ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ಇಕೋ ಕ್ಲಬ್‌ಗೆ ಸೋಮವಾರ ಚಾಲನೆ ನೀಡಲಾಯಿತು. ಕ್ಲಬ್ ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶ ಕುಮಾರ್ ಎಂ.ಕೆ, ದೀಪಕ್ಕೆ ಎಣ್ಣೆ ಹೊಯ್ದರೆ ಜಗತ್ತಿಗೆ ಬೆಳಕು ನೀಡುವಂತೆ, ಇಕೋ ಕ್ಲಬ್‌ಗಳ ಮೂಲಕ ಪರಿಸರಕ್ಕಾಗಿ ಕೆಲಸ ಮಾಡಿದರೆ ಸಂಘದೊಂದಿಗೆ ಸಮಾಜಕ್ಕೆ ಒಳಿತಾಗುತ್ತದೆ. ಅಂತರ್ಜಲದಿಂದ ಬದುಕು ಬೆಳಗುತ್ತದೆ ಆದರೆ 200ಕ್ಕೂ ಹೆಚ್ಚು ನದಿಗಳು ಇರುವ ಭಾರತದಲ್ಲಿಇಂದು ಹಣ ವ್ಯಯಿಸಿ ನೀರು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛ ಗಾಳಿಯ ಕೊರತೆಯಿರುವ ದೆಹಲಿಯಂತಹ ಮಹಾನಗರಗಳಲ್ಲಿ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಅಶ್ವಥ ಗಿಡಗಳನ್ನು ನೆಟ್ಟು ಅಭಿಯಾನವನ್ನು ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸುವ ಹಾಗೂ ಶುದ್ಧಅಂತರ್ಜಲವನ್ನು ಉಳಿಸುವ ಕಾರ್ಯಗಳು ವಿದ್ಯಾರ್ಥಿಗಳಿಂದಾಗಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಸಾವಿರ ಹೆಜ್ಜೆಗಳ ಗುರಿ ತಲುಪಲು ಮೊದಲ ಹೆಜ್ಜೆ ಮಾತ್ರ ಮುಖ್ಯವಾಗುವುದಿಲ್ಲ. ಮೊದಲ ಹೆಜ್ಜೆಯ ಜತೆಗೆ ಆರಿಸುವ ಮಾರ್ಗವೂ ಮುಖ್ಯ. ಮನೋರಂಜನಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಪರಿಸರ ಉಳಿಸುವ ಕಾರ್ಯಗಳಿಗೂ ಹೆಚ್ಚಿನ ಗಮನ ಹರಿಸಬೇಕು. ಪ್ರಕೃತಿಗಾಗಿ ನಾವು ಮಾಡುವ ಕಾರ್ಯಗಳು ತೃಪ್ತಿ ನೀಡುತ್ತವೆ. ಪರಿಸರದ ಕುರಿತು ಮಾಹಿತಿಯನ್ನು ನೀಡುವ ಮೊದಲು ಪ್ರಕೃತಿಯ ಆಗುಹೋಗುಗಳ ಅರಿವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕುರಿಯನ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ಪಿ.ಡಿ, ಇಕೋ ಕ್ಲಬ್ ಅಧ್ಯಕ್ಷ ವಿದ್ಯಾರ್ಥಿ ಬೋಪಣ್ಣ, ಉಪಾಧ್ಯಕ್ಷೆ ಉಮಾಶ್ರೀ, ವಿದ್ಯಾರ್ಥಿನಿ ಸದಫ್ ಬಾನು ಸ್ವಾಗತಿಸಿ, ಜಯಶ್ರೀ ವಂದಿಸಿದರು. ವಿದ್ಯಾರ್ಥಿನಿ ವಿಭಾರಾವ್ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ