'ವನರಂಗ'ದಲ್ಲಿ ಕಲಾವೈಭವದ ಮೆರುಗು

Upayuktha
0

ಉಜಿರೆ: ವನರಂಗ ಅಂದು ಎಂದಿನಂತಿರಲಿಲ್ಲ. ಅಲ್ಲಿ ಕಲೆಯದ್ದೇ ವೈಭವ. ಕಿಕ್ಕಿರಿದು ಸೇರಿದ್ದ ವಿದ್ಯಾರ್ಥಿ - ಪ್ರಾಧ್ಯಾಪಕ ಸಮೂಹದ ಸಮ್ಮುಖದಲ್ಲಿ ಯುವ ಪ್ರತಿಭಾನ್ವಿತರ ಕಲಾಭಿನಯ ಅನಾವರಣ.


ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಲಾಕೇಂದ್ರ ಮತ್ತು ಬೆಳ್ತಂಗಡಿಯ ಸಾಂಸ್ಕೃತಿಕ ಸಂಘಟನೆ 'ಸಮೂಹ' ಜಂಟಿಯಾಗಿ ಉಜಿರೆಯ ವನರಂಗದಲ್ಲಿ ಸೋಮವಾರ ಆಯೋಜಿಸಿದ್ದ 'ಕಲಾವೈಭವ' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.


ಕೊರೋನಾದ ಕಾರಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಲಾಪ್ರದರ್ಶನ ನಿಂತ ಹಿನ್ನೆಲೆಯಲ್ಲಿ 'ವನರಂಗ'ವೂ ವಿವಿಧ ಬಗೆಯ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರಲಿಲ್ಲ. ಸೋಮವಾರ ಎಸ್.ಡಿ.ಎಂ ಪದವಿಪೂರ್ವ, ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಸಮೂಹ, ಉಜಿರೆ ಮತ್ತಿತರ ಭಾಗಗಳಿಂದ ಬಂದ ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಅವರ ಸಮ್ಮುಖ ಎಸ್.ಡಿ.ಎಂ ಕಲಾಕೇಂದ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವೈವಿಧ್ಯಮಯ ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು.


ಕಲಾವೈಭವಕ್ಕೆ ಮೆರಗು ನೀಡುವಂತಹ ವಿಶಿಷ್ಟವಾದ ಏಳು ರೀತಿಯ ಕಲಾಪ್ರಕಾರಗಳ ಪ್ರದರ್ಶನಕ್ಕೆ ವನರಂಗ ವೇದಿಕೆಯು ಸಾಕ್ಷಿಯಾಯಿತು. ಚಂಡೆ ವಾದನದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವು ಜನರನ್ನು ಆಕರ್ಷಿಸಿತು. ಶ್ರೀಕೃಷ್ಣ ಲೀಲೆಯನ್ನು ಕಥಕ್ ನೃತ್ಯವು ಬಿಂಬಿಸಿತು. ಮಹಿಷ ಮರ್ಧಿನಿಯ ಕಥೆ ಕೇರಳದ ಪ್ರಸಿದ್ಧ ಕಲಾಪ್ರಕಾರವಾದ ಮೋಹಿನಿ ಅಟ್ಟಮ್ ಮೂಲಕ ನಿರೂಪಿತವಾಯಿತು. ಗುಜರಾತಿನ ವಿಶಿಷ್ಟ ನೃತ್ಯ ಶೈಲಿಯಾದ ಗರ್ಭ ದಾಂಡಿಯಾ, ಸ್ಪಾನಿಷ್ ನೃತ್ಯ ಶೈಲಿಯಾದ ಫ್ಲೆಮಿಂಗೋ, ಕರಾವಳಿಯ ಗಂಡು ಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ಹಾಗೂ ಶ್ರೀ ರಾಮಾಯಣದರ್ಶನಂ ಕಥಾಸಾರವನ್ನು ಬಾಲಿ ನೃತ್ಯದ ಮೂಲಕ ವಿಭಿನ್ನವಾಗಿ ಪ್ರಸ್ತುತಪಡಿಸಲಾಯಿತು.


ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನ ವಿವಿಧ ಕಾಲೇಜುಗಳಾದ ಎಸ್.ಡಿ.ಎಂ ಪದವಿ ಕಾಲೇಜು, ಎಸ್.ಡಿ.ಎಮ್ ಪದವಿಪೂರ್ವ ಕಾಲೇಜು, ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಹಾಗೂ ಎಸ್.ಡಿ.ಎಮ್ ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯಗಳ 250 ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.


ಸಮೂಹದ ಅಧ್ಯಕ್ಷರಾದ ಡಾ.ಕುಮಾರ ಹೆಗ್ಡೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ಡೆಸಿನಾ, ಮೃದುಲಾ, ಅಲಿನಾ, ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top