ಪದವೂ, ಬೆಲೆಯೂ ಇಲ್ಲದೆ ಇರುವಾಗ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವೇ?


ಎಲ್ಲರೂ ಪದವಿ ಶಿಕ್ಷಣದತ್ತ ನಡೆದುದರ ಪರಿಣಾಮವಾಗಿ ಇಂದು ಸ್ವಾವಲಂಬಿ ಶಿಕ್ಷಣ ಮರೆಯಾಗುತ್ತಿದೆ. ನಾವು ಉಣ್ಣುವ ಭತ್ತದ ಕೃಷಿ ಅದ್ಭುತ ಜ್ಞಾನಭಂಡಾರ. ಇಂದು ಅದನ್ನು ಹೇಗೆ ಮಾಡಬೇಕೆಂಬುದೇ ಗೊತ್ತಿಲ್ಲದವರು  ಜಾಸ್ತಿ. ಭಾರತೀಯರಿಗೆ ಹೈನುಗಾರಿಕೆ ಎಂದರೆ ಕರತಲಾಮಲಕ. ಹಾಲು ಕಾಸಿ ಮೊಸರು ಮಾಡಿ ಮಜ್ಜಿಗೆ, ಬೆಣ್ಣೆ, ತುಪ್ಪ ತಯಾರಿಸುವುದೆಂದರೆ ಭಾರತೀಯ ಮಹಿಳೆಯರಿಗೆ ಲೀಲಾಜಾಲ. ಆದರೆ ಯುವಪೀಳಿಗೆಯಲ್ಲಿ ದನ ಸಾಕುವುದು ಗೌರವದ ಸಂಕೇತವಾಗಿ ಇಲ್ಲ. ಹಾಲು ಹೆಪ್ಪು ಮಾಡುವುದು ಗೊತ್ತಿಲ್ಲದವರು ಅನೇಕರು, ತುಪ್ಪ ಅಂಗಡಿಯಲ್ಲಿ ಸಿಗುವುದು ಮಾತ್ರ. ಸ್ವ ಉದ್ಯೋಗದ ಸ್ವಾವಲಂಬನೆಯನ್ನು ಬಿಟ್ಟು, ನಿರುದ್ಯೋಗಿಗಳ ಪಟ್ಟಿಯಲ್ಲಿ ಸೇರಿಕೊಂಡು ಯಾರೋ ಕೊಡುವ ಉದ್ಯೋಗಕ್ಕಾಗಿ ಕಾತರಿಸುವವರನ್ನು ಸೃಷ್ಟಿಮಾಡುವ, ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯುವ ವಿದ್ಯೆ ವಿದ್ಯೆ ಆದೀತೆ?ಎಂದು ನನಗಂದು ಅನಿಸಿತ್ತು. ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದ ಅದ್ಭುತ ವಿದ್ಯೆ ಇವುಗಳೆಲ್ಲ. ಒಮ್ಮೆ ನಾಶವಾದರೆ ಮತ್ತೆಂದೂ ದೊರೆಯದು.


ನಮ್ಮ ಮನೆಯ ಹಂಚಿನ ಮಾಡನ್ನು 10 ಅಡಿಯಷ್ಟು ವಿಸ್ತರಿಸಬೇಕಾಗಿತ್ತು. ಮಾಡಿನ ರೂಪಕ್ಕೆ ಕುಂದು ಬರದಂತೆ ವಿಸ್ತರಿಸುವಾಗ ಇಳಿಕೆಯ ಮಾಡಿಗೆ ಕಲ್ಲಿನ ಕುಂದ ಎಷ್ಟು ಅಡಿ ಎತ್ತರ ಇರಬೇಕೆಂದು ಶಾಲೆಯ ಮೆಟ್ಟಿಲನ್ನೇ ಹತ್ತದ ಬಡಿಗಿಯೊಬ್ಬ ಲೆಕ್ಕಾಚಾರ ಕೊಟ್ಟಾಗ ಪಾರಂಪರಿಕ ಭಾರತೀಯ ಜ್ಞಾನಕ್ಕೆ ಭೇಷ್ ಎನ್ನುವ ಸರದಿ ನನ್ನದಾಗಿತ್ತು.


ಕಲ್ಲುಕುಟಿಗ ನೊಬ್ಬನ ಹಸ್ತದಲ್ಲಿ ಅದೆಂತಹ ಕಲಾ ಕುಸುಮಗಳು ಹೊರ ಬರಬಲ್ಲುದು, ಕಮ್ಮಾರನ ಕೈಯಲ್ಲಿ ಯಾವುದೇ ಒತ್ತಡಕ್ಕೆ ಬಗ್ಗದ ಜಗ್ಗದ ಕತ್ತಿಯ ಅಲುಗು ಮೂಡಿ ಬರಬಲ್ಲುದು, ಯಾವುದೇ ಗಾರೆ ಕಬ್ಬಿಣಗಳಿಲ್ಲದೆ, ಆಧುನಿಕ ಇಂಜಿನಿಯರುಗಳ ತಂತ್ರಜ್ಞಾನವಿಲ್ಲದೆ ಕುಸಿಯುವ ಧರೆಯನ್ನು ತಡೆಯುವ ಸ್ಥಳೀಯ ಕಲ್ಲುಗಳಿಂದಲೇ ನಿರ್ಮಿಸಿದ ಕಲ್ಲು ಕಟ್ಟಗಳು ಏರಬಲ್ಲುದು, ಕಲ್ಲೇ ಇಲ್ಲದೆ ಮಣ್ಣನ್ನೇ ಹದವರಿಸಿ ಏರಿಸುವ ಅದ್ಭುತ ಕಲೆ ಮುಂತಾದ ಪಾರಂಪರಿಕ ಜ್ಞಾನಗಳೆಲ್ಲಾ ಏಕ ಪದ್ಧತಿ ವಿದ್ಯೆಯಿಂದಾಗಿ ನಾಶದ ಹೊಸ್ತಿಲಲ್ಲಿದೆ.


ಒಂದೇ ಗುರುಕುಲದಲ್ಲಿ ಕಲಿತ ಪಾಂಡವರೈವರು ಒಬ್ಬೊಬ್ಬರು ಒಂದೊಂದರಲ್ಲಿ ಕುಶಲರು. ಸಮರ್ಥ ರಾಜನಾದ ಧರ್ಮರಾಯ ಜ್ಯೋತಿಷ್ಯದಲ್ಲೂ, ಗಧಾದಾರಿಯಾದ ಭೀಮಸೇನ ಅಡುಗೆಯಲ್ಲೂ, ಬಿಲ್ವಿದ್ಯಾ ನಿಪುಣ ಅರ್ಜುನ ನೃತ್ಯದಲ್ಲಿ, ಅಶ್ವ ವಿದ್ಯೆಯ  ನಕುಲ, ಗೋಶಾಲಾ ತಜ್ಞ  ಸಹದೇವ  ಅವರವರ ಆಸಕ್ತಿ ಮತ್ತು ಸಾಮರ್ಥ್ಯದಿಂದ ಮಿಂಚಿದರು.


ಸಾಮರ್ಥ್ಯಗಳು, ಕುಶಲತೆಗಳು, ನೈಪುಣ್ಯಗಳು, ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ. ಅವುಗಳನ್ನು ಗುರುತಿಸಿ ಜ್ಞಾನದ ಹಂಚಿಕೆ ಆಗುತ್ತಿದ್ದುದು ಭಾರತೀಯ ಗುರುಕುಲ ಪದ್ಧತಿಯ ವಿದ್ಯಾಭ್ಯಾಸದಲ್ಲಿ. ಇಂತಹ ಕಲ್ಪನೆಯ ಕೂಸು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಹೆಸರಲ್ಲಿ ಮೂಡಿಬಂದಿದೆ. ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದೂ ಆಗಿರಲಿ ಎಂಬ ಆಶಯ.

ಹರೇರಾಮ.

-ಎ.ಪಿ. ಸದಾಶಿವ ಮರಿಕೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم