ಪುತ್ತೂರು: ಪರಿಶ್ರಮದ ಹಾದಿ ಸದಾ ಗೆಲುವಿಗೆ ಮುನ್ನುಡಿ ಬರೆಯುತ್ತದೆ. ಗೆಲುವಿನ ಹಾದಿಯ ವಿವಿಧ ಮಜಲುಗಳಲ್ಲಿ ಹಲವು ಸವಾಲುಗಳು ಎದುರಾಗುತ್ತದೆ. ಈ ಎಲ್ಲಾ ಹಂತಗಳನ್ನು ಕ್ರೀಡಾಳುಗಳು ಆತ್ಮ ವಿಶ್ವಾಸದಿಂದ ಎದುರಿಸಬೇಕು ಎಂದು ರಾಷ್ಟ್ರ ಮಟ್ಟದ ಕ್ರೀಡಾಪಟು ಹಾಗೂ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಈಶ್ವರ ನಾಯ್ಕ್ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕೌಶಲ್ಯಕ್ಕೆ ವಿದ್ಯಾಸಂಸ್ಥೆಗಳು ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತದೆ. ಶಾಲಾ ಕಾಲೇಜು ಮೈದಾನವೇ ಕ್ರೀಡಾ ಸಾಧನೆಗೆ ಪ್ರಥಮ ವೇದಿಕೆ. ಕ್ರೀಡಾ ಉತ್ಸಾಹ ಹಾಗೂ ಗೆಲುವಿನ ಛಲದೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ವೇದಿಕೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಖಜಾಂಚಿ ಶ್ರೀನಿವಾಸ ಸಾಮಂತ್ ಮಾತನಾಡಿ ಕ್ರೀಡಾ ಕ್ಷೇತ್ರ ಶಿಸ್ತನ್ನು ಕಲಿಸುತ್ತದೆ. ಯಾವುದೇ ಕ್ಷೇತ್ರವಾದರೂ ಸರಿ, ಆ ಕ್ಷೇತ್ರದಲ್ಲಿ ಸಾಧಿಸಲು ವಿದ್ಯಾರ್ಥಿಗಳು ಶಿಸ್ತಿನ ಮಾರ್ಗವನ್ನು ಅನುಸರಿಸಬೇಕು. ಇದರಿಂದ ಮಾತ್ರ
ಪರಿಪೂರ್ಣ ಯಶಸ್ಸು ಗಳಿಸಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಈಶ್ವರ್ ನಾಯ್ಕ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಜೊತೆಗೆ ಟ್ರೋಫಿಯನ್ನು ವಿತರಿಸಿದರು.
ಈ ಸಂದರ್ಭ ಕಾಲೇಜಿನ ಕ್ರೀಡಾ ತಂಡವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು. ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕಾಲೇಜಿನ ಎನ್ ಸಿಸಿ, ಎನ್ ಎಸ್ ಎಸ್, ರೆಡ್ ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್ ತಂಡ ಸೇರಿ ಒಟ್ಟು 34 ತಂಡಗಳು ಕ್ರೀಡಾ ಪಥಸಂಚಲನದಲ್ಲಿ ಭಾಗಿಯಾಗಿದ್ದು, ಎಂಕಾಂ ತಂಡ ಪ್ರಥಮ ಸ್ಥಾನವನ್ನು ಹಾಗೂ ತೃತೀಯ ಬಿಕಾಂ ಎ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಸಂಪತ್ ಕುಮಾರ್ ಬಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರದ್ಧಾ ಎಂ ವಂದಿಸಿದರು. ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್. ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ