ಬಾಳೆಯ ಸಮಗ್ರ ಚಿತ್ರಣದ ಅನಾವರಣ: ವಿಶಿಷ್ಟ, ವಿಶೇಷ, ವಿಷಮುಕ್ತ
ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲ ಹಾಗೂ ಮಹಿಳೋದಯ ಬದಿಯಡ್ಕ ಇವರ ನೇತೃತ್ವದಲ್ಲಿ ಇಂದು (ಏ.16) ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿಶಿಷ್ಟ, ವಿಶೇಷ, ವಿಷಮುಕ್ತ ಪಾಕಲೋಕ 22 ಜರಗಲಿದೆ. ಬೆಳಗ್ಗೆ 10 ಗಂಟೆಗೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಉದ್ಘಾಟಿಸಲಿದ್ದಾರೆ.
ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಶಂಕರನಾರಾಯಣ ಮಯ್ಯ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. `ಬಾಳೆ'ಯ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಡಾ. ಶೀಲಾ ಕೊಳಚಿಪ್ಪು ಆಹಾರ, ಡಾ. ಶ್ರೀಕುಮಾರ ಕತ್ತರಿಬೈಲು ಆಯುರ್ವೇದ, ಕುರಿಯಾಜೆ ತಿರುಮಲೇಶ್ವರ ಭಟ್ ಕೃಷಿ, ಉದಯಪುದುಕೋಳಿ ಕೃಷಿ ಹಾಗೂ ವೆಂಕಟಕೃಷ್ಣ ಶರ್ಮ ಮುಳಿಯ ಉತ್ಪನ್ನ ವಿಚಾರದಲ್ಲಿ ಸಂವಾದ ನಡೆಸಲಿದ್ದಾರೆ. ಸಂಜೆ 7ರ ತನಕ ನಡೆಯಲಿರುವ ಪಾಕಲೋಕ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ ರಾಜ್ಯದ ವಿವಿಧೆಡೆಗಳಿಂದ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.
ಬಾಳೆಯ ಕೃಷಿಯು ಹಲವು ಶತಮಾನಗಳಿಂದ ನಮ್ಮ ಜೀವನ ಪದ್ಧತಿಯಾಗಿದೆ. ಉಪಬೆಳೆಯಾಗಿ ಹೆಚ್ಚಿನವರು ಬೆಳೆದರೂ, ಬಾಳೆಯು ಅತ್ಯುತ್ತಮ ಆಹಾರ ಹಾಗೂ ಆರೋಗ್ಯದಾಯಕವಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಬಾಳೆಗೆ ಸರಿಯಾದ ಬೆಲೆ ಸಿಗದೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಳೆಯ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಪರಿಚಯಿಸುವ ಉದ್ದೇಶಕ್ಕಾಗಿ ವಿಶಿಷ್ಟವಾದ ಪಾಕಲೋಕ ಮೇಳವನ್ನು ಆಯೋಜಿಸಲಾಗುತ್ತಿದೆ.
- ಬಾಲಸುಬ್ರಹ್ಮಣ್ಯ ಸರ್ಪಮಲೆ, ಅಧ್ಯಕ್ಷರು, ಪಾಕಲೋಕ ಸಮಿತಿ
ಬಾಳೆಯ ಮೇಳದಲ್ಲಿ ಏನೇನಿರಲಿದೆ?
ದೋಸೆ, ರೊಟ್ಟಿ, ಚಪಾತಿ, ಸೂಪ್, ಜ್ಯೂಸ್, ಐಸ್ ಕ್ರೀಂ, ಕ್ಯಾಂಡಿ, ಚಿಪ್ಸ್, ಪೋಡಿ, ಸಕ್ಕರೆಬೆರಟಿ, ಬಾಳೆಕಾಯಿ ಹುಡಿ, ಹೋಳಿಗೆ ಇತ್ಯಾದಿ 100 ಕ್ಕೂ ಮಿಕ್ಕಿ ವಿವಿಧ ಉತ್ಪನ್ನಗಳು, ಬಾಳೆ ಎಲೆಯ ದೊನ್ನೆಯಲ್ಲಿ ಐಸ್‌ಕ್ರೀಂ, ಬಾಳೆಯ ವಿಶೇಷ ಊಟ, ಮಾರಾಟ ಮಳಿಗೆಗಳು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ