ಮೂರು ಮಹಿಳಾ ಸಾಧಕರಿಗೆ ಗೌರವ ಸನ್ಮಾನ
ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ ಶಾಖೆ, ಉಳ್ಳಾಲದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿತ್ತು. ಪಾಂಡ್ಯರಾಜ್ ಬಳ್ಳಾಲ್ ನರ್ಸಿಂಗ್ ಇನ್‌ಸ್ಟಿಟ್ಯೂಟ್ ಉಳ್ಳಾಲ ಇವರ ಸಹಯೋಗದೊಂದಿಗೆ ಉಳ್ಳಾಲದ ಅಸುಪಾಸಿನ ನಾಗರೀಕರು ಹಾಗೂ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಮಹಿಳಾ ದಿನಾಚರಣೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಭ್ರೂಣಹತ್ಯೆ ಪಿಡುಗು ಮತ್ತು ವಿಮೋಚಣೆಯ ಬಗ್ಗೆ ಡಾ. ತಾರಾ ಪಿ, ಮಕ್ಕಳ ತಜ್ಞೆ, ಸಮುದಾಯ ಆರೋಗ್ಯ ಕೇಂದ್ರ, ಉಳ್ಳಾಲ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ನರ್ಸಿಂಗ್ ವಿದ್ಯಾರ್ಥಿಗಳಿಂದ ದೇಶದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರನ್ನು ನೆನಪು ಮಾಡಿಕೊಳ್ಳುವ ಕಿರುನಾಟಕವನ್ನು ಹಮ್ಮಿಕೊಂಡಿದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಈ ಸಂಧರ್ಭದಲ್ಲಿ ಅತೀ ಉತ್ತಮ ಸಾಧನೆ ಮಾಡಿದ 3 ಮಹಿಳೆಯರನ್ನು ಗುರುತಿಸಿ, ಸನ್ಮಾನಿಸಲಾಯಿತು. ಅರಣ್ಯ ಇಲಾಖೆ ಯಿಂದ ರಾಜ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಪಡೆದ ಕು. ಹಸ್ತ ಶೆಟ್ಟಿ, ಆರಕ್ಷಕ ಇಲಾಖೆಯಲ್ಲಿ ಉರ್ವ ಠಾಣೆಯ ಪೋಲಿಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಮತ್ತು ಬ್ಯಾಂಕ್ ಆಫ್ ಬರೋಡ, ಪ್ರಾದೇಶಿಕ ಕಛೇರಿಯ ವಲಯ ಮುಖ್ಯಸ್ಥರು ಹಾಗೂ ಪ್ರಬಂಧಕರಾದ ಶ್ರೀಮತಿ ಗಾಯತ್ರಿ ರವಿಚಂದ್ರನ್‌ರವರನ್ನು ಈ ವರ್ಷದ ಸ್ಪೂರ್ತಿ ಮಹಿಳೆ (Inspiring women) ಎಂದು ಗುರುತಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೆಡ್‌ಕ್ರಾಸ್ ಸಂಸ್ಥೆ ಚೇರ್‌ಮೆನ್ ಸಿಎ. ಶಾಂತಾರಾಮ ಶೆಟ್ಟಿ ಮಾತನಾಡಿ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು ಪ್ರಸ್ತುತ ದೇಶವು ಮಹಿಳಾ ಸಬಲೀಕರಣ ದತ್ತ ಮುಖ ಮಾಡಿದ್ದು, ಇದಕ್ಕೆ ಸಾಕ್ಷಿಯಂತೆ ದೇಶದ ಅತೀ ಉನ್ನತ ಹಾಗೂ ಜವಾಬ್ದಾರಿ ಹುದ್ದೆಯಿಂದ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ನಿರ್ವಹಿಸುತ್ತಿದ್ದಾರೆ ಎಂದರು.
ರೆಡ್‌ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ರವೀಂದ್ರನಾಥ್.ಕೆ, ಗೌರವ ಕಾರ್ಯದರ್ಶಿ ಕುಸುಮಾಧರ ಬಿ.ಕೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ಉಳ್ಳಾಲದ ವೈದ್ಯಾಧಿಕಾರಿ ಡಾ. ವಿದ್ಯಾಸಾಗರ್, ಪಾಂಡ್ಯರಾಜ್ ಬಳ್ಳಾಲ್ ಸಂಸ್ಥೆಯ ಪ್ರಿನ್ಸಿಪಾಲರಾದ ಪ್ರೊಫೆಸರ್ ಸೋನಿಯಾ ಸೆಬಾಸ್ಟಿಯನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಸೋಸಿಯೇಟ್ ಪ್ರೊಫೆಸರ್ ಪದ್ಮಾವತಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ