|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಡಗುತಿಟ್ಟಿನ ರಾಜ ಹಾಸ್ಯಗಾರ "ಅಭಿನವ ಕಲಾ ಕೊರ್ಗು" ಕಮಲಶಿಲೆ ಮಹಾಬಲ ದೇವಾಡಿಗ

ಬಡಗುತಿಟ್ಟಿನ ರಾಜ ಹಾಸ್ಯಗಾರ "ಅಭಿನವ ಕಲಾ ಕೊರ್ಗು" ಕಮಲಶಿಲೆ ಮಹಾಬಲ ದೇವಾಡಿಗ


ಬಡಗುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಪಾರಂಪರಿಕ ಶೈಲಿಯ ಹಾಸ್ಯಗಾರಿಕೆಯಲ್ಲಿ ಸನ್ಮಾನ್ಯತೆಯನ್ನು ಗಳಿಸಿದ ಅನುಭವಿ ಕಲಾವಿದರಲ್ಲಿ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗರು ಒಬ್ಬರು.


10.10.1955 ರಂದು ಉಡುಪಿ ಜಿಲ್ಲೆಯ ಕಮಲಶಿಲೆಯ ಅಕ್ಕಯ್ಯ ಹಾಗೂ ಕೆ.ಮಂಜು ಇವರ ಮಗನಾಗಿ ಜನನ. ೪ನೇ ತರಗತಿವರೆಗೆ ವಿದ್ಯಾಭ್ಯಾಸ. ಸುತ್ತಮುತ್ತಲಿನ ಮೇಳದ ಆಟದ ಪ್ರೇರಣೆಯಿಂದ 1974 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿ, ಗುರು ವೀರಭದ್ರ ನಾಯಕ್, ಹಿರಿಯಡಕ ಗೋಪಾಲ್ ರಾವ್, ನೀಲಾವರ ರಾಮಕೃಷ್ಣಯ್ಯನವರ ಗುರುಬಲವನ್ನು ಸಂಪಾದಿಸಿದರು. ಆ ಕಾಲದಲ್ಲೇ ಕು.ಶಿ ಹರಿದಾಸ ಭಟ್ಟರು ಹಾಗೂ ಡಾ. ಶಿವರಾಮ ಕಾರಂತರೊಂದಿಗೆ ದೆಹಲಿಗೆ ಹೋಗಿ ಲವಕುಶ ಕಾಳಗ, ಅಭಿಮನ್ಯು ವಧೆ ಪ್ರಸಂಗದ ಪಾತ್ರ ನಿರ್ವಹಿಸಿ ಸೈ ಎನ್ನಿಸಿಕೊಂಡರು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-

ವಿದ್ಯಾಭ್ಯಾಸ ಬಿಟ್ಟು ಯಕ್ಷಗಾನಕ್ಕೆ ಸೇರ್ಪಡೆಯಾದ ಸಮಯದಲ್ಲಿ ಪ್ರಸಂಗದ ಬಗ್ಗೆ ಹಿರಿಯ ಭಾಗವತರು ಹಾಗೂ ಹಿರಿಯ ಕಲಾವಿದರ ಅನುಭವದ ಮಾಹಿತಿ ಪಡೆದು ರಂಗ ಪ್ರವೇಶ ಮಾಡುದು ಮತ್ತು ತಪ್ಪಿದ್ದರೆ ತಿದ್ದಿಕೊಂಡು ಮತ್ತೆ ತಪ್ಪಾಗದಂತೆ ಪ್ರದರ್ಶನ ನೀಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ದೇವಾಡಿಗರು ಹೇಳುತ್ತಾರೆ.


ನಳ ದಮಯಂತಿ, ಭೀಷ್ಮ ವಿಜಯ, ಲವ ಕುಶ ಕಾಳಗ, ಶ್ರೀ ರಾಮ ಪಟ್ಟಾಭಿಷೇಕ, ರತಿ ಕಲ್ಯಾಣ, ಲಂಕಾ ದಹನ, ಕನಕಾಂಗಿ ಕಲ್ಯಾಣ, ಪಾಪಣ್ಣ ವಿಜಯ ಗುಣಸುಂದರಿ, ವೀರ ವಾಜ್ರಾಂಗ, ಶ್ರೀ ದೇವಿ ಬನಶಂಕರಿ, ನಾಗಶ್ರೀ ಇವರ ನೆಚ್ಚಿನ ಪ್ರಸಂಗಗಳು.

ಬಾಹುಕ, ಪಾಪಣ್ಣ, ಕಂದರ, ಮಂದಾರ್ತಿ ಕ್ಷೇತ್ರ ಮಹಾತ್ಮೆಯ ಸುದೇವ ಬ್ರಾಹ್ಮಣ ಮತ್ತು ಸುರ್ಗೋಳಿ ಅಂತು, ಚಂದಗೋಪ, ವಾಲ್ಮೀಕಿ, ಮಂಥರೆ, ರಾಜ ರಜಕ, ಯಯಾತಿ, ದಾರುಕ, ಅಭಿಮನ್ಯು, ಬಬ್ರುವಾಹನ, ಲವಕುಶ ಇವರ ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ನಶಿಸುದಿಲ್ಲ. ಹಿಂದಿನ ಹಿರಿಯ ಕಲಾವಿದರು ಬೆಳೆಸಿದ ಯಕ್ಷಗಾನ ಕಲೆಯನ್ನು ಈಗೀನ ಕಿರಿಯ ಕಲಾವಿದರು ಕೂಡ ಬೆಳೆಸಿಕೊಂಡು ಹೋಗುತ್ತಿರುವುದು ಸಂತೋಷದ ವಿಷಯ ಹಾಗೆಯೇ ಯುವ ಪೀಳಿಗೆಗೆ ಯಕ್ಷಗಾನದ ಆಸಕ್ತಿ ಹುಟ್ಟಿಸುವ ಜವಾಬ್ದಾರಿ ಪ್ರತಿಯೊಬ್ಬ ಕಲಾವಿದನ ಕರ್ತವ್ಯವಾಗಿದೆ ಎಂದೂ ಭಾವಿಸುತ್ತೇನೆ ಹಾಗೆಯೇ ಇತ್ತೀಚೆಗೆ ಎಲ್ಲರ ಬದುಕಿಗೆ ಮಾರಕವಾಗಿರುವ ಕರೋನದಿಂದಾಗಿ ಸರ್ವಕಲಾವಿದರ ಜೀವನ ಪರಿಸ್ಥಿತಿ ಚಿಂತಾಜನಕವಾಗಿದ್ದು ಬೆಳಕಿನ ಸೇವೆ ಅನ್ನುವ ಯಕ್ಷಗಾನ ಕಾಲಮಿತಿ ಮಟ್ಟಕ್ಕೆ ಬಂದಿರುವುದು ಬೇಸರದ ಸಂಗತಿ.


ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರೇಕ್ಷಕರೇ ದೇವರು ಎಂದರೆ ತಪ್ಪಾಗಲಾರದು. ನನ್ನ 50 ವರ್ಷಗಳ ಯಕ್ಷಗಾನ ಕಲಾಸೇವೆಯಲ್ಲಿ ಜನರ ಆಶೀರ್ವಾದ. ಅಭಿಮಾನವೇ ದೊಡ್ಡ ಮಟ್ಟದ ಪ್ರೋತ್ಸಾಹವಾಗಿದೆ. ನನ್ನನ್ನು ಕಲಾವಿದನಾಗಿ ಗುರುತಿಸಿ ಆಶೀರ್ವದಿಸಿ ಅಭಿಮಾನಿಸಿ ಸತ್ಕರಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ...

ಮುಂದಿನ ದಿನಗಳಲ್ಲಿಯೂ ಕೂಡ ಕಲಾಭಿಮಾನಿಗಳ ಪ್ರೋತ್ಸಾಹ ಹೀಗೆ ಇರಲಿ ಎಂದೂ ದೇವರಲ್ಲಿ ಪ್ರಾರ್ಥಿಸುವೆ...


ಯಕ್ಷರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ :-

ಈಗಾಗಲೇ 25ಕ್ಕೊ ಹೆಚ್ಚು ಯಕ್ಷಗಾನ ತರಬೇತಿ ಸಂಘಗಳನ್ನು ನಿರ್ಮಿಸಿ 1000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯುಳ್ಳ ಮಕ್ಕಳು ಮತ್ತು ಯುವಕರಿಗೆ ಯಕ್ಷಗಾನದ ಹೆಜ್ಜೆಯ ತರಬೇತಿ ನೀಡಿರುತ್ತೇನೆ...

ಮೇಳದಲ್ಲಿಯೂ ಕೂಡ ನನ್ನ ತರಬೇತಿ ಪಡೆದು ಹೆಸರು ಗಳಿಸಿದ ಹಲವಾರು ಕಲಾವಿದರು ಇರುವುದು ತುಂಬಾ ಸಂತೋಷದ ವಿಷಯ.

ಮುಂದೆಯೂ ಕೂಡ ಯಕ್ಷಗಾನ ಸಂಘ ನಿರ್ಮಿಸಿ ಇನ್ನಷ್ಟು ಕಲಾವಿದರನ್ನು ತಯಾರಿಸುವ ಬಯಕೆ ನನ್ನದು.

ಕಲಾಸೇವೆಯಿಂದ ಸಂತೃಪ್ತನಾಗಿದ್ದೇನೆ. ಮುಂದುವರಿಸಿಕೊಂಡು ಹೋಗುವೆ.


ಯಕ್ಷಗಾನ ಕಲಾ ಕೇಂದ್ರದಲ್ಲಿ 1 ವರ್ಷ ಸೇವೆ, ಕಮಲಶಿಲೆ ಮೇಳ 7 ವರ್ಷ, ಮಾರಣಕಟ್ಟೆ ಮೇಳ 10 ವರ್ಷ, ಮಂದಾರ್ತಿ ಮೇಳ 33 ವರ್ಷ ಯಕ್ಷಗಾನ ರಂಗದಲ್ಲಿ ಒಟ್ಟು ೫೦ ವರ್ಷ ಕಲಾ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.


ಇವರ ಸುದೀರ್ಘ ಕಲಾ ಸೇವೆಗೆ ಸಂದಿರುವ ಸನ್ಮಾನ ಹಾಗೂ ಪ್ರಶಸ್ತಿಗಳು:-

● ದಿ.ಕೋಟ ಶಿವರಾಮ ಕಾರಂತರ ನಿರ್ದೇಶನದಲ್ಲಿ ೧೯೭೪ರಲ್ಲಿ ದೆಹಲಿಯ ಸಂಗೀತ ಅಕಾಡೆಮಿಯಿಂದ ಅಭಿಮನ್ಯು ಪಾತ್ರಕ್ಕೆ ಕಂಚಿನ ಪದಕ.

● ಉಡುಪಿ ಕಲಾರಂಗ (ರಿ) ಪ್ರಶಸ್ತಿ.

● ಭಾಗವತ ಗೋರ್ಪಾಡಿ ವಿಠಲ್ ಪಾಟೀಲ್ ಪ್ರಶಸ್ತಿ.

● ಆರ್ಗೋಡು ರಾಮಚಂದ್ರ ಶ್ಯಾನುಭೋಗ ಪ್ರತಿಷ್ಟಾನ ಪ್ರಶಸ್ತಿ.

● ದಿ. ಅರಾಟೆ ಮಂಜುನಾಥ ಸ್ಮಾರಕ ಪ್ರಶಸ್ತಿ.

● ನಡೂರು ರಂಗನಕೆರೆ ರವಿಕಿರಣ ಪ್ರಶಸ್ತಿ.

● ಬೆಂಗಳೂರು ಹೋಟೆಲ್ ಮಾಲೀಕರಿಂದ ಸನ್ಮಾನ.

● ದೇವಾಡಿಗ ಸಮಾಜ ಬಾಂಧವರಿಂದ ಸನ್ಮಾನ.

● ವಿಪ್ರ ಯಕ್ಷಗಾನ ಅಭಿಮಾನಿ ಮಾರಣಕಟ್ಟೆ ಇವರಿಂದ ಗುರುವಂದನೆ ಸನ್ಮಾನ.

ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಇವರಿಗೆ ದೊರೆತಿರುತ್ತದೆ.


16-05-1981ರಂದು ಕಮಲ ಇವರನ್ನು ವಿವಾಹವಾಗಿ ಮಕ್ಕಳಾದ ಅರುಣ್, ವೀಣಾ, ಕಿರಣ್ ಹಾಗೂ ಮೊಮ್ಮಕ್ಕಳಾದ ಯಶಸ್ ಹಾಗೂ ಮನ್ವಿಕ್ ಜೊತೆಗೆ ಕಟ್ ಬೇಲ್ತೂರು ಜಾಲಾಡಿಯಲ್ಲಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post